ಒಡೆದು ಚೂರಾದರು ಪ್ರತಿ ಚೂರಿನಲೂ ಬದುಕಿರುವ ಬಡಪಾಯಿ.
ಇದು ನೀನೊ, ನಿನ್ನೊಳು ಕಾಣುವ ನಾನೊ....!
ಚನ್ನಾಗಿದೆಯಲ್ವಾ ಎರೆಡು ಸಾಲಿನ ನ್ಯಾನೊ....?-
ಪ್ರಾಮಾಣಿಕ ಪ್ರಯಾಣದ ಪ್ರಮಾಣ
ಸುದ್ದಿಯಾದಾಗಲೆಲ್ಲ ಹೃದಯ
ಅರೆಕ್ಷಣ ಮೂಕವಾಗುತ್ತದೆ ಸಾಕಿ
ಈ ಲಬ್-ಡಬ್ ನಿನಗಾಗಿಯೊ ನನಗಾಗಿಯೊ
ತಿಳಿಯದಾಗಿದೆ ಅದಕೆ.-
ಸುರಿದ ಕಣ್ಣೀರಿಗೆ
ಸರಿದ ರಾತ್ರಿ ಸಾಕ್ಷಿಯಾಗಿ
ಲೆಕ್ಕದಿ ಸೋತ ತಲೆದಿಂಬದು
ತೇಲುತಿದೆ ಕಣ್ಣೀರ ಸಾಗರದಿ,
ಬೇರೆಲ್ಲೊ ಸೋತ ಕಣ್ಣೀರಿಗಿಲ್ಲಿ
ದಿಂಬನು ಸೋಲಿಸಿದ ನಿರಾಳತೆ...
-
ಇಲ್ಲೂ ಅಷ್ಟೇ
ನೀನು ಸರಿ,
ನಾನು ತಪ್ಪು,
ಜಗಳವನ್ನೆ
ಹೊದ್ದು ಮಲಗಿದ್ದು
ಜೀವನ....
ಈ ಶೀತಲ
ಸಮರದೊಳ್
ಮುಸುಕೆಳೆದದ್ದು
ಪ್ರೀತಿ,
ಎದ್ದು ಕಾಣಿಸಿದ್ದು
ಮಾತ್ರ
ಮಾತನಾಡುವ
ಮೌನ..........-
ಕನ್ನಿಕೆಯ ಕಂಡವನ ಕಣ್ಣಂಚಿನಲಿ
ರಚಿತ ಕಾವ್ಯದ ಉಪಮೇಯಗಳಿವು.....
ನಿರಾಭರಣ ಸುಂದರಿ ಈ ಕಾವ್ಯಕನ್ನಿಕೆ
ಉಪಮಾನಗಳೆ ಅಲಂಕಾರಗಳಿವಳಿಗೆ....
ಕನಸಿನಲ್ಲಿ ಕಾಡುವ ಕನ್ನಿಕೆಯ
ಎದುರಿನಲ್ಲಿ ಕಾಣುವ ಹಂಬಲ
ಇಷ್ಟವಾಗಿದೆ ಕಣ್ಣಿಗೆ....
ಕಣ್ತೆರೆದು ಕಳೆದುಕೊಂಡರೆ
ಎನ್ನುವ ಚಂಚಲ
ಇಷ್ಟವಾಗದು ಕಣ್ ರೆಪ್ಪೆಗೆ....-
ಅ-ಅಂಗನೆಯ ಆಂತರ್ಯದ ಇಂಗಿತವ ಅರಿತವರಿಲ್ಲ
ಆ-ಆದರದಿ ಆರಾಧಿಸು ಮಮತೆಯಲಿ ಸರಿಸಾಟಿ ಯಾರಿಲ್ಲ
ಇ-ಇಳೆಯಾಳುವ ಧಣಿ ಇವಳು, ಸದ್ವಿಚಾರದ ಖನಿ ಇವಳು
ಈ-ಈಜುವ ಮೀನಂತೆ ಉನ್ಮಾದವು ಮನದೊಳಗಿದ್ದರು
ಉ-ಉಪಾಧಿಯಲಿ ಉತ್ತಮರೊಳು ಸರ್ವೋತ್ತಮಳು
ಊ-ಊರ್ಜಿತ ಆಚಾರಗಳ ಉಲ್ಲೇಖವೂ ಇವಳೆ
ಋ-ಋತುಮಾನಗಳು ಬದಲಾದರೂ ಬದಲಾಗದವಳು
ಎ-ಎತ್ತರದ ನಿಲುವಿನ ನಿರಹಂಕಾರ ಧುರೀಣೆಯು
ಏ-ಏನೆಂದು ವರ್ಣಿಸಲಿ ಯಾರೆಂದು ಹೆಸರಿಡಲಿ
ಐ-ಐಹಿಕದೊಳು ಮತ್ತಿನ್ನಾರಿಲ್ಲ ಅವಳಂತ ಧೀಮಂತೆ
ಒ-ಒಲವಿನ ಒಡನಾಟಕೆ ಒಡಲಾಳದಿ ಕಂಪನವು
ಓ-ಓಲೈಕೆಯ ಔಪಚಾರಿಕ ಹಾರಿಕೆಯ ಉತ್ತರಗಳಲ್ಲ
ಔ-ಔದಾರ್ಯದ ಅನುಕಂಪ ಭರಿತ ಮಾತುಗಳು
ಅಂ-ಅಂತಿಂತಲ್ಲ ಅವಳನ್ನರಿಯುವುದು ಅರಿತರದುವೆ
ಅಃ-ಆಹಾ ಅಃ ಸುಂದರ ಬದುಕಿನ ಸವಿಯು ಅನುಕ್ಷಣ
-
ಅವಳು....
'ಅ'ವಳಂದವು ಆವರಿಸಿದ
'ಆ'ದಿನ 'ಇ'ಂದಿಗೂ 'ಈ'
ಹೃದಯದಿ 'ಉ'ಳಿದಿಹುದು;
'ಊ'ಹೆಗೂ 'ಎ'ಟುಕದ
'ಏ'ಕತಾನತೆಯು 'ಐ'ಕ್ಯವಾಗಿಹುದು,
ಅವಳ 'ಒ'ಡನಾಟದಿ 'ಓ'ಲೈಸುವ 'ಔ'ದಾರ್ಯಕೆ...-
ನನ್ನೊಲವೆ ಮನದಲ್ಲಿ ಮನೆಮಾಡಿ ಮರೆಯಾಗಿಹೆ
ನಿನ್ನನ್ನು ಹುಡುಕುತ್ತ ಅಲೆಮಾರಿ ನಾನಾಗಿಹೆ
ನಾನು ನೀನು ಇನ್ನೆಂದು ಹೀಗೆ ಇನ್ನು
ಜೊತೆಯಾಗುತ ಮೈಮರೆಯುವ
ನಮ ಪ್ರೀತಿಯು ಅಜರಾಮರ.....
ನನ್ನೊಲವೆ ಮನದಲ್ಲಿ ಮನೆಮಾಡಿ........
ನಾನು ನೀನು ಇನ್ನೆಂದು ಹೀಗೆ ಇನ್ನು
ಮುಗಿಯದ ದಾರಿಯಲ್ಲಿ
ಮುರಿಯದ ಮೌನದಲ್ಲಿ
ಜೊತೆಯಾಗುತ ಕಳೆದ್ಹೋಗುವ
ನಮ ಪ್ರೀತಿಯು ಅಜರಾಮರ.....
ನನ್ನೊಲವೆ ಮನದಲ್ಲಿ ಮನೆಮಾಡಿ........
ನಾನು ನೀನು ಇನ್ನೆಂದು ಹೀಗೆ ಇನ್ನು
ಒಂದು ಸೊಗಸ ಒಲವ ಹಾದಿಯಲ್ಲಿ
ಜೊತೆಯಾಗುತ ಸುತ್ತಾಡುವ
ನಮ ಪ್ರೀತಿಯು ಅಜರಾಮರ....
ನನ್ನೊಲವೆ ಮನದಲ್ಲಿ ಮನೆಮಾಡಿ ಮರೆಯಾಗಿಹೆ
ನಿನ್ನನ್ನು ಹುಡುಕುತ್ತ ಅಲೆಮಾರಿ ನಾನಾಗಿಹೆ........-
ನಿನ್ನೆಲ್ಲ ಭಾವಗಳು
ನನ್ನಲ್ಲಿ ತೆರೆದಿಟ್ಟ ಪುಟಗಳಂತೆ
ಸುಳಿದು ಸೂಸುವ ಒಲವ ಗಾಳಿಗೆ
ನಲಿವ ನವಿಲು ಗರಿಯಂತೆ ನುಲಿದು
ನನ್ನೆದೆಯಲಿ ನಾಚುತಿಹವು....-