ಗಜಲ್
ಯಾಕೋ ಈ ದಾರಿಗಳು ದಿಕ್ಕು ತಪ್ಪಿಸುತ್ತಿವೆ ಎತ್ತಸಾಗಬೇಕು
ಯಾಕೋ ಅಂತರಂಗದ ಮಾತು ಮೌನವಾಗಿವೆ ಎತ್ತ ಸಾಗಬೇಕು
ನಾಳೆಯ ನೆಮ್ಮದಿಗಾಗಿ ಇಂದಿನ ಬದುಕು ಅಡ ಇಡಬೆಕಾಗಿದೆ
ಸತ್ತ ಹೆಣಗಳು ಈಗ ಗೋರಿಗೆ ಬಾರವಾಗಿವೆ ಎತ್ತ ಸಾಗಬೇಕು
ಉಡಿಯಲ್ಲಿ ಬಿಸಿ ಉಸಿರು ತುಂಬಿಕೊಂಡ ಜೀವ ನಳನಳಿಸುತ್ತಿದೆ
ಬದುಕಿನ ಪ್ರತಿ ಹೆಜ್ಜೆಗಳು ಏದುಸಿರು ಬಿಡುತ್ತಿವೆ ಎತ್ತ ಸಾಗಬೇಕು
ಪ್ರತಿ ಗಲ್ಲಿ ಗಲ್ಲಿಗೊಂದು ದೇವರ ಮೂರ್ತಿ ನೆಲೆನಿಂತು ಕೊಂಡಿವೆ
ಧರ್ಮದ ದಾರಿಗಳು ಕೆಂಪು ರಕ್ತ ಸುರಿಸುತ್ತಿವೆ ಎತ್ತಸಾಗಬೇಕು
ಎಲ್ಲರ ಬಾಯಿ ತುಂಬಾ ಬುದ್ಧ ಬಸವ ಅಂಬೇಡ್ಕರ್ ರ ಜಪತಪ
'ಮಹಾದೇವ' ನೆಪಕ್ಕೆ ಮಹಾತ್ಮರ ನೆನೆಪು ಸುಳಿದಾಡುತ್ತಿವೆ ಎತ್ತ ಸಾಗಬೇಕು.
ಮಹಾದೇವ ಎಸ್. ಪಾಟೀಲ
ರಾಯಚೂರು.-
ಮಾತು ಮುರಿದ ಕ್ಷಣವೇ ಕಡು ವಿರೋಧಿಗಳಾದೇವು. ಒಂದಾದರು ಮತ್ತೆ ಆ ಪ್ರೀತಿ ಮೂಡದಾಯ್ತು.
ಮಹಾದೇವ ಎಸ್, ಪಾಟೀಲ
ರಾಯಚೂರು.-
ಹಾಯ್ಕು
ಕಂದಿಲು ದೀಪ
ನಸುಕಾದ ಬದುಕು
ಸಾಗದ ದಾರಿ.
ಮಹಾದೇವ ಎಸ್,ಪಾಟೀಲ
ರಾಯಚೂರು-
ಆತ್ಮೀಯರೆ,
ನನ್ನ ಗಜಲ್ ಕೃತಿಗೆ ಯಾವ ಹೆಸರು ಸೂಚಿಸುವಿರಿ.
೧) ಬರದ ನಕಾಶೆ
೨) ಬಿಸಿಲು ಬಿದ್ದ ರಾತ್ರಿ
೩) ಸುಡುವ ಬೇಲಿ
೪) ಸುಡುವ ನೆಲ...ಹಸಿದ ಒಡಲು...
೫) ಕತ್ತಲು ಕವಿದ ಗಾಯ.
-
ಗಜಲ್
ಈ ಜಗದ ಧರ್ಮದ ಮಾತಿಗೆ ಯುದ್ಧ ಮಾಡುವುದು ಬೇಡ
ಸಮರಸದ ಶಾಂತಿಗೆ ಹೊಸ ರೂಪ ಬಳಿಯುವುದು ಬೇಡ||
ಕತ್ತಲು ಕವಿದ ರಾತ್ರಿಯಲ್ಲಿ ಇತ್ತಲದ ಗುಂಪು ಸುಡುವಾಗ
ಬುದ್ದನ ಮೌನ ಯುದ್ದದಲ್ಲಿ ನಾವು ಶರಣಾಗುವುದು ಬೇಡ||
ನರ ಮಾಂಸಕ್ಕೆ ಮೆತ್ತಿಕೊಂಡ ಧರ್ಮ ದ್ವೇಷದ ಕಿಚ್ಚು
ಸತ್ತ ಕನಸುಗಳ ಹೆಸರಿನಲಿ ಕೆಂಪು ರಕ್ತ ಹರಿಯುವುದು ಬೇಡ||
ಮನದ ಇರಾದೆಗಳಿಗೆ ಬಿಡದೆ ಕಟ್ಟಿಕೊಂಡ ಜೇಡರ ಬಲೆ
ಮನದ ಬಾವಿಯಲಿ ನಿಂತ ತಿಳಿ ನೀರ ಕದಡುವುದು ಬೇಡ||
ಮಡಿಲ ಯಾತನೆಯಲಿ ಕಮರಿ ಹೋಗುವ ಹೂಗಳು
ಯಾರೂ ಬರೆದ ಜಪದ ಹಾಡಿಗೆ ಲಾಲಿ ಹಾಡುವುದು ಬೇಡ||
ತವನಿಧಿಯಲಿ ಹೂತಿಟ್ಟ ಮನದ ಭಾವನಾತ್ಮಕ ಭಾಷೆ
ಮಹಾದೇವಗೆ ದೊರೆತ ಜ್ಞಾನದ ಗಂಟು ಕದಿಯುವುದು ಬೇಡ||
ಮಹಾದೇವ ಎಸ್,ಪಾಟೀಲ
ರಾಯಚೂರು.
-
ಹಾಯ್ಕುಗಳು.
***********
ನೋಡಿ ನಕ್ಕಳು
ನಾನು ಮನಸೋತೆನು
ಅವಳು ಹುಚ್ಚಿ
----------------------------
ಗಂಡನ ಮನೆ
ಬೆಳದಿಂಗಳ ದೀಪ
ವಿಚ್ಚೇದನ ಮಾತು
---------------------------
ಹೊಲದ ಬೇಲಿ
ಮನೆಗೂ ತಗಲಿತು
ಅನುಮಾನ ದಾರಿ
---------------------------
ಕಂದಿಲ ದೀಪ
ನಸುಕಾದ ಬದುಕು
ಸಾಗದ ದಾರಿ
----------------------------
ಮಹಾದೇವ ಎಸ್,ಪಾಟೀಲ.
ಲಿಂಗಸೂಗೂರು.-
ಹಣತೆ
ಕತ್ತಲೆಯ ಕಡಿದು ಬೆಳಗಲು
ಅಜ್ಞಾನವನು ಅಳಿಸಿ ಹಾಕಲು
ಕತ್ತಲೆಯಿಂದ ಬೆಳಕಿನಡೆಗೆ ಸಾಗಲು
ಹಚ್ಚೋಣ ಬನ್ನಿ ದೀಪವ||
ಮೊಗ್ಗು ಅರಳಿಸಿ ಹೂವಾಗಿಸಲು
ಕ್ರಾಂತಿಯ ಕದಡಿ ಶಾಂತಿ ನೆಲೆಸಲು
ಮನದ ಕಣ್ಣಲಿ ಬೆಳಕ ತುಂಬಲು
ಹಚ್ಚೋಣ ಬನ್ನಿ ದೀಪವ||
ಒಡಲಿನ ಕೊಳೆಯ ತೊಳೆಯಲು
ಬುದ್ದ ಮೌನದಿಂದ ಜಗವ ಗೆಲ್ಲಲು
ಅರುವಿನಂಗಳದಲಿ ಸುಜ್ಞಾನ ಬೆಳಗಲು
ಹಚ್ಚೋಣ ಬನ್ನಿ ದೀಪವ||
ಕೈಗೆ ಕೈಜೋಡಿಸಿ ಹೆಜ್ಜೆ ಹಾಕಲು
ನಯನ ನೋಟದಿ ಪ್ರೀತಿ ಹಂಚಲು
ಮನದ ಪ್ರೇಮ ದೀಪವ ಬೆಳಗಲು
ಹಚ್ಚೋಣ ಬನ್ನಿ ದೀಪವ||
ಜಾತಿ-ಧರ್ಮವನು ಅಳಿಸಲು
ಪ್ರೀತಿ ಪ್ರೇಮವನ್ನು ಬೆಳೆಸಲು
ಜಗಕೆ ಸಮತೆಯ ಸಾರ ಸಾರಲು
ಹಚ್ಚೋಣ ಬನ್ನಿ ದೀಪವ||
ಮನೆ-ಮನಗಳನು ತಣಿಸಲು
ಸುಖ-ಸಮೃದ್ದಿಯನು ಗುಣಿಸಲು
ಭಾವೈಕ್ಯತೆಯ ಭಾವದೀಪ ಬೆಳಗಲು
ಹಚ್ಚೋಣ ಬನ್ನಿ ದೀಪವ||
ಮಹಾದೇವ ಎಸ್,ಪಾಟೀಲ. ಲಿಂಗಸೂಗೂರು
-
ಗಜಲ್
ಜೀವನದ ಜಾಯಮಾನವು ಕಳದೆ ನಿನ್ನದೆ ಗುಂಗಿನಲಿ
ಲೋಕದ ಅರಿವಿನ ಬಟ್ಟಲು ತೊರದೆ ನಿನ್ನದೆ ಗುಂಗಿನಲಿ
ಕದಳಿಯ ಬನದಲಿ ಏಕಾಂಗಿಯಾಗಿ ಕಳೆದು ಹೋದೆ
ಏಕತಾರಿಯ ನುಡಿಸುತ ಕಾಲ ದೂಡಿದೆ ನಿನ್ನದೆ ಗುಂಗಿನಲಿ
ಪ್ರೇಮದ ಬಲೆಗೆ ಸಿಲುಕಿ ನೂರಾರು ಪುಟಗಳ ಗಿಚಿ ಹಾಕಿದೆ
ಕೃತಿಯ ಮುನ್ನುಡಿಗಾಗಿ ನಾನು ಕಾದೆ ನಿನ್ನದೆ ಗುಂಗಿನಲಿ
ಪಾರಿಜಾತದ ಹೂ ತರಲು ಏಳು ಬೆಟ್ಟ ಹತ್ತಿ ಇಳಿದೆ
ಬರಿಗಾಲಲಿ ನಡೆದು ಹೊತ್ತು ತಂದೆ ನಿನ್ನದೆ ಗುಂಗಿನಲಿ
ಬಿದ್ದ ಕನಸುಗಳು ಚದುರಿ ಚರಮಗೀತಯೆ ಹಾಡ ಹಾಡಿದೆ
'ಮಹಾದೇವ'ನಿಗೆ ವಿಧಿಯು ಬೆನ್ನೆರಿ ಸಾಗಿದೆ ನಿನ್ನದೆ ಗುಂಗಿನಲಿ.
ಮಹಾದೇವ ಎಸ್,ಪಾಟೀಲ. ಲಿಂಗಸೂಗೂರು.-