ಹಾರ್ಟ್ ಲ್ಯಾಂಪ್
ಹೃದಯಗಳನ್ನು ಬೆಳಗಬೇಕಾದದ್ದು
ಹೃದಯಗಳನ್ನು ಸುಡುತ್ತಿರುವುದು
ವಿಪರ್ಯಾಸವೆ ಸರಿ|
ಬಾನೆತ್ತರಕ್ಕೆ ಬೆಳಗಿಸಿಯ
ಸಿದ್ಧ ಎನ್ನುವವರು ಒಬ್ಬರು
ಹೇಗೆ ಬೆಳಗಿಸುವೆ ನೋಡುವೆ?
ಪ್ರತಾಪ ತೋರುವವರು ಇನ್ನೊಬ್ಬರು|
-
ಹಕ್ಕಿ ಹಾರುತಿದೆ ನೋಡಿದಿರಾ
ರೆಕ್ಕೆ ಕತ್ತರಿಸಿದರೂ,ನೆತ್ತರುಕ್ಕಿದರೂ
ಸಂಕೋಲೆಗಳ ಛೇದಿಸಿ ಭೇದಿಸಿ ಬಂದ
ಸ್ವಾತಂತ್ರ್ಯದ ಹಕ್ಕಿ ಹಾರುತಿದೆ ನೋಡಿದಿರಾ|
ಹಕ್ಕಿ ಹಾರುತಿದೆ ನೋಡಿದಿರಾ
ಅವಮಾನಗಳ ಬೆಂಕಿಗೆ ಅನುಮಾನಗಳ ಬೇಗುದಿಗೆ
ಸಿಲುಕಿದರೂ, ಬೂದಿಯಿಂದ ಎದ್ದು ಬಂದ
ಸ್ವಾತಂತ್ರ್ಯದ ಹಕ್ಕಿ ಹಾರುತಿದೆ ನೋಡಿದಿರಾ|
ಚೆಂದದ ಹಕ್ಕಿ ಸ್ವಚ್ಚಂದದ ಸ್ವತಂತ್ರ ಹಕ್ಕಿ
ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾದ ಹಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ
ಸ್ವಾತಂತ್ರ್ಯದ ಹಕ್ಕಿ ಹಾರುತಿದೆ ನೋಡಿದಿರಾ|
-ಮನು ಹಳೆಯೂರ್
-
ಬೆಂಕಿಯಲ್ಲಿ ಬೀಳುವ
ಸಣ್ಣ ಕನಸೂ ಇಲ್ಲದೆ
ಸುಟ್ಟು ಕರಕಲಾಯಿತು ಜೀವ!
ನೆಚ್ಚಿನ ಆಟಗಾರನ
ನೋಡುವ ಇಚ್ಚೆಯಲಿ
ಕಾಲ್ತುಳಿತಕೆ ಕೊಚ್ಚಿ ಹೋಯಿತು ಜೀವ!
ಸ್ವರ್ಗ ನೋಡುವ
ಆಸೆಯಲ್ಲಿ ಭಯೋತ್ಪಾದನೆಗೆ
ಸಾವಿನ ಮಾರ್ಗ ನೋಡಿತು ಜೀವ!
-
ಪ್ರೀತಿ ಮಾಗುತ್ತಿದೆ ಸಖಿ
ಹೃದಯದ ಭಾಷೆಯು
ಪಿಸುಮಾತಿನಲ್ಲಿ ಕೇಳಿಸುತ್ತಿತ್ತು
ಈಗಂತೂ ಸಾವಿರ ಮೈಲು
ದೂರವಿದ್ದರೂ ಪಕ್ಕದಲ್ಲಿ ಕೂಗಿದಂತೆ!
ಪ್ರೀತಿ ಮಾಗುತ್ತಿದೆ ಸಖಿ
ಕಾಯುವಿಕೆಯು ವಯೋವ್ಯಾಮೋಹ
ದಾಟಿಬಿಟ್ಟಿದೆ ,ಅಲ್ಪ ಸಮಯವೂ
ನಿನ್ನ ಸನಿಹವಿರಬೇಕು
ವಿರಹದ ಗಳಿಗೆ ಬಹು ದೀರ್ಘವಂತೆ!
-ಮನು ಹಳೆಯೂರ್
-
ಕೆಲವೊಮ್ಮೆ
ಪದಗಳೂ
ಮುನಿಸಿಕೊಂಡು
ಬಿಡುತ್ತವೇನೊ
ಹೆಂಡತಿ ಅಷ್ಟೆ
ಅಂದುಕೊಂಡಿದ್ದೆ,
ಬಹುಶಃ ನನ್ನ ಪ್ರೀತಿ
ಪರೀಕ್ಷಿಸಲಿರಬೇಕು|
-ಮನು ಹಳೆಯೂರ್
-
ಅದು ನೀನೆ ಸಖಿ !
ನನ್ನೆದೆ ಶಬ್ದಾರ್ಥ
ಕೋಶದಲಿ.
ಅದು ನೀನೆ ಸಖಿ!
ನನ್ನಂತರಂಗದರ್ಥ
ಭಾವದಲಿ.
-
ನೂರೊಂದು ನೆನಪು:
ನೆನಪು -1
ನಿನ್ನ ಬರುವಿಕೆಗಾಗಿ
ಕಾದು ಕುಳಿತಿದ್ದೆ
ಕೈಲಿದ್ದ ಗುಲಾಬಿ
ನೂರು ಪ್ರಶ್ನೆ ಕೇಳುತ್ತಿತ್ತು|
ನೀನು ಬಂದಾಗ
ನಿರುತ್ತರನಾಗಿದ್ದೆ
ತಂದಿದ್ದ ಗುಲಾಬಿ
ನಾಳಿನ ಸರತಿ ಕಾಯುತ್ತಿತ್ತು |
-ಮನು ಹಳೆಯೂರ್
-
ಸುಮ್ ಸುಮ್ಕೆ 😜
ಬೆಟ್ಟದಂತ ನೋವುಗಳನ್ನು
ಅಡಿಕಾಕಂಡ ಕೂತ್ಕೋಬಹ್ದು
ಆದ್ರೆ ಸೂಜಿಮೊನೆಯಂತಹ
ಸಣ್ಣ ನೋವುಗಳ್ ಮೇಲ್
ಕೂತ್ಕೊಳದು ಕಷ್ಟ ಕಷ್ಟ!-