ಶೀರ್ಷಿಕೆ : ಆಶಯ
ಜಾರುತಿಹ ಮುಸ್ಸಂಜೆಗೆ ಆತುರ
ರಾತ್ರಿಯ ಮಡಿಲಲ್ಲಿ ಕಣ್ಮುಚ್ಚಲು
ಕಾಲ ಸರಿದು ರಾತ್ರಿ ಮುಗಿಯೆ
ಏರೋ ರವಿಗೆ ಜಗ ಬೆಳಗೊ ಕಾತುರ
ಸ್ತಬ್ಧತೆ ಸ್ಥಾಯಿ ಭಾವವಿಲ್ಲಿ ಮಾಯ
ಕರ್ತವ್ಯ ವಿಮುಖತೆಯ ಭಾವ ತರವಲ್ಲ
ಎಚ್ಚೆತ್ತು ಮುಂದೆ ಸಾಗೋ ಮಾನವ
ಮುಂಬೆಳಗೇ ಮುನ್ನುಡಿಯಾಗುವುದು ಬಾಳಿಗೆ.
-
ಕೆಂಪೇರಿ ನಗುವ ಮೇಘಮಾಲೆಯೇ
ಯಾರಿಗಾಗಿ ಈ ಹೊನ್ನಾದ ಹೊಳಪು
ಯಾರ ನಿರೀಕ್ಷಣೆಯಲಿ ಸಾಗಿದೆ ಕಾಲ
ಅರಿಯಲಾಗದ ನೋಟದೆ ವಿಸ್ಮಿತನು
ಬಾನಂಗಳದ ಚಂದಿರನ ನೋಡಲ್ಲಿ ಒಮ್ಮೆ.
-
ಪರಿಶುದ್ಧ ಮನದ ಚಿಂತನೆಗೆ ಸಿಕ್ಕ ಪ್ರಶಸ್ತಿ ಮತ್ತು ಆತ್ಮತೃಪ್ತಿಯಲ್ಲಿ ಅರಳಿದ ಪರಿಮಳ ಯುಕ್ತ ಪುಷ್ಪವೇ
ಸಂತೋಷ.-
ಶೀರ್ಷಿಕೆ: ಮರುಳತನ
ಕಂಡೆ ನವೀನತೆಯ ನವ್ಯರಾಗದ ಕನಸು
ಮದಿರೆ-ಮದನಾರಿಯೇ ಅದಕೆ ಸೊಗಸು
ಫೇಸ್ಬುಕ್ ಇನ್ಸ್ಟ್ರಾಗಳೇ ಕ್ಷಣ ಕ್ಷಣದ ಉಸಿರು
ಜ್ಞಾನ ಚಕ್ಷುವನ್ನು ಚುಚ್ಚಿತ್ತು ಈ ಹೊಲಸು.
ಕೈಲಿ ಹಿಡಿದೆ ಸಿಗರೇಟ್ ಶೋಕಿ ಬಾಳಿಗೆ
ಚಿತ್ತಾರದಂತೆ ಸುರಳಿ ಸುರಳಿಯಾಗಿ ಬಿಟ್ಟೆ ಹೊಗೆ
ಅದರೊಂದಿಗೇ ಬೂದಿಯಾಯ್ತು ಬಾಳ ನಗೆ
ಇಂಚಿಂಚಾಗಿ ಸುಡುತ್ತಿದೆ ದುರ್ವ್ಯಸನದ ಬೇಗೆ
ಹೊತ್ತಿಗೆಯು ಕರೆದಿತ್ತು ಜ್ಞಾನದ ಬೆಳಕಿನತ್ತ
ಹೊತ್ತಿಸಿ ಸುಜ್ಞಾನದ ಲಾಂದ್ರದ ಹೊಂಬೆಳಕನಿತ್ತು
ಮರುಳನಾಗಿ ಮರಳಲಿಲ್ಲ ಜ್ಯೋತಿ ಮಾರ್ಗದತ್ತ
ನನ್ನತ್ತ ಇರಲು ದೌರ್ಭಾಗ್ಯದ ಘೋರ ಚಿತ್ತ.
-
ನಾವು ತೆಗೆದು ಕೊಳ್ಳುವ ಯಾವುದೇ ತೀರ್ಮಾನವನ್ನು
ಪೂರ್ವಾಗ್ರಹ ಪೀಡಿತರಾಗಿಯಲ್ಲದೆ ಸರಿಯಾಗಿ ಯೋಚಿಸಿ ತೆಗೆದುಕೊಳ್ಳಬೇಕು.
ಒಮ್ಮೆ ತೀರ್ಮಾನಿಸಿ ಮುಂದಿಟ್ಟ ಹೆಜ್ಜೆಯ ಮೇಲೆಂದೂ
ಪಶ್ಚಾತ್ತಾಪದ ನೆರಳೂ ಸಹ ಬೀಳದಂತಿರಬೇಕು.-
ಕುಂಟೆಬಿಲ್ಲೆ( ಮಕ್ಕಳ ಪದ್ಯ)
*******************
ಆಟವ ಆಡೆ ನಮ್ಮಯ ದಂಡು
ಓಡಿದೆ ವೇಗದೆ ಮೈದಾನವ ಕಂಡು
ಎಲ್ಲರ ನೋಟವ ಸೆಳೆದಿದೆ ಈ ಹಿಂಡು
ಆಡಲು ಇಲ್ಲವೆ ಇಲ್ಲ ಯಾವುದೆ ಬಂಡು
ಇಂದಿನ ಆಟವು ಕುಂಟೆಯಬಿಲ್ಲೆ
ಅದಕೆ ಬೇಕೊಂದು ಚಪ್ಪಟೆ ಕಲ್ಲಿನ ಬಿಲ್ಲೆ
ಬಿಲ್ಲೆಯ ಎಸೆದು ಆಡಲು ನಾ ಬಲ್ಲೆ
ಅಮ್ಮ ಬೇಡೆಂದರು ನಾನಂತೂ ಒಲ್ಲೆ
ಚೌಕಾಕಾರದ ಮನೆಗಳ ಗೀಚೋಣ
ಬಿಲ್ಲೆಯ ಮನೆಯೊಂದಕೆ ಎಸೆಯೋಣ
ಬಿಲ್ಲೆಯ ಚಿಮ್ಮುತ ಕುಂಟುತ ಜಿಗಿಯೋಣ
ಕುಂಟೆಬಿಲ್ಲೆಯ ಆಡುತ ನಾವು ನಲಿಯೋಣ
ಆಡುತ ಕುಣಿಯುತ ನಾವ್ ದಣಿದಾಗ
ನಮಗಿರೆ ಮರದ ತಂಪಿನ ನೆರಳಾಗ
ಮಡಿಕೆಯ ನೀರನು ಕುಡಿದು ತಣಿದಾಗ
ಹುರುಪಿನ ಆಟದ ಮಜವನು ನೋಡಾಗ.
-
🌹ಮುಂಗಾರಿನ ಮಳೆ🌹
ಇಳಿದಳೋ ದಿವಿಯಿಂದ ಇಳೆಗೆ ಇಳಿದಳೋ
ಬೆಡಗು ಬಿನ್ನಾಣದೆ ಬಳಕುತಾ ತಾ ಇಳಿದಳೋ
ವನಪು ವಯ್ಯಾರದೆ ಒಲೆದಾಡುತಾ ನಿಲುಕಿದಳೋ
ಜಲಕನ್ಯೆಯಂತೆ ಭುವಿಗೆ ತಣಿವು ತಂದಳೋ..
ಝರಿಯಾಗಿ ಭುವಿಯ ಸಿರಿಯಾಗಿ ಹರಿದಳೋ
ಹರಿದರಿದು ಕಡಲ ಒಡಲಾಗಿ ಉಳಿದಳೋ
ಶಿವನ ಜಟೆಯಿಂದ ಗಂಗೆಯಾಗಿ ಇಳಿದಳೋ
ಇಳಿದು ನಲಿದು ಇಳೆಯ ಮುದ್ದಿಸಿ ನಿಂದಳೋ..
ಮೊದಲ ಮಳೆಯು ಇಳೆಗೆ ಸುಧೆಯ ಪಾನವು
ಬಿರಿದ ನೆಲಕೆ ಜಲವೇ ತಾಯ ಸ್ಪರ್ಶ ಚೇತನವು
ಜಳಕಗೈದ ಭುವಿಯ ಪುಳಕವೆಂತ ಚಂದ ನೋಡು
ನಭಚರಗಳು ಕಲರವಗೈದವು ಬಿಟ್ಟು ಗೂಡು.
ಜುಳು ಜುಳು ಜುಳು ಜುಳು ನೀರೋಟವು
ತೃಣ ತೃಣ ತೃಣ ಹಸುರಿಸಿದ ಆ ನೋಟವು
ತೃಷೆ ನೀಗಿದ ಮುಂಗಾರಿನ ಆ ಸಿಂಗಾರಕೆ
ಮನಮನವೂ ಸೋತಿದೆ ಮಳೆ ಹಾಡಿದ ಸುವ್ವಾಲಿಗೆ.-
❤️ಮೊದಲ ಸಂಭ್ರಮ❤️
ಮೊದಲ ನೋಟಕೆ ಮನ ನಾಚಿತು
ಮೊದಲ ಮಳೆಗೆ ಇಳೆ ತಣಿಯಿತು
ಇಳೆಯ ಒಡಲಲಿ ಹಸಿರು ಚಿಗುರಿತು
ನಲ್ಲೆಯ ಮನದೆ ಆಸೆ ಹೂ ಕೊನರಿತು.
-
💟ವರ್ಣಮಯ ಬಾಳಿನ ಕಣ್ಣು ಹೆಣ್ಣು💟
💛ಹಳದಿ ಬಣ್ಣದ ಹೊನ್ನ ಬಾಳಿಗೆ ಹೆಣ್ಣೇ ಅಲ್ಲವೇ ಹೇತುವು
💚ಅವಳನರಿತು ಗೌರವಿಸೆ ಆಗುವಳು ಬಾಳಿಗೆ ಹಸಿರು ತೋರಣ
🤍ಅವಳು ನಗುತಿರಲು ಎಲ್ಲೆಲ್ಲೂ ಚೆಲ್ಲಲು ಬೆಳ್ಳನೆ ಬೆಳದಿಂಗಳು
💙 ಹೊಂದಿ ಬಾಳಲು ಅವಳೇ ನೀಲಿ ಬಾಂದಳದ ಮಿನುಗು ಚುಕ್ಕಿ
🧡ಹಣೆಯ ಕೇಸರಿ ತಿಲಕ ಕೆಣಕುವ ದುರಾತ್ಮರಿಗೆ ದುರ್ಗೆಯ ಸಂಕೇತ
❤️ತಾಳ್ಮೆ ಕೆಡೆಸೆ ಕಂಗಳಲಿ ಪ್ರಜ್ವಲಿಸುವುದು ಕೆಂಪು ಜ್ವಾಲೆ
🖤 ಅವಳ ಭಾವನೆಗಳಿಗೆ ಸಿಗಲು ಮೌಲ್ಯ ಕಾಯ್ವಳು ದೃಷ್ಟಿ ತಾಕದ ಕಪ್ಪು ಚುಕ್ಕಿಯಾಗಿ
-