ಮನವೆಂಬೊ ಹೊಲದಲ್ಲಿ
ಆತ್ಮವೆಂಬೊ ಮಣ್ಣಲ್ಲಿ
ಭಕುತಿಯ ಬೀಜ ಬಿತ್ತಿ
ಸತ್ಸಂಗದ ಉದಕವನೆರೆದು
ಮೋಹವೆಂಬೊ ಕಳೆ ಕಿತ್ತಿ
ನಿರ್ಲಿಪ್ತಭಾವದ ಗೊಬ್ಬರವ ಹಾಕಿದರೆ
ಸಾಕ್ಷಾತ್ಕಾರದ ಹೂವರಳಿ
ಮೋಕ್ಷದ ಗಂಧವ ಬೀರದಿರುವುದೆ..!?-
ಮೋಹಾದಿ ಭಾವಾಸೆಗಳು ತುಂಬಿ ತುಳುಕುವ
ಈ ತಳುಕು ಬಳುಕಿನ ಬಂಧನದೊಳು
ನಾವೆಂದಿಗು ತುಸು ದಿನದ ಅತಿಥಿಗಳು..!
ಅಣು ಅಣುವಿನ ಕಣದೊಳಗು ಮಿಡಿವ
ಪೂರ್ಣತೆಯ ಪ್ರಭುವಿನ ಸ್ಮರಿಸಿದಾಗ
ಅನಂತ ಅಂತರಂಗದ ಮಕ್ಕಳು...!
-
ಶ್ರೀಗಂಧ ವದನವದು
ಘಮಿಸುವ ಧಮನಿ
ಅಣುರೇಣುಗಳ ಉಸಿರೊಳಗೊಂದಾಗಿ
ಪರವಶಗೊಳಿಸುವ ಆತ್ಮದನಿ
ಅದಮ್ಯ ಅನುರೂಪಕ್ಕಾಗಿ
ನಿನ್ನೆಡೆಗೆಂದು ಜಾರುವ
ಅರ್ಧಬೆಂದ ಮನವಿದು
ನನ್ನೊಳಿರುವ ಅನುರಾಗ
ಬಯಸುವದೆಂದಿಗು ನಿನ್ನ ಅಗಾಧ ಪ್ರೇಮಯೋಗ-
ನಿರೀಕ್ಷೆಯ ಬಾಯಾರಿಕೆಯೆಂಬುದರ
ಹೆಸರಲ್ಲಿ ವಿಷ ಸೇವಿಸುತ್ತಿರುವೆ ನಾ...!
ಅಸ್ವತಂತ್ರದ ಸೂರಾಚೆಯೆಂಬುದರ
ಹೆಸರಲ್ಲಿ ಅನಿತ್ಯ ಬಲೆಯ ಬಂಧಿಯಾಗಿರುವೆ ನಾ...!
ಮೂಢತೆ ಬದಿಗೊತ್ತುವೆಯೆಂಬುದರ
ಹೆಸರಲ್ಲಿ ಕೆಸರಿನ ಓಕುಳಿಯಾಡುತ್ತಿರುವೆ ನಾ...!-
ಧರ್ಮಕ್ಕು ಆಧ್ಯಾತ್ಮಕ್ಕು ಅದೃಶ್ಯ ಗೆರೆಯಿದೆ
ಎಲ್ಲ ಧಾರ್ಮಿಕ ಆಚಾರಗಳು ಆಧ್ಯಾತ್ಮಿಕವಲ್ಲ
ಆದರೆ
ಎಲ್ಲ ಆಧ್ಯಾತ್ಮಿಕ ವಿಚಾರಗಳು ಧರ್ಮಯುತವೆ-
ನನ್ನೆದೆಯಲ್ಲರಳಿದ ಕವಿತೆಯ ಸಾಲೊಂದು
ಚರಣವ ದಾಟಲಾಗದಾಗಿದೆ ಅಪೂರ್ಣ
ನನ್ನೊಳಗವಿತಿರುವ ನಾದಸೆಲೆಯ ಪೂರ್ಣಭಾವದ ಅನುರಾಗವದು ನಿನ್ಹೆಸರಿನಿಂದ ಸಂಪೂರ್ಣ-
ಪಾಲಿಗಂಟಿದ ನಳಪಾಕವ ತೊರೆದು
ದೊರಕದ ಖಾದ್ಯವ ಪಡೆವ
ಅಲೆದಾಟದಿ ಹಳಸಿದ ಹೂರಣ
ತಿಳಿಯಾಗದ ತಿಳಿವಿನ ಋಣ
ಈ ಜೀವನ!!-
ಜಗ ಹೇಳ್ವದು ನಿನ್ನಂತ ಅದೃಷ್ಟವಂತರಿಲ್ಲ !!
ತಂದೆ ,ತಾಯಿ, ಗಂಡ , ಉದ್ಯೋಗ, ಸೌಂದರ್ಯ, ಆರೋಗ್ಯ ಎಲ್ಲವು ನಿನ್ನಲ್ಲುಂಟೆಂದು
ಆದರೆ ಎದೆಯೊಳಗೊಂದು ಅನಾಥ ಭಾವ ಅದೆಂದು ಅಣಕಿಸುತಿಹುದು
ಹರಿಯನುಭವ ನೀನಗಾದರು ಅವನ ತುಣುಕೆ ನೀನಾದರೂ ಅವನ ಪಾದದ ಧೂಳು ಕೂಡ ನಿನ್ನ ಸೋಕಿಲ್ಲವೆಂದು-