ಅದೆಷ್ಟೇ ನೋವುಗಳು ಬರಲಿ
ಕಣ್ಣೀರಿನೊಂದಿಗೆ ಸಾಗಿದೆ ಬದುಕು,
ದುಃಖದ ಬೆನ್ನಿಗೆ ಸುಖವೂ ಇದೆ
ಎಂಬುದ ನಾವು ಅನ್ವೇಷಿಸಬೇಕಷ್ಟೆ.-
ಎದೆಯ ಮೇಲೋರಗಿ
ನನ್ನೆದೆಯ ಭಾರ
ಹಗುರಾಗಿಸುವೆ ಗೆಳೆಯ,
ಆಲಿಸುವ ನಿನ್ನ ಹೃದಯ
ಗಟ್ಟಿಯೆಂದು ಖಾತರಿಯಿದೆ.-
ಕುಳಿರ್ಗಾಳಿಯ ಚಳಿಯಲ್ಲಿ
ನಿನ್ನಪ್ಪುಗೆ ಬಿಸಿಯೇ ಸಹಾಯ,
ಮಂಜಿನ ವಾತಾವರಣದಲ್ಲಿ
ಮನದ ಆಸೆಗಳಿಗೇಕೋ ಗಾಯ.-
ಯಾರೋ, ಇನ್ನೊಬ್ಬರ ಹಾದಿಗೆ ಬೆಳಕಂತೆ,
ನಡೆದವನಿಂದು ಮಹಾ ತತ್ವಜ್ಞಾನಿಯಂತೆ,
ಅವರೋ ನಿಂತಲ್ಲೇ ಕರಗಿ ಹೋದರು
ದಾರಿ ತೋರಿ, ಧರೆಗೆ ಉರುಳಿದರು.-
ನಿನ್ನ ಬದುಕು ಕೇವಲ ನಿನ್ನ ಸ್ವತ್ತು ಅಲ್ಲ
ಅನ್ಯರ ಬದುಕೂ ನಿನ್ನ ಸ್ವತ್ತು ಅಲ್ಲ
ನಿನ್ನ ಬದುಕಿನಲ್ಲೂ ಅವರು ಸ್ವತ್ತಾಗಿಹರು
ಅವರ ಬಾಳಿನಲ್ಲೂ ನೀ ಸ್ವತ್ತಾಗಿರು
ಇದನ್ನು ಬಿಟ್ಟು ಮತ್ತೇನು ಸ್ವತ್ತಿಹುದು.-
ಎಲ್ಲ ಬಿಟ್ಟು ಹೋಗುವೆನೆಂದು
ನಿತ್ಯ ದುಃಖ ಪಡಬೇಡ ಮನವೇ,
ಬದುಕಿನ ನೆನಪುಗಳೊಂದಿಗೆ
ಸಾಗುತಿಹೆನೆಂದು ಚಿಂತಿಸು ಜೀವವೇ.-
ನಿಲ್ಲಲೊಲ್ಲದ ಮಂದಹಾಸವು
ಝರಿಯಂತೆ ಮೊಗದಿ ಚಿಮ್ಮುತ್ತಿದೆ,
ಅದರ ತಂಪು ಹನಿಗಳು
ತುಟಿಗೆ ಸ್ಪರ್ಶಿಸಿ ಚಳಿಯ ಕಚಗುಳಿ,
ನೀನಿರದ ದಿನಗಳಲ್ಲಿನ ವಿರಹ ವೇದನೆಗೆ
ನಾ ಕಂಡ ಮದ್ದು ಇದು,
ನೋವನ್ನು ಸರಿಸಿ ಮೊಗದಿ
ಮಂದಹಾಸವ ಸ್ವಾಗತಿಸುವೆ,
ವಿರಹದ ನೋವ ಮೆಲ್ಲಗೆ ಸರಿಸಿ.-
ಶುದ್ಧ ವಿಚಾರದ ಹೂವೊಂದು ಅರಳಿದೆ
ಹೊತ್ತಿಗೆಯಲ್ಲಡಗಿದ ಮಕರಂದದ ಸಿಹಿ
ಸವಿಜೇನೇ ನಾಲಿಗೆಯಿಂದ ವಾಣಿಯಾಗಿ
ಪಸರಿಸಿದೆ ಶುದ್ಧ ಚಿಂತನೆಯ ಅನಂತದೆಡೆ.-
ಪದಗಳು ಹೊರಗೆ ಬಾರದಿರಲು
ನಗುವು ಮೊಗವನ್ನು ಸಿಂಗರಿಸಲು
ಅರಿಯುವ ಹೃದಯ ಎದುರಿರಲು
ಮೌನ ಸಂಭಾಷಣೆ ಉತ್ತುಂಗದಲ್ಲಿದೆ.-
ಹೂವಿನಂಥ
ಮನಸ್ಸುಳ್ಳವಳಿಗೆ
ಹೂವು ಮುಡಿಸಲು,
ಕಣ್ಮುಚ್ಚಿ ಕುಳಿತ
ಅವಳೊಂದು ಲೋಕಕ್ಕೆ
ಜಾರಿಹೋಗಲು,
ನನ್ನ ನಿರೀಕ್ಷೆಗಳು
ಪರೀಕ್ಷೆಯಾಗಿ
ನಾ ನಿರುತ್ತರನಾದೆ.-