ನಕ್ಷತ್ರ ಜಾರಿ ಮಡಿಲಿಗೆ ಬಿತ್ತು
ಅಂದುಕೊಂಡೆ!
ಉಹೂ.... ;
ಕನಸಿನೆದೆಯ ಗೋರಿ ಮೇಲೆ
ಹುಟ್ಟಿದ್ದೆಲ್ಲ ಹೂವಾಗಬೇಕೆಂದಿಲ್ಲ!!-
ಬದುಕಿನ ಜೀವಾಳ
🖤
ಕಣ್ಣ ಕೊಳದ ದಡದಲ್ಲಿ ಸುಮ್ಮನೊಮ್ಮೆ ಬಂದು ಕೂರು
ಜೀವ ರಾಗ ಹೊಮ್ಮುವುದು ನಿನ್ನ ನೆಳಲು ಎದೆಗೆ ಬೀಳಲು!
ಹೃದಯ ತೀರದಲ್ಲಿ ಕಾರಣವಿಲ್ಲದೇ ಸುಳಿದಾಡು
ಪ್ರೇಮರಾಗ ಹೊರಡುವುದು ನಿನ್ನ ನೋಟ ಎನ್ನ ಸೋಕಲು!-
ಕಾನ ಕುಸುಮವ ಕಿತ್ತು ತಂದಾಗೆಲ್ಲ
ಅಂಗಳದ ತುದಿಯ ಬಳ್ಳಿ ಮಲ್ಲೆಯು
ಮೂಗು ಮುರಿದಿದ್ದು ಯಾಕೋ!-
ನನ್ನೆಲ್ಲಾ ಸಂಧ್ಯೆಗಳನ್ನು
ನಿನ್ನ ಹೆಸರಿಗೆ ಬರೆದಿಟ್ಟಾಗಿನಿಂದ
ಯಾರ ಕಣ್ಣಿಗೂ ಕಾಣದೇ
ಘಮಲೊಂದೇ ಉಳಿಸಿ ಹೋಗುವ
ಸಂಜೆಯರಳುವ ಹೂವಿನಂತಾಗಿದೆ
ಬದುಕು!-
ನಾಚಿಕೆ ಪದದರ್ಥ ಗೊತ್ತೇ
ಇಲ್ಲವೆಂಬಂತೆ, ಅದೆಷ್ಟೇ
ಜಿಗುಟಿದರೂ ಅರಳಿ ನಿಲ್ಲುವ
ನಾಚಿಕೆ ಮುಳ್ಳಿಗೆ
ಹೆಸರಿಟ್ಟವರಾರೋ!?
-
ಟೊಂಕಕಟ್ಟಿ ನಿಂತ ಮಳೆ ಹನಿಗಳಿಗೆ
ಮದುವೆ ಮಾಡಲಾಗದ್ದಕ್ಕೆ ಆಜೀವ
ಪರ್ಯಂತ ಚಿರಯೌವನಿಯಾಗುಳಿದ
ಕಿಟಕಿ, ಅದೆಷ್ಟೋ ಭಗ್ನ ಪ್ರೇಮಗಳಿಗೆ
ಸಾಕ್ಷಿಯಾಗಿದ್ದಕ್ಕೆ ಸಹಿ ಹಾಕಲಾಗದೇ
ಒದ್ದಾಡುತ್ತಿದೆಯಂತೆ!!-
ಕೆಲವು ಪತ್ರಗಳಿಗೆ ವಿಳಾಸಗಳಿರುವುದಿಲ್ಲ!
ಶಾಹಿ ಬರಿದಾಯಿತೆಂದು ನಿಟ್ಟುಸಿರು
ಬಿಡದೇ, ಸುಡುವ ರಾತ್ರಿಯ ತಣಿಸಲು
ಅಣಿಯಾಗಬೇಕಷ್ಟೇ!!-
ಅಂಗೈ ರೇಖೆಯ ಬಿಸುಪಲ್ಲಿ ಹೊಸೆದ
ಭವಿಷ್ಯತ್ತಿಗೆ ನೂರು ಕಾಲುಗಳು!
ಅಂಗಾಲೂರಿದ ತಕ್ಷಣ ಭವಿಷ್ಯತ್ತಿನ
ತುಂಬಾ ಹಸಿ ಬೊಕ್ಕೆಯ ಬಿರುಕು
ಪಾದಗಳು!!-
ಬಿರಡೆ ಮುಚ್ಚದ ಹುಂಬ ಭಾವಗಳ
ಶೀಷೆಯ ಶಿಕಾರಿಗೆ ಹೊರಟ
ಅರೆ ತೃಪ್ತ ಮನಕ್ಕೆ ತಂಪೀವ
ತಂಗದಿರ!
ಸುಟ್ಟು ಹಾಕಿದರೂ ಹೊಗೆ ಕಾರುವ
ಉಳಿದ ಭಾವಗಳಿಗೆ ನಿನ್ನ
ನೆಳಲಾದರೂ ಆದೀತು!-