ನಮ್ಮೂರ ಬೀದಿಯಲ್ಲಿ
ನಾ ನಿನ್ನ ಮೊದಲ ಸಲ ಕಂಡದ್ದು
ಆಗಲೇ ನನ್ನೆದೆಯಲ್ಲಿ
ತಿಳಿಯದ ಅಲೆಯೊಂದು ಎದ್ದದ್ದು
ನೀನೆಂದು ನನ್ನ
ಹಿಂದೆ ಬಿದ್ದಿಲ್ಲ
ಓರೆಗಣ್ಣಿನಲ್ಲಿ ನನ್ನನ್ನು ನೋಡಿ
ನಕ್ಕಿದ್ದಂತು ಇಲ್ಲವೆ ಇಲ್ಲ
ನಾ ಸೋತಿದ್ದು ನಿನ್ನ ಸೆಳೆವ
ಕಂಗಳ ಕಾಂತಿಗಾ
ಇಲ್ಲ ಆ ಕುರುಚಲು ಗಡ್ಡ
ಚಿಗುರು ಮೀಸೆಗಾ
ಅದೇನು ಜಾದುವಿಹುದು ನಿನ್ನಲ್ಲಿ
ಯಾರಿಗೂ ಸೋಲದ ನನ್ನ
ಯಾವುದೇ ಶ್ರಮವಿಲ್ಲದೆ
ಸೋಲಿಸಿ ಬಿಟ್ಟೆ ಅರೆಕ್ಷಣದಲ್ಲಿ-
ಮೇಘಮಾಲೆಯ
ಮೇಲೆ ಬರೆದು ಕಳಿಸಿರುವೆ
ಮೌನದೋಲೆಯೊಂದ
ಒಲವು ತುಂಬಿದ ಪದಗಳ
ಶಾಖಕ್ಕದು ಕರಗಿ
ಮಳೆಯಾಗಿ ಸುರಿವ
ಮುನ್ನ ಓದು
ಗೆಳೆಯ ನೀ ಅದ
ಯಾರಿಗೂ ಕೇಳಿಸದಂತೆ-
ಸಂದಿಯಲ್ಲಿ ಸದ್ದಾಗದಂತೆ
ನಿಂತು ನೀ ಹೀಗೆ ಕದ್ದು ಮುಚ್ಚಿ
ನನ್ನ ನೋಡಬೇಡ ಗೆಳೆಯ
ನಾನು ಎಷ್ಟು ಅಂತ ಸಹಿಸಲಿ
ನಿನ್ನ ಕಣ್ ದೃಷ್ಟಿಯ-
ಪದಗಳಿಗಾಗಿ
ಪರದಾಡುತ್ತಿದೆ
ಹೃದಯ
ನಿನ್ನ ಬಣ್ಣಿಸಲು
ಗೆಳೆಯ
ಅವಕ್ಕು ಇರಬೇಕು
ನಿನ್ನೋಲವ
ಪರಿಚಯ-
ಅದೇನೂ ಜಾದುವಿದೆಯೋ
ನಿನ್ನ ಚಿಗುರು ಮೀಸೆಯ ತುದಿಯಲ್ಲಿ
ಮತ್ತೆ ಮತ್ತೆ ನೋಡುವ
ತುಡಿತ ಮೂಡುತ್ತಿದೆ ನನ್ನಲ್ಲಿ
ನೊಡಬಾರದೆಂದು ಅದೆಷ್ಟೇ
ದೃಷ್ಟಿ ಕಿತ್ತಿಟ್ಟರು ಬೇರೆಡೆಗೆ
ನನಗರಿವೆಲ್ಲದೆ ಅದು
ಹೊರಳುವುದು ನಿನ್ನೆಡೆಗೆ
ಸಾಕು ಸಾಕಿನ್ನು ಈ ಹುಡುಗಾಟ
ನಿಲ್ಲಿಸು ನಿನ್ನೆಲ್ಲ ವೇಷ
ಬೇಗ ಕೊಡು ನನಗೆ ಆ ಮೀಸೆ
ತಿರುವುವ ಅವಕಾಶ-
ನನ್ನೊಳಗಿನ ಪದಗಳು ನಿನ್ನೊಲವ
ದೆಸೆಯಿಂದ ಕವನವೆಂಬ ಹಣೆಪಟ್ಟಿ ಪಡೆದಿವೆ-
ನಾ ಪದಗಳ ಹುಡುಕಿ
ಕವನವೊಂದನು
ಬರೆಯುವ ಮೊದಲೇ
ಅದೆಲ್ಲಿಂದಲೋ ತಿಳಿಯದೆಯೇ
ನೀ ಅದರೊಳಗೆ ಬಂದು ಸೇರುವೆ
ಕಣ್ಮುಚ್ಚಿ ನಾ
ನಿದ್ರಿಸುವ ಮುನ್ನವೇ
ಕನಸಿನ ಲೋಕದಲ್ಲಿ ನೀ
ನನ್ನ ಸ್ವಾಗತಕ್ಕೆ ಸಕಲ
ಸಿದ್ಧತೆಯೊಂದಿಗೆ ನಿಂತಿರುವೆ
ನಾ ನಿನ್ನ ಕುರಿತು
ಯೋಚಿಸುವ ಮುನ್ನವೇ
ನನಗೆ ಅರಿವಿಲ್ಲದೆ ನೀ
ನನ್ನ ಯೋಚನಾ ಲಹರಿಯೊಳಗೆ
ತಿಳಿಯದಂತೆ ನುಗ್ಗಿ ಬಿಡುವೆ
ಎದುರಿಗೆ ಬರದೆ
ಮನದೊಳಗೇ ಅವಿತು
ನೀ ಹೀಗೆ ನನ್ನನ್ನು
ಬೆಂಬಿಡದೆ ಕ್ಷಣ ಕ್ಷಣವೂ
ಕಾಡುವುದು ತರವೆ
ಇನ್ನು ನನ್ನಿಂದಾಗುವುದಿಲ್ಲ
ಎಲ್ಲಿದ್ದರು ಬೇಗ ಬಂದು
ಮನೆಯವರನ್ನೆಲ್ಲ ಒಪ್ಪಿಸಿ
ಕರೆದುಕೊಂಡು ಹೋಗು
ನನ್ನ, ಆಗಿ ಮದುವೆ-
ನೀ ಬಳಿಯಿಲ್ಲದೆ
ಬದುಕು ಬರಡಾಗಿದೆ
ಗಾಳಿಯಲ್ಲಿಯೇ ಪ್ರೇಮ ಪತ್ರ
ಬರೆದು ಬರೆದು ಸಾಕಾಗಿದೆ-
ನನ್ನ ಮನದ ಭಾವನೆಗಳ
ಕದ್ದಾಲಿಸುವುದು ಸರಿಯಲ್ಲ
ಹುಡುಗ ಸುಮ್ಮನಿರು
ನೀನು ಬರೀ ಮೌನಿಯಾದರೆ
ಸಾಲಲ್ಲ ಕೆಲವೊಮ್ಮೆ
ಕಿವುಡನು ಆಗಿರು-
ಹಗಲಲ್ಲು ನಾ ಕಣ್ ಬಿಟ್ಟು
ಕನಸು ಕಾಣಲು ಕಾರಣ ನೀನು
ಎಷ್ಟೇ ಬೇಡವೆಂದು ಸುಮ್ಮನಿದ್ದರು
ಮತ್ತೆ ನೆನಪಾಗಿ ಕಾಡುವವನು ನೀನು
ಪ್ರತಿ ಎದೆ ಬಡಿತದಲ್ಲೂ
ಕೇಳುತ್ತಿದೆ ನಿನ್ನದೆ ಹೆಸರು
ನಿನ್ನನ್ನೇ ಬಯಸುತ್ತಿದೆ
ನನ್ನ ಪ್ರತಿ ಉಸಿರು
ಭಾಸವಾಗುತ್ತಿದ್ದೆ ನಿನ್ನ ಕುರುಚಲು
ಗಡ್ಡ ಚುಚ್ಚಿದಂತೆ ನನ್ನ
ನನ್ನ ಬಾಚಣಿಗೆ ಕಾಣದ ಮುಂಗುರುಳು
ಕಾಯುತ್ತಿದೆ ನಿನ್ನ
ಇನ್ನು ಉದ್ದವಿದೆ ನನ್ನ
ಬಯಕೆಗಳ ಪಟ್ಟಿ
ಬೇಗ ಬಂದು ಸೇರಿಬಿಡು
ನನ್ನ ತಾಳಿ ಕಟ್ಟಿ-