ಬೆಳವಣಿಗೆಯೇ ಹಾಗೆ...
ಗರ್ಭದಲಿರುವಾಗಿನ ಪಡಿಪಾಟಲನು ಬಲ್ಲವರಾರು
ಇಕ್ಕಟ್ಟಿನಲಿ ಬೆಳೆದು ಹೊರಬಂದಾಗಲಷ್ಟೇ
ಎಲ್ಲರಿಗೂ ಅತಿ ಮುದ್ದು..!-
ರೂಪು ಲಾವಣ್ಯದಲಿ ಮೋಹಕನಾಗಿ ಸೆಳೆದು
ದಿಟವಾಗಿ ಸತ್ಯವನು ಬೋಧಿಸಿದ ಮಹಾರಥಿ
ಓಗೊಟ್ಟು ಬರುವನು ಗೊಂದಲವಿರೆ ನೆನೆದಾಗ
ಗುರುವಾಗಿ ಬಿಡುವನಿವ ಅಂತರಂಗದ ಸಾರಥಿ!-
ಕಾಲಕಾಲಕೆ ಬೆನ್ನ ಹಿಂದಿದ್ದು ಕಾಯುತ
ತೋರುವನು ದಾರಿ ಬದುಕಿನ ಏಳಿಗೆಗೆ
ಮನದ ಮಬ್ಬಿಗೆ ಸ್ವತಃ ದೀವಿಗೆಯಾಗುವನು
ತುಂಬುತಲಿ ಅರಿವನ್ನು ಎದೆಯ ಜೋಳಿಗೆಗೆ..!-
ತಂಗಾಳಿಗೆ ಅವಳದೊಂದು ವಂದನೆಯಂತೆ...
ಅವನು ಆಗಾಗ ಮುಂಗುರಳನು
ಒಪ್ಪ ಮಾಡಲು ನೆಪವಾಗುವುದಕೆ..!-
ಹಲಗೆ ಬಳಪವನು ಹಿಡಿದು
ಬಲು ನಿಷ್ಠೆಯಿಂದ ಕಲಿಯೋಣ
ಬದುಕು ಕಲಿಸಿದ ಪಾಠವನು;
ಮರೆವುದೇತಕೆ ಕಾರಣವು ನೂರಿರಲಿ
ಪಾಠಗಳ ಮೆಲಕು ಹಾಕುತ್ತ ಬೆಳೆಯೋಣ..!-
ಆಗು ಹೋಗುಗಳೆಲ್ಲವೂ ನಿರಂತರ
ಹಾದಿಯಲಿನ ಅನಿರೀಕ್ಷಿತ ಬದಲಾವಣೆಗೆ
ತೋರುವ ಪ್ರತಿಕ್ರಿಯೆಯ ರೀತಿಯಷ್ಟೇ
ನಮ್ಮ ಪರಿಧಿಯಲ್ಲಿರುವುದು..!-
ಹಬ್ಬಿದಂತೆಲ್ಲ ಹೂವುಗಳನು ಕಾಯಾಗಿಸಿ ಪೋಷಿಸುತ ಹೆಣ್ತನವ ಸಾರುವ ಸೂಕ್ಷ್ಮ ಲತೆ..!-
ಅದರ ಪರಿಮಳವ ಆಘ್ರಾಣಿಸಲು
ದಿವ್ಯ ನಗುವನು ಆಸ್ವಾದಿಸಲು
ಕೀಳುವುದೊಂದೇ ಮಾರ್ಗವಲ್ಲ..!
-
ಭೂತ, ವರ್ತಮಾನವಷ್ಟೇ ಅಲ್ಲದೇ ಭವಿಷ್ಯದ ಕಾಲಘಟ್ಟದಲ್ಲೂ ಸರಾಗವಾಗಿ ಸಾಗುವ ಪ್ರಕ್ರಿಯೆ..!
-