ತಂದಿದ್ದೇನು? ಬಿಟ್ಹೋಗೊದೇನು?
ಈ ನಶ್ವರ ಬದುಕಿನ ಸಂತೆಯಲ್ಲಿ,
ನಗುವೆಯೋ ಮೆರೆಯುವೆಯೋ ಕೊರಗುವೆಯೋ!
ಅಹಂ ಇರಲಿ ನಿನ್ನರಿಯಲು,
ಅದರೊಳಗೆ ಬದುಕು ಬಣ್ಣಿಸಲಾಗದು,
ವ್ಯೋಮದ ಕಣ್ಣಿಗೆ ನಾವೆಲ್ಲರೂ ಧೂಳೆ!-
ಬದುಕೊಂದು ಬಂಡಾಯ,
ಆಟದ ಗೊಂಬೆಯ ಅರ್ತನಾದ!
ವಿಭಿನ್ನ ನಲಿವು-ಸಂಕಟಗಳು,
ನೋಡುಗನ ಪೋಲಿ ತರ್ಕಗಳು!
ಬಣ್ಣಗಳನ್ನು ಬಣ್ಣಿಸುವ ಮೊದಲು,
ಹಚ್ಚಿಕೊಂಡು ಅನುಭವಿಸಿ ನೋಡ!
ಗೆಲ್ಲಲೇ ಹುಟ್ಟಿರುವೆವು ನಾವು,
ಸಮಾಧಿಯೊಳು ಖನಿಜ ನಿಶ್ಚಿತ!-
ಮೊದಲು ಗೆಲ್ಲಬೇಕಿರುವ ಕೌಶಲ್ಯವೇ ತಾಳ್ಮೆ,
ತಾಳ್ಮೆ ಗೆದ್ದವರು ಪರಮಾತ್ಮನ ಸಮಾನರಂತೆ,
ನೆನ್ನೆ ತಾಳ್ಮೆ ಗೆದ್ದೆಂತಹ ಒಂದು ವ್ಯಕ್ತಿತ್ವವನ್ನು ಕಂಡೆ.
ಬದುಕು ಸನ್ನಿವೇಶಗಳ ತಾಳಕ್ಕೆ ಕುಣಿವ ಗೊಂಬೆ,
ಕಷ್ಟದಲ್ಲೂ ಎದೆಗುಂದದ ಮನಸ್ಸು ನಮ್ಮದಾಗಲಿ,
ತಾಳ್ಮೆಯಿರಲಿ ಬದುಕಿನದ್ದಕ್ಕೂ, ಉಸಿರಿನದ್ದಕ್ಕೂ!-
ಮಾತಿನಿಂದ ಬಗೆಹರಿಯದಿದ್ದಾವುದಿಲ್ಲ,
ಪ್ರೀತಿಯಿಂದ ಜಗವನ್ನೇ ಗೆದ್ದ ಗೌತಮ ಬುದ್ಧ.-
ಎಲ್ಲಾ ಇನ್ಷೂರೆನ್ಸ್ ಕಂಪನಿಗಳು ಅಧಿಕೃತವಾಗಿ ಪೂಜಿಸುವ ದೇವರೇ
'ಯಮ ಧರ್ಮರಾಯ'-
ಗಡ್ಡ ಬಿಟ್ಟಿರೋರೆಲ್ಲಾ ದೇವ್ದಾಸ್ಗಳಲ್ಲ,
ಮೀಸೆ ಬಿಟ್ಟೋರ್ಗೆಲ್ಲಾ ಮೀಟ್ರಿರಲ್ಲ,
ಕ್ಲೀನ್ ಶೇವ್ ಮಾಡಿರೋರೆಲ್ಲಾ ಸಾಚಾಗಳಲ್ಲ.
ಹೀಗಿರುವಾಗ!
ತಲೆ ಕೂದ್ಲ್ ಉದ್ರಿರೋ ಹುಡ್ಗೂರ್ನ,
ಹುಡ್ಗೀರ್ ಯಾಕ್ ಇಷ್ಟಪಡಲ್ಲ?-
ಆ ಭಗವಂತನೆ ಬಂದ್ಬುಟ್ಟ ನನ್ ನೋಡೋಕೆ,
ನನ್ ಜೊತೆ ಕೂತ್ಕೊಂಡು ಕಾಪಿ ಕುಡ್ಯೋಕೆ.
ನನ್ ಹಣೆಬರಹ ಸ್ವಲ್ಪ ಉಲ್ಟಾ ಇದ್ಯಂತೆ,
ಅವ್ನು ಬರ್ದಂಗೆ ಯಾಕೋ ಜೀವ್ನ ನಡಿತಿಲ್ವಂತೆ.
ಬೆಚ್ಚಗಿನ ಕಾಪಿನ ಬಾಯಿಗ್ ಹಾಕ್ಕಂಡ್ ಕುಂತಿದ್ದೆ,
ಆವ್ನ ಮಾತನ್ನ ಕೇಳ್ಬುಟ್ಟು ಪಕ್ಕಂತ ನಕ್ಬುಟ್ಟೆ.
"ನಿನ್ನ ಹಣೇಲಿ ನಾನ್ ಬರ್ದಿದ್ ಇಂಜಿನಿಯರ್ರು,
ನೀನ್ ಬರ್ಕಂಡು ಓಡಾಡ್ತಿಯ ಕನ್ನಡ ಪದ್ಗಳು."
ಸಿಟ್ಬು ಬಂದು ಕಿತ್ಕಂಡೆ ಕುಡಿತಿದ್ ಕಾಪಿ,
ಏನೂ ಕೊಡ್ದಂಗೆ ಕಳುಸ್ದೆ ಭಗವಂತನ್ನೆ ಮೇಲೆ.
ಯಾರಾದ್ರೂ ಬಂದ್ಬುಟ್ರೆ ನನ್ ಪದ್ಗಳ ತಂಟೆಗಾ,
ಭಗವಂತನ್ನೇ ಬಿಟ್ಟಿಲ್ಲ ಇನ್ನ ನಿಮ್ಮನ್ ಬಿಡ್ತೀನಾ?-