ಅರುಣೋದಯದ ಮುಂಜಾವಿನ
ಅರಳಿ ನಳನಳಿಸುತಿರುವ ಕುಸುಮವು
ಆಹ್ವಾನಿಸುತಿಹುದು ಮನೆ ಮನಗಳ
ಅಂಕುರಿಸುತಾ ಈ ದಾಸವಾಳವು!
ಅಂಗಳದಿ ಆನಂದವ ಸೂಸುತಾ
ಅಕ್ಕರೆಯ ಹೊಳಪಿನೊಳು ಇಂಪಿಕಂಪಿನ
ಆಡಂಬರದಿ ಸಂಭ್ರಮದೊಳು ಮಿಂಚುತಾ
ಅವನಿಯ ನೋಡಿ ನಾಚುತಿಹುದು!
ಅನವರತ ಪೂಜೆಗೊಳ್ಳುವುದು
ಆರಾಧನೆಯ ನೆಪದೊಳು ದೇವರ ಮುಡಿಯೊಳು
ಆಲಾಪನೆಯೊಂದಿಗೆ ಅನನ್ಯಗೊಳ್ಳುತಾ
ಅವಲೋಕಿಸುವುದು ನಿತ್ಯವೂ
ಅವರಿವರ ಮನದೊಳು
ಅಚ್ಚಳಿಯದೆ ಉಳಿವುದು ಪ್ರೀತಿಯ ಸಂಕೇತದಿ
ಅರ್ಪಿತವಾಗುವುದು ಸರ್ವರ ಮನಮಂದಿರದೊಳು
ಅನುಕ್ಷಣವೂ ಕಂಪು ಸೂಸುವ ಮೆರಗಲಿ!
ಅಂದಣದ ಮೆರವಣಿಗೆಯಲಿ ಇದರಂದ
ಅದರೊಳಗಣದ ಗಮ್ಮತ್ತಿನ ಘಮಲು
ಅರ್ಚಿಸಿದಾಗಲೆ ಅವನೆದೆಯಲಿ
ಅದ್ಭುತಾನುಭವ ಮಹಾಪರ್ವದ ಅಮಲು
ಅವಳ ಒಲವಿನೊಲಗದ ಗುಡಿಯೊಲು
ಅವಳಂತರಂಗದಲಿ ಆಕರ್ಷಿಸುತಿಹುದು
ಅಪರೂಪದ ಅಂದವುಳ್ಳ ಈ ಕುಸುಮವು
ಅವಳದೆಯಲಿ ಎಂದೆಂದಿಗು ಆರದ ಭಾವವೂ!-
ಮಂಜಿನನಿಗಳ ತಾಗಿ
ಸೂರ್ಯಕಿರಣ ಸೋಕಿ
ಅರಳಿದೆ ದಳ ಬಿಚ್ಚಿ
ಇರುವ ಕ್ಷಣಗಳೊರೆಗು ಗಿಡವಾಗಲಿ, ಗುಡಿಯಾಗಲಿ
ಏರಿ ಅಂದವನ್ನು ಬೀರಿದೆ...!-
ನಿಜ ದಾಸವಾಳ ಹೂವು ಪರಿಮಳ ಬೀರುವುದಿಲ್ಲ
ಅದರಲ್ಲಿನ ಜೌಷದಿಯ ಗುಣ ಅವನೇನು ಬಲ್ಲ..!-
ಶೀರ್ಷಿಕೆ ದಾಸವಾಳದ ಗುಣ
ಹಾಸುಹೊಕ್ಕಾಗಿ ಬೆಳೆವ ಹೂವು, ನಿನಗೆ
ದಾಸವಾಳ ಎಂದರೆ ತಪ್ಪೇನು?
ಮೋಸ ಮಾಡದೆ ವರ್ಷಪೂರ್ತಿ ಅರಳುವೆ
ದೋಸೆ ಇಡ್ಲಿಗೂ ಸೊಪ್ಪನು ನಾ ಬಳಸುವೆ
ಹಸಿರು ಎಲೆಗಳು ಕಂಗಳಿಗೆ ತಂಪು
ಉಸಿರನು ಶುದ್ಧ ಮಾಡುವುದು
ಕೆಸರು, ಕೆಂಪು ಮಣ್ಣಾದರು ಸರಿಯೇ
ಹೊಸ ಹೊಸ ಚಿಗುರನು ಕಾಣುವುದು
ಹೆಣ್ಣಿನ ಮುಡಿಗೆ ಏರದ ಸುಮವು
ಮಣ್ಣಿನ ಗುಣವನು ಹೆಚ್ಚಿಸುವುದು
ಹಣ್ಣನು ಬಿಡದ ಅಪರೂಪದ ಗಿಡವು
ಹುಣ್ಣನು ಕೂಡ ಶಮನವ ಮಾಡುವುದು
- ಸಿಂಧು ಭಾರ್ಗವ ಬೆಂಗಳೂರು-
ಇಲ್ಲದಿದ್ದರೇನು ಪರಿಮಳ
ಕಣ್ಮನ ಸೆಳೆವ ಬಗೆ,ಬಗೆ ಬಣ್ಣಗಳು
ದೇವರ ಪೂಜೆಗೆ ಸಲ್ಲುವ ಹೂವುಗಳು
ಬಲು ಸುಂದರವೀ ದಾಸವಾಳಗಳು.-
ಅ ಎಂಬ ಅಕ್ಷರಗಳಿಂದ
ಹೂವಿನ ಅಂದ ಹೆಚ್ಚಿಸಿದ
ಅ ಪದದ ಅಕ್ಷರ ಸುಂದರಿ
ಅಭಿಜ್ಞಾ ಎಂಬ ಬಾಡದ
ಸಾಹಿತ್ಯ ಹೂವಿಗೆ...ಶರಣೆಂಬೆನು...!-