#ನರಸಿಂಹಪ್ರಸಾದ್  
78 Followers · 13 Following

Joined 30 January 2019


Joined 30 January 2019

ಮನೆಮನೆಗೆ ಬರಲಿ ತೆನೆತೆನೆಯ ರಾಶಿ
ಹಸುರೆಲ್ಲ ಫಲಿಸಲಿ ಭೂಮಿಯನು ಹಾಸಿ

ಬೆಳೆ ಬೆಳೆಯೆ ಬೇಕಿಹುದು ಹದವಾದ ಮಣ್ಣು
ಎತ್ತುಗಳ ಶ್ರಮದ ಪ್ರೀತಿಯೊಲುಮೆಯ ಕಣ್ಣು
ಅನ್ನದಾತನು ಉಳುವ ಪ್ರತಿಯೊಂದು ಬಾರಿ
ನೇಗಿಲದು ಬಿತ್ತಿಹುದು ಅನ್ನದಾ ದಾರಿ

ಅನ್ನದಾತನ ಬೆವರ ಒಂದೊಂದು ಹನಿಯು
ಕೂಡಿಹುದು ತೆನೆಯಲಿ ಒಂದಾಗಿ ಬೆರೆತು
ಭೂಮಿತಾಯಿಯ ಸಾರ ಒಳಗಿಂದ ಹೀರಿ
ಏರಿಹುದು ಪ್ರೀತಿಯಲಿ ಕಾಳುಗಳ ಸೇರಿ

ನೀರು ಮಣ್ಣಿನ ಸಾರ ಬೆಳಕೆಲ್ಲ ಕೊಂಡು
ಬೆಳೆ ಬೆಳೆದು ನಿಂತಿಹುದು ಸಿಂಗಾರಗೊಂಡು
ತಾನು ಮಾಡಿದ ರಾಶಿ ತನಗಾಗಿ ಅಲ್ಲ
ಭೂತಾಯಿ ನಗುತಿಹಳು ಮಕ್ಕಳನು ಕಂಡು

-



ತೋರುವೆಯೋ ದೈವವ ?
ತೊರೆಯುವೆಯೋ ದೈವವ ?
ನಿನಗೆ ಮಾತ್ರವೇ ಆಯ್ಕೆ ಬಂಧನವು ಇಲ್ಲ !

ತೋರಿಕೆಗೆ ಮಾತ್ರವೇ ದೈವ ತಾನೆಂದರೆ
ರುದ್ರನಾಗುವನೊಳಗೆ ಕೇಳುವವನಲ್ಲ !
ತೋರಿಕೆಗೊ ಹಾರಿಕೆಗೊ ಬರಿಯ ಜಾರಿಕೆಗೊ
ಸುಮ್ಮನೆ ಕೂಗಿದರೆ ಕೈಗೆ ಸಿಗುವವನಲ್ಲ !

ನೀನು ಬೇಕೆಂದಾಗ ದೈವ ಸಿಗದಿರಬಹುದು
ದೈವ ನಿನ್ನನು ಬಯಸೆ ಆಯ್ಕೆ ಇರದಿರಬಹುದು
ನಿನ್ನಲ್ಲಿ ನೀನಾಗೆ ನಿನ್ನ ಒಳಬರುವವನು
ನಿನದೆಲ್ಲ ತೊರೆದರೆ ಅವನೆ ನೀನಾಗುವನು

ದೈವದೊಡಮೂಡುವಿಕೆ ಅವನಾಸೆಯಂತೆ
ದೈವದ ನಲಿಯುವಿಕೆ ಅದುವೆ ಮಗುವಂತೆ
ಶುದ್ಧಿಯಾಗುವವರೆಗೆ ಮನಸಿನ ಮೆರೆದಾಟ
ಶುದ್ಧವಾದೊಡನೆಯೇ ದೈವದ ಆಟ

-



ಮನಸೇ ನಮ್ಮಯ ಕೇಲಸದ ಪರಿಕರ
ಮನಸೇ ನಮ್ಮಯ ಆಯುಧವು
ಮನಸನು ಜತನದಿ ಬಳಸದೆ ಇದ್ದರೆ
ಮನಸೇ ಸೋಲನು ನೀಡುವುದು

ಒದಗುತ ಬರುವವಕಾಶವ ಕಷ್ಟವು
ಎನ್ನುತ ಚಿಂತೆಗೆ ಮುಳುಗಿದರೆ
ಮನಸಿಗೆ ಸೂಕ್ತ ಮಾರ್ಗವು ದೊರೆಯದೆ
ಹಲವು ದಿಕ್ಕಿನಲಿ ಓಡುವುದು

ಕೈಯಲಿ ಇರುವ ಕೆಲಸಕೆ ಮನಸನು
ಧ್ಯಾನದ ತೆರದಲಿ ಹರಿಸಿದರೆ
ಬೇಕಾದಂತಹ ಬಗೆಬಗೆ ಆಯುಧ
ತನ್ನಂತಾನೆ ತೋರುವುದು

ಕೆಲಸವ ನಿತ್ಯವೂ ಕೊಡದೇ ಹೋದರೆ
ಆಯುಧ ತುಕ್ಕು ಹಿಡಿಯುವುದು
ಮನಸನು ನಿತ್ಯವೂ ದುಡಿಸದೆ ಹೋದರೆ
ಆಲಸ್ಯವನೇ ಮೈತಳೆಯುವುದು

ಬಳಸುವ ಆಯುಧ ಸಿದ್ಧಿಗೆ ಮನ‌ಸನು
ರೂಢಿಸಿಕೊಳ್ಳಲೆ ಬೇಕಿಹುದು
ನನಗೇ ತಿಳಿದಿದೆ ಎನ್ನುವ ಹಠದಲಿ
ಮನವು ತಪ್ಪನೇ ಮಾಡುವುದು !

-



ನಂಬಿಕೆಯೇ ನಮ್ಮ ಹೃದಯ
ಬಿಡುವೇ ಅರಿಯದ ಗೆಳೆಯ

ಕಷ್ಟದಲೂ ಸುಖದಲ್ಲೂ
ನೋವಲ್ಲೂ ನಗುವಲ್ಲೂ
ಪ್ರತಿಕ್ಷಣವೂ ಮಿಡಿಯುವನು
ಮರೆತಿರನು ದುಡಿವುದನು

ಎಲ್ಲ ಭಾವನೆಗಳಿಗೂ
ಸ್ಪಂದಿಸುವ ನಮ್ಮವನು
ಪ್ರೀತಿ ಹಂಚಲು ಮಾತ್ರ
ನಗುತಲಿ ಹಾತೊರೆವವನು

ಜೀವದ ಗೆಳೆಯನಿವ
ದಣಿಸದಿರಿ ಇವನನ್ನು
ದುಶ್ಚಟಗಳಾದರಿಸಿ
ಕಡೆಗಣಿಸದಿರಿ ಎಂದೂ

ಏನೇ ಬರಲಿ ಬರದಿರಲಿ
ಜೊತೆಗಿರುವವನಿವನೆ
ತನಗೆ ಏನನು ಇಡದೆ
ಕೊಡುತ ಮಡಿವವನಿವನೆ

-



ಒಡೆದ ಕೊಳಲನೂದಲಾರೆ
ಒಡೆದ ಮನವ ಕೂಡಲಾರೆ
ಹಳೆಯ ಘಾಸಿಯನ್ನು.ಮರೆತು
ಮತ್ತೆ ಹೊಸತು ಯೋಚಿಸಲಾರೆ

ನಡೆಯೆ ಎಡವಿ ಬೀಳಲಾರೆ
ಬಿದ್ದು ಮತ್ತೆ ಏಳಲಾರೆ
ಬಿದ್ದರೇನು ಕೊಡವಿ ಎದ್ದು
ಹೊಸತು ದಾರಿ ಹುಡುಕಲಾರೆ

ಎಲ್ಲ ಇದ್ದು ಏನೂ ಇರದ
ಹಸಿವನೆಂದು ನೀಗಲಾರೆ
ಇರುವ ಸುಖದಿ ತೃಪ್ತಿ ಪಡುವ
ಕನಸನೊಂದ ಕಾಣಲಾರೆ

ಇಲ್ಲೆ ಇದ್ದು ಜಯಿಸಲಾರೆ
ಅಲ್ಲಿ ಹೋಗಿ ಬಾಳಲಾರೆ
ಜಗವ ಜಯಿಸಿ ಮನವ ತಣಿಸೊ
ರೀತಿಯನ್ನು ಅರಿಯಲಾರೆ

ಪ್ರೀತಿಯನ್ನು ಹಂಚಲಾರೆ
ಮಮತೆಯನ್ನು ಪಡೆಯಲಾರೆ
ನಗುವುದಕ್ಕೂ ನಗಿಸುವುದಕ್ಕೂ
ಸಮಯವನ್ನು ಕಳೆಯಲಾರೆ

-



ಕರ್ತವ್ಯ ಪಥದಲ್ಲಿ ನೀ ಸಾಗು ಮುಂದೆ
ದೇಶಸೇವೆಯ ಗುರಿಯು ಇರಲೆಮ್ಮ ಹಿಂದೆ
ಬರಲಿ ನೂರಾರು ಕಷ್ಟಗಳ ಸರಮಾಲೆ
ಮೆಟ್ಟಿ ನಿಂತರೆ ನಿನಗೆ ವಿಜಯದ ಹೂಮಾಲೆ

ಅಣಕುವರು ಕೆಣಕುವರು ಬೀಳಿಸಲು ನೋಡುವರು
ಕೈಯ ತೋರಿಸಿ ನಗುತ ಅವಮಾನ ಮಾಡುವರು
ನಿನ್ನ ಕಾಲೆಳೆವವರು ಎಂದಿಗೂ ಕೆಳಗಿಹರು
ಲಕ್ಷ್ಯಗೊಡದೆ ಎದ್ದು ನೀ ಗೆದ್ದು ಸಾಗುತಿರು

ಏರುತಲಿ ಹೋದಂತೆ ಮಂಜಿನ ಪರ್ವತವ
ಜಾರಬಹುದು ಮತ್ತೆ ನೂರಾರು ಸಾರಿ
ಆತ್ಮಶಕ್ತಿಯ ಬಲವ ತೋರಿ ನೀ ಪ್ರತಿಬಾರಿ
ಮುಟ್ಟು ಗುರಿಯನು ಸೇರಿ ಗೆಲುವಿನ ದಾರಿ

ನಿತ್ಯ ಸಂಕಷ್ಟಕ್ಕೆ ಜೋತು ಬೀಳದೆ ಸೋತು
ಭಾವಿಸು ನಿನ್ನಂತೆ ಪರರನ್ನು ಕಲೆತು
ಹಿರಿದಾದ ಲಕ್ಷ್ಯವನು ನೀನೊಂದು ಹೊತ್ತು
ಸಾಗಿದರೆ ತಿಳಿವುದು ಜೀವನದ ಗಮ್ಮತ್ತು !

-



ಓ ನನ್ನ ಮನವೇ ನೀನು
ನಿರ್ವಾಹಕನಂತಿದ್ದುಬಿಡು
ಏನೇ ಆಗಲಿ ಸಾಗುತಲಿರುವ
ನಿರ್ವಾಹಕನಂತಿದ್ದುಬಿಡು

ನಾನಾ ದಿನವೂ ನಾನಾ ಜನರ
ಜೊತೆಗೇ ನಡೆವ ಪಯಣದ ಹಾದಿ
ಜೊತೆಗಿಹ ಕ್ಷಣದಲಿ ಖುಷಿಯೋ ಮುನಿಸೋ
ಎಲ್ಲವೂ ಕಲಿಕೆಯೆ ಬಂಧನವಿಲ್ಲ !

ಸಾಗಿದರೂ ನೂರಾರು ಮೈಲಿ
ಕಾಯಕ ಮಾಡಲು ಮಾತ್ರವೆ ಪಯಣ
ಚಳಿಯೋ ಮಳೆಯೋ ಸುಡುವ ಬಿಸಿಲೊ
ಗಮ್ಯವ ಸೇರುವುದೊಂದೇ ಗಮನ !

ಪಯಣಿಸಿದ ಗಾಡಿ ತನದಲ್ಲ
ಗಳಿಸಿದಂತ ಹಣವೂ ತನದಲ್ಲ
ಎಲ್ಲವನ್ನೂ ಮೇಲಧಿಕಾರಿಗೆ
ಒಪ್ಪಿಸಿ ಹೋಗುವುದಷ್ಟೆ...ಜೀವನ !

-



ನಾನೇ ಮಾಡುವವನೆನ್ನುವುದಾದರೆ
ನೀ ಕೊಡುವುದೇನೆಂದ... ಪಾರ್ಥ
ನಿನ್ನ ಕೈಯಲಿ ಇಲ್ಲದುದನು
ನಾ ಮಾಡುವೆನೆಂದ.... ಕೃಷ್ಣ

ಕರ್ಮವ ಮಾಡಲು ಮಾತ್ರವೆ ನಮಗೆ
ಇರುವುದು ಅಧಿಕಾರ
ಕರ್ಮಫಲದ ಕೊಡುವಿಕೆಯಲಿ
ಭಗವಂತನ ವ್ಯವಹಾರ
ಕರ್ಮಕೆ ತಕ್ಕ ಫಲವೇ ಬೇಕು
ಎನುವುದು ಮೂಢ ವಿಚಾರ
ಕರ್ಮಫಲಕಿದೆ ಹಿಂದಿನ ಕರ್ಮದ
ನಿಗೂಢ ಲೆಕ್ಕಾಚಾರ

ಎಷ್ಟೇ ಸಮರ್ಥನಾದರೂ ಪಾರ್ಥಗೆ
ಗುರಿಯು ಕಾಣಲೇಬೇಕು
ನೀರುಗನ್ನಡಿಯು ಅಲುಗದೆ ಇರಲು
ಕೃಷ್ಣ ಕಾಯಲೇಬೇಕು
ಮತ್ಸ್ಯಯಂತ್ರವ ಭೇದಿಸೊ
ಸಮಯದಿ ಪಾರ್ಥನೆಂದನಿಂತು
ನಗುತಲಿ ಕೃಷ್ಣನು ಗೀತೆಯ
ನುಡಿಯ ತಿಳಿಸಿದನು ಇಂತು

-



ಈ ಜಗವೇನೋ ಹೇಳಿತು ಎಂದು
ನೆರಳಿನ ಹುಲಿಗೆ ಹೆದರುವೆಯಾ?
ನಿನ್ನಲೆ ನೀನು ಇರಲಾಗದೆಲೆ
ಮರಳುಗಾಡಿನಲಿ ಅಲೆಯುವೆಯಾ?

ಇಲ್ಲದ ಸಲ್ಲದ ನಿಲ್ಲದ ಕಾಳಗ
ಮನದಲಿ ದಿನವೂ ನಡೆಸುವೆಯಾ?
ತಳವೇ ಇರದ ಯೋಚನೆ ಬಾವಿಗೆ
ಕಂಡೂಕಾಣದೆ ಬೀಳುವೆಯಾ?

ಕಾಣುತಲಿರುವ ಹಗ್ಗವ ಕಂಡೂ
ಹಾವನು ಊಹಿಸಿ ನಡುಗುವೆಯಾ?
ಹಿರಿಹಿರಿ ಹಿಗ್ಗುತ ಮಾಯೆಯ ಬಲೆಗೆ
ಈಜುತ ನೀನೆ ಸಿಲುಕುವೆಯಾ?

ಇಲ್ಲವೇ ಇಲ್ಲದ ಮೋಹ ಖಾಯಿಲೆಗೆ
ಚಪಲದ ಮದ್ದನು ನುಂಗುವೆಯಾ?
ಕಣ್ಮುಂದಿರುವ ಈ ಕ್ಷಣ ತೊರೆದು
ಭೂತಭವಿತದಲಿ ನರಳುವೆಯಾ?

-



ಹೇಗೆ ಆಯ್ತು ಏಕೆ ಆಯ್ತು
ಭಾರತದ ಬಂಧನ?
ಯಾರು ಇದನು ಬಿಡಿಸಿದರು
ತಂದು ಐಕ್ಯ ಸ್ಪಂದನ!

ಭರತಖಂಡ ಪುಣ್ಯಭೂಮಿ ಜಗವೆ ಮನೆಯು ಎಂದಿತು
ಗೆರೆಯ ಹಾಕಿ ದೇಶದೇಶ ಬೇರೆ ಎಂದ ಆಂಗ್ಲರು
ಪರನೆಲಕೂ ಲಗ್ಗೆ ಇಟ್ಟು ಸ್ವಾರ್ಥವನ್ನು ಮೆರೆದರು
ನಮ್ಮ ನೆಲದ ಮಮತೆ ಮರೆತ ರಾಜರ ಬಲ ಪಡೆದರು

ಎಂದಿನಂತೆ ನಡೆದೆ ಇತ್ತು ಜನಜೀವನ ಗಾಥೆಯು
ಹೊಂಚುಹಾಕಿ ಲೂಟಿ ಮಾಡಿ ದೇಶ ನಮ್ಮದೆಂದರು
ಸ್ವಾತಂತ್ರ್ಯದ ಕಿಡಿ ಜ್ಯೋತಿಯಾಗಿ ಹಲವರಲ್ಲಿ ಬೆಳಗಿತು
ಇನ್ನು ಮೌನ ಬೇಡವೆಂದು ಎಚ್ಚೆತ್ತರು ವೀರರು

ರುಂಡಗಳ ರಾಶಿರಾಶಿ ಬಸಿದು ಬಿಸಿಯ ನೆತ್ತರ
ಭಾರತೀಯ ದೇಶಪ್ರೇಮ ಕಂಡ ಆಂಗ್ಲ ತತ್ತರ !
ತಾವು ಬಾಳದಿದ್ದರೇನು ನಮ್ಮನೆಲ್ಲ ಹರಿಸಿದರು
ಅವರ ನಾವು ನೆನೆಯದಿರೆ ನಮ್ಮ ಬಾಳು ವ್ಯರ್ಥವು

-


Fetching #ನರಸಿಂಹಪ್ರಸಾದ್ Quotes