ಒಂದು ಸುತ್ತಿನ ರಾಟೆ
ಅಳುತ ನಿಂತಿದ್ದೆ ದೊಡ್ಡ ರಾಟೆಯ ಮುಂದೆ ಬೆತ್ತಲಾಗಿ,
ಅದರ ತೊಟ್ಟಿಲೊಂದು ಕಾದು ನಿಂತಿತ್ತು ನನ್ನದೇ ಬರುವಿಕೆಗಾಗಿ.
ಕೂದಲು ಗಡ್ಡ ಬಂದವು ರಾಟೆಯ ಮಂದಗತಿಯ ಸುತ್ತುವಿಕೆಯೊಡನೆ,
ಕ್ರಮೇಣ ಬೆಳ್ಳಗಾಗತೊಡಗಿದವು ಅರ್ಧ ಸುತ್ತು ಆದೊಡನೆ.
ಯಾರ್ಯಾರೋ ಬಂದರು, ಏನೇನೋ ತಂದರು, ಒಂದು ಸುತ್ತಿನೊಳಗಾಗಿ,
ಕೊನೆಗ್ಯಾವುದೂ ಉಳಿಯಲಿಲ್ಲ, ಇಳಿದೆ ತೊಟ್ಟಿಲಿನಿಂದಾಚೆ ಮತ್ತೆ ಬೆತ್ತಲಾಗಿ.-
ಐವತ್ತರ ತಾಯಿಗೆ, ಮಕ್ಕಳು ಆರೋ ಏಳೋ ಕೋಟಿ.
ಬರುವರನೆಲ್ಲ ಬಿಗಿದಪ್ಪುವಳು, ಅವಳೆಂದೂ ಅಲ್ಲ ಕಪಟಿ.
ಇಂದೇಕೋ ಅನಿಸಿದೆ ಆಕೆಗೆ, ಕೈಜಾರುತಿಹರು ಅವಳ ಮಕ್ಕಳು,
ಕಂಡೂ ಕಾಣದಂತೆ ದೂರ ಸರಿಯುತಿಹರು, ಮೊಮ್ಮಕ್ಕಳು ಮರಿಮಕ್ಕಳು.
ಹೆದರಿಕೆ ತಾಯಿಗೆ, ಮಕ್ಕಳು ತನನ್ನು ಪೂರ್ತಿ ಮರೆತಾರೂ ಎಂದು,
ಶತ ಶತಮಾನಗಳ ಅವಳ ವಂಶದ ಸಂತಾನ ಬತ್ತಿ ಹೋದಿತೆಂದು.
ಬಯಸುತಿಹಳು ತಾಯಿಯು, ಮಕ್ಕಳು ಬರೆಯುವರೆಂದು, ಓದುವರೆಂದು.
ಕೂಗಿ ಹಾಡುವರೆಂದು, ಕಡೆಯ ಪಕ್ಷ ಮಾತನಾಡುವರೆಂದು...-
Do you think your PAST is full of SHIT ? Good, use it as MANURE and reap a good CROP in the FUTURE. But remember, never ever stop sowing SEEDS in the PRESENT.
-
ಸಂತೋಷ
ಎಲ್ಲರೂ ಬಯಸುವ ಸಂತೋಷ,
ಎಲ್ಲರೂ ಎಲ್ಲೆಲ್ಲೂ ಹುದುಕಾಡುತಿಹ ಸಂತೋಷ.
ಒಬ್ಬೊಬ್ಬರಿಗೆ ಒಂದೊಂದು ತರಹದ ಸಂತೋಷ,
ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸಿಗುವುದೀ ಸಂತೋಷ.
ಕಂಡಂತಾಗುವುದಿದು ಕೆಲವರಿಗೆ ತುಂಬಿದ ತಿಜೋರಿಯೊಳು,
ನೋಟಿನ ಕಂತೆಯೊಳು, ದೈಹಿಕ ಸುಖದೊಳು.
ಫಲವತ್ತಾದ ನೆಲ, ಕಾರು, ಬಂಗಲೆ, ವಸ್ತ್ರದೊಳು.
ಕೈಗೆ ಸಿಗುವುದಿದು ಕೆಲವರಿಗೆ, ನಿಷ್ಠೆಯುಕ್ತ ಕಾಯಕದಲ್ಲಿ,
ಪರರ ಹಸಿವ ತಣಿಸುವ ಕೈತುತ್ತುಗಳಲ್ಲಿ.
ಯಾರನ್ನೂ ನೋಯಿಸದೆ, ಎಲ್ಲರನ್ನೂ ನಗಿಸುವ ಹಾಸ್ಯದಲ್ಲಿ,
ಇತರರ ಕಂಬನಿಯನು ಒರೆಸುವ ಕೈಗಳಲ್ಲಿ,
ಸಹಬಾಳ್ವೆಯ ಮಾರುಕಟ್ಟೆಯಲ್ಲಿ ನಡೆವ ಪ್ರೀತಿಯ ವಹಿವಾಟಿನಲ್ಲಿ.
-
ಸಣ್ಣ ಹಣತೆಯಾಗಿಯಾದರು.
ಪರರ ಉಸಿರಿಗೆ ನೆರವಾಗಬೇಕು,
ಚಿಕ್ಕ ಗಿಡವಾಗಿಯಾದರು.
ನಡುಗುವವರಿಗೆ ಶಾಖವಾಗಬೇಕು,
ಕ್ಷಣಕಾಲ ಉರಿಯುವ ಪುಳ್ಳೆಯಾಗಿಯಾದರು.
ದಾಹ ತಣಿಸುವ ಜಲವಾಗಬೇಕು,
ಕಿರಿದಾಗಿ ಹರಿವ ಝರಿಯಾಗಿಯಾದರು.
ವ್ಯಕ್ತಿಯೊಬ್ಬ ಎದ್ದು ನಿಲ್ಲಲು ನೆರವಾಗಬೇಕು,
ಅವನ ಕೈಯ ಊರುಗೋಲಾಗಿಯಾದರು.-
ಸಾಧನೆಗೆ ಟೀಕೆಗಳೇ ಸ್ಫೂರ್ತಿಯಾಗಲಿ.
ನೀ ಎಡವಿ ಬಿದ್ದರೆ ನಗುವ ಜನರು,
ನೀ ಮತ್ತೆ ಎದ್ದು ನಿಂತಾಗ ಇವರೇ ಹೊಗಳುಭಟರು.
ಬಿದ್ದಾಗ ನಿನ್ನ ಹಿಡಿದೆತ್ತುವವರ ಮರೆಯಬೇಡ,
ಸೋತಾಗಲೂ ನಿನ್ನ ಬೆನ್ನು ತಟ್ಟಿದ ಕೈಯ ಬಿಡಬೇಡ.
-
ಬಾಳ ಪಯಣದಲಿ ಕಳೆದುಕೊಂಡಿರುವೆ ಮನದ ತುಂಡೊಂದನು.
ಬಹಳ ಮುಂದೆ ಬಂದಮೇಲೆ ಗಮನಿಸಿದೆ ಅದರ ಜಾಗದಲ್ಲಿರುವ ಹೊಂಡವನು.
ಅದು ಮುಂದೆ ಬರಲಾರದು, ನನ್ನ ಪಯಣ ಹಿಂತಿರುಗಲಾರದು.
ಬೇರಾವುದೂ ಅದರ ಜಾಗವ ತುಂಬಲಾರದು.
ಎದುರು ಬರುವುದೆಲ್ಲವ ನಿರ್ಲಕ್ಷಿಸಿಕೊಂಡು,
ನಡೆದಿಹೆನು ಮುಂದೆ, ಹಿಂತಿರುಗಿ ನೋಡಿಕೊಂಡು.
-
ಕೈಚೆಲ್ಲಿದ ಅವಕಾಶಗಳೆಷ್ಟೋ..
' ಅಂದು ಅದನ್ನು ಮಾಡಿಬಿಡಬೇಕಿತ್ತು '
ಎಂಬ ಪಶ್ಚಾತ್ತಾಪಗಳೆಷ್ಟೋ.
ಅವರು ನಕ್ಕಾರು, ಇವರು ಅಂದಾರು
ಎಂಬ ಭಯಗಳು ಇರುವ ತನಕ.
ಸಮುದ್ರವ ಮುಟ್ಟದ ನಿಂತ ನೀರಾಗುವೆವು
ನಾವು ಕೊನೆಯ ತನಕ..-
ಭಯ ಆತಂಕಗಳಿರತ್ತಿರಲಿಲ್ಲ ನನ್ನೊಡನೆ ಅವನಿರಲು.
ಆದರೆ ಕಳ್ಳನ್ನಂತೆ ಓಡಿ ಪುಸ್ತಕವಿಡಿದು ಕೂರುತ್ತಿದ್ದೆ ಸಂಜೆ ಅವನು ಬರಲು.
ತನ್ನ ಅರಿವಿಗಿದ್ದ ತಪ್ಪುಸರಿಗಳ ತಿಳಿಯಹೇಳಿದನು ನನಗೆ.
ಮಾತಿನ ಪೆಟ್ಟು, ದೊಣ್ಣೆಯ ಪೆಟ್ಟು ಎರಡರಿಂದಲೂ.
ನನ್ನನ್ನೆತ್ತಿ ನೀರಿಗೆಸೆದು "ಈಜು" ಎಂದು ಕೈಯ್ಯೊಡ್ಡಿದವನು.
ಪ್ರವಾಸಕ್ಕೆಂದು ಹೊರಟರೆ "ನೀರ್ ಹತ್ರ ಹುಷಾರು" ಎನ್ನದೆ ಕಳಿಸನು.
ನನಗೆ 'ಗಡ್ - ಬಡ್' ಕೊಡಿಸಿ, ಒಂದು ಚಮಚದಷ್ಟು,
ಅವನು ತಿಂದು "ಚೆನ್ನಾಗಿದೆ ಅಲ್ವಾ?" ಎಂದವನು.
ಅವನ 'ಮಾಡಬೇಕಿರುವ ಕೆಲಸಗಳ ಪಟ್ಟಿ'ಯಲ್ಲಿ,
'ಶಾಲೆಯ ಶುಲ್ಕ ಕಟ್ಟುವುದು' ಇರುತ್ತಿತ್ತು ಯಾವಾಗಲೂ ಪ್ರಥಮ ಸ್ಥಾನದಲ್ಲಿ.
ನನ್ನ ನಾನೇ ನಂಬದ ಸಮಯದಲ್ಲೂ, ನನ್ನ ನಂಬಿದವನು.
'ಹೀಗೆಯೇ ಬದುಕಬೇಕೆಂದೇನಿಲ್ಲ' ಎಂಬುದ ತೋರಿಸಿಕೊಟ್ಟವನು.
ಬೈದಾಡಿದನು ತನ್ನವರ ಮಧ್ಯೆ ನಿಂತು,
ಹೊಡೆದಾಡಿದನು ಅದೇ ತನ್ನವರಿಗಾಗೆಂದು.
"ಅವನು ಬಹಳ ಮುಂಗೋಪಿ" ಎಂದರು ಹಲವರು.
"ಅವನು ಬಹಳ ಮುಂಗೋಪಿ, ಆದ್ರೆ ಒಳ್ಳೆ ಮನುಷ್ಯ" ಎಂದರು ಇನ್ನೂ ಹಲವರು.
ಕಲಿತಿರುವೆ ಅವನಿಂದ ಅದೆಷ್ಟೋ ವಿಷಯಗಳನ್ನು, ಹಲವಾರು ಬೈಗುಳಗಳನ್ನು.
ಬದುಕಿನ ದಾರಿಯಲ್ಲಿ ನಾನು ಎಡವಬಹುದಾದಂತಹ ಕಲ್ಲುಗಳನ್ನು.
ದಿನವೂ ಉತ್ತರಿಸಲು ಪ್ರಯತ್ನಿಸುತ್ತಿರುವನು ಕನ್ನಡಕ ಧರಿಸಿ,
ಅದೆಷ್ಟೋ ಜೀವನದವುಗಳ ಜೊತೆಗೆ, ದಿನಪತ್ರಿಕೆಯ ಪದಬಂಧದ ಪ್ರಶ್ನೆಗಳನ್ನು...-
ಜೊಲ್ಲು ಸುರುಸ್ಕೊಂಡು ಎಂಗ್ ಬಿದ್ದವನೆ ನೋಡು ನನ್ ಮೇಲೆ ಅಂತ ಬೈಕೊಂಡಿರೂದು..😀😀
-