ಮುಂಬಾಗಿಲು ತೆರೆದಾಗ
ಗೋಚರಿಸಲಿಲ್ಲ ರವಿ
ಲಭ್ಯವಿಲ್ಲ ಇಂದು
ಸೂರ್ಯಾಸ್ತದ ಸವಿ
ನೀಲಾಕಾಶವ ಮರೆಮಾಚಿ
ಸುತ್ತುವರೆದಿದೆ ಕಾರ್ಮೋಡ
ಉಣಬಡಿಸಲು ಇಂದು
ಇಳೆಗೆ ಮಳೆಯ ಸೊಗಡ
ಹಾರದೆ ಕುಳಿತಿವೆ ಹಕ್ಕಿ
ಪುಟ್ಟ ಗೂಡಲ್ಲಿ ಬೆಚ್ಚಗೆ
ರೆಪ್ಪೆಬಡಿಯದೆ ದಿಟ್ಟಿಸುತ್ತಿವೆ
ಮಳೆ-ಮಣ್ಣಿನ ಬೆಸುಗೆ.
-
ಭಾವತರಂಗಗಳು ಉಲ್ಬಣಿಸಿವೆ
ಮನದಾಳದ ಕದವ ತಟ್ಟಿ
ಕಣ್ಣಹನಿಗಳು ಜಾರದೆ
ನಿಂತಿವೆ ಹೆಪ್ಪುಗಟ್ಟಿ
ಕನಸ ಚಿಗುರಲೆ
ಮಣ್ಣುಪಾಲದ ತರಗೆಲೆ
ದಿಕ್ಕಿಲ್ಲದೆ ಅಲೆಯುತಿದೆ
ಸಿಗದೇ ತನ್ನ ನೆಲೆ
ಹೆತ್ತು ಹೊತ್ತವರಿಗೆ
ಭಾರವಿಳಿದು ಹಗುರ
ಮೂರುಗಂಟಿನ ಜೊತೆ
ಆರಂಭ ಸಮರ.-
ಅನಿರೀಕ್ಷಿತವಾಗಿ ಸುರಿಯುತ್ತದೆ
ಮಾಯಾ ಮಳೆಯು
ನೆನೆದು ಒದ್ದೆಯಾಗುತ್ತವೆ
ಒಣಗದೆ ಬಟ್ಟೆಯು
ಅತಿಯಾದ ಮಳೆಯಿಂದ
ವಿದ್ಯುತ್ ಸಂಪರ್ಕ ಕಡಿತ
ವಿದ್ಯುತ್ಆವೇಶವಿಲ್ಲದ ಮೊಬೈಲ್ಗಳು
ಇನ್ನೆಲ್ಲಿ ಜೀವಂತ
ರವಿ ಕಿರಣ ತಾಕದೆ
ಬಿಸಿಯಾಗದ ನೀರು
ಕತ್ತಲ ಆವೃತ
ಹಗಲಲೂ ಸೂರು.-
ಸಂಪೂರ್ಣ ಸುತ್ತುವರೆದ
ನೆನಪುಗಳ ಸಂಕೋಲೆ
ರಭಸದಿ ಅಪ್ಪಳಿಸುತ್ತವೆ
ಅಲೆಗಳಂತೆ ಸಾಲುಸಾಲೆ
ಮರೆಯಲಾಗದ ಮಾಸದ
ನೆನಪುಗಳ ಮೆರವಣಿಗೆ
ಹೃದಯಕೆ ಕೊಂಚ ನಡುಕ
ಅಗಲಿಕೆಯ ಅನಿವಾರ್ಯತೆಗೆ
ಮಾತು ತಳೆದರೂ
ಗಾಢ ಮೌನ
ಅಂತರಂಗದಿ ಸದಾ
ನಿನ್ನದೇ ಗಾನ.
-ಪೂಜಾ ದಾನಪ್ಪ.
-
ಇಬ್ಬರ ಸಮ್ಮತಿಯ ಮೇರೆಗೆ
ವಿವಾಹ ಸಂಭ್ರಮದ ಸಿಹಿ
ಇಬ್ಬರ ಒಪ್ಪಿಗೆ ಮೇರೆಗೆ
ಸಂಬಂಧದ ಅಂತ್ಯಕ್ಕೆ ಸಹಿ
ಹೊಂದಾಣಿಕೆಯ ವಿಫಲತೆ
ಸಂಸಾರದಲ್ಲಿ ಬಿರುಕು
ನುಸುಳಿದರೆ ಸಾಕು
ಅನುಮಾನದ ತುಣುಕು
ಇಬ್ಬರ ಜಗಳದಲಿ
ಬಡವಾಗಿದ್ದು ಕೂಸು
ತಾಳ್ಮೆಯಿಂದ ಯೋಚಿಸಿ
ನಿರ್ಧರಿಸಬೇಕಿತ್ತು ತುಸು.
-ಪೂಜಾ ದಾನಪ್ಪ.
-
ನಿರಂತರವಾಗಿ ಸುರಿವ
ಮಳೆಹನಿಗಳು ಮರೆಮಾಚಿವೆ
ಕಂಬನಿಗಳ
ತಣ್ಣೀರೆರೆದು ತಂಪಾಗಿಸಿದೆ
ಎದೆಯಾಳದಿ ಸುಡುವ
ನೋವುಗಳ
ಗುಡುಗು ಸಹ ಆರ್ಭಟಿಸಿದೆ
ತಲುಪದಂತೆ ಅಹಿತಮಾತು
ಕರ್ಣಗಳ.
-ಪೂಜಾ ದಾನಪ್ಪ.
-
ಮೂಡಣದ ಮುಗಿಲಿನಲಿ
ಉದಯಿಸಿದ ನವರಂಗಿನಲಿ
ಹೊಂಗಿರಣ ಹೊಮ್ಮಿಸುತಾ
ಪ್ರತಿದಿನ ಹೊಸತನದಲಿ
ಕಣ್ಮನಗಳಿಗೆ ಸ್ವರ್ಗಸುಖವ
ಸೃಷ್ಟಿಸಿ ಬಾನಂಗಳಲಿ
ಸೂರ್ಯೋದಯ ಸೌಂದರ್ಯದ
ಸವಿ ಸಹಸ್ರ ಸಹೃದಯಗಳಲಿ
ಕಾರಿರುಳನು ಕರಗಿಸಿ
ಬೆಳಗಿದ ಬೆಳದಿಂಗಳಿನಲಿ
ನಿತ್ಯ ಚೈತನ್ಯವಾ ಬಿತ್ತಿ
ಬೆಳಗುವನು ಭರವಸೆಯಲಿ.
-
ಮಾತು ಮುಂದುವರೆಸುವ
ಮನಸ್ಸಿಲ್ಲದಿದ್ದರೆನಂತೆ....
ಮೌನದಲ್ಲೇ ಮೆಲುನಗೆ ಬೀರು ಸಾಕು
ಈ ಜೀವ ಪಡೆವುದು ಜೀವಂತಿಕೆ....
-ಪೂಜಾ ದಾನಪ್ಪ.
-