ಹುಟ್ಟು ಜೋಳಿಗೆಯಲಿ
ಸಾವು ಮೆರವಣಿಗೆಯಲಿ
ಸತ್ತ ಶವಕೆ ಚಿತೆಯಾದರೇನು
ಭೂಮಿಯೊಡಲ ಗುಂಡಿಯಾದರೇನು
ಸೂತಕ ಮನೆ ತೊಳೆಯುವವರೆಗಷ್ಟೇ
ಸಂಬಂಧ ಉಸಿರಿರುವವರೆಗಷ್ಟೇ
ಇದ್ದಾಗ ಆಡಂಬರ
ಸತ್ತಾಗ ಹೆಣಕ್ಯಾಕೆ ಸಿಂಗಾರ
ಹಣವ ಗಳಿಸಲು ನೂರೆಂಟು ದೊಂಬರಾಟ
ಹೆಣವೆನ್ನಿಸಿಕೊಳ್ಳಲು ಏನೆಲ್ಲಾ ಪೀಕಲಾಟ..-
ಜಾತಿ*
ಜನಾಂಗಕ್ಕೊಂದು ನೀತಿ ದೇವರೆಸರಿನ ಭೀತಿ
ಜಾತಿಮತದ ಭ್ರಾಂತಿ ಜನರೊಳಿಲ್ಲ ಶಾಂತಿ
ಕಾಯಕವು ಸಲ್ಲದಿವರಿಗೆ ಕೋಮುಗಲಭೆ ನಿಲ್ಲದು
ಕೊಲೆಗಯ್ಯಲು ಕಾರಣವು ನೂರು ಕರುಣೆಯೆಂಬುದಿಲ್ಲ ಚೂರು
ಧರ್ಮದ ಹೆಸರಲ್ಲಿ ಧಾಂದಲೆ ದೈವಕ್ಕೂ ದಿಗ್ಬಂಧನ
ಭಕ್ತಿ ಭಾವವಿಲ್ಲ ಭಯದ ವಾತಾವರಣ ಸುತ್ತಲೆಲ್ಲ
ನರನಿಗಿಂತ ಮೊದಲುದಿಸಿತೆ ಜಾತಿ?
ಮಾನವೀಯತೆಗಿಂತ ಮಹೋನ್ನತವೆ ಮತ?
ದಯೆಗಿಂತ ದೊಡ್ಡದಿಹುದೆ ಧರ್ಮ?-
ಅವನು ಬಂದೇ ಬರುವನು
ನಿನ್ನೊಲವಿಗಾಗಿ
ನಿನ್ನ ಕನಸುಗಳ ನನಸ ಮಾಡುವನು
ಹೆಚ್ಚು ಯೋಚಿಸದಿರು ಚೆಲುವೆ....-
ಸಂಜೆಯಾದರೂ ಸಖಿ
ಬಂದೇ ಬರುವೆ ನಿನ್ನಲ್ಲಿ
ಏಕಾಂತದಲ್ಲಿ ನನ್ನದೇ ನೆನಪಿರಲಿ
ತಂಗಾಳಿ ಬೀಸುವುದರಲ್ಲೇ
ನನ್ನದೇ ಕಂಪಿದೆ ಸವಿಯುತಿರು ನೀನಲ್ಲಿ
ಕತ್ತಲಾವರಿಸಿದೆ ಎಂದು ಬೇಸರಿಸದಿರು
ಬಂದೇ ಬರುವೆ ನಿನ್ನಲ್ಲಿ.
-
#ಸ್ವಾತಂತ್ರ್ಯ
ಲೆಕ್ಕವಿಲ್ಲದಷ್ಟು ನೆತ್ತರಿನ್ಹನಿಗಳು ನೆಲವನಪ್ಪಿ
ಸ್ವತಂತ್ರ ಕೂಗಿನ ಕೊರಳುಗಳು ಕುಣಿಕೆಯನ್ನೇರಿ
ಹೋರಾಟದ ಹಾದಿಯಲಿ ಕನಸುಗಳು ಕತ್ತಲ ಕಾರಾಗೃಹ ಸೇರಿ
ನಾಡಿಗಾಗಿ ನಡಿಗೆ ಮಾಡಿ ನಿಂತ ನಾಡಿಗಳೆಷ್ಟೋ
ನೆಮ್ಮದಿಯ ನಾಳೆಗಳಿಗಾಗಿ ನಿಟ್ಟುಸಿರಿಟ್ಟವರೆಷ್ಟೋ
ನೊಂದು ಬೆಂದರು ಛಲ ಬಿಡದ ಜೀವಗಳೆಷ್ಟೋ
ಸರಾಗವಾಗಿ ಸಿಕ್ಕಿಲ್ಲವಿದು ಸ್ವಾತಂತ್ರ್ಯ
ಸಮಾನತೆಗಾಗಿ ಸಾವುಗಳೇ ಸಮರ್ಪಣೆ
ಉಚಿತವಲ್ಲವಿದು ಬಿಸಿನೆತ್ತರಿನ ಬಸಿತವಿದು..-
ನಿನ್ನೀ ಕೈಹಿಡಿದು
ಕೊನೆಯವರೆಗೂ
ನೆಡೆಯಬೇಕೆಂದುಕೊಂಡೆ
ನೀನ್ಯಾಕೊ
ಅರ್ಧದಾರಿಯಲ್ಲೇ
ಕೈ ಕೊಸರಿಕೊಂಡೆ..-
ನಿಶೆಯ
ನಶೆಯಿಳಿಸಿ
ನಭದಿ
ನೇಸರನು
ನಿಪತ್ಸೆಯೆಡೆಗೆ
ನೀಳನೋಟದಿ
ನುಸುಳುತಿರಲು
ನಗಧರೆಯು
ನಾಚಿ ನೀರಾಗಿ
ನಿಂತಿಹಳು..-
ಚುಂಬಿಸೆನ್ನ ಚೆಲುವೆ
ಚನ್ದುಟಿಯ ಸುಮವೆ
ಅಧರದಿ ಆಲಂಗಿಸಿ
ಬಾಹುಗಳಲಿ ಬಂಧಿಸಿ
ಏದುಸಿರಿನ ಏರಿಳಿತವ
ಅನುಭವಿಸಿ ಆನಂದಿಸುವ
ಇಳಿಸಂಜೆಯ ಅಂಬರದಡಿಯಲಿ..-
ತುಟಿಯು ತಡವರಿಸಿದೆ ನಗಲು
ನೀನಿರದ ಬಾಳಿಗೆಲ್ಲಿದೆ ಹೊನಲು
ಮನವಾಗಿದೆ ಮಡುಗಟ್ಟಿದ ಕಾರ್ಮುಗಿಲು
ಯಾರೊಂದಿಗೆ ಹಂಚಿಕೊಳ್ಳಲಿ ನನ್ಮನದಳಲು
ಕಂಬನಿಯು ಕೇಳುತಿದೆ ಕಾರಣವ
ಏನೆಂದು ವಿವರಿಸಲಿ ದುಗುಡವ
ದೂಳು ಬಿದ್ದೆದೆಯೆಂದೆ ನಯನಗಳೆದುರು
ದೂರು ಹೇಳಲಿಲ್ಲ ನಿನ್ಮೇಲೇ ಎಲ್ಲರೆದುರು..-