ಸಮಯದ ಶಕ್ತಿ.
ಮುಂಜಾನೆ ಶಿವನ ಮುಡಿಗೇರಿದ ಹೂ
ಮುಸ್ಸಂಜೆ ಅಡಿಯಲ್ಲಿ ಬೀಳ್ವುದು,
ಬಿಸಿ ಬಿಸಿ ಸುದ್ದಿ ತಂದ
ಹತ್ತು ರೂಪಾಯಿಯ ಪತ್ರಿಕೆ
ಸಂಜೆ ವೇಳೆಗೆ ಕೆಜಿಗೆ ಹತ್ತು ರೂಗೆ ಬಿಕರಿಯಾಯಿತು.
ಈ ಜೀವನದಲ್ಲಿ ಎತ್ತರದಲ್ಲಿದ್ದೇವೆಂದು
ಬೀಗುವುದಕ್ಕಿಂತ
ನಮ್ಮ ಸ್ಥಳ ತಳದಲ್ಲಿದೆಯೆಂದುಕೊಂಡರೆ
ಯಾವ ಗೊಂದಲವೂ ಇಲ್ಲ,
ಸಮಯದ ಶಕ್ತಿಯ ಮುಂದೆ
ನಾವೇನೇನೂ ಅಲ್ಲ
-
ಕನ್ನಡದ ಅಸ್ಮಿತೆಯೂ ಈ ನೆಲದ ಧರ್ಮವಾದ ಶರಣ ಸ... read more
ಜನ್ಮದಿನದ ಶುಭಾಶಯಗಳು.
ಸ್ವಂತಕ್ಕಲ್ಲದೆ ಸಮಾಜಕ್ಕಾಗಿ
ದುಡಿದ ನಿಸ್ವಾರ್ಥ ಜೀವಿ
ಎಲ್ಲರ ಏಳ್ಗೆಗೆ ಸಹಕರಿಸುವ ಸದ್ಗುಣ ಭಾವಿ
ಬಡಬಗ್ಗರ ಮಕ್ಕಳ ಪೊರೆಯುತ್ತಿರುವ
ಸಹೃದಯ ಮನಸ್ಸು
ಭಗವಂತನ ಆಶೀರ್ವಾದದಿಂದ
ದ್ವಿಗುಣಗೊಳ್ಳಲಿ ನಿಮ್ಮ ಯಶಸ್ಸು ಆಯಸ್ಸು
ನೀವು ತೋರಿದ ಕರುಣಾದೀವಿಗೆಯಿಂದ
ನಮ್ಮ ಬದುಕಾಗಿದೆ ಬಂಗಾರ
ಸದಾ ನಿಮ್ಮೊಂದಿಗೆ ನಮ್ಮೆಲ್ಲರ ಸಹಕಾರ
ಪ್ರೀತಿಯ ಚಿಕ್ಕಪ್ಪ ಹೃನ್ಮನದಿಂದ
ತಮಗೆ ಜನ್ಮದಿನದ ಶುಭಾಶಯಗಳನ್ನು
ಸಲ್ಲಿಸುತ್ತೇನೆ. ಬಸವಾದಿ ಶರಣರ ಆಶೀರ್ವಾದ
ಸದಾ ನಿಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. 💐🙏💐
ಇಂತಿ
ಡಾ. ಹೆಚ್.ಎಂ. ಮಲ್ಲಿಕಾರ್ಜುನ.-
ನಮ್ಮವರದ್ದೇ ಪ್ರೀತಿಯಲ್ಲಿ
ಮುಳುಗಿರುವ ನಮಗೆ
ನಮ್ಮನ್ನು ದ್ವೇಷಿಸುವವರ ಕಡೆ
ಗಮನಿಸಲು ಸಮಯವೇ ಇಲ್ಲ,
ಅವರೆಡೆಗೆ ಪ್ರೇಮನೋಟವನ್ನು ಬೀರಿ
ಮೌನತಾಳುವ ತಾಳ್ಮೆಯನ್ನು
ಬದುಕು ಕಲಿಸಿಕೊಟ್ಟಿದೆ.
ಪ್ರೀತಿ ಕೊಟ್ಟರೂ ಕೊಡದಿದ್ದರೂ
ನಮ್ಮಿಂದ ಸಿಗುವುದು ಪ್ರೀತಿ ಮಾತ್ರವೇ.
-
ದೊಡ್ಡವರೆಲ್ಲರ ಹೃದಯದಿ ಕಟ್ಟಿದ
ತೊಟ್ಟಿಲ ಲೋಕದಲಿ
ನಿತ್ಯ ಕಿಶೋರತೆ ನಿದ್ರಿಸುತಿರುವುದು
ವಿಸ್ಮೃತ ನಾಕದಲಿ
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ
ಆನಂದದ ಆ ದಿವ್ಯ ಶಿಶು
ಹಾಡಲಿ ಕುಣಿಯಲಿ ಹಾರಲಿ ಏರಲಿ
ದಿವಿಜತ್ವಕೆ ಈ ಮನುಜ ಪಶು
–ಕುವೆಂಪು-
ಭಾರತ ಭಾಗ್ಯ ವಿಧಾತ
ಡಾ. ಬಿ.ಆರ್. ಅಂಬೇಡ್ಕರ
ಜನಮನದಲ್ಲಿ ಅಜರಾಮರ
ಶತಮಾನದ
ಜಾತೀಯತೆ, ಧರ್ಮಾಂಧತೆಗೆ
ನೀತಿಯ ಸೂರ್ಯ
ಧರ್ಮಾಂಧರಿಗೆ ಸದ್ವಿಚಾರದ ಆರ್ಯ
ದೀನ ದಲಿತೋದ್ಧಾರ
ನಿಮ್ಮಂತೆ ಹುಡುಕಲಿ ಇನ್ಯಾರ
ಹೆಣ್ಣು ಮಕ್ಕಳಿಗೆ ಸಮತೆ
ನಿಮ್ಮ ಮಾತು ನಾಡಿಗೆ ಸಂಹಿತೆ
ಜಗತ್ತಿನ ಬೃಹತ್ ಸಂವಿಧಾನದ ಶಿಲ್ಪಿ
ಅರಿವಿಲ್ಲದೇ ನಿಮ್ಮನು ಜರಿದರು ಅಂದು
ನೀವಿಲ್ಲದೆ ಬಳಲಿದೆ ದೇಶವಿಂದು
ನಿಮ್ಮ ಬರುವಿಕೆಯ ಬಯಸಿ
ಸರ್ವರಿಗೂ
ಡಾ.ಬಿ.ಆರ್. ಅಂಬೇಡ್ಕರ್ ಅವರ
ಜಯಂತಿಯ ಶುಭಾಶಯ ಕೋರುವೆ.
-
ಶ್ರೀರಾಮ
ಗಾಂಧಿಯು ಭಜಿಸಿದ
ಕುವೆಂಪು ಸೃಜಿಸಿದ
ಸಂತ ಕಬೀರ ತುಲಸೀದಾಸರ
ಕಾವ್ಯದೊಳಗೆ ಭಕ್ತಿಯ
ಸುಧೆಯ ಹರಿಸಿದ
ಸರಳ ಸುಂದರ
ಸಾತ್ವಿಕ ಭಜೆರಾಮ
ಶೂದ್ರ ಶಂಬೂಕನ
ತಪಕೆ ನಮಿಸಿದ
ಸಮತೆಯ ರಾಮ
ಪರನಾರಿಯ ಮೋಹಿಸಿದ
ರಾವಣನ ವಧಿಸಿದ ರಾಮ
ಜಗವಂದಿಪ ಶ್ರೀರಾಮ
ಜಯಜಯರಾಮ
-
ದ್ವೇಷಕ್ಕೆ ಕಾರಣಗಳು ಬೇಕು
ಪ್ರೀತಿಗೆ ಕಾರಣವೇ ಬೇಕಿಲ್ಲ,
ಆದ್ದರಿಂದ
ನನ್ನ ಆಯ್ಕೆ ಮತ್ತು ಆದ್ಯತೆ
ಪ್ರೀತಿ ಮಾತ್ರ-
ಸತ್ಯಮೇವ ಜಯತೆ
ಸೀತೆಯ ಅಪಹರಿಸಿ ರಾವಣನೇ ಕೊನೆಯಾದ
ದ್ರೌಪದಿಯ ಅಪಮಾನಿಸಿ ದುರ್ಯೋಧನ ಹತನಾದ
ಸಂಸ್ಕೃತಿ ಕಲಿತವನು ವಿಕೃತಿ ಮೆರೆಯಲಾರ
ಸಂಸ್ಕಾರ ಕಲಿತವನು ಯಾರನ್ನೂ ತಿರಸ್ಕರಿಸಲಾರ
ಮೌನಧ್ಯಾನಿಯಾದವನು
ಜ್ಞಾನಿಯಾಗದೆ ಇರಲಾರ
ಸತ್ಯಂವದ ಧರ್ಮಂ ಚರ
ಸತ್ಯಮೇವಜಯತೆ
-
ಬಾಲ್ಯವೆಂಬ ಅಮೃತ ಘಳಿಗೆ.
ನಿರ್ದಿಗಂತ ಬದುಕಿನ ಓಟದಲ್ಲಿ
ಹಿಂದಿರುಗಿ ನೋಡಿದಾಗ
ಬಾಲ್ಯದ ನೆನಕೆಗಳು ಎದೆಯೊಳಗೆ
ಮಧುರಭಾವ ತಂದಿವೆ.
ಹೆತ್ತವ್ವ ಗಲ್ಲವಿಡಿದು ಬಾಚಿದ ತಲೆಯ ಕ್ರಾಪು,
ದೃಷ್ಟಿತಾಗುವಷ್ಟಿಲ್ಲದಿದ್ದರೂ ಕೆನ್ನೆಯ ಮೇಲಿಟ್ಟ ಕಣ್ಕಪ್ಪು,
ಬೆಳ್ಳಗೆ ಕಾಣಲಿ ಎಂದು ಮುಖಕ್ಕೆ ಬಳಿದ ಪಾಂಡ್ಸ್ ಪೌಡರ್
ಸರ್ಕಾರಿ ಶಾಲೆಯಲ್ಲಿ ಮುಂದಣ ಸಾಲಿನಲ್ಲಿ
ಕುಳಿತಾಗ ಶಾರದಾ ಮಿಸ್, ಪ್ರಮೀಳ ಮಿಸ್, ನಿರ್ಮಲ ಮಿಸ್,
ಪ್ರತಿಭಾ ಮಿಸ್, ಮಹಾದೇವಮ್ಮ ಮಿಸ್ ಕೈ ಹಿಡಿದು ತಿದ್ದಿಸಿ ಕಲಿಸಿದ ಅ ಅಕ್ಷರ
ಬದುಕಿನ ಪಾಠವಾಗುತ್ತದೆಯೆಂದು ಊಹಿಸಿರಲಿಲ್ಲ,
ರಾಷ್ಟ್ರೀಯ ಹಬ್ಬಗಳ ಸಂಭ್ರಮ, ಇಡೀ ಊರಿನ ಸುತ್ತಾ ಹೊರಟ ಜಾಥಾ,
ಗೆಳೆಯರೊಡನೆ ಮರಕೋತಿಯಾಟ,
ಜೂಟಾಟ,ಕುಂಟೆಬಿಲ್ಲೆ, ಗೋಲಿಯಾಟ,
ಗಿಲ್ಲಿದಾಂಡು, ಒಡಹುಟ್ಟಿದವರೊಂದಿಗೆ ಕಿತ್ತಾಟ
ಆಗಾಗ ತಪ್ಪಿಗೆ ಬೀಳುತ್ತಿದ್ದ ಅಪ್ಪನ ಏಟು,
ದನಗಳ ಮೇಯಿಸುವ ಕೆಲಸ. ಬಾಲ್ಯದ ಚೇಷ್ಟೆಗಳು ನೆನಪುಗಳು
ಒಂದಾ ಎರಡಾ ಲೆಕ್ಕವಿಲ್ಲದಷ್ಟು.
ಓ ಬಾಲ್ಯವೇ ನೀನೆಷ್ಟು ಸುಂದರ
ಆ ದಿವಸಗಳೇ ಅಮರ.
-
ಏ ಮನುಜಾ ಏತಕೀ ಧಾವಂತ
ಪ್ರಕೃತಿಯನ್ನೊರತುಪಡಿಸಿ
ಮನುಷ್ಯ ಮಾತ್ರ ಓಡುತ್ತಲೇ ಇದ್ದಾನೆ
ಹಣಕ್ಕೆ ಅಧಿಕಾರಕ್ಕೆ ಕೀರ್ತಿಗೆ
ಕಾಣದಾ ಗಮ್ಯಕ್ಕೆ
ಸಿಕ್ಕವರ ತುಳಿದು
ಎಲ್ಲರ ವ್ಯಕ್ತಿತ್ವವ ಅಳೆದು
ತಾಳ್ಮೆ ಕಳೆದು, ಪ್ರೇಮ ತೊರೆದು
ಸಂಬಂಧಗಳ ಮುರಿದು
ಅಹಂಕಾರದಿ ಮೆರೆದು
ಸಾಗುತ್ತಲೇ ಇದ್ದಾನೆ.
ಬೆಳಕೀವ ಭಾನು, ತಂಪೆರೆವ ಶಶಿಯು
ಮಿನುಗೋ ಆ ತಾರೆ, ಹಸಿರುಟ್ಟ ಭೂಮಿ
ಹಸಿವಿಗ್ಹಾಸರೆ ಅನ್ನ, ದಣಿವಾರಿಸಲು ನೀರು
ಬಾಯ್ತುಂಬ ವಾಕ್ಕು, ಮನದಲ್ಲಿ ತೃಪ್ತಿ
ಕಣ್ತುಂಬ ನಿದಿರೆ ಮರೆಯಾದರೆ ಮಾಡುವುದೇನು??
ಅರೆ ಕ್ಷಣ ಕಣ್ಮುಂಚಿ ಅಂತರಂಗದ ಪಿಸುಮಾತು
ಆತ್ಮಸಾಕ್ಷಾತ್ಕಾರವ ಆಲಿಸಿದರೆ
ಸತ್ಯದರ್ಶನವಾದೀತು
ಬದುಕು ಸುಂದರವಾದೀತು.
-