ಆಸೆಗಳು ಗರಿಗೆದರಿ ಹಾರುವವು ಮತ್ತೆ ನೀ ಎದುರಾದರೆ,
ಬದುಕು ಹರಿಯುವ ನದಿಯಾಗುವುದು ಮತ್ತೆ ನೀ ಎದುರಾದರೆ,
ಏನನ್ನೂ ಸಾಧಿಸಲಿಲ್ಲವೆಂಬ ಅತೃಪ್ತಿಯಿದೆ ಬದುಕಿನಲ್ಲಿ,
ನಿನ್ನೊಲವಿನ ಪರಿಚಯವಾದರೂ ಆಗುವುದು ಮತ್ತೆ ನೀ ಎದುರಾದರೆ...-
ನಾಚುತ ಕರಗುವ ಸಂಜೆಗಳ ಅಮಲಿನಲಿ
ಬೇಯುವ ಹೃದಯಗಳ ತಾಪ
ತಣಿದು ಹೋಗುವುದು ಎಷ್ಟು ಸಹಜವೋ..
ಅಷ್ಟೇ ಸುಲಭ....
ಕೈಗೆಟುಕದ ಮತ್ತೊಂದು ನಕ್ಷತ್ರವನ್ನು
ಕಣ್ತುಂಬಿಕೊಳ್ಳುವುದು-
ಕೊಳಲ ಕಂಪನದಲೇ ಮೋಹಗೊಳಿಸಿ
ಎದೆಗೆ ನುಗ್ಗಿ ರಂಪ ಮಾಡುವ ಚೋರ,
ಹೇಳು ಏನಿದೆ ನಿನ್ನ ಇರಾದೆ?
ನಿನ್ನ ಮನದಿಂಗಿತವನ್ನು ಕೇಳಲು
ಕಾತರದಿಂದ ಕಾದಿಹಳು ನಿನ್ನ ಈ ರಾಧೆ..-
ಪ್ರತಿಯೊಂದು ಸಂಬಂಧಗಳ ರುಚಿ ಪ್ರತಿದಿನವೂ ಬದಲಾಗುವುದಂತೆ,
ಇಂದು ಸಿಹಿ ನಾಳೆ ಕಹಿ, ಒಮ್ಮೆ ಉಪ್ಪು ಮತ್ತೊಮ್ಮೆ ಸಪ್ಪೆಯಂತೆ,
ಪ್ರತಿದಿನದ ರುಚಿ ಬೆರೆಸುವ ಪ್ರೀತಿಯ ಪ್ರಮಾಣದ ಮೇಲೆ ನಿರ್ಧಾರವಂತೆ..-
ತೋರಿಕೆಯ ಒಡನಾಡಿಯೇಕೆ?
ಅಡಿಗಡಿಗೆ ಜೊತೆಗಿದ್ದ,
ನೆರಳೂ ಕಾಣೆಯಾಗಿದೆ,
ಕತ್ತಲೆಯಲ್ಲಿ ನಾ ಕಳೆದ ಘಳಿಗೆ!!-
ಅಕ್ಕ ಸಾಲಿಗನ ಮನೆಯ ಅಕ್ಕಿಯ ನೆಂಟಸ್ತಿಕೆಗೆ
ಕುಂಬಾರನ ಮನೆಯ ಮಡಿಕೆ ಕಾದು ಕುಳಿತಿತ್ತು.
-
ಹುಸಿ ನಂಬಿಕೆಯ ಬೆರಳ ಹಿಡಿದು
ತುಸು ದೂರ ಸಾಗಬೇಕಿದೆ
ಮಸುಕಾದರೂ ದಾರಿ
ಹಸಿರು ಕಾಣಬೇಕಿದೆ
ಬಿಸಿಲು ಮಳೆಗೆ
ಬೀಸುವ ಬಿರುಗಾಳಿಗೆ
ಉಸಿರು ಬಿಗಿ ಹಿಡಿಯಬೇಕಿದೆ
ಅಸುನೀಗಿದ ಕನಸುಗಳಿಗೆ
ಹೊಸ ಜೀವ ನೀಡಬೇಕಿದೆ
ಬಸವಳಿದ ಮನಸಿಗೆ
ತುಸು ನೆಮ್ಮದಿ ನೀಡಬೇಕಿದೆ
ಹುಸಿ ನಂಬಿಕೆಯ ಬೆರಳ ಹಿಡಿದು
ತುಸು ದೂರ ಸಾಗಬೇಕಿದೆ..-
ರಾಶಿ ಕನಸ ಹರವಿ ಕೂತಿದ್ದೆ
ನಿನ್ನೊಲವ ಸಂತೆಯಲ್ಲಿ
ಬಿಕರಿಯಾದವು ಕೆಲವು
ನೀ ಕಂಡು ಮಾತಾಡಿದೊಡನೆ
ಬಿಕ್ಕುತಿವೆ ಇನ್ನುಳಿದವು
ನೀ ಇನ್ಯಾರ ಕನಸೋ
ಹೊತ್ತಿರುವೆ ಎಂದು ತಿಳಿದು..-
ಹಾರುವ ಹಕ್ಕಿಯ..
ರೆಕ್ಕೆ ಕತ್ತರಿಸಿದನೋರ್ವ ಕಟುಕ..
ಆದರೂ ಅದು ಹಾರುತ್ತಲೇ ಇತ್ತು..
ಮನಸಲ್ಲೇ ಹಾರುವ ಹಂಬಲವ ಹೊತ್ತು..-