#ನಾಗಾಸಾಧು #
ತಿಳಿದರೂ ಅರಿವಿಗೆ ತಿಳಿಯದ
ತಿಳಿ ಹಾಳೆಯ ಮನಸ್ಸಿನ
ವಿಭಿನ್ನ ರೂಪಧಾರಿ/
ಸ್ವಾಥ೯ದ ಭಾವಗಳಿಲ್ಲದ
ಆಸೆಯ ರೆಕ್ಕೆಗಳಿಲ್ಲದ
ನಿರ್ಮಲ ಭಸ್ಮಧಾರಿ/
ಶಿವ ನಾಮದ ಸ್ಮರಣೆ
ವಿರಾಗಿಯ ಪ್ರತಿರೂಪದ
ವಿಭಿನ್ನ ರುದ್ರಾಕ್ಷಧಾರಿ/
ಅಗೋಚರ ನಡೆಯ
ವಿಸ್ಮಯ ಆಲೋಚನೆಯ
ಹರನ ನಾಮಧಾರಿ/
ಕಠಿಣ ತಪಸ್ಸಿನ
ಕ್ಲಿಷ್ಟ ಬದುಕಿನ
ಸರಳ ತತ್ವಜ್ಞಾನಿ/
-ಸಿಂಚನಾ ಭಟ್-
-
ಕಾಯುವ ಕಣ್ಣಲಿ ಮಿಂಚುತ್ತಿರುವ ಅಯೋಧ್ಯೆ
ಸಿಂಗರಿಸಿದ ರಥದಲ್ಲಿ ಬಂದನು ರಾಮಲಲ್ಲಾ..
ಐನೂರು ವರ್ಷದ ವನವಾಸಿ ಮುಗಿಸಿ
ಮರಳಿ ಬಂದನು ಸೊಬಗಿನ ಸಿರಿಗೆ
ಮಂದಹಾಸದಿ ಸಿಹಿ ಹೊತ್ತು ತಂದಿರಿಸಿ
ಪಟ್ಟಾಭಿಷೇಕದ ವಿಜೃಂಭಣೆಗೆ ಸಾಕ್ಷಿಯಾದ||
ನಿರ್ಮಲ ಮನಸ್ಸು ಗಂಗೆಗಿಂತ ಪವಿತ್ರ
ಸೌಮ್ಯದ ಭಾವ ಭೂಮಿಗಿಂತ ತೂಕ
ಕೊಟ್ಟ ಮಾತು ಬಿಟ್ಟ ಬಾಣದಷ್ಟು ಹರಿತ
ಸಾಟಿಯಿಲ್ಲದ ವ್ಯಕ್ತಿ ತ್ವಕ್ಕೆ ಆದರ್ಶನಾದ ||
ತೊಟ್ಟೆ ಬಿಟ್ಟ ಅರಣ್ಯವಾಸದ ನಿಧಾ೯ರ
ಬಿಟ್ಟು ಕೊಡಲಿಲ್ಲ ಪಿತೃವಾಕ್ಯ ಧ್ಯೇಯ
ಲೋಕವೇ ಕೊಂಡಾಡಿದ ಏಕ ಪತ್ನಿ ವ್ರತಸ್ಥ
ಜಗ ಮೆಚ್ಚುವ ಪರಮ ಪುರುಷ
"ನಮ್ಮ ಶ್ರೀ ರಾಮಚಂದ್ರ"||
•ಸಿಂಚನ ಭಟ್•
-
ಮಳೆ ಬರುವ ಹೊತ್ತಲ್ಲಿ
ಹೊರ ಬಂದು ನಿಲ್ಲೋಣ
ಮಣ್ಣಿನ ಸುವಾಸನೆ ಸವಿಯೋಣ
ನಾವೂನು, ಮೇಧಿನಿಯೊಡನೆ ಜಳಕ ಮಾಡೋಣ//
ಮೋಡಗಳು ಕರೆವಾಗ
ಗಾಳಿಗಳು ತಂಪೆರೆವಾಗ
ಮಿಂಚುಗಳು ಸೆಳೆವಾಗ
ನಾವೆದ್ದು, ಮಳೆಯೊಡನೆ ನಲಿಯೋಣ//
ಗುಡುಗುಗಳು ಸ್ವರ ಮಾಡಿ
ಮರಗಿಡ ಮಳೆಹನಿ ಧ್ವನಿ ನೀಡಿ
ಬಾ ಗೆಳೆಯ ಆಡೋಣ ಎನುತಿರಲು
ನಾವ್ಯಾಕ, ಒಳಗೆ ಕೂತೇವಾ?
- ಸಿಂಚನ ಭಟ್.
-
ಬದುಕಿನ ಪಲ್ಲಕ್ಕಿಯಲ್ಲಿ
ನೆನಪುಗಳ ಮೆರವಣಿಗೆ
ಮಾತುಗಳ ಬಡಿತದಲ್ಲಿ
ಮೌನರಾಗದ ಕಂಪನ
ಮಾಸದ ದಾರಿಯಲ್ಲಿ
ಕನಸುಗಳ ಪಾತರಗಿತ್ತಿ
ನಿಲ್ಲದ ಕಾಲಗಭ೯ದಲ್ಲಿ
ನಂಬಿಕೆಗಳ ಚಿಗುರೆಲೆ..
• ಸಿಂಚನ ಭಟ್•
-
ಕಾಲಚಕ್ರ ತಿರುಗುತ್ತಿದೆ
ಸಮಯ ಉರುಳುತ್ತಿದೆ
ಬಾಳ ನೌಕೆ ಸಾಗುತ್ತಿದೆ
ಪರಿವರ್ತನೆಯ ಹಾದಿಯಲ್ಲಿ
ಜಗದ ನಿಯಮದಲ್ಲಿ
ದೇವರ ಸೃಷ್ಟಿಯಲ್ಲಿ
ಲೋಕದ ದೃಷ್ಟಿಯಲ್ಲಿ
ಸಾಗಿಹುದು ಪಯಣ
ಜೀವನದ ಗಾಯನ
ಏರಿಳಿತದ ಆಲಾಪನ
ಭಾವದ ನರ್ತನ
ಬದುಕಿನ ಈ ಕವನ.
-ಸಿಂಚನ ಭಟ್.
-
ಮಸ್ತಕದ ಹಾಳೆಗೆ
ನಂಬಿಕೆಯ ಸಾಲು
ಹೃದಯ ಮಂದಿರಕ್ಕೆ
ಆತ್ಮವಿಶ್ವಾಸದ ಶಕ್ತಿ
ಮನದ ಮೌನಕ್ಕೆ
ಧೈರ್ಯದ ವ್ಯಾಖ್ಯಾನ
ಕೆಲಸ ಹುಡುಕಾಟಕ್ಕೆ
ಸಾವಿರ ಸವಾಲು
ಹೊಸ ದಾರಿಗೆ
ಅನಂತ ಅನುಭವ..
: ಸಿಂಚನ ಭಟ್ :
-
ಜೀವನ ಎಂಬ ಸುಂದರ ಕವನ
ಏರಿಳಿತದ ಸ್ವರನಾದ ವಿಭಿನ್ನ
ನೋವು ನಲಿವುಗಳ ಸಮ್ಮಿಲನ
ರಾಶಿ ತಿರುವುಗಳ ಪಯಣ
ಬಂಧ-ಸಂಬಂಧಗಳ ನರ್ತನ
ಭಕ್ತಿ-ಭಾವಗಳ ಆರಾಧನ
ಶಿಸ್ತು-ಅಶಿಸ್ತುಗಳ ಗುಣ ಗಾಯನ
ಜಗತ್ತು-ಜೀವಗಳ ನಡುವಿನ ಕಂಕಣ
ಲೆಕ್ಕವಿಲ್ಲದ ಆಯಸ್ಸಿನ ಬಂಧನ
ದುಡ್ಡೇ ಮನುಕುಲದ ಗಮನ
ಯಮನ ಕೈಯಲ್ಲಿ ನಮ್ಮ ಶಾಸನ
ಸಾರ್ಥಕವಾದರೆ ಈ ಬದುಕು ಪಾವನ..
*ಸಿಂಚನ ಭಟ್ *
-
ಸರಳತೆಯ ಪುಟ್ಟ ಗುಡಿಯಲ್ಲಿ
ಕನಸುಗಾರನೆ ಕಾವಲಿಗೆ
ಶ್ರಮದ ಹನಿ ಬೆವರಿನಲ್ಲಿ
ಸಾರ್ಥಕತೆಯೆ ಜೀವನ
ದುಡಿಮೆಯ ಸಂಸ್ಥಾನಕ್ಕೆ
ಸ್ವಾಭಿಮಾನವೆ ಆಭರಣ
ಧೈರ್ಯದ ನಿಲುವಿಗೆ
ಸಮಸ್ಯೆಗಳೆ ಪಾಠ
ತೃಪ್ತಿಯ ನಗುವಿಗೆ
ಮನಸ್ಸುಗಳೆ ಕಾರಣ
ನೆಮ್ಮದಿಯ ಬದುಕಲ್ಲಿ
ನೆನಪುಗಳೆ ಅಮರ..
•ಸಿಂಚನ ಭಟ್•
-
ಸಾವಿನ ಬದುಕಿಗೊಂದು ಉಸಿರು ಕೊಟ್ಟವನು ದೇವರು
ಒಂಟಿಯ ಬಾಳಿಗೆ ಸಂಬಂಧ ಕಟ್ಟುವನು ಮನುಜನು
ಮೌನದ ಕಡಲಿಗೆ ಶಕ್ತಿಯ ಬೆಲೆ ಇಟ್ಟವನು ದೇವರು
ಅಥ೯ವಿಲ್ಲದ ಮಾತಿಗೆ ತಲೆ ಕೊಟ್ಟವನು ಮನುಜನು
ಏರಿಳಿತಗಳ ಅಲೆಯಲ್ಲಿ ಪಾಠ ಕಲಿಸುವನು ದೇವರು
ಮುಖವಾಡಗಳ ನಾಟಕ ತೊಡುವವನು ಮನುಜನು
ಪರೀಕ್ಷೆಯ ನೀಡಿ ಶಿಲೆಯಾಗಿಸುವವನು ದೇವರು
ಅಪಹಾಸ್ಯದಿ ತಮಾಷೆ ನೋಡುವವನು ಮನುಜನು
ಪಕ್ಕದಲ್ಲಿ ಸಾವನಿಟ್ಟು ನಗುತ್ತಿರುತ್ತಾನೆ ದೇವರು
ಇಲ್ಲದ ನಾಳೆಗಾಗಿ ಹೋರಾಡುತ್ತಾನೆ ಮನುಜನು.
-ಸಿಂಚನ ಭಟ್.
-
ಯಾವುದು ಈ ಬಡತನ!?
ಚಿಕ್ಕದಾದ ಗುಡಿಯಲ್ಲಿ
ಸ್ವಾವಲಂಬಿ ಉಸಿರಿನಲ್ಲಿ
ಯಾರ ಹಂಗಿಲ್ಲದೆ ಜೀವಿಸುವ
ಬದುಕು ಬಡತನವಾ?
ಶ್ರಮವಹಿಸಿದ ಬೆವರಿನಲ್ಲಿ
ನಾಲ್ಕಾರು ಕಾಸು ಕೂಡಿಡುವಲ್ಲಿ
ಏಳಿಗೆಯಾ ಕಂಡು ಸಹಿಸದ
ಅಸೂಯೆ ಬಡತನವಾ?
ಮಾತಿನಲ್ಲಿ ಮಣೆ ಹಾಕಿ
ನಂಬಿಕೆಯ ಜಾಲಕ್ಕೆ ನೂಕಿ
ಮೋಸದಿ ಮೆರೆವ ನಾಟಕೀಯ
ನರ್ತನ ಬಡತನವಾ?
ಸಾವಿರ ಕೋಟಿಗೆ ಒಡೆಯ
ಶ್ರೀಮಂತ ವ್ಯಕ್ತಿಗೆ ಗೆಳೆಯ
ಉಪಕಾರವಿಲ್ಲದ ಜಿಪುಣ
ತನ ಬಡತನವಾ?
ಸಾಯುವುದು ಖಚಿತ
ಸ್ವಾಥ೯ ಬುದ್ಧಿ ಉಚಿತ
ಬರಿಗೈಲ್ಲಿ ಚಟ್ಟದ ಪಯಣವಾದರೂ
ಕೂಡಿಡುವ ಸಂಪತ್ತು ಬಡತನವಾ?
- ಸಿಂಚನ ಭಟ್.
-