ಬರಹಗಳ ಒಡನಾಟ ಜಂಜಾಟದ ಬದುಕಿಗೆ ಕುಸುರಿಯಾಟ.!
-
ನನ್ನವನು
ನಿತ್ಯನೂತನವಾಗಿ
ನನ್ನೊಳಗೆ
ನಾವಿನ್ಯತೆಯ
ನವರಂಗಿನೋಕುಳಿಯಲಿ
ನಿಬ್ಬೆರಗೇಳಿಸುತಾ
ನಗುತಿಹನು
ನಭೋಮಂಡಲದ
ನಭರಾಜಪಾಲನಂತೆ!
ನನ್ನಂತರಾಳದೊಳಗೆ
ನಲಿಯುತಿಹನು
ನವಿಲಿನಂತೆ
ನವಿರಾಗಿ ನಾಜೊಕಾಗಿ
ನಳನಳಿಸುತಿಹನು
ನಸುನಗುತಲೆ..-
ನನ್ನುಸಿರಲಿ ನಿನ್ನುಸಿರು ಬೆರೆತಿರುವಾಗ
ಹೋಗುದೆಲ್ಲಿಗೆ ಒಲವೆ !
ನನ್ನಂತಃಪುರದ ತೊಟ್ಟಿಲಲಿ ಜೀಕುತಿರುವ
ನಿನಗೆ ಬಿಟ್ಟೋಗುವ
ಮಾತೇಕೆ ನನ್ನೊಲವೆ!!
-
ಕನ್ಯೆಗೆ ಬೆಸೆದಿರುವನು ಅಪ್ಪ ಪಾಣಿಗ್ರಹಣವೆಂಬ ಸಂಬಂಧ ;
ಮೂರುಗಂಟಿಂದ ಬೆರೆತಿದೆ ಬಾಂದವ್ಯವೆಂಬ ನಂಟಿನ ಅನುಬಂಧ!-
ಮಾತು ಮೌನಗಳ
ಮೆರವಣಿಗೆಯಲಿ
ಮಾತು ಮೇಲುಗೈ ಪಡೆಯುತಿದ್ದರೆ
ಮೌನವೂ ಸಹನೆಯ
ಪ್ರತೀಕದಂತೆ
ಕುಳಿತಲ್ಲೆ ಮಾನ್ಯತೆ ಪಡೆಯುತಿದೆ..-
ಕಾಣದೂರಿನಲಿ
ಅಪರಿಚಿತರ ಸಮೂಹದೊಳಗೆ
ಅರಿಯದ ನೆನಪುಗಳ
ಮಳಿಗೆಗಳಲಿ
ಪಳಿಯುಳಿಕೆಗಳಂತೆ
ಮಾರಾಟವಾಗುತಿವೆ
ಕನಸುಗಳೆಂಬ ಸರಕುಗಳು!
ಅಗ್ಗದ ಬೆಲೆಯಲಿ
ಹಬ್ಬದ ವಾತವರಣ ಸೃಷ್ಠಿಸಿವೆ!
ಮಗ್ಗದಲಿ ನೇಯ್ದ
ನೂಲಿನಂತೆ ನವಿರಾದ
ಕನಸುಗಳು ಹರಾಜಿನಲಿ
ಮಾರಾಟವಾಗುತಿವೆ!-
ಹೃದಯವೆಂಬ ಜಲಪಾತದಲಿ
ಸದಾ ಹರಿಯುತಿದೆ ಒಲವ ಸುಧೆ
ಅದು ನಮ್ಮಿಬ್ಬರ ಭಾವಾಂತರಂಗದ
ನಾದಸುಧೆಯೂ ಓಂಕರಿಸುತಿದೆ
ಅನುರಾಗದ ಆಲಾಪನೆಯೂ
ಅನುಕ್ಷಣವೂ ಸ್ಫುರಿಸುತಿರಲಿ...-
ನಿಮ್ಮೀ ಹೊಸ ಬಾಳ ಮುನ್ನುಡಿಯು ನವ ಉಲ್ಲಾಸˌ ಉತ್ಸಾಹದಿಂದಿರಲಿ ನಿತ್ಯನೂತನವೂ;
ನಗುತಿರಿ ನಗಿಸುತಿರಿ; ನಗುವೆ ನಿಮ್ಮೀ ಮೊಗದ ಆಭರಣವಾಗಿರಲಿ ಅನುಕ್ಷಣವೂ!-
ಕನ್ಯಾದಾನದೊಂದಿಗೆ ಅಪ್ಪನ ಭಾರವಾಗಿದ್ದ ಹೃದಯ ಹಗುರ;
ಕನಸುಗಳೊಂದಿಗೆ ಮನೆತುಂಬಿಕೊಂಡ ಕನ್ಯಾಮಣಿಯ ಮನ ಮಧುರ!-
ಅಂತ್ಯಕ್ಕೂ ಆರಂಭವುಂಟು ಮನವೆಂಬ ಮುಗಿಲು ವಿಶಾಲವಾದರೆ;
ಪ್ರೀತಿಯೆಂಬ ಆಚರಣೆಯೊಂದಿಗೆ ಜಾಗರಣೆಯೂ ಮುಗಿಯುವಂತಿದ್ದರೆ!-