ಬರೀಯ ನೆನಪುಗಳ ಬರೆದು,
ನಿನ್ನ ಮುಂದೆ ಕುಳಿತುಕೊಳ್ಳುವಾಸೆ.
ಸನಿಹ ಸುಳಿದ ಭಾವಗಳೆಸೆದು,
ಲೇಖನಿಯ ನಿನಗೆ ಅರ್ಪಿಸುವಾಸೆ.
ಹೃದಯಕ್ಕೆ ಅಡಿಪಾಯ ತೆಗೆದು,
ಮತ್ತೆ ಪ್ರೇಮ ಸೌಧ ಸ್ಥಾಪಿಸುವಾಸೆ.
ಎಲ್ಲ ಎದುರಿಸುವ ಆಳಕ್ಕಿಳಿದು,
ನಿನ್ನ ಕಥೆಯ ನಾಯಕನಾಗುವಾಸೆ.
ಭೂತಕಾಲದ ಕಗ್ಗತ್ತಲು ಕಳೆದು,
ಇರುವರೆಗೂ ನಿನ್ನ ಜೊತೆಗಿರುವಾಸೆ.
-
ನಿನ್ನ ಬಿಂಬವೆ ಎನ್ನ ಕಾಡಿದೆ,
ಕುಡಿ ಹುಬ್ಬು ಕಥೆಯ ಹೇಳಿದೆ,
ನೋಟವೆ ತಬ್ಬಲು ನೆಪವಾಗಿದೆ,
ಪರಿಸರದಲ್ಲಿ ಇಬ್ಬನಿ ನಾನು,
ಬಿದ್ದ ಹನಿಗಳ ಗಮ್ಯ ನೀನು!
ನಿನ್ನ ಕನಸಿಗೆ ಭಿನ್ನ ಹೆಸರಿದೆ,
ಪ್ರತಿ ಪದಗಳ ಕಳೆಯು ಹೆಚ್ಚಿದೆ,
ದೃಷ್ಟಿಯ ಶಂಕೆಗೆ ಕಾಡಿಗೆ ಛಾಪಿದೆ,
ಹೂವಲ್ಲಿ ಮೃದು ಪಕಳೆ ನಾನು,
ಬಿದ್ದ ಹನಿಗಳ ಗಮ್ಯ ನೀನು!-
ನೀ ಸುಳಿದು ಹೋದ ಮೇಲೆ
ಬಿದ್ದ ಬಿಸಿಲು, ನನ್ನ ನೆರಳಿನ ಜೊತೆ ನಿಯೋಜನೆಗೊಂಡು, ನೀ ಬಿಟ್ಟು ಹೋದ ಪರಿಮಳದ ಪತ್ತೇದಾರಿ ಕೆಲಸದಲ್ಲಿ ತೊಡಗಿದೆ.-
ಎರಡು ಕುಡಿ ಹುಬ್ಬುಗಳ ನಡುವೆ
ಹರಾಜಿಗಿದ್ದ ಒಂದಿಂಚು ಜಾಗವ
ಖರೀದಿಸಿ ಠಿಕಾಣಿ ಹೂಡಿತ್ತಲ್ಲಿ ಬಿಂದಿ!
ಕಣ್ರೆಪ್ಪೆಗು ಬದಿಯ ಮುಂಗುರುಳಿಗು
ಏನೋ ಸಣ್ಣ ಹಿತವಿರುವ ತಕರಾರು,
ಅದರಲ್ಲಿ ಶಾಮೀಲಾಗದೆ ಸುಮ್ಮನಿದ್ದ
ಮೂಗುತಿಗೆ ಎರಡೆರಡು ಬಾರಿ ಒಲವಂತೆ!
ಮೌನಕಂಟಿದ ತುಟಿಗಳ ನಗುವಿಗೆ
ಗದ್ದಕ್ಕೆ ತಾಕಿದ ಕೈ ಬಳೆಗಳ ಸದ್ದು ಕಾರಣ!
ತುಸು ಬೆಳ್ಳಿಯ ಲೇಪನವಿದ್ದ ಸೆರಗಿಗೆ
ಬರಿದಾದ ಕೊರಳ ಚುಂಬಿಸುವಾಸೆ,
ಅಷ್ಟರಲ್ಲೇ ಅಡಗಿ ಕುಳಿತಿದ್ದ ಜುಮುಕಿಗು
ತಗುಲಿತ್ತು ಬೆಳದಿಂಗಳ ಹೊಳಪು!-
ಮಳೆಹನಿಗು ಗೊತ್ತಿರದ ಮಾತು ನೂರಿದೆ
ಕುಣಿವ ಭಾವಗಳಿಗೆ ನೀತಾನೆ ಗೆಜ್ಜೆ ಕಟ್ಟಿದೆ
ಆ ಸುಮದ ಪರಿಮಳವೆ ನಿನ್ನುಸಿರಾಗಿರಲು
ಚಿಟ್ಟೆಗೆಂದು ಹೂವು ಹೃದಯವನರ್ಪಿಸಲು
ಎದೆಯದನಿಯೆ ನಿನ್ನಿಂಚರ ಕೇಳದಿದ್ದೀತೆ
ಹರಿವ ಝರಿಯು ಹಾಡಿದೆ ಯುಗಳಗೀತೆ!-
ಮುಗ್ಗರಿಸಿದೆ ಹೃದಯವದು
ನಿನ್ನ ಸೊಂಪಾದ ಹೆರಳಿನ
ಚೆಲುವ ಎಡೆಬಿಡದೆ ನೋಡಿ,
ಮನಸಲ್ಲೇ ಪಿಸುನುಡಿದು
ಮತ್ತೇನೋ ಹೇಳಿ ಇನ್ನೇನೋ
ಹೇಳ ಹೊರಟರೆ ಮಾತೆಂಬ
ರಾಶಿಯೊಳು ತುಂಬಿದ ಒಲವೇ
ಮಿನುಗುವುದು ತುಸು ಹೆಚ್ಚೇ.
ಕಾಡಿಗೆಯ ಎಳೆದು ಕರೆತಂದು
ನಿನ್ನ ಗಲ್ಲದಂಚಿಗೆ ತಾಕಿಸಿದ
ಪರಿಣಾಮ ನಿನಗೆ ಗೊತ್ತಿಲ್ಲವೆ..?
ನಿನ್ನ ಕೆಂಪ್ಹರಳ ಮೂಗುತಿಯು
ತುಟಿಗಳ ನೋಡುತ ನಗುತ್ತಿದೆ.-
ಬೆಳ್ಮುಗಿಲ ಬಾಗಿಲಲಿ ನಿಂತಿರುವ ಹೊಂಬೆಳಕು
ಹವಣಿಸಿದೆ ಚಿತ್ತಾಕರ್ಷಕ ನಿನ್ನಂದವ ನೋಡಲು,
ತಿಳಿಯಾದ ಸೋಜಿಗದ ಕಣ್ಣಂಚಿನ ಹೊಳಪು
ಮಿಂಚುತಿದೆ ಒಲವಿನೋಲೆಯ ಪ್ರತಿ ಅಕ್ಷರದಲಿ,
ಭಾವನೆಗಳ ಝರಿಯ ರೀತಿ ಹರಿಯಬಿಟ್ಟರು;
ಮುಖ್ಯಭೂಮಿಕೆ ನಿಭಾಯಿಸಿ ಹೊರಟೆ ನೀನು!
ರಿಯಾಯಿತಿ ದರದ ನವೀನ ಮಾದರಿ ಸರಕು
ತವಕಿಸಿದೆ ನಿನ್ನ ಮೈಗಂಟಿ ಕಿರುನಗೆಯ ಬೀರಲು,
ಅಲೆದಾಡುವ ಅನುರಾಗದ ಅವಳ ನೆನಪು
ಹಳೆ ಸಂಚಿಕೆಯ ದೈನಿಕ ಧಾರಾವಾಹಿ ಸ್ವಪ್ನದಲಿ,
ನಡುರಾತ್ರಿ ಕೋಪ ಮೌನದ ಜೊತೆಯಿದ್ದರು;
ಮುಖ್ಯಭೂಮಿಕೆ ನಿಭಾಯಿಸಿ ಹೊರಟೆ ನೀನು!-
ಮುಗಿಯದಿರುವ ಮಾತಿಗಿಳಿದು ಭಾವನೆ
ಎದುರೆದುರಲ್ಲೇ ನಡೆದಿದೆ ಸಮ್ಮೇಳನ
ಕವಿಗೋಷ್ಠಿಗೆಂದು ಬರೆದಿಟ್ಟ ಕವನ
ಕಿರಿದಾಗಿದೆ ಪದಗಳ ಅಭಾವಕೆ
ಮತ್ತೊಮ್ಮೆ ಬರೆಯುವೆ ನಾ
ನಿನ್ನನ್ನೇ ಕಲ್ಪನೆಯಲಿಟ್ಟು
ತೂಗುವ ಜುಮುಕಿಗೆ
ದೃಷ್ಟಿಬೊಟ್ಟನಿಟ್ಟು
ಬಿಳಿ ಹಾಳೆಗೆ
ಮಸಿಯ
ಕೊಟ್ಟು
💙-
ಸಣ್ಣ ಸಲುಗೆ ಜೇಬಲ್ಲಿ ಮಡಚಿ ಇಟ್ಟಿರುವೆ,
ಮುಂಗಡವಾಗಿ ಮುನ್ನುಡಿ ಬರೆದಿರುವೆ,
ಗಮನಿಸಿ ಉಳಿದ ಆಸೆಗಳ ಸಂಕಲನವಿದೆ,
ಹೆಸರು ಮೊದಲೇ ಅಂಗೈಯಲಿ ಅಚ್ಚಿದೆ,
ತಲುಪಿಸದೆ ಬಾಕಿಯಿರುವ ಕಣ್ಸನ್ನೆಗಳಿಗೆ;
ಹಲವು ಬಗೆಯ ಬೇಜಾರು ನೀನಿಲ್ಲದೆ!
ಬಿಸಿ ಉಸಿರ ತರಂಗಗಳ ಸಂಗಡವಿರುವೆ,
ಕೆಲವು ಆರಂಭಿಕ ಚಾಳಿಗಳ ಬಿಟ್ಟಿರುವೆ,
ಭಾವನೆಗಳ ಗುಣಾಕಾರ ಅತಿರೇಕವಾಗಿದೆ,
ಸುಮ್ಮನೆ ಹೃದಯಕ್ಕೆ ಒಲವು ಧಾವಿಸಿದೆ,
ಸ್ವಚ್ಛ ಕಂಪಿರದಿರೆ ಕೆಂಪೇರದ ಕದಪುಗಳಿಗೆ;
ಹಲವು ಬಗೆಯ ಬೇಜಾರು ನೀನಿಲ್ಲದೆ!-
ನಿನ್ನೊಲವಿನಾಲಾಪಗಳಲ್ಲಡಗಿರುವಾಶ್ವಾಸನೆಯನ್ಕೇಳಲಾಸೆಪಟ್ಟೆ,
ಮಧ್ಯಂತರವೆಂದಿನಿಸುಳಿದಿರುವಾಕ್ಷೇಪಣೆಗಳಿಗೊಂಧಿಕ್ಕಾರವಿಟ್ಟೆ.-