ಕಳೆದು ಹೋದ ದಿನಗಳವು!
ಕಳೆದುಕೊಂಡಿರದ ಕ್ಷಣಗಳವು!
ನೆನಪಲ್ಲಿ ಅಚ್ಚಾಗಿ,
ನಗುವು ಹೆಚ್ಚಾಗಿ,
ಪರಿಚಿತರ ನೆನಪಾಗಿ,
ನೆನಪಲ್ಲಿ ಕಳೆದ್ಹೋಗಿ,
ಆಗೊಮ್ಮೆ- ಈಗೊಮ್ಮೆ ಇಣುಕಿ ನೋಡಿರುವೆ!
ನಮಸ್ಕಾರ ಓದುಗರಿಗೆ, ಬರಹಗಾರರಿಗೆ ಹೀಗೊಮ್ಮೆ.
ಮರೆಯಲ್ಲ ಏನನ್ನೂ ;
ಮರೆತಿಲ್ಲ ಏನನ್ನೂ ;
ಮರೆತಂತೆ ಕಂಡರೂ ಮರೆಯಲಾರೆ ಎಲ್ಲವನ್ನು!
- ಸುವರ್ಣಾ ಗೌಡ-
ಕನಿಷ್ಠ ಒಂದು ಮರವನ್ನಾದರೂ ಪ್ರೀತಿಸಬೇಕು,
ಗರಿಷ್ಠ ಪ್ರಮಾಣದ O₂ ಗಳಿಸಬೇಕು.
~ಸುವರ್ಣಾ ಗೌಡ
-
"ಯುಗಾದಿ"
ಹೊಸದು ತಂದ ಸಂವತ್ಸರವು,
ಯುಗ ಯುಗಗಳ ನಂತರ;
ಮತ್ತೆ ಹೊಸ ದಿನವು,
ಹೊಸ ಮನ್ವಂತರದ ದಿಕ್ಕಿನೆಡೆಗೆ
ಯುಗ-ಯುಗಗಳಾಚೆಗೂ "ಯುಗಾದಿ"
ನವ-ನವೀನತೆಯೊಂದಿಗೆ ಹೊಸ ಹಾದಿಯು.
~ಸುವರ್ಣಾ ಗೌಡ
-
ಜಯ ಹೇ ನೂತನ;
ನೀನೆ ವಿಶ್ವಕ್ಕೂ ನಂದನ!
ಜಯದ ಭಾವನ;
ಎಲ್ಲ ಜಯಕೂ ನೀನೇ ಕಾರಣ!
~ಸುವರ್ಣಾ ಗೌಡ
-
ಸಿದ್ಧಿ ವಿನಾಯಕ..
ಹೇ ಗಣನಾಯಕ..
ಬುದ್ಧಿ, ರಿದ್ಧಿ, ಸಿದ್ಧಿಯ ಒಡೆಯನೆ,
ಮೂಷಿಕವಾಹನ ಲಂಬೋದರನೆ..
'ಓಂಕಾರ'ದಿ ನೀನು.. ಜಗದೋದ್ಧಾರನಾದೆ,
ಚಿಂತೆಗಳ ಪರಿಹರಿಸಿ.. ಚಿಂತಾಮಣಿಯಾದೆ,
ವಿಘ್ನಗಳ ನಿವಾರಿಸಿ.. ವಿಘ್ನೇಶ್ವರನಾದೆ,
ಅಂತ್ಯವಿಲ್ಲದ ನೀನು.. ಅಮೇಯನಾದೆ,
ಅನಂಗ ಪೂಜಿತ.... ಹೇರಂಬ
ಏಕದಂತ.... ಹೇ ಗಜಮಖ
ಸಿದ್ಧಿ ವಿನಾಯಕ..
ಹೇ ಗಣನಾಯಕ..
ಬುದ್ಧಿ, ರಿದ್ಧಿ, ಸಿದ್ಧಿಯ ಒಡೆಯನೆ,
ಮೂಷಿಕವಾಹನ ಲಂಬೋದರನೆ..
~ಸುವರ್ಣಾ ಗೌಡ
-
ಬಂಗಾರದ ಹೂವು ಚೆಲ್ಲಿ
ಅಂಗಳದಿ ಚಿತ್ತಾರ ಮಾಲಿನಿ!
ಕರದಲ್ಲಿರೊ ಹೂವುಗಳರಳಿ,
ಇಳೆ ಮುಟ್ಟದ ಕಲ್ಪತರು ವಾಹಿನಿ!
ತೆಂಗಿನ ಹೂ ಗೊಂಚಲು;
ದೈವತ್ವದ ಪ್ರತಿರೂಪ ಯೋಗಿನಿ!
ಗರಿಗಳೊನ್ಮಾದದಿ ಎತ್ತರದುತ್ತರಕೆ
ಹಸಿರ್ಗಳೈಸಿರಿ ನಿತ್ಯ ಶೋಭಿನಿ!
~ಸುವರ್ಣಾ ಗೌಡ
-
ಏಕಾಂಗಿ ತನದ
ಏಕಾಂತ ಭಾವವು
ಎಲ್ಲವನೆಲ್ಲಿ ಮರೆಸಿದೆ
ತಲ್ಲಣಿಸದಿರು ಹೃದಯ
ವೇಣಿಯ ರಾಗ
ಸಂಯೋಜನೆ ನಡೆದಿದೆ
ಸೊರಗಿದಂತ ಬೇರು
ನೀರು ಸಿಕ್ಕು ಮತ್ತೆ
ಚಿಗುರುತ ಹಬ್ಬಿದೆ
ಶಕ್ತಿ-ಕಾಂತಿ, ಗಂಪು
ಹೂ ದಳದಲಿ ಭೂಮ್ತಾಯಿ
ಹರಸಿರೆ; ಲತೆ ಕೈ ಮುಗಿದಿದೆ
~ಸುವರ್ಣಾ ಗೌಡ
-
ಸಮಯ ಎಲ್ಲಿಗೆ ಹೋಯ್ತು,
ಕಾಲ ಬದಲಾಗೋಯ್ತು
ಯಾಕ ಹಿಂಗಾಯ್ತು..,
ಸಮಯವೂ ಕೇಳುವುದು ಏನಾಯ್ತು.?
ಎಲ್ಲಾ ಅಲ್ಲಿಗಲ್ಲಿಗೆ.
ಕಾಲವೇ ಹಿಂಗೆ,
ಕ್ಷಣ ಹೊತ್ತು;
ಹತ್ಕೊಂಡು ಜಗತ್ತ ಸುತ್ತು,
ಏನು..?! ಆ ಸಮಯ ನಡುಗಿತ್ತು
ಬುಗುರಿಯಾ ಜಗತ್ತು,
ಸಮಯ ಚಲಿಸುತ್ತಲಿತ್ತು...
~ಸುವರ್ಣಾ ಗೌಡ
-
ಮೌನದಿನಿಯನ ಮಾತು ಚೆನ್ನ
ಮನಮೋಹಿಸುವನು ಅನುಕ್ಷಣವೂ ನನ್ನ
ಹಲವು ದಿನಗಳಾಗಿರಬೇಕು ನಾ ಅವನ ಜೊತೆ ಹರಟದೆ
ಕಿಡಿಯಿತ್ತು ಅವನ್ ಮೊಗದಿ
ಮೂರು ದಿನವೂ ನೋಡದೆ...
ಬಿಸುಟದಿರು ನನ್ನನು;
ಮನವು ನೋಡ ಬಯಸಿದೆ ನಿನ್ನನು...
ಮೌನ-ಮೌನದಲಿ ಕಾಲವೆಲ್ಲ
ಎಲ್ಲೇ ಮೀರಿ ಕಳೆದು ಹೋಗ ಹತ್ತಿದೆಯಲ್ಲ,
ಅದ್ಯಾಕೋ ಹಾಗೇ ಕುಳಿತಿಹೆ?...
ಮೌನದಲ್ಲಿ ಏನಿದೆ?...
ಉತ್ತರಿಸಲಾರೆಯೇನು ನೀನು...
ಹಾಗಿದ್ದರೆ ನಾನಿರುವೆ ಸುಮ್ಮನೆ.
~ಸುವರ್ಣಾ ಗೌಡ-
ಅಂತಿಥದ್ದೊಂದು 'ಕಾವ್ಯ'
ಕಾವ್ಯ ಲೋಕವೇ ಭವ್ಯ!
ದಿನಗಳೆಷ್ಟು ಉರುಳಿದವೊ..
ನೆನೆದಾಗ ಎಲ್ಲ ಮಾಯ!
ಅವಿಸ್ಮರಣೀಯ ಕ್ಷಣಗಳವು..
ಉರುಳಿ ಸಾಗಿ ಮುನ್ನುಗ್ಗುವ ದಿನಳಿವು,
ಯಾರಂದುಕೊಂಡರೊ ನಾ ಯಾಕೆ ಬರೆಯೋಲ್ಲ!
ಅಯ್ಯೋ, ಕ್ಷಮಿಸಿ! ಪುಟ ಮುಗಿದಿತ್ತು;
ಹೊಸ ಪುಸ್ತಕದಲ್ಲಿರಲಿ ಮುಂದಿನವೆಲ್ಲಾ..!
~ಸುವರ್ಣಾ ಗೌಡ
-