ಕೃಷ್ಣನ ಸಖಿಯೆಂಬ ಹೆಗ್ಗುರುತಿಲ್ಲದಿದ್ದರೂ ಮಾಧವನ ಮಡಿಲೊಳ... read more
ಅಷ್ಟಕ್ಕೂ ಕತ್ತಲೆಯೇನೂ
ಮನೆಯ ಒಳಖೋಲಿಯೊಳಗವಿತು
ಬೆಳಕಸೂಡಿಗೆ ಕರಗುವ
ಗಾಢತೆಯಷ್ಟೇ ಅಲ್ಲ;
ತನ್ನವರಲ್ಲದವರಿಗೆ ಹಿಡಿ ಪ್ರೀತಿಯ
ನೀಡಲೂ ತೊಡರುವ,
ಮನದ ಬತ್ತಿದ ಸೊಡರೂ
ಅಂಧಕಾರದ ತವರೇ...-
ದೀಪದ ಕಿಡಿಯೊಂದಿಗಿನ ಕಿರು ನಂಟು ಸಾಕಂತೆ, ಸುಡುವಾಂಧಕಾರದ ಕಡು ಕಂದರವ ಕಳೆಯಲು..
ನಿರ್ಮೋಹದೆಡೆಗಿನ ನಿಚ್ಚಳ ಎಳೆಯೊಂದೇ ಸಾಕು,
ಬಿಗಿಹಿಡಿವ 'ಬಂಧ'ನದ ಕೊಂಡಿಯೊಂದ ಕಳಚಲು...
-
ಮುಗಿಲೆತ್ತರಕ್ಕೆ ಮೊಗವೆತ್ತಿದ
ಮಳೆಗುಲಾಬಿಯಂತಿರಲಿ ಬದುಕು..
ಭೇಟಿಯಾಗುವ ಪ್ರತಿ ಜೀವಬಿಂದುಗಳನ್ನೂ
ಮೋಹವಿಲ್ಲದೆ ಬೀಳ್ಕೊಡುತ್ತಿರಬೇಕು,
ಯಾವ ಮಾಯಾಬಿಂದುಗಳಿಗೂ
ಮನದೆಸಳು ತೊಯ್ದು ಹೋಗದಂತೆ...-
ಮತ್ತೇನಿಲ್ಲ,
ಸದಾ ಮುಖ ಗಂಟಿಕ್ಕುವ ಅನಕ್ಷರಸ್ಥಳ ಎದೆಯಲ್ಲಿ, ನಗುವೆಂಬ ಸ್ವರಾಕ್ಷರಗಳನ್ನು ಬಿತ್ತಿದವನಿಗೆ,
ಕಡೆಗೂ ಮುಗುಳ್ನಗುವಿನ ದಕ್ಷಿಣೆ ನೀಡಲಾರದೆ ಗುರುಋಣಕ್ಕೆ ಬಿದ್ದ ಭಾವವೊಂದು,
ಸುಮ್ಮನಿಲ್ಲದೆಯೇ ಬೆನ್ನಹುರಿಗೆ ಜೋತುಬಿದ್ದಿದೆ...-
ಖರೇ ಶ್ಯಾಮಾ...
ನಿನ್ನ ಕೊಳಲ ನಾದಕೆ ಬೃಂದಾವನವೆಲ್ಲಾ ಮೋಹಪರವಶವಾದರೆ,
ಈ ಗೋಪಿಕೆಗೆ ಮಾತ್ರ, ನೀ ಜೋಗುಳದನಿಯಾದೆ...
ನಿನ್ನೆದೆಯ ಲಾಲಿಗೆ ನಾ ಅಂಬೆಗಾಲಾದೆ..-
ಬೆಳಕು ರಾತ್ರಿಗಳ ಮಧ್ಯದ
ಸಂಜೆಯಲ್ಲುರಿವ ಬುಡ್ಡಿದೀಪದಂತೆ,
ಜನನ ಮರಣಗಳ ನಡುವಿನ
ತಿರುವಿನಲ್ಲಾಗುವ ಭೇಟಿಯೇ ಈ ಬದುಕು...
ಉರಿವ ದೀಪಕ್ಕೆ ಸುರಿವ ಎಣ್ಣೆಯೇ ಜೀವಾಲಾಪವಾದರೆ,
ಹರಿವ ಬದುಕಿಗೆ ಆತ್ಮದುನ್ನತಿಯೇ ದಾರಿದೀಪ-