ಕಾದು ಕುಳಿತಿರುವೆ,
ನಾ ಬಾಡುವ ಮುನ್ನ....
ಚೆಲುವೆಯ ಮುಡಿಯ ಸೇರಬೇಕೆಂದು.
ಇಬ್ಬನಿಯ ಪನ್ನೀರ ಹೊದ್ದು ಕಾದಿರುವೆ.
ಹೊಂಗನಸ ಹೊತ್ತು ನಾ ಕಾದಿರುವೆ.
ನನ್ನ ಕನಸ ನನಸಾಗಿಸುವ ಚೆಲುವೆ ಎಲ್ಲಿಹಳೋ..?
ನಾನರಿಯೆ......
-
ತಾವರೆಯ ಮೊಗದವಳೆ,
ಹಸಿರೆಲೆಯ ಉಟ್ಟವಳೆ,
ತೊಡರು ಬಳ್ಳಿಯ ತೊಟ್ಟವಳೆ,
ನಗುವಿನ ದಳವ ಎಸೆದವಳೆ,
ಸಿಂಗಾರ ಸಿರಿಯಂತೆ
ಮಿಂಚುವವಳೆ,
ಯಾರೇ ನೀ ಚೆಲುವೆ...?
ಈ ಹಸಿರು ವನದಲಿ
ಯಾರಿಗಾಗಿ ಕಾದಿರುವೆ..?-
ತಾವರೆಯ ಹೂವ ಹಿಡಿದು
ಯಾರಿಗಾಗಿ ಕಾದಿರುವೆ..?
ತನು ಮನದಲ್ಲೆಲ್ಲಾ
ಯಾರನ್ನು ತುಂಬಿಕೊಂಡಿರುವೆ..?
ತಾವರೆಯಂತೆ ಕೋಮಲೆಯು ನೀ...
ತಾವರೆಯು ತೇಲಿ ಸರೋವರವ ಸೇರುವಂತೆ...
ನೀ ಯಾರ ಮಡಿಲ ಸೇರುವೆಯೋ..?
-
ಮುತ್ತಿನ ಮಲ್ಲಿಗೆ
ಮಲ್ಲಿಗೆ ಮುಡಿಸುವಾಗ,
ತಲೆಬಾಗಿ ಕೂತಿದ್ದೆ.
ಮುಂಗುರಳ ಸರಿಸಿ,
ಮುಗುಳ್ನಗೆಯ ಬೀರಿದ್ದೆ.
ಕೆನ್ನೆಯ ಮೇಲೆ ಬೆರಳಿಟ್ಟು
ಮುತ್ತೊಂದ ಬೇಡಿದ್ದೆ.
ನಾನಿತ್ತ ಮುತ್ತಿಗೆ,
ನೀ ನಾಚಿ ಕೆಂಪಾಗಿದ್ದೆ.
ನಿನ್ನ ಕೆಂಪಿಗೆ ನಾ ಮರುಳಾಗಿ
ಮನಸೋತು ಕೇಳಿದ್ದೆ,
ಮುತ್ತು ಸಾಕಾ...?
ಬಿಗಿಯಪ್ಪುಗೆಯು ಬೇಕಾ...?
-
ಕೆಂಗುಲಾಬಿಯು ಕಾಯುತಿದೆ
ಇಬ್ಬನಿಯ ಪನ್ನೀರ ಮುಡಿದು.
ಯಾವ ಚೆಲುವ, ಯಾವ ಚೆಲುವೆಗೆ ನೀಡುವನೋ,
ಯಾವ ಚೆಲುವೆ ಮುಡಿದು ಒಪ್ಪುವಳೋ ಪ್ರೀತಿಯ?
-
💞 ಪ್ರೀತಿಯ ಭಾವ 💞
ಎದೆ ಬಡಿದು ಕೊಳ್ಳುತ್ತಿತ್ತು,
ಎನ್ನ ಭಾವನೆಯ ಸಾಲುಗಳನು ಓದುವಾಗ.
ಹೃದಯ ಹಗುರವಾಗುತ್ತಿತ್ತು,
ಎನ್ನ ಪತ್ರದ ಸಾಲುಗಳನು ಓದಿ ಮುಗಿಸುವಾಗ.
ಎನ್ನ ಮನ ಕಣಿದಾಡಿತು,
ನೀ ಕುಡಿನೋಟ ಬೀರಿ,
ಮುಗುಳ್ನಗು ತೋರಿದಾಗ.
ಗೆಲುವಾಯಿತು ನನ್ನ ಪ್ರೀತಿಗೆಂದೆ.
ಆದರೂ,
ನಾ ಸೋತಿದ್ದೆ.
ಪ್ರೀತಿಯಿಂದ ಆಹ್ವಾನಿಸುವೆ,
ಜೊತೆ ಜೊತೆಯಾಗಿರೋಣ ಬಾ ಸದಾ,
ನಗು ನಗುತ ಸಾಗೋಣ ಬಾ ಸದಾ.
-
ನಿನ್ನ ಕಾಲ್ಗಜ್ಜೆ ನಾದಕೆ,
ಕಾದಿದೆ ಎನ್ನ ಮನ.
ನಿನ್ನ ಮಿಂಚಿನ ಕಣ್ಣೋಟಕೆ,
ಹಂಬಲಿಸಿದೆ ಎನ್ನತನ.
ನಿನ್ನ ಪಿಸು ಮಾತು ಕೇಳಲು
ಕಾದು ಕುಳಿತಿದೆ ಹೃನ್ಮನ.
ಪಿಸುಗುಡೊಮ್ಮೆ, ಕಾಲ್ಗೆಜ್ಜೆಯ ನುಡಿಸೊಮ್ಮೆ,
ಮಿಂಚಿನ ಕಣ್ಣೋಟವ ಬೀರೊಮ್ಮೆ,
ಪ್ರೀತಿಯ ಮೈದಾನದಲಿ
ಕಾದಿರುವೆ ನಿನಗಾಗಿ,
ನಿನ್ನ ಪ್ರೀತಿ ಗಾಗಿ,
ಒಲವಿನ ಪ್ರೀತಿಯ
ಅಭಿಷೇಕ ಮಾಡಲು
ನಾ ಹಾತೊರೆಯುತಿರುವೆ.
-
ನಾನೊಬ್ಬನಿದ್ದಾಗ ಇತ್ತೊಂದು ಆಸೆ,
ನೀ ಜೊತೆಯಾದಾಗ ಸೇರಿದವು ನೂರೊಂದು ಆಸೆ.
ನಾವಿಬ್ಬರೂ ಸೇರಿ ಸಾಗಿದರೆ,
ಈಡೇರುವುವು ಒಂದೊಂದೇ ಆಸೆ.
ಆಸೆಯ ಗುರಿಗಳನು ಸಾಧಿಸುವೆವೋ ಇಲ್ಲವೋ,
ನಾನರಿಯೇ.
ಆಸೆಗಳು ಈಡೇರಲಿ ಈಡೆರದಿರಲಿ,
ನಾ - ನೀ ಸದಾ ಜೊತೆಯಾಗಿರುವುದೊಂದೆ ನನ್ನಾಸೆ.
-
ಪ್ರೇಮವು ಗೆದ್ದಾಗ,
ಪ್ರೀತಿಯ ಮುಂಗಾರು ಮಳೆಯಲಿ ನೀ ಕುಣಿದಾಡಿದೆ,
ಪ್ರೇಮವು ಸೋತಾಗ,
ಕಣ್ಣೀರಿನ ಹೊಳೆಯಲಿ ನಾ ತೊಯ್ದು ಹೋದೆ.
-
ಮನ ಭಾವ ಶುದ್ಧ.
ಭಾವಾಂತರಂಗ ಶುದ್ಧ.
ಹೃದಯಾಂತರಂಗ ಶುದ್ಧ.
ಅಂತಃ ಕರಣ ಶುದ್ಧ.
ನಡೆ ನುಡಿ ಶುದ್ಧ.
ಭವ ಬಾಂಧವ್ಯ ಶುದ್ಧ.
ಸಹ ಸಂಬಂಧ ಶುದ್ಧ.
ಸರ್ವಾಂತರಂಗವೂ ಶುದ್ಧ.-