ಬದುಕು ಹಳೆಯದಾದರೂ ಭಾವ ಹೊಸತೇನೊ
ಹೊಸತಿನಲ್ಲಷ್ಟೊಂದು ತೊಡಕೇನೊ, ತೊಡರೇನೊ, ತಳುಕಿನೊಳು ಬಂಧಿಯೇನೊ, ಬೆಸುಗೆಯೇನು!
ಮಿತವಾಗುತಿದೆ ಉಮೇದಿನ ನಡೆ
ಮತಿಯಾಗುತಿದೆ ಹಿನ್ನಡೆಯ ಕಡೆ
ನಿಲುವೇನು, ನಿಟ್ಟೇನು?
ಹಿತವಿಲ್ಲದ ನುಡಿಯೀಗ ನೆಗೆಯುತಿದೆ
ಭಾರವೆನಿಸೊ ಮನಕೆ ಭಾವವೇ
ಮಾಸುವ ಮದ್ದಾಗಬೇಕಿದೆ.-
ಹುಸಿಯಾದ ಮಾತಿಗೆ ಮುನಿಸಾದ ಮನಸ್ಸು
ತಿಳಿಯದೇ ಹುಸಿಗೆ ಕಾರಣವ
ಖುಷಿಯಿಂದ ಬಿಳ್ಕೊಟ್ಟ ಮಂದಸ್ಮಿತ ಹೃದಯ
ಅರಿಯದೇ ಅವಸ್ಥೆಗೆ ಮೂಲವ
ಕಣ್ಣೆದುರೇ ಪರಿಸ್ಥಿತಿಯ ಕಂಡರೂ
ಸಮಯೋಚಿತ ನುಡಿಗಳಾಡದೇ
ಎಲ್ಲೆ ಮೀರಿದ ಪದಗಳುರುಳಿದರೆ
ಪರಿಣಾಮಕೆ ಹೊಣೆಯಾರು?
ಹೊಗಳುವವರಾರು!
ಕೋಪದೊಡೆ ಶಾಮಿಲಾಗಿ ಮುನ್ನುಗ್ಗಿದರೆ
ವಿರೋಧದ, ನಿರಾಶೆಗಳ ನಷ್ಟವೇ ದಾರಿ
ಸಹನೆಗೂ ಜಾಗ ಮೀಸಲಿರಿಸಿದ್ದರೆ
ಅಪೇಕ್ಷಿಸದ, ಅನುರೂಪದ ಆನಂದದ ಸೆರೆ
ಹೊಂದಾಣಿಕೆಯ ಬದುಕು
ಹಸುನಾದ ಬೆಳಕು.-
ಮಾತುಗಳು ಸುಳ್ಳೆನಿಸಿ
ನಂಬಿಕೆಯು ಕುಸಿಯಲೆನಿಸಲು
ಎದುರಲಿ ಕಾಣುವ ಭಾವನೆಯು ಹಂಬಲವ ತೋರದೇ?
ಜೊತೆಗಿರುವ ಮನವು ಸತ್ಯವ ಕಾಣದೇ!
ಮೌನದ ಮನ, ಮುನಿಯಲು ಏನಿಲ್ಲ
ಮುನಿಸಿನ ಅಪೇಕ್ಷೆಯು ಬೇಕಿಲ್ಲ.
ಎಲ್ಲದರ ಹೊಂದಾಣಿಕೆಯಲಿ ಏರುಪೇರಿನ ಸವಾಲಿನಲಿ
ತಾಳ್ಮೆಯೊಂದೆ ಸಕಾರಾತ್ಮಕವಾಗಿರಿಸಲು ಜೊತೆಗಿರುವ ಬಲ.
ಒಂಟಿ ನಡೆಯ ಕಾಲುದಾರಿಗಿಂತ ಜಂಟಿ ನಡೆಯ ಹೆದ್ದಾರಿಗೆ ಸಮಯಕೆ ಮಿತ್ರನಾಗಿ ಕಾಯಲೇಬೇಕು.-
ವಿಚಾರದ ದುನಿಯಾವಲ್ಲ,
ವ್ಯಕ್ತಿಯ ದುನಿಯಾ
ಧನ, ಸಂಪತ್ತಿನ ಗಳಿಕೆಗಿಲ್ಲಿ ಗೌರವ, ಪ್ರಾಧಾನ್ಯತೆ
ವಿನಯ, ವಿನೋದತೆಗೆ ಎಂದೊಲಿಯುವುದೋ ಆ ಪೂಜ್ಯತೆ.
ಒಬ್ಬೊಬ್ಬರೊಂದೊಂದು ಜೀವನ ಬಾಳು
ತಿಳಿಯರ್ಯಾರೂ ಏಳುಬೀಳಿನ ಗೋಳು
ಸಲ್ಲದ ಹೋಲಿಕೆ ಹೃದಯಕ್ಕೆ ಘಾಸಿ
ನಗುವಿದ್ದೊಡೆ ಗುಡಿಸಲ ಸೂರು ವಾಸಿ.
ನಿಗದಿತವಲ್ಲದ ಜೀವನ ಪತಂಗ.
ಬೆರೆತಿರಲಿ ಬದುಕಿದಷ್ಟು ಆ ನಗುವಿನ ರಂಗಿತರಂಗ.-
ಹೆಕ್ಕಿ ತೆಗೆದ ಪದಗಳಲಿ
ಒಲುಮೆ, ನಲುಮೆ
ಕುಕ್ಕಿಕುಕ್ಕಿ ಜೀವ ತಿಂದು
ಭಾವಗಳಾದ ಪದಗಳು.-
ಅದರಲ್ಲೊಂದು ನಕ್ಷತ್ರ ತುಂಬಾ ಹತ್ತಿರದಂತೆ ಗೋಚರಿಸುತ್ತ ಮಿನುಗುತ್ತಿರಲು ದಿಟ್ಟಿಸಿ ನೋಡುತಿರುವಾಗ ಆಪ್ತ ಗೆಳೆಯ ಏನೋ ಹೇಳುತ್ತಿರಬಹುದೆನಿಸಿತು. ಎನ್ನ ಕರೆದ ಹಾಗೆ, ಮನಸ್ಸನ್ನು ತಟ್ಟಿದ ಹಾಗೆ, ಅರ್ಧಕ್ಕೆ ನಿಂತ ತನ್ನ ಕನಸುಗಳ ಮುನ್ನಡೆಸುವ ಹಾಗೆ ತಿಳಿಸಿ ಮಾಯವಾಯಿತು. ಕಣ್ತುಂಬಿ ಬಂದು ಕಳೆದುಹೋದ ಗೆಳೆಯನ ನೆನೆದು ಆ ಗಳಿಗೆ ಕಣ್ಣೀರಮಯವಾಯಿತು.
-
ಸರಿ ತಪ್ಪುಗಳ ಅರಿತು ಸಂದರ್ಭಕ್ಕನುಸಾರ ಹೊಂದಿರುವ ಸಾಮಾನ್ಯ ಜ್ಞಾನವೇ ಪರಿಜ್ಞಾನ.
-
ಒಬ್ಬರೊಬ್ಬರ ಮುಖ ನೋಡಹತ್ತಿದರು,
ಅಪರಿಚಿತ ವ್ಯಕ್ತಿ ತಾನು ಬಂದ ವಿಳಾಸದ ಮಾಹಿತಿಯನ್ನು ನೀಡಿದರು. ಚೀಟಿ ನೋಡಿದ ನೆಂಟರೊಬ್ಬರು ಆಶ್ಚರ್ಯದಿಂದ ಇದು ನನ್ನ ಮನೆ ವಿಳಾಸ ನೀವ್ಯಾರು ಎಂದಾಗ ಅಪರಿಚಿತ ವ್ಯಕ್ತಿ ತಾನು ತಂದ ಉಡುಗೋರೆ ನೀಡಿ ತಾವು ಇಷ್ಟು ದಿನ ಕಾಯುತ್ತಿದ್ದ ಫಲ ತಮ್ಮುಂದೆ ಎಂದಾಗ ಕಣ್ಗಳು ತುಂಬಿ ಮುಖದಲ್ಲಿ ಸಾರ್ಥಕತೆಯ, ಪರಿಶ್ರಮದ ಖುಷಿ ಮೂಡಿ ಅಪರಿಚಿತ ವ್ಯಕ್ತಿಯ ಬಿಗಿಯಾಗಿ ಅಪ್ಪಿ ಊಟಕ್ಕೆ ಎಳೆಒಯ್ದರು.-