ನೀ ನನ್ನ ಪ್ರಪಂಚ ಎಂದರೂ
ಕಮ್ಮಿಯೇ ಎನಿಸುತ್ತದೆ....
ಆಗಸದಗದಲದ ಕನಸ ಬಿತ್ತಿರುವೆ
ಸಾಗರದಾಳದ ಒಲಮೆ ಕೊಟ್ಟಿರುವೆ
ವನಗಿರಿಗಳಂದದ ಚೆಲುವ ಹೊತ್ತಿರುವೆ
ಸಕಲ ಸ್ಥಿರತೆಯ ಭಾವ ಹೊಂದಿರುವೆ
ನೀ ನನ್ನ ಪ್ರಪಂಚ ಎಂದರೂ
ಕಮ್ಮಿಯೇ ಎನಿಸುತ್ತದೆ....
ನೀನಿಲ್ಲದ ಪ್ರಪಂಚ
ಸತ್ವಹೀನ ಎನಿಸುತ್ತದೆ.-
ಕವನ ಗೀಚುವ ಗೀಳಿಗಂಟಿದ ಕಾವ್ಯೋಪಾಸಕ
ಹಳೆಯ ಗೆಳೆತನಕೆ
ಹೊಸತನವ ನೀಡುವ
ಹಳೆಯ ನೆನಪುಗಳ
ಜೊತೆ ನಾವು ಸಾಗುವ
ಹಳೆಯ ಬಾಂಧವ್ಯಕೆ
ಹೊಸ ಭಾಷ್ಯ ಬರೆಯುವ.-
ಆವಾಗಲೇ ಅಲ್ಲವೆ ಮುಗುದೆ
ನಾ ನಿನಗೆ ಹೆಚ್ಚು ಅಗತ್ಯವಾಗುವುದು.
ನನಗಾವ ಮಡಿ ಮೈಲಿಗೆ
ನೀ ನೆಮ್ಮದಿಯಾಗಿರುವದಷ್ಟೇ ಬೇಕೆನಗೆ.-
ಇಂದೆಕೋ ನನ್ನಧರಗಳು
ತುಂಬಾ ಭಾರವಾಗಿವೆ,
ನಿನ್ನೆಯಿಂದ ನಿನಗೆ
ನೀಡಬೇಕಿರುವ ಸಿಹಿಮುತ್ತುಗಳು
ಇನ್ನೂ ಬಾಕಿ ಉಳಿದಿವೆ.-
ನಿನ್ನ ನಗುವಿನಂದ
ಮತ್ತಷ್ಟು ಹೆಚ್ಚುತ್ತಿದೆ,
ಕೆನ್ನೆಯ ರಂಗಲ್ಲೊಂದು
ಮಳೆಬಿಲ್ಲು ಮೂಡುತ್ತಿದೆ,
ನನ್ನೆದೆಯಲ್ಲಿ ವಾಡಿಕೆಗಿಂತಲೂ
ಹೆಚ್ಚು ಒಲವಾಗುವ ಸಂಭವವಿದೆ.-
ಸುಮ್ಮನೆ ಆಡಿಕೊಂಡಿದ್ದವನ
ಮನಸಿನ ಸೀಮೆಯೊಳಗೆ
ದಾಳಿಯಿಟ್ಟು ಒಲವೋತ್ಪಾದನೆ
ಮಾಡಿದ ಅಪರಾಧ ನಿನ್ನದೇ ತಾನೆ.
😎😎-
ನಿನ್ನ ಜೊತೆ
ನಿನ್ನ ನಗುವೂ
ಮೋಡಿಮಾಡುವುದನ್ನು
ಕಲಿತುಬಿಟ್ಟಿದೆ,
ಎದೆಯಲ್ಲೊಂದು
ಹಾಡು ಹುಟ್ಟಿಸಿ
ಅನುರಾಗಿಯನ್ನಾಗಿ
ಮಾಡಿಬಿಟ್ಟಿದೆ.-
ನನ್ನ ನಿತ್ಯಬೆಳಗು
ನಿನ್ನ ಮುದ್ದು ನಗುವಿನೊಂದಿಗೇ
ಶುರುವಾಗಬೇಕೆಂಬುದು,
ಮೌಢ್ಯಾಚರಣೆಯ ವ್ಯಾಪ್ತಿಗೆ
ಬರಬಹುದೇನೊ ಎಂಬ
ಮೂಢನಂಬಿಕೆ ನನ್ನನ್ನಿಂದಿಗೂ ಕಾಡುತ್ತಿದೆ.-
ಆ ನಿನ್ನ ಕಣ್ನೋಟಕ್ಕೆ
ಚೂರು ಕರುಣೆಯನ್ನು ಕಲಿಸಿಕೊಡು
ನನ್ನನೆಷ್ಟು ಬಾರಿ ಸೋಲಿಸಿದರೂ
ಇನ್ನೂ ಹರಿತವಾಗುತ್ತಲೇ ಇದೆ.-
ಕವಿತೆಯಾಗಿರುವೆ
ಎದೆಯೊಳಗೆ,
ಮಾತುಗಳೂ
ಪ್ರಾಸ ಕಟ್ಟಿಕೊಳ್ಳುತ್ತಿವೆ
ನಿನ್ನೆದುರಿಗೆ.-