ಕಲ್ಲು ಮಣ್ಣಿನ ದಾರಿಯಲೀ,
ದಟ್ಪಡವಿಯ ನೋಡುತಲೀ,
ಏರುಪೇರಿನ ಹಾದಿಯೊಳು ನಡೆಯುತಲೀ,
ಇನ್ನಾಗದೆಂದೆನಿಸಿರಲೂ,
ಎದುಸಿರ ಬಿಡುತ ಹೆಜ್ಜೆಗಳ ಮುಂದಿಡುತಿರಲೂ,
ರಮಣೀಯಕ್ಕೂ ಅತಿರಮಣೀಯ,
ಸುಂದರಕ್ಕೂ ಸುರಸುಂದರ,
ಧುಮ್ಮಿಕ್ಕುವ ಜಲಪಾತ ಕಂಗಳಿಗೆ ಕಂಡೊಡನೇ,
ಕುಣಿಯಲೋ! ಕೂಗಲೋ!
ಸ್ಥಬ್ದಳಾಗಿ ಹಾಗೆ ನಿಂತು ಬಿಡಲೋ!
ತಿಳಿಯದಂತಾಯಿತು.
ಖುಷಿಯ ವ್ಯಕ್ತಪಡಿಸಲೂ ಈಗ ಗೊಂದಲವು ಮೂಡಿತು.-
ಮುಂಜಾನೆಯ ಮಂಜಲ್ಲಿ
ಮಬ್ಬು ಕವಿದಿದೆ ಆಗಸದಲ್ಲಿ
ಚುಮು ಚುಮು ಚಳಿಯಲ್ಲಿ
ಮಲೆನಾಡ ಕಾಫಿ ತೋಟದಲ್ಲಿ
ಬೆಳಕಿದ್ದರೂ ಕತ್ತಲಾಗಿದೆ
ದಟ್ಟ ಹಸಿರ ಕಾನನದಲ್ಲಿ
ಗಿರಿಶಿಖರಗಳಿಂದ ಮೈದುಂಬಿ
ಹರಿಯುತ್ತಿಹಳು ಜಲೆಧಾರೆಯಿಲ್ಲಿ
ಜುಳು ಜುಳು ನಿನಾದದೊಂದಿಗೆ
ನೊರೆ ಹಾಲಿನಂತೆ ನವ ಹುಮಸ್ಸಿನಲ್ಲಿ
ಧುಮ್ಮಿಕ್ಕುವಳು ಕಲ್ಲತ್ತಿ ಜಲಪಾತದಲ್ಲಿ
ಸುತ್ತಲು ಹಚ್ಚ ಹಸುರಿನ
ಹೊದಿಕೆಯನ್ನು ಹೊದ್ದು
ಮಲಗಿಹಳು ವನದೇವತೆಯಿಲ್ಲಿ
ವೈಭವದ ವಿಹಂಗಮ ನೋಟವು
ಕಣ್ಮನ ಸೆಳೆಯುತ್ತಿಹುದಿಲ್ಲಿ
ನವಿಲಿನ ನರ್ತನ, ಜಿಂಕೆಗಳ ಓಟ
ಚಿಲಿಪಿಲಿಗುಡುವ ಹಕ್ಕಿಗಳ ಕಲರವ
ಕರ್ಣಗಳಿಗೆ ಇಂಪು ಮನಸಿಗೆ ತಂಪು
ನೋಡುಗರಿಗೆ ರಮಣೀಯ ಸ್ವರ್ಗವು
ಮರೆಯಲಾಗದ ಪ್ರಕೃತಿ ಸೌಂದರ್ಯವು. _ಶೃತಿ ಶೈವ
-
ಕರಿ ಬಿಳಿ ಮೋಡಗಳ ಮುತ್ತಿಕ್ಕಿವೆ ಬೆಟ್ಟಗಳು
ಹಾಲ ಹೊಳೆಯಂತೆ ಹರಿಯುತ್ತಿವೆ ಜಲಪಾತಗಳು
ಚೆಲುವಿನಲ್ಲಿ ಚೆಲುವು ನಮ್ಮ ಕನ್ನಡ
ನಾಡಿನ ವೈವಿಧ್ಯಗಳು
ಅದನ್ನೆಲ್ಲ ಕಂಡ ನಮ್ಮಮನ ಉಲ್ಲಾಸವೋ ಉಲ್ಲಾಸ ಈ ಸಮಯದೊಳು.-
ನನ್ಮನದ ತುಂಬೆಲ್ಲಾ
ನಿನ್ನೊಲವಿನ ಜಲಪಾತದ್ದೇ
ಭೋರ್ಗರೆತವೀಗ...
ಪ್ರಕ್ಷುಬ್ಧ ಕಡಲಿನಲ್ಲಿ
ಲಂಘಿಸುವ ನಿನ್ನೆನಪಿನಲೆಗಳ
ಮೇಲೆ ಹೊರಟಿದೆ ನನ್ನ ಸವಾರಿ.
ನೀನೆನ್ಮನದ ಅರಸ,
ನಾ ಕಾಯುತ್ತಿರುವೆ ನಿನ್ನರಸಿ:)-
ಆ ಇಳಿಬಿದ್ದ ಕೇಶರಾಶಿ
ಧುಮ್ಮಿಕ್ಕುವ ಜಲಪಾತದ ಹರಿವು,
ನೊಸಲ ನಡುವಿನ
ರಂಗೋಲಿಯದು
ಸಾವಿರ ತಾರೆಗಳ
ತೇಯ್ದುದಯಿಸಿದ ಚಿತ್ತಾರ,
ಇನಿಯನ ಪಿಸುಮಾತಿಗೆ
ಸೋತ ಮುತ್ತುಗಳವು
ಅವಳ ಕರ್ಣಸೇರಿದ ಓಲೆಗಳು,
ಆಗಸದ ರವಿಗು ಸೂಟಿ
ಇವಳದರಗಳು ಅವನಿಗು
ನೀಡುವವು ಪೈಪೋಟಿ...
ನೀನೇನು ರವಿವರ್ಮನ
ಕುಂಚದ ಕಲೆಯ..?
ಅಥವಾ ಜಕಣಾಚಾರಿ
ಕಡೆದ ಶಿಲ್ಪದ ಕಿಡಿಯ.?!-
ಬದುಕು ಸುಂದರಗೊಳ್ಳಲು ಇನ್ನೇನು ಬೇಕೆನಗೆ,
ಎದೆಯ ಬಂಡೆಯಮೇಲೆ ಭೋರ್ಗರೆಯುತ್ತಲೆ ಇರು ನೀ
ಮುಂದೆಂದು ಬತ್ತದ ಹಾಗೆ.-
ಎಲ್ಲೆಯನ್ನು ಮೀರಿ
ಧುಮ್ಮಿಕ್ಕುತ್ತಿಹಳು ಜಲಧಾರೆಯು
ಅವಳ ಅಟ್ಟಹಾಸಕ್ಕಿಲ್ಲ
ಯಾವ ಕಡಿವಾಣವು
ಭೋರ್ಗರೆಯುತ್ತ ನವ ಕನಸಿನೊಂದಿಗೆ
ವಾರಿಧಿಯ ಒಡಲ ತುಂಬಿಸುತ್ತಿಹಳು
ನೋಡಲು ನೊರೆ ಹಾಲಿನ
ಜಲಪಾತದ ಸೊಬಗು
ಕಣ್ತುಂಬುವುದು ರಮಣೀಯ ದೃಶ್ಯವು
ನಿಗೂಢವೇ ಪ್ರಕೃತಿಯ ರಹಸ್ಯವು
ಅಡಗಿದೆ ಸೃಷ್ಟಿಯ ಕೈಚಳಕವು.
-