ಹೃದಯವೆಂಬ ಕೊಳದಲಿ ಅವನೆದೆ ಪ್ರತಿಬಿಂಬ
ಎತ್ತನೋಡಿದತ್ತ ಬಿಂಬ ಪ್ರತಿಬಿಂಗಳ ಸಾಲುಕಂಬ
ನನ್ನೊಳಗೆ ಒಲವಿನಾರತಿಯ ದೈವಜ್ಞನಂತೆ ಸದಾ ಅಚಲ
ಬಿಂಬದೊಳು ನಿತ್ಯನೂತನ ತಥ್ಯಭಾವದ ಸ್ತಂಭ.!-
ಅನುಬಂಧ
ಸಂಬಂಧವಿದುವೆ ಮಧುರ ಅನುಬಂಧ
ಬೆಸಯಬೇಕು ಪ್ರೀತಿಯ ಮಹದಾನಂದ
ಬಂಧ ಅನುರಾಗಮಾಲಿಕೆಯಲ್ಲಿರುವುದಾಗಿದೆ
ಒಬ್ಬರಿಗೊಬ್ಬರು ಅರಿತು ಬಾಳುವುದೆ ಚಂದ.!-
ನದಿಯೊಳು ನಿಶ್ಚಲವಾದ ಮರದ ಪ್ರತಿಬಿಂಬ ಅಚಲ
ಎನ್ನೀ ಹೃದಯದೊಳು ಅದರದೆ ಕನವರಿಕೆಯ ಸಫಲ
ಅಂಕುರಿಸಬೇಕಿದೆ ಹೊಂಬೆಳಕಿನ ಹೊಂಬಾಳೆಯ ಚಿಗುರು
ಈ ಮೂಲಕ ಬಾಳಿಗೊಂದು ಹಸಿರ ತೋರಣವು ಪ್ರಬಲ.!-
ರುಬಾಯಿ (ಕರೋನ)
ವಿಧಿಯಾಘಾತ ಉಲ್ಬಣಿಸಿದ ಕರೋನ ಆಟ
ವಿಧಿಲಿಖಿತ ಸಾವು ಖಚಿತ ಅದರ ಮಾಟ
ಮನೆಯೆ ಸುರಕ್ಷೆಯ ನೆರಳು ಅತ್ಯವಶ್ಯಕ
ಹೊರಬಂದರೆ ಬಿಡದು ಹೆಮ್ಮಾರಿಯ ಆರ್ಭಟ.!
ಅಭಿಜ್ಞಾ ಪಿ ಎಮ್ ಗೌಡ-
ಉಲ್ಲಾಸ
ಉಲ್ಲಾಸ ಉತ್ಸಾಹದ ನಡುವೆ ಜೀಕಿದೆ ಮನ
ಮುಂಗಾರು ಮಳೆಯ ಸೋನೆಯಲಿ ತಾನನ
ಮುಸುಕಿನ ವೇಳೆಯಲ್ಲಿ ಸೌರಂಭದ ಅಂಬರ
ಒಂದನೊಂದು ಚುಂಬಿಸುತ ಒಲವ ಮೇಘನ|-
#ರುಬಾಯಿ
ಇಲ್ಲಿಯವರೆಗೂ ಒಮ್ಮೆಯು ನಿಮ್ಮನ್ನು ತಬ್ಬಿಕೊಳ್ಳಲಾಗಲಿಲ್ಲ
ನನ್ನೊಳಗಿನ ಪ್ರೀತಿಯ ನಿಮ್ಮೆದುರು ತೋರಿಸಲೂ ಆಗಲಿಲ್ಲ
ಅದೆಷ್ಟೋ ತೀರದ ಮಾತುಗಳು ಉಳಿದುಬಿಟ್ಟವು ನನ್ನಲ್ಲಿಯೇ
ಹೋಗೇಬಿಟ್ಟಿರಲ್ಲ ನೀವು ನಂಗೊಂದು ವಿದಾಯವನ್ನೂ ಹೇಳಲಿಲ್ಲ.-
ರುಬಾಯಿ
ಪುಷ್ಪ ಮಾಲಿಕೆಯಲ್ಲಿ ಗೆಳೆಯ
ನೀನೆಷ್ಟು ಸುಂದರ ಗೊತ್ತಿದೆಯ
ಪ್ರೀತಿ ಗಳಿಕೆಯಲ್ಲಿ ಸನ್ಮಿತ್ರ
ನನ್ನೆದೆಯೊಳು ಮಿಂಚುವ ಶ್ರೇಯ.!-
ರುಬಾಯಿ
ಕಷ್ಟ ಕರ್ಮಗಳು ಸದಾ ಯಾರಿಗೂ ಶಾಶ್ವತವಲ್ಲ
ಧರ್ಮಾದ ಕಾಯಕವೆ ದಾರಿ ತೋರುವುದಲ್ಲ
ಸಾರ್ಥ್ಯೈಕ್ಯ ಮೆರೆಯುತ ಬದುಕ ಬಂಡಿ ಎಳೆಯೋಣ
ಅಡ್ಡ ದಾರಿ ಹಿಡಿದು ನೀತಿ ಪಾಠ ಹೇಳುವುದಲ್ಲ !!-
ರುಬಾಯಿ:—
ಬೆಳಗುತಿಹುದು ಆಂತರ್ಯದಿ ದಿವ್ಯಜ್ಯೋತಿ
ಮೂಡಿದೆ ಅವಳೊಳಗೆ ಸಂಶಯದ ಭೀತಿ
ಅತಿರೇಕದ ಲಾಲಿತ್ಯಕ್ಕೆ ಮನಸೋಲುತ
ಅನೂಹ್ಯತೆಯೊಳು ಸೋತಿದೆ ಅವಳ ಪ್ರೀತಿ-
ರುಬಾಯಿ
ನಗುವ ಹೂ ಮಳೆಯ ವರ್ಷಿಣಿ
ಮುಂಗುರುಳ ಚೆಲ್ಲುವ ಧಾಮಿನಿ
ಹಸನ್ಮುಖಿ ಈ ಚೆಲುವ ರಾಶಿ
ಭಾವನಲೋಕದ ಸುಹಾಸಿನಿ.!-