ಸಖ ಕೈ ಹಿಡಿಯದಿದ್ದರು ಸರಿ
ಹೆಜ್ಜೆಗುರುತುಗಳ ಉಳಿಸು
ಹಿಂದೆಯೇ ಹಿಂಬಾಲಿಸುವೆ
ವಿಶ್ವಸಾರಥಿ ನಿನ್ನನರಸುವುದೇ
ಈ ಅಭಿಸಾರಿಕೆಯ ಕಾಯಕ
ನಂದನನೇ ನಂದನದ ಹಾದಿಯಲಿ
ನೀನುಳಿಸಿದ ಹೆಗ್ಗುರುತುಗಳಿವೆ
ಅಳಿಸದಿರೋ ನಿನ್ನ ಸೇರಲುಳಿದ
ಗುಪ್ತವಾದ ಸಿಹಿಸುಳಿವದು
ವೇಣುನಾದವ ನುಡಿಸುತಿರು
ನಿಲ್ಲಿಸದಿರು ಅರೆಗಳಿಗೆಯು
ಅನುಸಾರಿಣಿಗೆ ಆಧಾರವದುವೆ
ಮೋಹನರಾಗದ ಜಾಡನರಸಿ
ಆತ್ಮಪ್ರೀತನೆದೆಯ ತಲುಪಲು-
ಛಲೀಯ.. ನನಗಿಷ್ಟ ಕಾಣ
ಬಿದಿರಕೊಳಲು ನವಿಲಗರಿ
ಜುಳುಜುಳನೆ ಹರಿವ ಝರಿ
ಬೃಂದಾವನದ ಕಲ್ಲುಮಂಚ
ಬಿರಿದರಳಿದ ಬಿಳಿಹೂಗುಚ್ಛ
ಗೋಧೂಳಿಯ ತಿಳಿಗೆಂಪು
ಸಾಂಬ್ರಾಣಿಯ ಮಂದಗಂಪು
ನನ್ನೆದೆಗೆ ಆತುಕೊಂಡ ನೀನು
ನಿನ್ನೊಳು ಧ್ಯಾನಿಯಾದ ನಾನು
ವಲ್ಲಭನ ದೂರವಿಟ್ಟ ವಿಧಿಯು
ರಮಣ ನೀನಿತ್ತ ವಿರಹದುರಿಯು
ರಾಸ ನಿನ್ನೀ ಹೊಸ ಪ್ರೇಮಪರಿಯು
ನನಗಿಷ್ಟ ಯದುಪತಿಯೇ ನಿನ್ನಿರುವು-
ಪಾಪಾತ್ಮನೊಬ್ಬ ಮೋಹವ ಪ್ರೀತಿಯೆಂದ
ಕಣ್ಮುಚ್ಚುವ ಕಾಮವನು ಪ್ರೇಮವೆಂದ.,
ಅಪ್ಪಟ ಪ್ರೇಮಿಯೊಬ್ಬನ ಸುಟ್ಟುಕೊಂದ
ಅವಳ ಗೋರಿಯನು ಪ್ರೇಮಮಹಲೆಂದ
ಮುಗ್ಧ ಕುರುಡರಿಗೆ ಅಮರಪ್ರೇಮಿಯಾದ.!
ಪರಮಾತ್ಮನೊಬ್ಬ ಧ್ಯಾನವ ಪ್ರೀತಿಯೆಂದ
ಕಣ್ತೆರೆಸುವ ಅನುಭಾವವ ಪ್ರೇಮವೆಂದ.,
ತನ್ನನರಸಿದವರಿಗೆ ಪ್ರೇಮಧಾರೆಯನೆರೆದ
ಪರಿಶುದ್ಧ ಆತ್ಮವದುವೆ ಒಲವಸೌಧವೆಂದ
ಶುದ್ಧಕೆಟುಕರ ಬಾಯಲ್ಲಿ ಸ್ತ್ರೀಲೋಲನಾದ.!-
ಅವಳೊಂದು ಕೊಳಲು
ಅವನೇ ಅವಳ ಕೊರಳು
ಬೆರಳ್ನುಡಿಸಿದ್ದು ಪ್ರೇಮರಾಗ
ಧ್ವನಿಯವನು., ಉಸಿರಿವಳು
ಅನುರಾಗಕೆ ಸಾಕ್ಷಿ ಯುಗಗಳು
ಅವರೀರ್ವರ ಪ್ರೀತಿ ದಿವ್ಯಕಾವ್ಯ
ಉಳಿದದೆಲ್ಲ ಅಲ್ಲಿ ಮಹಾಶೂನ್ಯ-
ಅಚ್ಯುತನೇ ಅತಿವಿರಳನೆ
ನಿನ್ನಂತಹ ಅಚಲ ಪ್ರೇಮಿಯನು
ಈ ಹಿಂದೆ ಯಾರು ಕಂಡಿಲ್ಲ
ಮುಂದೆದಿಗೂ ಕಾಣುವುದಿಲ್ಲ
ಕಲಿಯುಗದಿ ಯಾರೂ ನಿನ್ನಂತಿಲ್ಲ
ಅದಕ್ಕೆ ನಾ ನಿನ್ನನೇ ಪ್ರೇಮಿಸಿರುವೆ
ಪಟ್ಟದರಾಣಿಯ ಪಟ್ಟವೇನು ಬೇಡ
ಮೀರಾ ರಾಧೆಯರಂತೆ ನಾನೂ
ಮನದಲಿ ಮನೆಮಾಡುವಾಸೆ
ಕನ್ನಡತಿಯ ಕಲ್ಮಶವಿರದ ಒಲವ
ಕಣ್ಮುಚ್ಚಿ ಸ್ವೀಕರಿಸೆಯ ಕೇಶವ
-
ಆತ್ಮಪ್ರಭು.. ಕೇಳಿಲ್ಲಿ ದುಃಖಿಸೆನು ನಾನು
ಕಾಯುವಿಕೆಯ ಅರ್ಥವೇ ಸಖಿಯಲ್ಲವೇ.,
ಕಾಯುವುದರಲ್ಲೇ ಪ್ರೇಮ ಸುಖವಲ್ಲವೇ.!
ಶ್ಯಾಮ ನಿನ್ನ ಬರುವಿಕೆಯ ಬೆಳದಿಂಗಳನು
ಕರಿದಿಂಗಳ ರಾತ್ರಿಯಲಿ ನೆನೆವವಳು ನಾನು
ನೀನಿತ್ತ ನೀರವತೆಯ ತಲೆಬಾಗಿ ಒಪ್ಪಿದೆನು
ಹೇಗಾದರೂ ಒಮ್ಮೆ ಬಂದುಬಿಡು ನೀನು
ಕೊನೆಯಾಸೆ ಫಲಿಸದೆ ಉಸಿರು ನಿಲ್ಲದು
ಮಡಿಲಲ್ಲಿ ಮಗುವಾಗಿಸಿ ಮಲಗಿಸೆನ್ನನು.,
ಮತ್ತೆ ನನ್ನಿಷ್ಟದ ಬಾಸುರಿಯ ನುಡಿಸು ನೀ
ಶ್ವಾಸವಿದು ಕೊಳಲ ರಾಗದಲಿ ಬೆರೆಯಲಿ
ಕೃಷ್ಣ ನಿನ್ನ ಕಣ್ಣಲದು ಕಣ್ಣೀರೆ.! ಸಹಿಸೆನು
ಈ ರಾಧೆ ಸದಾ ನಿನ್ನೆದೆಯ ನಿಧಿಯಲ್ಲವೇ
ಯುಗವುರಿಳಿದರು ಜನಜನಿತ ಈ ಪ್ರೇಮ
ಕೊಳಲ ಮುರಿಯದಿರು ಅಲ್ಲಿದೆ ಉಚ್ವಾಸ.,
ರಮಣ ನಿನ್ನ ರಾಧೆಯ ಕಡೆಯ ನಿಶ್ವಾಸ.!-
ಸಖ.. ರಥ ನೀನು ಪಥ ನೀನು
ಬಾಳ ಸಾರಥಿ ನೀನು, ಸಖಿಯ
ಬದುಕಿಗೊಡೆಯ ನೀನೆ ಪ್ರಭುವೆ
ಮದನ.. ಸ್ಮೃತಿ ನೀನು ಸ್ಥಿತಿ ನೀನು
ಮಸ್ತಕದ ಮತಿ ನೀನು, ಭಕುತೆಯ
ಕೈ ಹಿಡಿವ ಶಕುತಿ ನೀನೆ ವಿಭುವೆ
ಕೃಷ್ಣ.. ಕೃತಿ ನೀನು ಕೀರ್ತಿ ನೀನು
ಕಾವ್ಯದ ಗತಿ ನೀನು, ವಲ್ಲಭೆಯ
ಪ್ರೇಮೋತ್ಪತಿ ನೀನು ಸ್ವಭುವೆ.!-
ನಂದ ನಂದನ ನನ್ನ ಮನದನ್ನ
ಮುಗುದ ಮೊಗದ ಮುಕುಂದ
ನವನೀತ ಚೋರ ಚಿತ್ತಸ್ಥಿತನೇ
ಬಿದಿರ ಬೊಂಬಲ್ಲಿ ರಾಗಸುಧೆಯ
ಹರಿಬಿಟ್ಟ ಮುರಳಿಮನೋಹರ
ಕಪಟಿಗಳ ಶ್ವಾಸ ಕಂಟಕ ಕುಣಿಕೆ
ಕಂಸಾರಿ ಅಸುರಾರಿ ನೀ ಮುರಾರಿ
ಸಾತ್ವಿಕರ ಸಖನೇ ಪಾರ್ಥಸಾರಥಿ
ಧರ್ಮ-ಕರ್ಮ ಮೋಕ್ಷದ ರೂವಾರಿ
ಪ್ರೇಮದಲೆಯ ಸಂಚಯ ಸಾಗರ
ರಾಧೆಯೊಲವ ನವಿಲಗರಿ ಶ್ರೀಹರಿ
ಎನ್ನಾತ್ಮ ಸಂಚಾರಿ ಕುಂಜವಿಹಾರಿ
ನಿನ್ನ ಪಾದ ಸೇರ್ವುದೆನ್ನ ನಿಶ್ಚಲಗುರಿ-
ಕಳೆದ ಕೊಳಲ ತಡಕುತಿರುವೆ
ಹುಡುಕಿಕೊಡೊ ಮೋಹನ.,
ಬಳಲಿದೆದೆಯು ಅಳುಕುತಿದೆ
ಒಲವ ಮಳೆಯನೀಯೆಯ..
ಹೆಪ್ಪುಗಟ್ಟಿದೆನ್ನ ರಕುತನಾಲೆ
ಸಖ ಹರಿವ ವರವ ನೀಡೆಯ
ಉಕ್ಕಿ-ಬಿಕ್ಕುವೀ ವಿರಹ ದುಃಖ
ವಿಭು ಶೋಕ ದೂರವಿರಿಸೆಯ.!
ಮುದುಡಿ ಮುರುಟಿತೆನ್ನ ಹೃದಯ
ಮುರಳಿ ಜೀವಸುಧೆ ಹರಿಸೆಯ.!-
ಕಗ್ಗತ್ತಲ ಗುಹೆಯೊಳಗೆ ಕಣ್ಮುಚ್ಚಿ
ಧ್ಯಾನಿಸುವಾಗ ಆತ್ಮದಲಿ ಹತ್ತಿದ
ದೀಪ ತಮದ ತನುವನು ನುಂಗಿ
ನಾನೊಮ್ಮೆ ಮೈಮರೆತು., ಕೃಷ್ಣ..
ಎಂದರುಹಿದಾಗ., ಆ ಮೃದುಲ
ಮಂದಸ್ಮಿತನ ಮೋಹಕ ವದನ
ಮುಚ್ಚಿದ ಕಣ್ಣಿನಾಳ ಹೊಕ್ಕಿ..!
ಝರ್ಜರಿತ ಖುಷಿಯ ನದಿ ಉಕ್ಕಿ
ಪ್ರೇಮೋತ್ಕರ್ಷದ ಸೆಲೆಗೆ ಸಿಕ್ಕಿ
ಹೃದಯವಿದು ಉಲ್ಲಸದಿ ಬಿಕ್ಕಿ
ಕಣ್ಣೀರು ತುಳುಕಿ ಕಪೋಲ ತಾಕಿ
ಅತೀವ ಅನುಭೂತಿ ಹರಿದಾಗ
ಸಖ ನಿನ್ನಲಿ ಆತ್ಮವ ವಿಲೀನಿಸಿ
ಹುಟ್ಟಿದ ಉತ್ಕಟ ಪ್ರೇಮವಿದು.!-