ಬಿಟ್ಟಿ
"ಅವ್ರು ಹಂಗ್ ಮಾಡಿದ್ರೆ ಚೆನ್ನಾಗಿರ್ತಿತ್ತು;
ಇವ್ರು ಹಿಂಗ್ ಮಾಡಿದ್ರೆ ಚೆನ್ನಾಗಿರ್ತಿತ್ತು"
ಅಂತೆಲ್ಲಾ ಆಡ್ಕೊಳೊ ಬದ್ಲು,
ನೀವು ಹೆಂಗ್ ಮಾಡಿದ್ರೆ ಚೆನ್ನಾಗಿರ್ತಿತ್ತು ಅಂತ
ಅವಲೋಕನ ಮಾಡಿ ಅಳವಡಿಸ್ಕೊಂಡ್ರೆ,
ಮುಂದೆ ಬದ್ಕು ಚೂರಾದ್ರೂ ಚೆನ್ನಾಗಿ ಆಗುತ್ತೆ ಅಲ್ವ?
ನಿಮ್ಮ ಬೆನ್ನು ನಿಮಗೆ ಕಾಣಿಸ್ತಿಲ್ಲಾ ಅಂದ ಮಾತ್ರಕ್ಕೆ
ಬೇರೆಯವ್ರಿಗೂ ಕಾಣಿಸ್ತಿಲ್ಲಾ ಅಂತ ಅನ್ಕೊಂಡ್ರೆ ಹೇಗೆ?
ಇವಾಗ, ನೀವು ಯಾರಿಗಾದ್ರೂ ಏನಾದ್ರೂ ಕೊಡ್ತೀದಿರಿ ಅಂತ ಅನ್ಕೊಳಿ.
ಅವ್ರಿಗೆ ಅದು ಇಷ್ಟಾ ಆಗ್ಲಿಲ್ಲ ಅಂತ ಅಂದ್ರೆ, ಅದನ್ನ ಅವ್ರು ವಾಪಸ್ ಕೊಡಕ್ ನೋಡ್ತಾರೆ,
ಇಲ್ಲಾ ಇಸ್ಕೊಂಡು ಬಿಸಾಕ್ತಾರೆ. ಅಲ್ವ?
ಬಿಟ್ಟಿ ಸಲಹೆ ಕೊಡುವಾಗಲೂ ಸಹ, ಎದುರಿಗಿರೋರು
ಇಸ್ಕೊಳೋ ಮನಸ್ಥಿತಿಲಿ ಇದಾರೊ ಇಲ್ವೊ ಅಂತ ಯೋಚನೆ ಮಾಡಿ.
ಇಲ್ದೆ ಇದ್ರೆ, ಅವರು ಕೊಟ್ಟಿದ್ದನ್ನ ವಾಪಸ್ ಕೊಟ್ಟಾಗ ಇಸ್ಕೊಳೊಕೂ ತಯಾರಿರಿ!
ಬಿಟ್ಟಿಯಾಗಿ ಏನಾದ್ರೂ ಕೊಟ್ಟಾಗ,
ಕೊಟ್ಟೊರಿಗೂ, ಕೊಟ್ಟಿರೊದಕ್ಕೂ, ಎರಡಕ್ಕೂ ಬೆಲೆ ಕಡಿಮೆನೇ!-
ನೊಂದೋರ ಕಣ್ಣಲ್ಲಿ ಕಣ್ಣೀರು ಹೊರಬರೋ ಬದಲು,
ಆ ಕಣ್ಣೀರಷ್ಟೇ ಭಾರ ಇರೋ ಕಲ್ಲುಗಳು ಹೊರಬರೋ ಹಾಗಿದ್ರೆ ಎಷ್ಟೋ ಚೆನ್ನಾಗಿರ್ತಿತ್ತು.
ಆಗಲಾದ್ರೂ ಆ ಕಣ್ಣೀರು ಎಷ್ಟು ಭಾರದ್ದು ಮತ್ತೆ ಎಷ್ಟು ತೂಕದ್ದು ಅಂತ ಗೊತ್ತಾಗಿರೋದು.-
ಮತ್ತದೇ ತೀರ, ಅವೇ ಕಿರು ಅಲೆಗಳು,
ಬದುಕಿನ ಬವಣೆಯ ಮರೆಸುತ,
ಪ್ರಕೃತಿಯಲ್ಲಿ ಒಂದಾಗುವ
ಭವ-ಭಾವಗಳನ್ನು
ಎಂದಿನಂತೆ ಆಕೆ ಅನುಭವಿಸುತ್ತಲಿದ್ದಳು . . .
ಇಳಿ ಸಂಜೆ, ಸಿಹಿ ಗಾಳಿ,
ಜೊತೆಗೊಂದು ಜೀವ,
ಗೂಡು ಸೇರಿರುವ ಗೀಜುಗಗಳು,
ರೆಂಬೆಯ ಮೇಲೆ ನೇತಾಡುತಿರುವ ಬಾವಲಿಗಳು,
ಇಷ್ಟವಾಗಿತ್ತವಳಿಗೆ ಈ ವಾರಾಂತ್ಯ!
ಸೂರ್ಯ ಮರೆಯಾಗುತಿದ್ದ; ಚಂದ್ರ
ಇಣುಕುತಲಿದ್ದ ಆ ಕಿನಾರೆಯಲಿ,
ಏಕಾಂಗಿ ಮನ ತಿಳಿಯಾಗಿ ತೇಲುತಲಿತ್ತು . . .-
ಅಮ್ಮ (Grandmother)
ಅಮ್ಮ: ನಿಂದ ಕಲ್ಯೂದ ಮುಗಿದ್ರೋಳಗ ನಾನೂ
ಒಮ್ಯಾರ ಮೈಸೂರಿಗೆ ಬರ್ಬೇಕ ಅಂತ ಅನ್ಸಾಕಂತ್ಯೈತಿ.
ನಾ ಬದ್ಕಿರುವಾಗ ಮೈಸೂರ ಅರಮನಿ ನೋಡಿದ್ರ
ಛೊಲೋ ಅಕ್ಕಿತ್ತು.
ಆದ್ರ ಈ ಜಡ್ಡ ಬಿಡವಲ್ದ ನನ್ನ.
ಅರಾಮ ಅಕ್ಕನ್ಯೊ ಇಲ್ಲೋ...
ಮೈಸೂರ ನೋಡ್ತನ್ಯೋ ಇಲ್ಲೋ...
ಮೊಮ್ಮಗಳು: ಅದ್ಕೇನಂತ ಬೇ ಯಮ್ಮ,
ಅಲ್ಲಿ ಹೋಗೀನ ನೋಡಬೇಕಂತ ಏನೈತಿ?
ಹೆಂಗಿದ್ರೂ ನಿಂಗ ಅರಾಮಿಲ್ಲ.
ಅಲ್ಲಿ ಗದ್ದಲದಾಗ ನಿಂಗ ಅಡ್ಯಾಡಾಕ ಆಗಂಗಿಲ್ಲ.
ತೋಗೋ. ಈಗೆಲ್ಲ ಫೋನ್ಯಾಗ ಎಲ್ಲಾ ಬರ್ತೈತಿ.
ಇಲ್ಲೇ ಅರಮನಿ ನೋಡ ಹಿಡಿ.
ಅಮ್ಮ: ಎಷ್ಟ ಛೊಲೋ ಐತ್ಯಲ್ಲ.
ಹಿಂಗೆಲ್ಲ ಐತ್ಯನ ಅಲ್ಲೆ. ಮಹಾರಾಜರ
ಎಷ್ಟ ಛೊಲೋ ಕಟ್ಸ್ಯಾರ ನೋಡ.
ಇಲ್ಯಾರ ನೋಡಿದ್ನ್ಯಲ್ಲ. ಸಾಕ ಬಿಡವಾ . . .
ನೀಗಲಾರದ ವಯಸ್ನ್ಯಾಗ ನಿಂಗ
ಅಷ್ಟಾರ ಮಾಡಿದ್ನ್ಯಲ್ಲಂತ ಸಮಾಧಾನೈತಿ.
ಈಗ ನೀ ಇದ್ದಿದ್ರ, ಭಾಳ ಹಿಗ್ಗತಿದ್ದಿ ಬೇ...
೨೮-ನವೆಂಬರ್-೨೦೧೭
ಹೇಳಲಂಗ ಹೋದಿ, ಮರ್ಯಾಕಾಗಲ್ಲ ಬೇ ನಿನ್ನ.
ನೀ ನನ್ನ ಕನಸ-ಮನಸ್ನ್ಯಾಗ ಯಾವಾಗ್ಲೂ ಇರ್ತಿದಿ . . .-
ಮೌನ
ಮೌನ ಒಂದು ಸೇತುವೆಯಿದ್ದಂತೆ.
ಕದಡಿದ ಮನ ತಿಳಿಯಾಗಲು,
ತುಂಬಿದ ಕಂಬನಿ ಕೆಳಗಿಳಿಯಲು,
ಮನಸ್ತಾಪಗಳು ಮರೆಯಾಗಲು,
ನಮ್ಮ ಉಪಸ್ಥಿತಿಯ ಅರಿವಾಗಲು,
ಪರರ ಪರಿಸ್ಥಿತಿಯ ಅರ್ಥೈಸಿಕೊಳ್ಳಲು,
ಪ್ರಶ್ನೆಗಳಿಗೆ ಸಮಾಧಾನ ಕಂಡುಕೊಳ್ಳಲು,
ಹೀಗೆ, ಎಷ್ಟೋ ಸಂಗತಿಗಳ ಬೆಸುಗೆಗೆ
ಮೌನ ಒಂದು ಸೇತುವೆಯಿದ್ದಂತೆ!
ಮೌನಕ್ಕೆ ಒಂದು ಅದ್ಭುತ ಶಕ್ತಿಯಿದೆ!
ಮೌನ ತಾಳ್ಮೆಗೆ ಎಡೆಮಾಡಿಕೊಡುತ್ತೆ.
ಮೌನ ಮಾತಿನ ತೂಕ ಹೆಚ್ಚಿಸುತ್ತೆ.
ಮೌನ ನಮ್ಮ ಆತ್ಮಬಲವನ್ನ ಹೆಚ್ಚಿಸುತ್ತೆ.
ಮೌನ ಮಮಕಾರ-ಮಾಧುರ್ಯಗಳನ್ನು ಹುಟ್ಟಿಸುತ್ತೆ.
ಮೌನ ನಮಗೆ ನಮ್ಮ ಒಳಮನಸ್ಸಿನ ಜೊತೆ
ಮಾತನಾಡಲು ಅನುವು ಮಾಡಿಕೊಡುತ್ತೆ.
ಮೌನ ನಮ್ಮ ನಿಜ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತೆ.
ಮೌನ ನಮ್ಮ ಮೇಲಿನ ನಮ್ಮ ಪ್ರೀತಿಯನ್ನ ಇಮ್ಮಡಿಗೊಳಿಸುತ್ತೆ.
ಹೀಗೆ, ಮೌನದಿಂದಾಗುವ ಪ್ರಯೋಜನಗಳ
ಪಟ್ಟಿ ಅನಂತ . . .
ಮೌನದ ತಿರುಳ ಸವಿದವನೇ ಬಲ್ಲ!
ಇಷ್ಟಲ್ಲದೇ ಬಲ್ಲವರು ಹೇಳ್ತಾರೆಯೇ?
"ಮಾತು ಬೆಳ್ಳಿ, ಮೌನ ಬಂಗಾರ" ಎಂದು . . .-
ಮಾಡದ ತಪ್ಪಿಗೆ,
ಒಪ್ಪದ ಕಪ್ಪಕೆ,
ಬಡೆದಿವೆ ಬಿರಿಸು ಬಾಯಿಗಳು
ನಡೆಯಲಿ ಸಣ್ಣತನ,
ಒಪ್ಪದ ನನ್ನತನ
ಜಾರುತಿದೆ ಮೌನಕೆ ಶರಣು
ನಾಜೂಕು ಮುಂದೆಲ್ಲ,
ನರಿಗಳು ಹಿಂದೆಲ್ಲ
ಭಾರ ಅನ್ಸಲ್ವಾ ಜನ್ಮ?
ಚುಚ್ಚಾಡೋ ನುಡಿಗಳು,
ಬಿಚ್ಚಿಡದ ಮುಖವಾಡ
ತುಂಬಿ ತುಳುಕಲ್ವಾ ಕರ್ಮ!
ಕೊಳೆತವರ ಸಹವಾಸ,
ಬಿಡದಲ್ಲ ದುರ್ನಾತ!
ಇರ್ತಾರಲ್ಲ ಇಂಥಾ ಜನ,
ಮಾಡ್ತಾರಲ್ಲ ಕಪಟತನ,
ಇರಬೇಕು ದೂರ ಅಂಥೋರಿಂದ.
ಮೂರೂ ಬಿಟ್ಟೋರು,
ಊರಿಗೇ ದೊಡ್ಡೋರು
ಸುಮ್ನೆ ಅಂದಿಲ್ಲ ಬಲ್ಲೋರು.-
ಪ್ರೀತಿ
ಪ್ರೀತಿಯ ನಿಜವಾದ ಅನುಭವವಾಗುವುದು
ಒಬ್ಬರಿಗೊಬ್ಬರು ತಮ್ಮ ಬೇಕುಗಳನ್ನಷ್ಟೇ ಅಲ್ಲದೆ,
ಬೇಡಗಳನ್ನೂ ಸಹ ಅರ್ಥ ಮಾಡಿಕೊಂಡು,
ಯಾವುದೇ ಬಾಹ್ಯ ಪ್ರಭಾವಗಳಿಗೆ ಒಳಗಾಗದೇ,
ಪರಸ್ಪರ ನಂಬಿಕೆ-ಶ್ರದ್ಧೆಯಿಂದ ಇದ್ದಾಗ ಮಾತ್ರ!
ಪ್ರೀತಿಯಿದ್ದಲ್ಲಿ ಪ್ರಾಮಾಣಿಕತೆಯಿರುತ್ತದೆ.
ಪ್ರೀತಿಯಿದ್ದಲ್ಲಿ ನಾನು ಎಂಬ ಅಹಂ ಇರುವುದಿಲ್ಲ,
ನಾವು ಎಂಬ ಸ್ವಾದವಿರುತ್ತದೆ.
ಪ್ರೀತಿಯಂಕುರವಾಗಲು ಮಾಧುರ್ಯ ಬೇಕು.
ಪ್ರೀತಿ ನಿರಂತರ ಉಸಿರಾಡಲು ಹೊಂದಾಣಿಕೆ ಬೇಕು...-
ಈ ಸುಂದರ ಬೆಳದಿಂಗಳs
ಬಸ್ ಪ್ರಯಾಣವೆಂದರೆ ಅಲರ್ಜಿ ಎನ್ನುತ್ತಿದ್ದ ನನಗೆ,
ಮೊದಲ ಬಾರಿ ಬಸ್ ಪ್ರಯಾಣ ಮನಸ್ಸಿಗೆ ಹಿಡಿಸಿತ್ತು.
ಹಿಂಬದಿಯ ಸೀಟು ಎತ್ತಿ ಎತ್ತಿ ಉಯ್ಯಾಲೆ ಆಡಿಸುತಲಿತ್ತು;
ಇನಿಯ ಮುಡಿಸಿದ್ದ ಮಲ್ಲಿಗೆಯ ಪರಿಮಳ ಸೀಟಿನ ತುಂಬ ಹರಡಿತ್ತು!
ಹುಣ್ಣಿಮೆ ಚಂದ್ರ ದಾರಿಯುದ್ದಕ್ಕೂ ಸಾಥಿಯಾಗಿತ್ತು.
ಚಂದನವನದ ಸುಮಧುರ ಸಾಲುಗಳು ಕಿವಿಗಳಲ್ಲಿ ಗುನುಗುತಲಿತ್ತು...
ಅದೇ ಪ್ರಯಾಣ, ಅದೇ ಜಾಗ, ಹೊಸ ಅನುಭವವನ್ನು ನೀಡಿತ್ತು!
ಅಲ್ಲಿ ಆತ್ಮೀಯತೆಯ ಆಲಾಪನವಿತ್ತು.
ಈ ಪ್ರಯಾಣ ಆತ್ಮೀಯರ ಜೊತೆ ಆಹ್ಲಾದಕರವಾಗಿತ್ತು <3
ಅದೇ ಪ್ರೀತಿ, ಹೊಸ ರೀತಿ . . .-