ನಯನ ಜಿ.ಎಸ್❣️   (ನಯನ. ಜಿ. ಎಸ್)
1.1k Followers · 229 Following

read more
Joined 1 January 2020


read more
Joined 1 January 2020

ನಲಿಯುವ ಭಾವಗಳೇ ಮತ್ತ್ಮತ್ತೆ ನಲಿಯುತಿರಿ,
ನಗುವಿನ ಸೆಲೆಯಾಗಿ ಎನ್ನೆಡೆಗೆ ಆವರಿಸಿ..
ಅರಳುತಿಹ ಕನಸುಗಳೇ ನಿತ್ಯ ಬಿರಿಯುತಿರಿ,
ಕ್ಷಣ ಕ್ಷಣದ ನವ್ಯ ಕನಸುಗಳಿಗೆ ಸಹಕರಿಸಿ.

ನಗುವ ಕಂಡವರೂ ಸುರಿಸಿಹರು ಕಂಬನಿಯನು,
ಸೋಲುಗಳ ಉಣ್ಣದೇ ಗೆಲುವ ಕಂಡವರು ಇಲ್ಲ..
ನಿಯತಿ ನೀಡುವುದು ಎಲ್ಲರಿಗೂ ಪರಿಪಕ್ವ ಸಮಯವನು,
ಕಾಲಚಕ್ರದ ಸಾರವನು ತಿಳಿಯಲು ಸುಖವೇ ಎಲ್ಲ.

ಹಾರೈಕೆಯು ಮೇಳವಿಸಲು ಬಾಳ್ವೆಯ ಧುರಕೆ ವಿಜಯ,
ಚಿಂತೆ ನೂರಾದರೂ ಮೂಡಲಿ ಚಿಂತನೆಗಳು ಸಾಸಿರ..
ಕ್ಲೇಶಗಳ ಮರೆತು ಮುನ್ನಡೆಯಲು ನೂತನವು ಪ್ರತಿ ಸಮಯ,
ಬಿದ್ದಲ್ಲೇ ಮೇಲೇಳುವುದ ತಿಳಿಸುತಿದೆ ಅನುಭಾವಗಳ ಸಾರ.

ಗತಿಸಿದ ಪಥಗಳಲಿ ಸಂಕಷ್ಟಗಳು ಹಲವುಂಟು,
ದಿಟ್ಟತನದಿ ಸಾಗುವೆ ನೋವುಗಳ ಮೂಟೆ ಕಟ್ಟಿ..
ಬಾಳ್ವೆಯ ಚಲನೆಯಲಿ ಭರವಸೆಯು ಎನಗುಂಟು,
ಸಾಗುವೆನು ಕ್ಷಣ ಕ್ಷಣವೂ ಸಾಸಿರ ಕಷ್ಟಗಳ ದಿಟದಿ ಮೆಟ್ಟಿ.
- ನಯನ ಜಿ. ಎಸ್


-



ನಡೆ ಮತ್ತು ನುಡಿ ವ್ಯಕ್ತಿಯ ಅಂತಸ್ತನ್ನು ನಿರ್ಧರಿಸುತ್ತದೆ.
ಯೋಚಿಸಿ ಅಭಿವ್ಯಕ್ತಿ ಪಡಿಸುವ ಮಾತು ಮತ್ತು ಅದರಿಂದ ಯೋಜಿಸಲ್ಪಡುವ ನಡೆ ಅಂತಸ್ತಿನ ಪಲ್ಲಟಗಳಿಗೆ ಕಾರಣವಾಗುತ್ತದೆ.
*****
ಪಡೆಯುವಿಕೆ ಮತ್ತು ಕಳೆದುಕೊಳ್ಳುವಿಕೆ ಎರಡೂ ನಮ್ಮನ್ನೇ ಅವಲಂಬಿಸಿರುತ್ತದೆ. ಜಾಣ್ಮೆಯ ಆಯ್ಕೆ ನಮ್ಮ ಕೈಯಲ್ಲಿರುತ್ತದೆ.

-



"ಕೃಷ್ಣಾ......"
( ಭಾವ ಲಹರಿಗೆ ಹೀಗೊಂದು ಬರಹ )

ಪೂರ್ಣ ಬರಹ ಅಡಿಬರಹದಲ್ಲಿ
👇👇👇👇👇

- ನಯನ. ಜಿ. ಎಸ್

-



* ಗಝಲ್ *
*********
ಕನಸು ಕಂದಿ ಮಾಗಿರಲು ಮಂಕಾಗದಿರು ಬೆಳೆಯಲಿ ನಿರೀಕ್ಷೆಗಳೆತ್ತರೆತ್ತರ
ಮೇಘ ನಾದ ಮಾರ್ದನಿಸಿ ವೃಷ್ಟಿಸುತಿರಲು ಜಲಧಾರೆ ಬಿರುನೆಲಕ್ಕಿಲ್ಲ ತತ್ತರ

ಕ್ಷಣಿಕ ಶೃಂಗಾರದಿ ಏನಿಹುದು ಸಾರ ಚೆಲ್ವ ಇಂದ್ರಚಾಪಕ್ಕಿಲ್ಲ ಅಧಿಕ ಅಸುವು
ಬೆವರ ಪನಿಗೆ ಬೇಧವಿಲ್ಲ ಕಂದಳಿಸಿದ ಜಯದಲೇ ಇಹುದು ಸೋಲಿಗುತ್ತರ

ವಿಧಿಯ ಲೀಲೆ ಎಲ್ಲ ಮಾಯೆ ಇಹದ ಇರುವಿಕೆಗಿಲ್ಲ ಭದ್ರ ಆಸರೆಯು ಮರುಳೆ
ಕ್ಷಣ ಕ್ಷಣದಿ ಸವೆದ ಪಥಕಷ್ಟೇ ಅಸ್ಮಿತೆಯ ತಲಬು ಬಾಳ ಸತ್ವವೊಂದೇ ನಶ್ವರ

ಬಿಗಿದ ಬಂಧುತ್ವ ನೂರಿದ್ದರೇನು ನೇಪಥ್ಯಕೆ ಸರಿಯುವುದು ಜಗದ ನಿಯತಿ
ದಿಟ್ಟ ದಿಟ್ಟಿಗೆ ಸೇರಲು ಕೆಚ್ಚು ವಿಜಯ ಭೇರಿಯಲಿ ನಿಶ್ಚಿತವು ಪತನಕೆ ಮತ್ಸರ

ನಯನಗಳ ಚೈತನ್ಯವ ಚಿವುಟದಿರು ನೀರಸ ನಿಮಿಷಗಳಿಗೆ ಹೃನ್ಮನವ ನೆಚ್ಚಿ
ನಗುವ ಕಡಲಲಿ ಮಜ್ಜಿಸಲಿ ಅಂತರಾತ್ಮ ಮಾಡುತ ನವಭಾಷ್ಯಗಳಿಗೆ ಚಿತ್ತಾರ.
- ನಯನ. ಜಿ‌. ಎಸ್

-



'ಕ್ಷಿತಿಯಂತೆ ಪ್ರೇಮ..'
****************
ಹಸಿರಿನ ವಿಸ್ಮಯಕೆ ಮನ ತುಂಬಿ ನಾ ನಗುವಾಗ
ಕನಸುಗಳ ಪೋಣಿಸಲು ನೀನಿರಬೇಕಿತ್ತು ಇಲ್ಲಿ !
ಭಾವಗಳ ಸಂಗಡದಿ ಭಾವುಕತೆ ಮೈತಳೆದಾಗ
ಅಳಿಸಬೇಕಿತ್ತು ಕಣ್ಪನಿಗಳನು ಮಧುರತೆಯ ಚೆಲ್ಲಿ.

ತರಲೆಲ್ಲಿಂದ ಪದಗಳನು ನಿನ್ನಿರವ ವೈಭವಿಸಲು
ಸವಿಸಿದ ಅಕ್ಕಜವದು ಚಿರಕಾಲಕೆ ಚಂದ !
ಅಶಕ್ತಳು ನಾನಿಲ್ಲಿ ಚೆಲ್ವ ಪ್ರೀತಿಯನು ಆಖ್ಯಾನಿಸಲು
ನೊಂದ ನೆನಹುಗಳಲಿ ಮರುಕಳಿಸಲು ಸಮ್ಮೋದ.

ಮೌನದ ಮುಳುವಿಗೆ ಅವಧರಿಸುತ್ತಿಲ್ಲ ಭಾವ ತುಡಿತ
ಕನವರಿಸಲು ಮರೀಚಿಕೆಯಾದೆ ಏಕೆ ನಿತ್ಯೋಲ್ಲಾಸ ?
ಬಾಳ್ವೆಯ ಧುರದಲ್ಲಿ ಅನಾಥವಾಗುತ್ತಿದೆ ಹೃನ್ಮಿಡಿತ
ಬದುಕಿನ ಪಥದಿ ನಿಸ್ಸಾರಗೊಳ್ಳುತಲಿದೆ ಮಂದಹಾಸ.
- ನಯನ. ಜಿ. ಎಸ್



-



ಹಿತವಾಗಿ ಬೀಸುವ ತಂಬೆಲರೂ ಒಮ್ಮೊಮ್ಮೆ ಕನಲಿ ಬಿಡುತ್ತದೆ,
ಥೇಟ್ ನಮ್ಮದೇ ಮನಸ್ಸಿನಂತೆ !
*****
ಸೊಬಗನ್ನು ಚಿತ್ರಿಸಿದ ಕುಂಚಕ್ಕೂ
ಒಮ್ಮೊಮ್ಮೆ ಬಣ್ಣ ಕದಡಿ ಬಿಡುವ ಕರ್ಮ ತಪ್ಪಿದ್ದಲ್ಲ.
ವಿಧಿಪರೀಕ್ಷೆಗೆ ಎಲ್ಲರೂ ವಿದ್ಯಾರ್ಥಿಗಳಷ್ಟೇ !
*****
- ನಯನ. ಜಿ. ಎಸ್.

-



ಮಳೆ ಸುರಿಯುತ್ತಲೇ ಇದೆ,
ಎದೆಯಾಳದಲ್ಲಿ ಚಿಗುರಿದ
ಪ್ರೀತಿಯನು ನಲಿಸಿದ
ಥೇಟ್ ನಿನ್ನಂತೆಯೇ !
*****
ಹೂವು ಬಿರಿದು ನಿಂತಿದೆ,
ನನಸಾದ ಕನಸುಗಳಿಗೆ
ಸಾರ್ಥಕತೆಯ ತುಂಬಿದ
ಗೆಲುವಿನ ಬಲ್ಮೆಯಂತೆಯೇ !
*****
ನೆಲದ ಮಣ್ಣು ತನುಗಂಧದಿ ತುಂಬಿದೆ,
ಅರುಣೋದಯದಿ ಪಸರಿದ
ರವಿ ಕಾಂತಿಯನು ಹೀರಿ
ತುಂಬಿ ನಿಂತ ಭರವಸೆಯಂತೆಯೇ !
*****
- ನಯನ. ಜಿ. ಎಸ್.

-



ಮತ್ತೆ ಮತ್ತೆ ಬಂದಿತೀಗ
ನವ ಸಂವತ್ಸರ ಸಂಭ್ರಮ |
ಖುಷಿಯ ರಾಶಿ ನಲಿಯಿತೀಗ
ಬೆಳಗಿ ನಗುವಿನ ಸುಮ |

ಅರಿವು ಮಾಗಿ ಚೆಲುವಲಿ ಕಲೆತು
ಸೃಷ್ಟಿಸಿತು ನವತನ |
ಜಗದ ಸಾರ ಮನದಿ ಮಿಳಿತು
ಹೃದಯವಾಯಿತು ಹೂಬನ ||

ಬೇವು ಬೆಲ್ಲ ಜೊತೆಗೆ ಸೇರಿ
ತಿಳಿಸುತಲಿದೆ ಭವ್ಯ ಪಾಠವ |
ಹಸಿರು ಚಿಗುರು ಸೊಬಗ ಹೀರಿ
ಪಸರಿಸಿತು ಅಮಿತ ನಲಿವ ||

ದಿನದ ಅಂದಕೆ ಮನವ ಕುಣಿಸಿ
ಸಗ್ಗವಾಗುತಿದೆ ನಾಳೆಗಳ ಕ್ಷಣ ಕ್ಷಣ |
ವಿಜಯ ರಿಂಗಣವ ನಿತ್ಯ ಝೇಂಕರಿಸಿ
ನಯನಗಳ ನಗಿಸುತಿದೆ ದಿನ ದಿನ ||
- ನಯನ‌. ಜಿ. ಎಸ್




-



💦💦 ಗಝಲ್ 💦💦
***************
ವಸುಂಧರೆಯ ಗರ್ಭದಲಿ ಜೀವ ಚಿಗುರುಗಳ ಸೃಜಿಸುತ ಮತ್ತೆ ಮಳೆಯಾಗಿದೆ
ಹೃದಯದ ಉದ್ಯಾನದಲಿ ಭಾವನೆಗಳನು ಹೊಸೆಯುತ ಮತ್ತೆ ಮಳೆಯಾಗಿದೆ

ನವ್ಯತೆಯ ಕಲೆ ಲಾಸ್ಯವಾಡುತಲಿ ಬರೆಯುತಿದೆ ಮುನ್ನುಡಿಯನು ಸಂಪನ್ನತೆಗೆ
ಸಮೃದ್ಧತೆಯ ಮುಕುಟಕೆ ಭವ್ಯ ಹೊಳಪನು ಸೇಚಿಸುತ ಮತ್ತೆ ಮಳೆಯಾಗಿದೆ

ಹಸಿರು ಪರ್ಣಗಳನು ಕುಣಿಸುತ ನಡು ನಡುವೆ ಇಣುಕುತಲಿದೆ ವಿಸ್ಮಯದ ಸೆಲೆ
ತಂಬೆಲರ ತಂಪಿಗೆ ಕೆಮ್ಮಣ್ಣಿನ ಸೌಗಂಧವನು ಮೇಳೈಸುತ ಮತ್ತೆ ಮಳೆಯಾಗಿದೆ

ಉದಯಾದ್ರಿಯ ಅಂಶುವಿನಲಿ ರಾರಾಜಿಸಲು ಗೆಜ್ಜೆ ಕಟ್ಟುತಲಿವೆ ಜೀವಸಂಕುಲ
ರಜನಿಯ ಮಡಿಲ ಜೀವಾಂಶುಗಳಿಗೆ ಲಾಲಿಯನು ಹಾಡುತ ಮತ್ತೆ ಮಳೆಯಾಗಿದೆ

ಸೃಷ್ಟಿಯ ಚಮತ್ಕೃತಿಗೆ ಶರಣಾದ ನಯನಗಳಲಿ ಬೆಳಗಿದೆ ಭರವಸೆಯ ಬೆಳಕು
ಮನಕುಸುಮಕೆ ವಿಜಯೋಲ್ಲಾಸವನು ಪ್ರಿಯವಾಗಿಸುತ ಮತ್ತೆ ಮಳೆಯಾಗಿದೆ.
- ನಯನ. ಜಿ. ಎಸ್

-



ನಿಸರ್ಗ ಕಲಿಯುವಿಕೆಯ ಹಕ್ಕಿಗೆ ಬದ್ಧವಾಗಿರುತ್ತದೆಯೇ ಹೊರತು
ಉತ್ಕಟ ಬಯಕೆಗಳ ಸ್ವಾತಂತ್ರ್ಯಕ್ಕಲ್ಲ !
*****
ಗುರುವಾಗಿ ನಿಲ್ಲುವ ನಿಸರ್ಗ, ಗರ್ವಿಷ್ಠ ಹೆಜ್ಜೆ ಗುರುತುಗಳನ್ನು ಮಾಸಿಸುವುದರಲ್ಲೂ ಪಳಗಿರುತ್ತದೆ.
*****
- ನಯನ. ಜಿ. ಎಸ್

-


Fetching ನಯನ ಜಿ.ಎಸ್❣️ Quotes