ಅವಳೊಂದು ಚೆಂದದ ಛಂದಸ್ಸು...
'ಲಘು'ವಾಗಿ ಎದೆಗಿಳಿದು, 'ಗುರು'ವಾದಳು ಪ್ರೀತಿಗೆ...!
ಭಾವಗಳ ಗಣ ವಿಂಗಡಿಸಿ,
ಲಯ ನೀಡಿದಳು ಒಲವಿಗೆ...
ಕಣ್ಣೋಟದ "ಶರ" ದಲ್ಲೇ
ಕನಸ "ಕುಸುಮ" ಬಿಡಿಸಿದಳು...
ಜೊತೆ ನಡೆಯೋ "ಭೋಗ" ಬಯಸಿ,
ಎನ್ನ ಬಾಳ "ಭಾಮಿನಿ"ಯಾದಳು...!
ಎದೆಯ ಮಾರ್ದನಿಗೆ "ವಾರ್ದಕ"ವಾಗಿ,
ಕಪ್ಪು ಬಿಳುಪು ಕಲ್ಪನೆಗೆ ಬಣ್ಣದ "ಪರಿವರ್ದಿನಿ"ಯಾದವಳು.
ಒಟ್ಟಾರೆ ಅವಳು..
ಷಟ್ಪದಿಯ "ಕವಿತೆ"ಯಂತವಳು...
ಈಗೆನ್ನೊಡನೆ ಸಪ್ತಪದಿಗೆ ಕಾದಿಹಳು-
ಮೈಮನಗಳ ಸದನದಲೀಗ
ಮಂಡಿಸಲೇ ಪ್ರೇಮದ
ಮುಂಗಡಪತ್ರ...
ಹುಸಿಮುನಿಸುಗಳ ಬೆಲೆಯಿಳಿಸಿ..
ಹೊಂಗನಸುಗಳ ಬೆಲೆಯೇರಿಸಿ
ಒಂದಪ್ಪುಗೆಗೆ ದುಪ್ಪಟ್ಟು ತೆರಿಗೆ ವಿಧಿಸಿ....
ಮಂಡಿಸಲೇ ಪ್ರೇಮದ ಮುಂಗಡಪತ್ರ...
ಸಿಹಿಮುತ್ತುಗಳ ವಿತ್ತೀಯ ಕೊರತೆಯಲೂ
ಚೆಂದ ಸಾಗಲಿ ನಮ್ಮ ಒಲವ ಸರ್ಕಾರ...
ಪೂರೈಸಲಿ ನಡೆದು, ಇಡೀ ಜನ್ಮ ಪೂರ...!-
ಹೇ ಗುಲಾಬಿ ಗುಣದವಳೇ.....
ನಿನ್ನ ಆ ಜಡೆಯೊಳಗಡೆ ನಾ ಹೇರ್ಪಿನ್ನಾದರೂ ಸರಿ...
ನನ್ನ ಈ ಎದೆಯೊಳಗಡೆ ನೀ ಪ್ರೇಮದ ಹಾರ್ಮೋನ್ನಾಗು.....!😍!-
ಅಂತರಗಳ ಅಡ್ಡಿ ಪ್ರೀತಿಗೆಲ್ಲಿದೆ ನಲ್ಲೇ...?
ನಂಬುಗೆಯ ಕಂಬಗಳಿಗೆ
ಅಂತರಂಗದ ತಂತಿ ಹೆಣೆದು
ನಿನ್ನ ಪ್ರೇಮದೂರಿಗೂ....ನನ್ನ ಕಣ್ಣಿನೂರಿಗೂ.....
ಒಲವ ವಿದ್ಯುತ್ ಪ್ರವಹಿಸಿದೊಡೆ...
ನಲ್ಮೆಯ ಬಲ್ಬಲ್ಲಿ ಮನದಂಗಳ ಬೆಳಕಾಗಿದೆ....
ಹೃದಯ ಕಾವೇರಿದೆ"......-
ನಾಕ್ಮಂದ್ಯಾಗ ನಿಂದ್ರಿಸಿ ಇಕೀನಾ ನೋಡ್ರೀ
ನನ್ ಮನ್ಸ್ ತುಡುಗ್ಮಾಡಿದ್ ಮಿಟುಕ್ಲಾಡಿ ಅಂತ
ಜೋರ್ ಒದರ್ಬಿಡ್ಬೇಕು ಅನ್ನಸ್ತೈತಿ....
ಆದ್ರ್ ಒಟ್ಟಾ ಇಕೀಗಿ ನನ್ ಮ್ಯಾಲ ನದರಾ ಇಲ್ಲಾ.....!
ಎಷ್ಟ್ ನಾಟಕ್ ಹಚ್ಚ್ಯಾಳ್ ನೋಡ್ರೀ...
ಮನ್ಸಿನ್ಯಾಗಿನ್ ಪ್ರೀತಿ ಹೇಳಾಕ್ ಏನ್ ಧಾಡೀ....
ಪ್ರೀತಿ ಐತ್ರೀ.....
ಆದ್ರಾ...ಕೆಟ್ಟ್ ಸುಳ್ಬುರ್ಕಿ ಅದಾಳ
ಮೊದ್ಲಾ ಹೇಳಿದ್ನಲ್ರೀ ನಿಮ್ಗಾ....ನಾಟಕ್ ಹಚ್ಚ್ಯಾಳಂತಾ....😁-
ಸಿಗ್ಗೇತಕೆ ನಲ್ಲೇ....?
ಮಲ್ಲಿಗೆಯ ಮೊಗ್ಗಂತೆ ನೀ ಮಗ್ಗಲಲ್ಲಿ ನಿಂತಿರಲು....
ಹಿಗ್ಗಾ ಮುಗ್ಗಾ ಲವ್ವಾಗುತಿದೆ
ಅಂಗೈಯ ಹಿಡಿದೊಮ್ಮೆ ಮುಂಗೈಗೆ ಮುತ್ತಿಕ್ಕಲೇ........?
ಅಥವಾ....
ನನ್ನೆಲ್ಲಾ ಬಯಕೆಗಳ ಮನಸಲ್ಲೇ ಹತ್ತಿಕ್ಕಲೇ......???-