ಒಂದು ಜೀವಕೆ,
ನೂರಾರು ದೇಹ,
ಹಲವಾರು ಬಾಂಧವ್ಯ,
ಎಷ್ಟೊಂದು ಸ್ನೇಹ,
ಆದರಲ್ಲಿ ಕೊನೆಗುಳಿಯುವುದೊಂದೆ,
ಪರಮಾತ್ಮನ ಪರಮಾಪ್ತವಾದ ಪ್ರೇಮ!!-
ಹುಟ್ಟೊಂದು ಮಾಯೆ,
ಸಾವದರ ಛಾಯೆ,
ಇರುವುದೇನೇನೋ ಆಸೆ,
ಆದರದೆಂದು ಬರಿ ಸೊನ್ನೆ!
ಏನುಂಟು? ಎಲ್ಲುಂಟು?
ಯಾಕುಂಟು? ಯಾರದಾಗಂಟು?
ಗೋಜೇನೋ? ಗೊಂದಲವೇನೋ?
ಇಲ್ಲೆಲ್ಲ ಬಲ್ಲವರಾರುಂಟು?!
ಇರೋದು ಸಾಸಿವೆಯಷ್ಟು,
ಹೋದರದು ಬೆಟ್ಟದಷ್ಟು,
ಸುಖ ದುಃಖವೆಲ್ಲ ಸುಳ್ಳುಗಳು,
ಜೀವನ ಆ ದೈವಾಜ್ಞೆಯು.-
ಪ್ರತಿ ಮನಸ್ಸಿನ ಮುಕ್ತಿಗಾಗಿ,
ಪ್ರತಿ ಕನಸಿನ ಸ್ಫೂರ್ತಿಗಾಗಿ,
ಲೋಕದ ಮುಂದೊಂದು
ದೊಡ್ಡ ಶಕ್ತಿಯೊಂದು ಜನ್ಮತಾಳಿತು,
ಹೊಸಬೆಳಕಿನ ಭಾವದಾವರಣದಲ್ಲಿ
ಅಂತಃಕರಣದಿಂದೆತ್ತಿ ಎದೆಗವಚಿಕೊಂಡು
ಸೃಷ್ಟಿಯಾದ ವಿಧಾತನ ಆ ಪುಟ್ಟ ಜೀವವೆ
ಈ ಪ್ರೀತಿಯೆಂಬ ಕೂಸು.-
ಮಾನವ ಜನ್ಮಕ್ಕಿಂತ ಮಿಗಿಲೇನಿದೆ,
ಹೃದಯದೊಳಗೆ ಪ್ರೀತಿ ತುಂಬಿದೆ,
ಬಿಸಿ ಕಣ್ಣೀರು ಥಂಡಿ ನಗುವಿನಲ್ಲೇನಿದೆ,
ಅವರವರ ದಾರಿ, ಗುರಿ ಅವರವರಿಗೆ,
ಜೀವದರಿವು ಗುರುವಿನ ಗರಡಿಯಲ್ಲಿದೆ.-
ಮನಸಿಟ್ಟು ಕೇಳಿಸಿಕೊಳ್ಳಿ,
ಪ್ರೀತಿಯು ದೈವಸ್ವರೂಪಿ,
ಭಾವನೆಗಳು ವಸ್ತುವಲ್ಲ,
ಹೃದಯವೂ ಪ್ರದರ್ಶನದ ಪ್ರತಿಷ್ಠೆಯಲ್ಲ,
ಪ್ರೀತಿಗೆ ಸಾಟಿ ಪ್ರೀತಿಯಷ್ಟೆ!
ಪ್ರೀತಿಯ ಮುಂದೆ ಎಲ್ಲವೂ ಸೊನ್ನೆ!
ಪ್ರೀತಿಯೇ ಸಿರಿಸಂಪದ,
ಪ್ರೀತಿಯೇ ಜಗದಧಾರ.— % &-
ಹಸಿದ ಹೊಟ್ಟೆಯ ಎದುರು,
ಪ್ರತಿಷ್ಠೆಯ ಮಾತುಗಳು,
ತಿಂಡಿ, ತೀರ್ಥಗಳು, ಹಾಡು,
ಪರಿಮಳದ ಕಂಪು,
ಇವು ಯಾವುದಾದರೂ
ಹೊಟ್ಟೆ ತುಂಬಿಸುವುದೆ?!-
ಬಾಳ ಪಥದಲ್ಲಿ
ಸಾಗುತಲಿರೆ ನೀ ಎಲ್ಲಿಗೋ ದೂರ
ಕವಲುದಾರಿಯಿರಲು ಮರೆಯಲ್ಲಿ
ತಿಳಿಯದೇನು ನಿನಗಿಲ್ಲಿ.
ಓಡುತಿರುವೆವು ನಿಲ್ಲದಂತೆ
ನಿಂತವರು ಸೋತರೆಂಬಂತೆ
ಗೆಲ್ಲುವುದಿಲ್ಲಿ ಹೆಸರಿಗೊಂದೆಯಂತೆ
ನಾನೆನ್ನುವುದು ಮಣ್ಣೆನ್ನುವುದನ್ನು ಮರೆತುಬಿಟ್ಟರಂತೆ.
ನನ್ನದು, ನನ್ನದೆಂದು ಬಡಿದಾಡುವರಂತೆ
ಸತ್ತಾಗ ಅಸ್ಥಿಯೂ ಬೂದಿಯಂತೆ
ಜೀವದ ಆಸ್ತಿ ಆತ್ಮನಂತೆ
ಆತ್ಮದ ಒಡೆಯ ಪರಮಾತ್ಮನಂತೆ
ತಿಳಿದ್ದಿದರೂ ತಿಳಿಯದವರಂತೆ ಇರಬೇಕಂತೆ
ಗೊತ್ತಿದ್ದರೂ ಗೊತ್ತಿಲ್ಲದವನೆ ಶ್ರೇಷ್ಠನಂತೆ.-
ನಾನು ಬಣ್ಣಿಸಲಾರೆ
ಅಂತರಂಗದ ಆ ಪರಿಕಲ್ಪನೆ,
ಯಾರ ಅದೃಷ್ಟ! ಯಾರ ಪುಣ್ಯ!
ಅದಾವುದೋ ಅಪೂರ್ವ ಮಿಲನ,
ಹೃದಯಕೆ ಹತ್ತಿರ ಆದರೂ ಎತ್ತರ.
ಶಬ್ದಗಳ ದಾಟಿದ ವಿಸ್ಮಯ,
ಎಲ್ಲ ಋಣಗಳ ಮೂಲ,
ಆತನೊಬ್ಬ ಪರದೈವ,
ಮನಸ್ಸಿನಲ್ಲಿ ಮಿಡಿದ ಭಾವ,
ಅನುಭವ ಹಿಡಿದ ರೂಪ,
ಅಪರೂಪ ಎನಿಸೋ ಕಲ್ಪ.
ಇಚ್ಛೆ ಇಟ್ಟಕೊಂಡು
ಇಹಕೆ ಇಳಿದ ಬೆಳಕು,
ಎಲ್ಲರೊಳಗು, ಎಲ್ಲದರೊಳಗು
ತನ್ನ ಛಾಯೆಯನ್ನಿಟ್ಟು
ಬಿಟ್ಟುಕೊಡದೆ ಭಗವಂತ
ಆಡುತ್ತಿರುವ ಮಾಯಾದಾಟ.-
ಹೂವಿಗಿಂತಲೂ ಮೃದುವಾದ ಶ್ವೇತ ಹೃದಯ,
ಮುನಿದರಂತು, ನಾ ಘೋರ! ಅತಿ ಭಯಂಕರ!
ಭೂತ; ಭವಿಷ್ಯ; ವರ್ತಮಾನ ಕಾಲ,
ನಿತ್ಯ ನೂತನ, ಅವಿರತ ನಿರತ,
ದೇಹವಿಲ್ಲದ ಆತ್ಮ ನಾ,
ಅಣು ಅಣುವಿನಲ್ಲೂ ನಾ ವ್ಯಕ್ತ,
ಓಂಕಾರ ನಾದದಿ ಅಮೂರ್ತ;
ಸ್ವಲೀಲೆಯ ಸೃಷ್ಟಿ ಚೈತನ್ಯ,
ಧ್ಯಾನದ ಬ್ರಹ್ಮಜ್ಞ,
ನಾ,
ಜ್ಞಾನಪೀಠ!
ನಾ,
ಬೆಳಕಿನ ಸಂಭ್ರಮ!-