ಗಿಜಿಗುಡುವ ನಗರದ ಮಹಡಿ ಅಡಿಯ ಸೂರಲಿ
ಅಸರುವ ಮಳೆಹನಿಗೆ ಕೈಯೊಡ್ಡುವಾಗ,ಸುರಿವ
ಜಡಿಮಳೆಯ ಚಳಿಗೆ ಮೈಕೊಡವಿ ಹೊಲದಲ್ಲಿ
ಉಳುವ ಅಪ್ಪ ನೆನಪಾದ-
ಅವರಿಬ್ಬರು ಬದುಕ ಪುಸ್ತಕ ಬರೆಯಲು
ಮುಂದಾದರೂ;
ಅವಳು, ಮುನ್ನುಡಿ ಇಂದ ಆರಂಭಿಸಿ
ಬೆನ್ನುಡಿಯವರೆಗು ಅವನನ್ನೇ ಧ್ಯಾನಿಸಿ
ಬರೆದು ಬದಿಗೊತ್ತಿದಳು
ಅವನು, ಅರ್ಪಣೆಯಲ್ಲೂ ಅವಳ ಹೆಸರ
ಬರೆಯಲಾಗದೆ ಪ್ರಿಂಟ್ ತೆಗೆಸಿದನು
-
ಅವಳ್ಯಾರೋ ತನ್ಮನದ ನೋವನ್ನೆಲ್ಲ
ಸೆರಗ ತುದಿಯಲ್ಲಿ ಒರೆಸಿ ಬರೆದುಕೊಂಡಿದ್ದಳು,
ಇವನ್ಯಾರೋ ಚೆಂದದ ಬರಹವೆಂದು ಹೊಗಳಿ
ಹೊಗಳಿ ಓದಿಕೊಂಡನು-
ನಂಗೊಂದಿಷ್ಟು ಹೇಳುವುದಿತ್ತು
ನೀನು ತಡಮಾಡದೆ ಹೊರನಡೆದೆ!!
ಕ್ಯಾಪ್ಶನಲ್ಲಿ ಹೇಳಿದ್ದೀನಿ ವಿರಾಮ
ಸಿಕ್ಕಾಗ ಓದಿಕೋ...-
ಕೋಲ್ಗೇಟ್ ಟೂತ್ಬ್ರಷ್ ಮುಗುಳ್ನಕ್ಕಾಗ
"ಅವನು 'ಶುಭ ಮುಂಜಾನೆ 'ಹೇಳುತ್ತಿದ್ದ
ದಿನಗಳು ಅದೆಷ್ಟು ಚೆಂದಿದ್ದವು! "
ಡಾಬರ್ ರೆಡ್ ಪೇಸ್ಟ್ ಶ್ವೇತ ವರ್ಣದ
ಟೈಲ್ಸ್ ಗಳನ್ನು ಅಂಟಿಕೊಂಡಾಗಿತ್ತು-
ಮಧ್ಯಾಹ್ನ ಜೊರ್ ಮಳೆ, ಮುಂಗಾರಲ್ವ ಜಡಿ ಮಳೆ ಅಂದ್ರೂನು ತಪ್ಪಿಲ್ಲ. ಗಾಳಿ ಯಾವ್ ಮಟ್ಟಕ್ಕೆ ಇದೆ ಅನ್ನೋದಕ್ಕೆ ತೆಂಗಿನ್ ಮರದ್ ಗರಿಗಳೇ ಸಾಕ್ಷಿ, ನಾನೊ ಈ ಕೈಜಾರೋ ವಿವೊ ಮೊಬೈಲ್ ಹಿಡ್ಕೊಂಡು ನೆಟ್ವರ್ಕ್ಗಾಗಿ ಆಕಡೆ ಈಕಡೆ ಬಾಲಸುಟ್ಟಿರೋ ಬೆಕ್ಕಿನ್ ತರ ಓಡಾಡ್ತಿದ್ದೆ, ಈ ಇಸ್ಸನಿ ಹನಿಯೊ ಜಾಡಿಸ್ಕೊಂಡು ಚಳಿ ತರ್ತೀದಾವೆ, ಗಾಳಿ ಶಬ್ದಕ್ಕೂ, ಮಳೆ-ಚಳಿಗೂ, ಸಿಗ್ದೆ ಇರೊ ನೆಟ್ವರ್ಕ್ಗು ಎಲ್ಲಿಂದ ಸಂಬಂಧ ದೇವ್ರೇ, ನಂಗಿನ್ನೂ ಆಗಲ್ಲ ಅಂತ ಒಳಗ್ ಬಂದು ಬೆಂಕಿ ಮುಂದೆ ಚಳಿಕಾಯಿಸೋಕೆ ಬಂದ್ಬಿಟ್ಟೆ. ಅಲ್ಲೋ ಇಲ್ಲೋ ಚೂರ್ ಚೂರೇ ಕನೆಕ್ಟ್ ಆಗೋ ನೆಟ್ವರ್ಕ್ ಅಲ್ಲಿ ಮೈಕ್ರೋಬಯಲಾಜಿ ಕ್ಲಾಸ್ ಅಂತು ಕನೆಕ್ಟ್ ಆಯ್ತು, ಮಶ್ರೂಮ್ ಕಲ್ಟಿವೇಶನ್ ಬಗ್ಗೆ ಒಂದ್ ಇಪ್ಪತ್ತೈದು ನಿಮಷದ್ ವಿಡಿಯೋ ಶುರುವಾಯ್ತು ಅದೆ ಸಮಯಕ್ಕೆ ಅಮ್ಮ "ಪುಟ್ಟಿ, ಅಲ್ಲೊಂದ್ ಪಾತ್ರೆ ತಗೋಬಾರೆ ಹೆಗ್ಗಲಣಬೆ ಆಗಿದಾವೆ, ಇವತ್ತಿನ ಸಾರಿಗಾಯ್ತು ಅಂತ ಒಂದ್ ಕೂಗ್ ಹಾಕಿದ್ಲು ", ಇಂಡೋರ್ ಕ್ಲಾಸ್ ಗಿಂತ ಔಟ್ಡೋರ್ ಕ್ಲಾಸ್ ಚೆನ್ನಾಗಿರತ್ತೆ ಅಂದ್ಕೊಂಡು ಕೈಗ್ ಸಿಕ್ಕಿದ್ ಒಂದ್ ಬಟ್ಟೆ ತೆಗ್ದು ತಲೆಮೇಲ್ ಹಾಕೊಂಡು ಹೊರಟೆ.
-