ಬದುಕಿನ ತೇರೊಂದು ಹೊಳೆಯುವ ನಕ್ಷತ್ರವ
ಅಲಂಕರಿಸಿಗೊಂಡು ಮಿಂಚುತಿದೆ ರಾತ್ರಿ ಹಗಲು..
ಬೆಚ್ಚಗೆ ಅನುರಾಗದೊಳು ಅವಿತ ಅಪೂರ್ಣಮನ
ಹಪಹಪಿಸುತಿದೆ ನಿನ್ನೊಲವ ಕುಂಚದ ವರ್ಣದೊಳು ಒಂದಾಗಲು..
ನನ್ನೊಳಗಿನ ನಿನ್ನ ಹೆಕ್ಕಿ ಹಾರಿಸುವುದು
ಸೃಷ್ಟಿಯೊಳಗೊಂದಾದ ಪ್ರೇಮಾಂಕುರದ ಸಂಜ್ಞೆಯ ಉಯಿಲು..-
ನಿನ್ನ ನೆನಪಿನ ಮಳೆಯಲಿ ತೊಯ್ದ
ಅಪ್ಪುಗೆಯ ಕ್ಷಣಗಳ ಓಡಾಟದ ಪರಿಗೆ
ಬಿಸಿಯಿಂದ ಕಾವೆರಿದ ಪ್ರೇಮಯಾನದಿ
ಶೀರ್ಷಿಕೆಯಿಲ್ಲದ ಅಪರೂಪದ ಪದ್ಯವೊಂದು
ಕಾಣದ ಕನಸಿನಂತೆ ಮಿಂಚಿ ಮರೆಯಾಗುತಿಹುದು-
ಬೆಟ್ಟದಷ್ಟು ಪ್ರೀತಿಯಿತ್ತಾಗ ಪ್ರಶ್ನಿಸದ ನಾವು
ಬೊಗಸೆ ಕೋಪಕ್ಕೆ ದೂರುವುದು ಯಾತಕ್ಕೆ!?-
ಭಾವಾಂತರಂಗದ ಸೆರಗಿಗೆ
ಕಳೆತಂದ ಕುಚ್ಚಂತೆ ನೀ
ಒಲವಾಂತರಂಗದ ಬಂಧಕ್ಕೆ
ಸೊಬಗಿನ ಕಳಸ ನೀ
ಪ್ರೇಮಾಂತರಂಗದ ರಂಗಿಗೆ
ಸೊಗಸಿನ ಕಿರಣ ನೀ-
ನನ್ನೆದೆಯಂಗಳ ನಿನ್ನ ಸದ್ದಿಲ್ಲದೆ ಖಾಲಿ ಖಾಲಿ
ಕಳೆದ ಸಮಯದ ಮಾರ್ಧನಿಯೊಂದಳುತಿದೆ ಸ್ವಪ್ನದಲಿ
ಬದುಕಿನ ತುಂಬೆಲ್ಲಾ ನಿನ್ನ ನಗುವಿರುವಾಗ ಮಿಂಚುತಲಿ
ದಿನಗಳೆವ ಚಟುವಟಿಕೆಯಲ್ಲು ನಿನ್ನನುರಾಗದ್ದೆ ಖಯಾಲಿ-
ನೀನಿತ್ತ ನೆನಪಿನಕುಂಚಕ್ಕೆ
ಅದೆಂತಹ ಒಲವಿನ ಬಣ್ಣದ ಹೊಳೆ ಹರಿಸಿದರು ಕಮ್ಮಿಯೇ
ಒಂದೊಮ್ಮೆ ನಿನ್ನ ನೆನಪು ಆಗಸದಿ ಆನಂದಿಸಿದ ಅನುಭವವನಿತ್ತರೆ
ಮತ್ತೊಮ್ಮೆ ತಂಗಾಳಿಯಲಿ ತೇಲಿದ ಅನುಭೂತಿಯನಿಯ್ಯುವುದು-
ಸಂಭ್ರಮದ ಚಪ್ಪರದೊಳು
ಬಂದುಭಾಂದವರ ಮಧ್ಯದೊಳು
ನಿನ್ನ ಕಣ್ಣಂಚಲಿ
ನನ್ನ ಕಾಣುವ ಕಾತುರ
ಜನುಮದ ಪ್ರೀತಿಮೊತ್ತ
ಎಂದು ಸಿಗುವುದೆಂದು
ನಾ ನಾಚುತ್ತ ನಿಂತಾಗ
ಗಟ್ಟಿಮೇಳದ ರಾಗಸಾಕ್ಷದಿ
ಅರ್ಧದ ಬದುಕು
ಅರ್ಧಾಂಗಿಯ ಸೇರಿ ಪೂರ್ಣವಾಗಿತ್ತು-
ಯಾವ ರಾಗವದು ತಂಗಾಳಿಯಲಿ ಸುಳಿದಾಡಿ
ನನ್ನೊಲವಿಗೆ ಈ ಜೀವದ ಬಡಿತ ತಲುಪಿಸಿದ್ದು.?
ಯಾವ ಅನುಬಂಧವದು ಕುಡಿಯೊಡೆದ ಪ್ರೇಮಪಲ್ಲವಿಯ
ಮಿಂಚಾಗಿ ಹರಿಸಿ ಸ್ವರಧಾರೆ ಹರಿಸಿದ್ದು.?
ಯಾವ ಸುಪ್ತಭಾವವದು ಕಡಲಾದ ಪ್ರಣಯವ
ಗೀತೆಯಾಗಿ ಹೊಮ್ಮಿಸಿ ಎದೆಯಂಗಳದಿ ನಲಿಸಿದ್ದು.?
-