ದಿನಕ್ಕೊಂದು ಚಿಂತನೆ-೭೭
ನಂಬಿಕೆಯು ಎಲ್ಲಾ ಸಂಬಂಧಗಳ ಜೀವಾಳ
ಕಳೆದುಕೊಂಡರೆ ಆಗುವುದು ಜೀವನ ಕರಾಳ
ಮೌನವೂ ತಿಳಿಹೇಳುವುದು ನಂಬಿಕೆಯ ಆಳ
ಇಲ್ಲದಿರೆ ಶಬ್ದವೂ ಬೀಸುವುದು ಅಪಾರ್ಥದ ಗಾಳ-
ಪ್ರೀತಿಯ ಶಿವು ಸರ್,
ಮಿನುಗುವ ನಕ್ಷತ್ರಗಳ ಲೋಕದಲ್ಲಿ ನಾ ಕಂಡ ಬೆಳಕು
ಸಿರಿಕಂಠದ ಒಡೆಯ ನಿಮ್ಮ ಮನದಲಿಲ್ಲ ಯಾವ ಕೊಂಕು
ರಸಿಕರ ಮನ ತಣಿಸುವ ನೀವು ಹಾಡುವ ಬೇಟೆಗಾರ
ಎಡಬಿಡದೆ ಯೋಗ ತಪವ ಮಾಡುವ ನೀವು ಛಲಗಾರ
ಬತ್ತಿದೆದೆಯಲ್ಲಿ ರಾಗ ಸಸಿಯನು ನೆಡುವ ಜಾದೂಗಾರ
ನವಿರಾದ ಅನುಭವದ ಅದ್ಭುತ ಜ್ಞಾನವನು ಬಸಿದು
ಅರಿವಿನ ಹನಿಯನು ಕಲಾ ವಿದ್ಯಾರ್ಥಿಗಳಿಗೆ ಎರೆದು
ಕಲಿಸುವಿರಿ ಹಾಡುವುದನು ಪ್ರೀತಿ ಬೆಸುಗೆ ಹೆಣೆದು
ಅಂತರಾಳದಲ್ಲಿ ಚಿಗುರೊಡೆದ ಕನಸಿದು ಸಿಂಫೋನಿ
ಎಂದೂ ಆಗಿರಲಿ ಉನ್ನತಿ ಉಲ್ಲಾಸ ಉತ್ಸಾಹದ ಖನಿ
ವಿಜಯದ ಹಾದಿಯಲಿ ಚಿಮ್ಮಿಸುತಿರಲಿ ಗೆಲುವ ಹನಿ
ಸ್ಫೂರ್ತಿಯ ಚಿಲುಮೆ ನೀವು ಸದೃಢ ಮನದ ಐಸಿರಿ
ಸೋದರತೆಯ ನೀಡಿದ ಭಾವನಾ ಲೋಕದ ರುವಾರಿ
ಚಿಗುರುತಿರಲಿ ಸಂಗೀತ ಬಾಂಧವ್ಯದ ನವೀನ ಗರಿ
ದಿನಂಪ್ರತಿ ರವಿಯ ಕಿರಣಗಳು ಪ್ರಜ್ವಿಲಿಸುವ ತೆರದಿ
ಸುಗಮ ಚೈತ್ರದಂಗಳವಾಗಲಿ ನವ ಹರ್ಷದ ಆದಿ
ಸಂಭ್ರಮಿಸಿ ಗಾನಲೋಕದಾ ಪಯಣ ಸಂತಸದಿ
ಪದಗಳ ಪೋಣಿಸಿ ಬರೆದಿರುವೆ ಜನ್ಮ ದಿನದ ಶುಭಾಷಯ
ದೇವನೊಲುಮೆಯು ನಿಮ್ಮೊಡನಿರಲೆಂಬುದೆ ನನ್ನ ಆಶಯ-
ಪ್ರೀತಿಯ ಸುಜಾತ,
ನಿನಗಿಂದು ಜನ್ಮ ದಿನದ ಸಂಭ್ರಮ
ಹೆಚ್ಚೇನ ಹೇಳಲಿ ನೀ ನನಗೆ ಅನುಪಮ
ಸುಂದರ ಕಾವ್ಯಗಳ ರಚಿಸುವ ಕವಿ
ಓದಲು, ಮನಕೆ ನೀಡುವುದು ಸವಿ
ಪ್ರಥಮ ಭೇಟಿಯಲ್ಲೇ ತಂದೆ ಆನಂದ
ನೀಡುತಿರುವೆ ಇಂದಿಗೂ ಪ್ರೀತಿಯ ಸುನಾದ
ನೀನೆಂದರೆ ನನಗೆ ತುಸು ಹೆಚ್ಚೇ ಮೆಚ್ಚುಗೆ
ಸುಕೃತ ಸಂಬಂಧವಿದು ಒಳಿತಾಗುತಿರಲಿ ನಿನಗೆ
ಸಾಹಿತ್ಯ ಕೃಷಿ ಹೀಗೆ ಸಂಪನ್ನವಾಗುತಿರಲಿ
ಲೋಕೋತ್ತರ ಪ್ರಶಸ್ತಿಗಳು ನಿನ್ನ ಮುಡಿಗೇರಲಿ
ಕೋಮಲೆ, ನಿಸ್ವಾರ್ಥ ಮನದ ಸಹೃದಯಿ ನೀನು
ಬಹುಮಾನ ನಿನಗೇನು ಕೊಡಲಮ್ಮ ನಾನು
ಪ್ರತಿ ಜನ್ಮ ದಿನವೂ ನಿನಗೆ ಸಂಪತ್ತು ತರಲಿ
ನಮ್ಮಿಬ್ಬರ ಭಾಂದವ್ಯ ನೂರ್ಕಾಲ ಹೀಗೆ ಇರಲಿ
ಜನ್ಮದಿನದ ಶುಭಾಷಯಗಳು ಗೆಳತಿ-
ನಾ
ಕಂಡ ಲತೆಯಿಂದು
ಆಸರೆ ಸಿಗದೆ ಸೊರಗಿದೆ
ನೀರೆರೆದು ಪೋಷಿಸೆಂದು ಮನ ಹೇಳುತಿದೆ-
ಏನೆಂದು ಬಣ್ಣಿಸಲಿ ನಿನ್ನ ಮುಗ್ದತೆಯ ಸೊಗಸು
ಅರಿವಿಲ್ಲದೇ ಕಾಣುವುದು ಮೊಗದಲ್ಲಿ ವರ್ಚಸ್ಸು
ಅಲ್ಪ ತೃಪ್ತ ನೀನು, ನಿನಗಿಲ್ಲ ದುರಾಸೆಯ ಕನಸು
ಬಂದ ಪಾಲಿನಲಿ ಸುಖಿಸಿವೆ ಅದೆ ನಿನ್ನ ತಪಸ್ಸು
ಇದೇ ರೀತಿ ಇರಲಿ ನಿನ್ನ ಬಾಳ ಪಯಣದ ಹಾದಿ
ಎದುರಾಗದಿರಲೆಂದೆಂದೂ... ದುರ್ಗಮದ ಆದಿ-
ಹಗಲು ಕಳೆಯೆ ಚತುರ್ ದಿಕ್ಕಿನಿಂದಿಳಿವ ತಮಸ್ಸು
ಸೂರ್ಯಾಸ್ತ ಉದಯಗಳ ನಡುವಿನ ಯಾಮಿನಿಯ ಸೊಗಸು-
ದಿನಕ್ಕೊಂದು ಚಿಂತನೆ -೭೬
ಸಂತುಷ್ಟ ಮನಸಿರಲಿ ಸುಗಮ ಜೀವನಕೆ
ಸೇರಬಹುದು ನಾವು ಸಂತೋಷದ ತೀರಕೆ
ಅರಿತರೆ ನೋವು ನಲಿವುಗಳ ಅಂತಃಸತ್ವ
ಅನುಭವಿಸುವೆ ಸಂಪೂರ್ಣತೆಯ ಶ್ರೇಷ್ಠ ತತ್ವ-
ದಿನಕ್ಕೊಂದು ಚಿಂತನೆ -೭೫
ಬದುಕಿನಲ್ಲಿ ಏನಿಲ್ಲಾ ಎನ್ನುವ ಮನೋವೇದನೆ
ಕಾಂಚನ ಜಗತ್ತಿನಲ್ಲಿ ಕಾಣೆಯಾಗಿದೆ ಸುಮ್ಮನೆ
ನಿರ್ಮಲ ಪ್ರೀತಿ ಎಂದಿಗೂ ಹೇಳಲಾಗದ ಕಾಮನೆ
ಪ್ರೇಮದ ನೆರಳಲಿ ಕಾಣಬೇಕಿದೆ ಪವಿತ್ರ ಭಾವನೆ-
ದಿನಕ್ಕೊಂದು ಚಿಂತನೆ -೭೪
ಸ್ನೇಹವೆಂಬುದು ಅತ್ಯಂತ ಸುಂದರ ಸಂಬಂಧ
ತಿಳಿಯದೇ ಮನದಾಳದಿಂದ ಬರುವ ಅನುಬಂಧ
ಮಧುರ ಸ್ನೇಹದಲ್ಲಿ ಸುಳಿಯಲಾರದು ಸ್ವಾರ್ಥ
ನಿಷ್ಕಲ್ಮಷ ಭಾವವದು ದೇವರಷ್ಟೇ ಪವಿತ್ರ-
ಪ್ರೀತಿಯ ವೈಷ್ಷವಿ,
ಮನದ ತುಂಬಾ ಪ್ರೀತಿ ತುಂಬಿಹ ರಮಣಿ
ಹಾಡಲು ನಿಂತರೆ ಸೋಲೊಪ್ಪದ ಸಿಂಹಿಣಿ
ಮಗುವಿನ ಮನಸ್ಸಿನ ಚೆಲುವಿನ ಕಣ್ಮಣಿ
ಶುಭ ಕೋರುತಿಹರು ಆಗಸದ ಸೂರ್ಯ ಚಂದ್ರರು
ಜನ್ಮ ದಿನದಲ್ಲಿಂದು ತುಂಬಿರಲಿ ಬೆಚ್ಚನೆ ಉಸಿರು
ಸುಂದರ ಭಾವಗಳ ಎಳೆ ಎಳೆಯಲ್ಲಿ
ನಿನ್ನ ಕಲೆ ಪ್ರಜ್ವಲಿಸಲಿ ಹೊನ್ನ ಬೆಳಕಿನಲ್ಲಿ
ಕೋಕಿಲ ಕಂಠದ ಕಾವ್ಯಕನ್ನಿಕೆ ನೀನು
ಹೆಚ್ಚೇನ ಹೇಳಲಿ ಸ್ಪೂರ್ತಿಯ ಚಿಲುಮೆ ನೀನು
ಹೊಸ ರಾಗ, ಹೊಸ ಭಾವ, ಹೊಸ ಲೋಕ ಉದ್ಭವಿಸಿ
ಮನಸಿನಾಳದ ಭಾವ ರೆಕ್ಕೆ ಬಿಚ್ಚಿ ಸಂಭ್ರಮಿಸಿ
ತರಲಿ ನಿನಗಿಂದು ಹೃದಯದಲಿ ಗಂಗಾವತರಣ
ಉಕ್ಕುತಿರಲಿ ವಿಜಯೋತ್ಸಾಹದ ಹೊಂಗಿರಣ
ಪ್ರಿಯ ಆಶೀರ್ವಾದಗಳೊಂದಿಗೆ
ಜನ್ಮದಿನದ ಶುಭಾಷಯಗಳು ಜಾನು-