ಅವನೊಂದು ನನಸಾಗದ ಸುಂದರ ಕನಸು!
ನಾನು ಎಂದೆಂದಿಗೂ ಮುಗಿಯದ ಮುನಿಸು!-
ನನ್ನೆಲ್ಲಾ ಮಾತುಗಳು...
ಸ್ವ ಶಿಕ್ಷಣದ ಪಾಠಗಳು !
ಪೆಟ್ಟು ಬಿದ್ದ ತಕ್ಷಣ ಒಡೆದು ಹೋಗುವ ಗಾಜು
ನೀನಾಗಬೇಡ ಅರಸಿ!
ಪ್ರತಿ ಪೆಟ್ಟಿಗೂ ಸುಂದರ ಆಕಾರ ಪಡೆವ
ಜೇಡಿ ಮಣ್ಣಿನಂತಾಗು ತವಸಿ!-
ನಿನ್ನ ಗೌರವ ನಿನ್ನ ಹಣ, ಅಧಿಕಾರ,ಸಿರಿ, ಸುಪ್ಪತ್ತಿಗೆಯಲ್ಲಿಲ್ಲ ಅರಸಿ
ಅದು ನಿನ್ನ ನಾಲಗೆಯಲ್ಲಿದೆ
ನಿನ್ನ ನಡತೆಯಲ್ಲಿದೆ ತವಸಿ!-
ಬಡತನ ಬಂದಾಗ ಬಂಧುಗಳ ಬೆಲೆ
ಸಿರಿತನ ಬಂದಾಗ ನಿನ್ನತನದ ಬೆಲೆ
ಲೋಕಕ್ಕೆ ತಿಳಿಯುವುದು ಅರಸಿ!-
ಸಿಲುಕಬಾರದು ಎಂದುಕೊಂಡರೆ
ಸೆಳೆತಕ್ಕೆ ಸಿಲುಕಬೇಡ ಅರಸಿ!
ಸಿಲುಕಲೇಬೇಕೆಂದುಕೊಂಡರೆ
ಸತ್ಯವಂತರ ಸಂಗದಲ್ಲಿ ಸಿಲುಕಿಕೋ ತವಸಿ!
-
ದೂರ ಮಾಡಿಕೊಳ್ಳುವುದಾದರೆ
ದುರಿತಗಳ ದೂರ ಮಾಡಿಕೋ ಅರಸಿ!
ಹತ್ತಿರ ಆಗುವುದಾದರೆ
ಪುಣ್ಯಕ್ಕೆ ಹತ್ತಿರವಾಗು ತವಸಿ!
-
ಮುನ್ನಡೆವುದೇ ಆದರೆ
ಒಳಿತಿನೆಡೆಗೆ ಮುನ್ನಡೆ....
ಹಿಂದಿರುಗುವುದಾದರೆ
ಕೆಡುಕುನಿಂದ ಹಿನ್ನಡೆ ಅರಸಿ!-