ಕರಿಮುಗಿಲು ಕರಗಿ ಮಳೆಯಾಗಿ ಸುರಿಯಲು
ನಿನ್ನೆಯಷ್ಟೇ ಇಳೆಗೆ ಬಂದಿದ್ದಾಳೆ ಪುಷ್ಯ...
ಆಗೊಮ್ಮೆ ಈಗೊಮ್ಮೆ ಬೀಸೋ ಗಾಳಿಯೊಂದಿಗೆ
ಇಳೆಗೆ ಮಳೆಯ ಹರಿವು ಮುಂದುವರೆಯುತ್ತಿದೆ...
ಮಳೆಗೆ ನೆಲ ಫಲವತ್ತಾಗಿ ಸಿದ್ಧಗೊಳ್ಳುತ್ತಿದೆ...
ಜೀವ ಪಾಲನೆಗೆ ಹಸಿರು ಯಥೇಚ್ಛ ಬೆಳೆದು ಬಿಟ್ಟಿದೆ...
ವರ್ಣಿಸಲಾಗದು ಹಸಿರು ಉಸಿರಿಗೆ ಮಳೆಯ ಈ ದೇಣಿಗೆ...-
ಮುಂಜಾನೆಯೇ ಮಳೆಯ ರಿಂಗಣ.
ಹನಿವ ಮಳೆ...ಪೂಜಾ ಚೆಲುವು...
ನಾಗರಪಂಚಮಿಗೊಂದು ಮೆರುಗು.
ಭಕ್ತಿ ಭಾವಕೆ ನಾದ ಸ್ವರಕ್ಕೆ ಪವಡಿಸಿಹನು
ವರ್ಷನ ಮಡಿಲಲಿ ಆಶ್ಲೇಷ ಸುತ.-
ಜೇಷ್ಠ ಮಾಸದ ಚಂದ್ರ
ಮೋಡದ ಜೊತೆ ಕಿತ್ತಾಡಿ
ಹೊರಬಂದು ಆಕಾಶದಲ್ಲಿ
ರಾತ್ರಿಗೆ ದೀಪ ಹೆಚ್ಚಿದಂತೆ
ಕಂಗೊಳಿಸುತ್ತಿದ್ದಾನೆ...
ಜಗವೆ ಬೆಳಗುವಷ್ಟು
ಬೆಳದಿಂಗಳ ಹರಿವು ಹರಿಸುತಿದ್ದಾನೆ...-
ಕೆಲವು ದಿನಗಳು
ಅದೆಷ್ಟು ಆರ್ಭಟಿಸಿದ್ದಳು
ಮಳೆ ಗೆಳತಿ ಕೃತಿಕಾ.!!!
ಇಂದೇಕೆ ಹನಿ ನೀರನ್ನೂ
ಸುರಿಸದೆ ಕಣ್ಮರೆಯಾಗಿಹಳು.!
ಇಂದು ಅವಳು ನಿರ್ಗಮಿಸಿ
ಮಳೆ ನಕ್ಷತ್ರ ರೋಹಿಣಿ
ಆಗಮಿಸುವ ಸಮಯ.
ಮಳೆಯ ಸುರಿಸದೆ ಹೀಗೆ ಅವಳು
ಸತಾಯಿಸುವುದು ಸರಿಯೇ ???
ಎಲ್ಲಿ ಹೋದಯೇ ನೀನು ಕೃತಿಕಾ ???
ಒಮ್ಮೆ ಹೇಳು ಇಳೆಯ ಮೇಲೆ
ಇಂದು ನಿನಗೇಕೆ ಮುನಿಸು..???-
ಇಂದು ಮಳೆ ನಕ್ಷತ್ರ
ಕೃತಿಕಾಳ ಆಗಮನ.
ಮೊದಲ ದಿನವೇ
ಮಳೆ ಹನಿಗಳ ತನನ.
ಪ್ರಕೃತಿಯಲ್ಲಿ ಮಧುರ
ಸಂಚಲನ.-
ರಾತ್ರಿಯಿಡೀ ಸುರಿದ ಧಾರಾಕಾರ ಮಳೆ.
ಮುಂಜಾವು ಮಳೆ ನಿಂತ ಮೌನ.
ಗಿಡ ಮರಗಳಿಂದ ನಿಂತ ನೀರು ಇನ್ನೂ ತೊಟ್ಟಿಕ್ಕುತ್ತಿದೆ..
ಸೂರ್ಯನಿಗೆ ಬೆಳಕು ಹರಿಸಲು ತುಸು ಆಲಸ್ಯವೇನೊ..
ವಿದ್ಯುತ್ ಇಲ್ಲದೆ ದಿನಚರಿಯೆಲ್ಲ ಏರುಪೇರು..
ತಂಪಾದ ಇಳೆ, ಹನಿ ಗಾಳಿ ನವಿರಾಗಿ ಬೆರೆತು
ಬೇಸಿಗೆಯ ಮುಂಜಾನೆಯನು ಮಳೆಗಾಲದ
ಮುಂಜಾವಾಗಿ ಪರಿವರ್ತಿಸಿದಂತಿದೆ...-
ಗತಕಾಲದ ಇರುವುಗಳು ಚೂರು ಚೂರಾದಂತೆ
ಹೊಸ ವಾತಾವರಣಕ್ಕೆ ಧೂಳಂತೆ ಚದುರಿ
ಬಿಸಿಯಾಗುತ ಹೊಳೆಯುತ ಅಸ್ಪಷ್ಟ ಗೋಚರಿಸುವ
ಬಾಹ್ಯಾಕಾಶದ ಲಕ್ಷಾಂತರ ಮಿನುಗು ತಾರೆಗಳು...!
ಬಾಣಗಳ ಬತ್ತಳಿಕೆಯಿಂದ ಒಂದೊಂದಾಗಿ ಬಿಟ್ಟ
ಹೊಳೆಯುವ ಬಾಣಗಳಂತೆ ಡಿಸೆಂಬರ್ ರಾತ್ರಿಯ
ಮತ್ತಿಷ್ಟು ಬೆಳಗಿಸುವ ಹೊಸ ಹೊಸ ಉಲ್ಕಾಪಾತ...!
ಶರತ್ಕಾಲದ ಚಂದ್ರ ಮರೆಯಾದ ಈ ಚಳಿ ರಾತ್ರಿಯಲಿ
ಕವಿದ ಕತ್ತಲೆಯ ಕಳೆಯಲು ಖುದ್ದು ರಾತ್ರಿಯೇ ವೇಗದ
ಉಲ್ಕೆಗಳ ಸೆಳೆದು ಬೆಳಕನ್ನೆಲ್ಲ ಒಗ್ಗೂಡಿಸುತ್ತಿದೆ...!
ಇದ ನೇರ ನೋಡುತ ಭೂಮಿಯೇ ಬೆರಗಾಗಿಬಿಟ್ಟಿದೆ..!
ಬೆಳಕ ಪ್ರತಿ ಮನವಿಯನ್ನು ಕತ್ತಲೆಯೇ ಗ್ರಹಿಸಿ ಭೂಮಿಗೆ
ಒಂದೊಂದಾಗಿ ಸುಂದರವಾಗಿ ದರ್ಶಿಸಿ ವಿವರಿಸುತ್ತಿದೆ..!
ಬೆಳಕ ಮನಸ್ಥಿತಿಯ ಚಾಣಾಕ್ಷದಿ ಸೆರೆಹಿಡಿಯುತ
ಚಾಣಾಕ್ಯ ಭೂಮಿ ಸಂಭ್ರಮಿಸುತ್ತಿದೆ....!!!!-
ದೀಪಗಳು ಮಬ್ಬ ಸರಿಸಿ
ಎಂದಿಗೂ ಬೆಳಗುತ್ತಿರಲಿ.
ಹಣತೆಯಲ್ಲಿ ಬತ್ತಿಯಿರಲಿ.
ಎಣ್ಣೆ ಬತ್ತದಿರಲಿ.
ಬೆಳಕು ಚೆಲ್ಲುತ್ತಿರಲಿ.-
ಕೆಲವು ದಿನಗಳಿಂದ
ನಮ್ಮೂರ ಗಲ್ಲಿಯಲ್ಲಿ
ವರ್ಷ ಹನಿಗಳ ನಿನಾದ.
ಎಂದಿನಂತೆಯೇ ಹುಣ್ಣಿಮೆಯ
ಮುಸ್ಸಂಜೆಯಲ್ಲಿಂದು
ಆವರಿಸಿದೆ ಆಗಸದಲ್ಲಿ
ಅಶ್ವಿನಿಯ ಮೇಘಗಳು.
ಅದೇ ತುಂತುರು ಸದ್ದಿನಲ್ಲಿ
ಸುರಿದು ಧರೆಯ ತೊಯ್ಯುತ್ತಿವೆ.
ಕತ್ತಲ ಈ ಮಳೆಯೋಕುಳಿಯ
ನೋಡುತ ಅಶ್ವಿನಿ ಚಂದಿರ ಮೇಘಗಳ
ಮರೆಯಲ್ಲಿ ನಗುವ ಚೆಲ್ಲಿಹನು.-