ಬಾಲವಿಲ್ಲದ ಮಂಗಗಳಷ್ಟೆ..
----✍️ ಮೋಹನ ವೀ ಹೊಸೂರ
ಗಿಡ ಮರ ಕಲ್ಲು ಗುಂಡುಗಳನ್ನು
ಪಶು ಪಕ್ಷಿ ಪ್ರಾಣಿಗಳನ್ನೂ ಬಿಡದೆ
ಇಡೀ ವಿಶ್ವವನ್ನೇ ಪೂಜಿಸುವವರು
ಶ್ರೇಷ್ಠ ಧರ್ಮದವರೆಂದು ಬೀಗಿ
ತಮ್ಮದೇ ದೇಶದ ತಮ್ಮದೇ ಧರ್ಮದ
ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲಾಗದ,
ಸಂಕುಚಿತ ಬುದ್ಧಿಯ ಜಾಣ ಕುರುಡು ಜ್ಞಾನಿಗಳು,
ಪುರುಷೋತ್ತಮ ಶ್ರೀ ರಾಮಚಂದ್ರರಲ್ಲ..
ಮೊಸಳೆ ಕಣ್ಣೀರಿನ ಹೊಸೆವ ಹುನ್ನಾರಿನ
ಹುಸಿ ದೇಶ ಭಕ್ತರುಗಳ
ದೇಶ ಭಕ್ತಿಯ ಭಾಷಣ ಕೇಳಿ
ಭಕ್ತಿಯಿಂದ ಪರಾಕಾಷ್ಠೆಗೇರಿ
ವಿಭೀಷಣರಾಗುವ ಧಾವಂತದಲ್ಲಿ
ಭೀಷಣರಾಗಿ ಎದೆ ಬಗೆದು ತೋರುವ
ಸಾಹಸ ಮಾಡಿ ಸಂಭ್ರಮಿಸುವ ಮೂರ್ಖರು
ರಾಮಭಕ್ತ ಹನುಮಂತರಂತಲ್ಲ
--------------
ಸುಟ್ಟಿತಿಂತಹ ಮಕ್ಕಳ ಸುಖಾ..
--------------------------------
ಇದ್ದಾಗ ರೊಟ್ಟೀ ಕೊಡದs
ಕಡಕೊಂಡ್ ಕುಣೀಗ ಬಿದ್ದಾsಗ
ಬಿಡದs ವರ್ಷಕ್ಕೊಮ್ಮೆ ಗೋರೀಗೆ
ಭೆಟ್ಟೀ ಕೊಡೋ ಖೊಟ್ಟೀ ಮಕ್ಕಳು
ಇದ್ದರೆಷ್ಟು ಬಿದ್ದರೆಷ್ಟು..
ಬರೀ ಸುಡುಗಾಡು ಸುಖಾ ಅಷ್ಟೆ
ಸುಟ್ಟಿತಿಂತಹ ಮಕ್ಕಳ ಸುಖಾ..
ಬದುಕ್ ಇರೂದs ಹಿಂಗೈತಿ
ಅಂದ್ ಮ್ಯಾಲ
ಒಣಾ ಆಸ್ತಿ ಪಾಸ್ತಿ ಅಂತ್ಹೇಳಿ
ಜಾಸ್ತಿ ಒದ್ದಾಡೂಕಿಂತ
ಇದ್ದಿದ್ರಾಗs ಇದ್ದಷ್ಟ್ ಸುಖಾ ಪಟ್ಟು
ಚಟ್ ಅಂತ ಎದ್ದು ಪಟ್ ಅಂತ
ನೆಮ್ದೀ ಯಿಂದ್ ನಡೆದ್ರಾಯ್ತು
ಏನ್ ಅಂತೀರೀ ? ಹೌದಿಲ್ರೀ ಮತ್ತss...-
ಹದುಳವೆಂದೂ ಅಸದಳವೆಂದು ಬಲ್ಲಿರೇನಯ್ಯ ?
-----------------------------ಮೋಹನ.ವೀ.ಹೊಸೂರ
ಸಮಾಜವನ್ನೇ ಬಡಿದೆಬ್ಬಿಸಿ ಉದ್ಧರಿಸುವ
ಮಠಾಧೀಶರು ಏಕಾಂತದ ಕೊಠಡಿಗಳಲ್ಲಿ
ಮಾತ್ರ ಉದ್ಧಾರವಾಗೋ ಮಂತ್ರ ಪಠಿಸದೆ
ಮಿಡಿವ ಕೀಳು ಕಾಮನೆಗಳಿಗೆ ಕಟಿಬದ್ಧರಾಗಿ
ತಾವೇ ಉದ್ಧಾರವಾಗದ ತಂತ್ರಗಳಲ್ಲಿ ತೊಡಗಿ
ಎಚ್ಚರದಪ್ಪಿ ಮೈಮನ ಮರೆತ ಅಧಮರಾಗಿ
ತಮ್ಮನ್ನು ದೇವಮಾನವರನ್ನಾಗಿ ಮಾಡಿದ
ಅಪಾರ ಭಕ್ತ ಜನಕೋಟಿಯ ಶಕ್ತಿಯಲ್ಲಿ
ಭಕ್ತಿಯ ಪರಾಕಾಷ್ಟೆಯಲ್ಲಿ ವಿಶ್ವಾಸವಿಟ್ಟು
ತಪ್ಪಿಸಿಕೊಳ್ಳುವ ತಮ್ಮ ಪವಾಡಶಕ್ತಿಯಲ್ಲಿ
ನಂಬಿಕೆಯಿಟ್ಟು ಮೈ ಮರೆಯುತ್ತಿದ್ದಾರೆ..
ಮುಖವಾಡ ತೊಟ್ಟು ಮಾನವೀಯತೆ ತೊರೆದು
ಮಂಡಿಯೂರಿದ ಭಕ್ತಿಯ ಹುಚ್ಚಾಗಿ
ಸಿದ್ಧ ಸ್ವಾರ್ಥದ ಬದ್ದ ಹಿತಾಸಕ್ತಿಯ
ಉಘೇ ಉಘೇ ಮೊರೆತ ಹೆಚ್ಚಾಗಿ
ಉಡುಗಿದ ಸತ್ಯವೆಲ್ಲೋ ಅಡಗಿದೆ
ಅನ್ಯಾಯದಲ್ಲಿ ನಲುಗಿ ನೋವಿನಲ್ಲಿ
ಮೊರೆವ ಆತ್ಮಗಳ ಸದ್ದು ಕೇಳದಂತೆ
ಸಂಧಾನದಲ್ಲೋ ಸಮರದಲ್ಲೋ
ನೀವೇನೋ ಗೆದ್ದೇ ಸಿದ್ಧರು ನಿಜ
ಆದರೆ ಪದತಲದಲ್ಲಿ ದಳಗಳ ಮುದುರಿ
ಹೊಸಕಿ ಒದರಿದ ಹೂದಳಗಳ ಹದುಳವೆಂದೂ
ಅಸದಳವೆಂಬುದನ್ನು ಬಲ್ಲಿರೇನಯ್ಯ ?-
ಕಾಯುತ್ತಿದ್ದಾವೆ ಬೇಯುತ್ತಿದ್ದಾವೆ
------------------------------------
ಇದ್ದ ಬದ್ದ ಬೆಣ್ಣೆಯೆಲ್ಲವ ಕದ್ದು
ನೆಕ್ಕಿ ಮೆದ್ದು ಮನದೊಳಗೆ ನಕ್ಕು
ತಣ್ಣಗೆ ಮೀಸೆ ತಿರುವಿ ನೀವಿದ್ದ
ಮಾರ್ಜಾಲ ಟಣ್ಣನೆ ಜಿಗಿದು ಹೋಗಿದ್ದ
ಬೆಣ್ಣೆ ಪಾಲು ಕಳಕೊಂಡರೂ
ಕೊಲೆಗಾಗಿ ಕೊಲೆಯೆಂದು
ತಮ್ಮದೇ ತಲೆಗಳ ತಾವೇ ತೆಗೆದು
ಕಕಮಕ ಪರದೇಶಿಗಳಾಗಿದ್ದರೂ
ಮಂಗಗಳಿನ್ನೂ ಬುದ್ಧಿ ಕಲಿಯಲಿಲ್ಲ
ಮೇಧಾವಿ ಮುತ್ಸದ್ದಿಯೆಂದು ಸ್ತುತಿ ಗೈದು
ಕಪಟ ಮಾರ್ಜಾಲವನ್ನು ಹೆಗಲ ಮೇಲೆ
ಹೊತ್ತು ತಿರುಗುತ್ತಾ ಉಘೇ ಉಘೇಯೆಂದು
ತಮ್ಮ ಪಾಲಿನ ಬೆಣ್ಣೆಪಾಲು
ಸಿಕ್ಕೇ ಸಿಗುವುದೆಂದು ಕಾಯುತ್ತಿದ್ದಾವೆ
ಬೇಯುತ್ತಿದ್ದಾವೆ ಅಮಾಯಕ ಮಂಗಗಳು
-
ಗುರುಪೂರ್ಣಿಮೆಯ ನಮನಗಳು.
✍️ ಮೋಹನ ವೀ ಹೊಸೂರ
ಕಳೆದಾಟ ಕಳೆದು
ಅಲೆದಾಟ ಅಟ್ಟಿ
ಹುಡುಕಾಟ ಬಿಟ್ಟು
ನಮ್ಮಲ್ಲೇ ಇರುವ
ಅಂತರಾತ್ಮನ ಕಂಡು
ಅರಿವೇ ಗುರು ಆತ್ಮವೇ ದೈವ
ಎಂದು ಬೋಧಿಸಿದವ
ಜೀವಿಗಳಲ್ಲಿ ಕನಿಷ್ಠ ಘನಿಷ್ಟ
ಉಚ್ಚ ನೀಚ ಎಂಬುದಿಲ್ಲ
ಮನುಜ ಕೂಡ ಸೃಷ್ಟಿಯೊಂದು
ವಿಶಿಷ್ಟ ಅಂಗವಷ್ಟೇ ಎಂದವ
ಸಾಮಾಜಿಕ ಬದುಕಿನ ಪ್ರಾಧಾನ್ಯತೆ
ಒಕ್ಕಟ್ಟಿನಲ್ಲಿ ಬಲವಿದೆಯೆಂದು ತಿಳಿಸಿ
ಸಂಗಮ್ ಶರಣಂ ಗಚ್ಛಾಮಿ ಹೇಳುತ್ತಾ
ಸಂಘಟನೆ ನೀಡಿದ ಬುದ್ಧ ಗುರುವಿಗೆ
ಗುರುಪೂರ್ಣಿಮೆಯ ನಮನಗಳು-
ಗುರು ಚೇತನಕ್ಕೆ ವಂದನೆಗಳು
---------✍️ ಮೋಹನ ವೀ ಹೊಸೂರ
ಕಬ್ಬಿಣವನ್ನು ಕಾಯಿಸಿ ಕೆಂಪಗೆ
ಮೆದುವಾಗಿಸಿ ಮುದ್ದೆಯಂತೆ
ಹದವಾಗಿ ಪೆಟ್ಟಿನ ಮೇಲೆ ಪೆಟ್ಟು
ನೀಡಿ ಬಡಿದು ವಿರಾಮ ನೀಡದೆ
ನಿರ್ಭಿಡೆಯಿಂದ ಬಿಡದೆ ಆಕಾರ
ನೀಡುವ ಕರ್ಮಿ ಕಮ್ಮಾರನಂತೆ
ಧಾರೆಯೆರಕ ಜ್ಞಾನಬಿಂದುಗೆ
ಸೃಜಿಸಿ ತಕ್ಕ ಸನ್ನಿವೇಶವನೆ
ದಂಗು ಬಡಿದ ಶಿಷ್ಯಂದಿರು
ಏಕಾಗ್ರ ಚಿತ್ತದ ಗುಂಗಿನಲ್ಲಾಲಿಸಿ
ತನ್ಮಯತೆಯ ತಿಳಿವೇ ತಾವಾಗುವಂತೆ
ತಿದ್ದಿ ತೀಡಿ ಬುದ್ಧಿ ನೀಡಿ ಉದ್ಧರಿಸುವ
ಮಹಾನ್ ಗುರು ಚೇತನಕ್ಕೆ ನಮನಗಳು
-
ವಾಸ್ತುಗಿಂತ ಸ್ವಾರ್ಥವೇ ವಾಸ್ತವ ಸತ್ಯ
----------------------------------------
ವಾಸ್ತು ಶಾಸ್ತ್ರ ಪಾರಂಗತರಾಗಿದ್ದ
ದಿಕ್ಕು ದಿಕ್ಕುಗಳ ದೆಶೆಯನ್ನೇ ತರುಬಿ
ತಿರುವಿ ಸರಿಪಡಿಸಿ ಬದಲಿಸುತ್ತಿದ್ದ
ಬಾಗಲಕೋಟೆಯ ಮಹಾಬೆಳಗು
ಲೋಕದ ಸಮಸ್ತ ಪಾಮರರ
ಸಮಸ್ಯೆಗಳೆಲ್ಲವನ್ನೂ ಪರಿಹರಿಸಿ
ಲೋಕಕಲ್ಯಾಣವನ್ನೇ ಮಾಡುತ್ತಿದ್ದ
ಅವತರಿಸಿದ ದೇವಮಾನವರಂತಾಗಿದ್ದ
ವಾಸ್ತುಶಾಸ್ತ್ರಜ್ಞರನ್ನು ಅವರ
ಆತ್ಮೀಯರೇ ಹಿತಶತೃಗಳಂತೆ
ಚುಚ್ಚಿ ಚುಚ್ಚಿ ಅರವತ್ತು ಬಾರಿ
ಎಷ್ಟೇ ಅಲವತ್ತುಕೊಂಡರೂ ಬಿಡದೆ
ಅಮಾನುಷವಾಗಿ ಕೊಂದದ್ದು
ಭೀಕರ ಭೀಷಣ ರೋಷವಾಗಿತ್ತು
ಸಾವು ಸಂಭ್ರಮವಲ್ಲವಾದರೂ
ಸಾಯಿಸಿದ್ದು ಮಾತ್ರ ವಾಸ್ತವವಾಗಿತ್ತು
ವಾಸ್ತು ಸತ್ಯವೋ ನಿತ್ಯವೋ ಗೊತ್ತಿಲ್ಲ
ಆದರೆ ವಾಸ್ತುವನ್ನುಮೀರಿದ ಸ್ವಾರ್ಥ
ಮಾತ್ರ ವಾಸ್ತುವನ್ನೇ ಹಂಗಿಸುವಂತಿತ್ತು
ಸ್ವಾರ್ಥವೇ ನಿತ್ಯ ವಾಸ್ತವ ಸತ್ಯವೆನ್ನುವಂತಿತ್ತು-
ನಿಮ್ಮ ಬದ್ದ ವೈರಿಗೂ ಹಾನಿಯುಂಟು ಮಾಡದಿರಿ
-----------------------------------
ನಾನು ಕನ್ಹಯ್ಯಾಲಾಲ .....
ಕತ್ತರಿಸುವುದು ನನ್ನ ವೃತ್ತಿ ಧರ್ಮವಾದರೂ
ಯಾರ ತಲೆಯನ್ನೂ ಕತ್ತರಿಸಲಿಲ್ಲ
ಬದಲು ನಿರ್ಜೀವ ಬಟ್ಟೆ ಕತ್ತರಿಸಿದೆ
ಆಮೇಲೆ ಹೊಲಿದು ಮುಚ್ಚಿದೆ
ನಿಮ್ಮದೇ ತನು ಮನ ಮಾನ
ಮರ್ಯಾದೆಯ ತಲೆ ಕಾಯ್ದು
ಆದರೆ ನೀವು ಮಾಡಿದ್ದೇನು ?
ದಯವಿಲ್ಲದ ಧರ್ಮವಿಲ್ಲವಾದರೂ
ಧರ್ಮ ರಕ್ಷಣೆಯ ನೆಪದಲ್ಲಿ
ದಯವಿಲ್ಲದ ಅಟ್ಟಹಾಸ ಗೈಯುತ
ನನ್ನ ತಲೆ ತೆಗೆದು ಸಾಧಿಸಿದಿರಲ್ಲ ..!!?
ಸಹೋದರನ ತಲೆ ಕಾಯದೆ ನಿಮ್ಮದೂ
ಕತ್ತರಿಸುವ ಮನೋಧರ್ಮವೆಂದು..!!
ನಿಮ್ಮದೇ ಸಹೋದರರು ತಲೆ ಎತ್ತದೆ
ನಾಚಿ ತಲೆ ತಗ್ಗಿಸುವಂತೆ ಮಾಡಿದಿರಲ್ಲ..!!
" ನಿಮ್ಮ ಬದ್ದ ವೈರಿಗೂ ಹಾನಿಯುಂಟು ಮಾಡದಿರಿ "
ಎಂದು ಹೇಳಿದ ಪರಮ ಪವಿತ್ರ ಪ್ರವಾದಿಯ
ನಿಷ್ಕಳಂಕ ವಾಣಿಗೂ ಕಳಂಕ ತಂದಿರಲ್ಲ ..!!
ನೀವೇ ಅವರ ಅವಹೇಳನ ಮಾಡಿದಂತಾಯಿತಲ್ಲ..!!-
ಬೆಂಗಳೂರಿನಲ್ಲಿ
ಹದವಾಗಿ ಸುರಿದ ಮಳೆ
ಹಿತವಾಗಿ ಮುದ
ನೀಡೋ ಬದಲು
ರಸ್ತೆ ತುಂಬಿ ನಿಂತು
ಸರಾಗವಾಗಿ ಹರಿಯದೆ
ಚರಂಡಿ ಕಾಣದೆ
ರಾಜಕಾಲುವೆ ಸಿಗದೇ
ಮನೆಗಳಿಗೆ ನುಗ್ಗಿ
ಹಾಳು ಗೋಳಾಗಿದೆ
ಗೋಳು ಬಾಳಾಗಿದೆ-
ಮರ್ಯಾದಾ ಹತ್ಯೆ--2--
----------------------------
ಮೂಢ ಮತಿ ತಲೆಗಳ ತಿಕ್ಕಿ ತೀಡಿ
ವರ್ತುಲಗಳೊಳು ವರ್ತುಲಗಳನಿಟ್ಟು
ಮಧ್ಯೆ ಕಟ್ಟಿ ಗೋಡೆಗಳನೆಬ್ಬಿಸಿ
ವರ್ಗೀಕರಿಸಿ ಪ್ರಾಣಿಗಳಂತೆ ಆಪೋಷಿಸಿ
ಅತೀವ ಅಸಹನೆಯಿಂದ
ಮನುಷ್ಯರೇ ಮನುಷ್ಯರನ್ನು
ಯಾಂತ್ರಿಕವಾಗಿ ರುಬ್ಬುವ
ಅಮಾನವೀಯ ಅನಾಗರೀಕ
ಕುಸಂಸ್ಕೃತಿಯೂ ಒಂದು ಮರ್ಯಾದೆಯೇ ?
ಮನುಷ್ಯ ಸಂಬಂಧಗಳ ಮೀರಿ
ಮೇರೆ ಮೀರಿದ ಭೀಭತ್ಸತೆ
ಮಾನವೀಯತೆ ಮರೆತು
ದಾನವೀಯತೆ ಮೆರೆವುದರಲ್ಲಿ
ಮಾನವೆಲ್ಲಿದೆ ? ಮರ್ಯಾದೆ ಎಲ್ಲಿದೆ?
ಇದು ಮರ್ಯಾದಾ ಹತ್ಯೆಯಲ್ಲ
ನಮ್ಮೆಲ್ಲರ ಮರ್ಯಾದೆಯ ಹತ್ಯೆ
ಇಂತಹುದನ್ನು ಪೋಷಿಸುತ್ತಿರುವ
ಭವ್ಯ ಭಾರತ ದೇಶದ ಘನ ಜನ
ಸನಾತನ ಸಂಸ್ಕೃತಿಯ ಒಳಮನ
ಬೀಗಿ ವಿಶ್ವಗುರುವಾಗುತ್ತಿರುವವನ
ಮರ್ಯಾದೆಯ ಹತ್ಯೆ ಅಲ್ಲವೇ?-