1980ರ ದಶಕದ ಮಲೆನಾಡಿನ ಹಿನ್ನಲೆಯ ರೋಚಕ ಕಾದಂಬರಿ ಇದು.
ಕಾಲಘಟ್ಟದಲ್ಲಿ ಮಲೆನಾಡನ್ನು ಇನ್ನಿಲ್ಲದಂತೆ ಕಾಡಿದ ಶ್ರೀಗಂಧದ ಕಳ್ಳ ಸಾಗಾಣಿಕೆ ಹಾಗೂ ಒತ್ತುವರಿಯಂತಹ ವಿಷಯಗಳನ್ನು ಬಳಸಿಕೊಂಡು ಮೈನವಿರೇಳಿಸುವಂತಹ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ 'ಕೃಷ್ಣ ಭಟ್ ಕಾಶಿ'ಯವರು. ಶರಾವತಿ ಹಿನ್ನೀರಿನ ತಪ್ಪಲ್ಲಿನಲ್ಲಿರುವ ಪುಟ್ಟ ಊರಾದ ‘ಅರಳಗೋಡು’ ಹೇಗಿದ್ದಿರಬಹುದು. ಬೇರೆ ಊರಿನಿಂದ ತನ್ನ ‘ಪತ್ರಮಿತ್ರೆ’ಯನ್ನು ಹುಡುಕಿಕೊಂಡು ಬಂದ 'ಮೂರ್ತಿ' ಅನ್ನುವ ಪಾತ್ರ ಆ ಊರಿನ ಜಾಲವೊಂದರಲ್ಲಿ ಸಿಕ್ಕಿಬೀಳುವುದಾದರೂ ಹೇಗೆ? ಹೀಗೇ ಸಿಕ್ಕಿ ಹಾಕಿಕೊಂಡವನು ಎಲ್ಲವನ್ನೂ ಭೇದಿಸಿ ಹೊರಬಹುತ್ತಾನಾ? ಎಂಬ ರೋಚಕ ಎಳೆಯನ್ನು ಇಟ್ಟುಕೊಂಡು ಹೆಣೆಯಲಾದ ಕತೆಯೇ ‘ಅರಳಗೋಡು’! ಕೊನೆ ಕಾಣುವುದು ಓದುಗರು ಊಹಿಸದ ಒಂದು ದುರಂತ ಅಂತ್ಯದಲ್ಲಿ.-
ಭಾವನೆಗಳ ನೆನಪಿನ ಜೊತೆ ಬರಹಗಳ ಪಯಣ....😍
ಕನಸೇ ಕಾಡುಮಲ್ಲಿಗೆ ಒಂದು Young Adult Fiction ಪುಸ್ತಕ. ಕನ್ನಡದಲ್ಲಿ ಇಂಥ ಪ್ರಯತ್ನಗಳು ತುಂಬಾ ಕಡಿಮೆ. ಈಗಿನ ಪೀಳಿಗೆಯ ಯುವ ಜನರಿಗೆ ಮಿಸ್ಟ್ರಿ ಥ್ರಿಲರ್ ಬಿಟ್ಟು ಬೇರೆ ಜಾನರ್ ಓದಿಸಿ ಕನ್ನಡ ಪುಸ್ತಕ ಓದೋ ಹಂಬಲ ಮೂಡಿಸಲು ಈ ಪುಸ್ತಕ ಸೂಕ್ತವಾಗಿದೆ.
ಕತೆ ಶುರುವಿನಿಂದ ಹಿಡಿದು ಕೊನೆತನಕ ಹ್ಯುಮರ್ ಇದ್ದೇ ಇದೆ. ಶುರುವಲ್ಲಿ ಭಾಷೆಯ ಪ್ರಯೋಗ, ಆಂಗ್ಲ ಪದಗಳು ಹಾಗೂ ಉದ್ಭವಿಸೋ ಸನ್ನಿವೇಶಗಳು ನಗು ಬರಿಸೋ ಕಾರಣವಾದರೆ ಕೊನೆಯ ತನಕ ಇರೋ ಭಾಷಾ ಪ್ರಯೋಗ ಅಲ್ಲಲ್ಲಿ ಒಂದು ಸ್ಮೈಲ್ಗೆ ಕಾರಣ. ಕೆಲವೊಂದು ಚಾಪ್ಟರ್ಗಳು ಮತ್ತೆ ಮತ್ತೆ ಓದಿ ಯೋಚ್ನೆ ಮಾಡಿ ಮಾಡಿ ಹೊಟ್ಟೆ ತುಂಬಾ ನಕ್ಕಿದ್ದೂ ಉಂಟು. ಸಾವರಿಸಿಕೊಂಡು ಕಚಗುಳಿ ನೀಡುತ್ತಾ ಹೋಗುವ ಕಾದಂಬರಿ ಕಡೆ ಭಾಗದಲ್ಲಿ ದುರಂತಮಯವಾಗಿ ಕೊನೆಯಾಗುವುದು ಸ್ವಲ್ಪ ಬೇಸರವಾಯಿತು.
-
"ಎಡೆ" ಯುವ ಲೇಖಕರು ಹಾಗೂ ಚಲನಚಿತ್ರದ ನಿರ್ದೇಶಕರು ಆದ ಪ್ರವೀಣ್ ಕುಮಾರ್ ಜಿ ಬರೆದಿರುವ ಚೊಚ್ಚಲ ಕಥಾ ಸಂಕಲನವಾಗಿದೆ.
ಒಂಬತ್ತು ಕಥೆಗಳು ಹೊಂದಿರುವ ಈ ಪುಸ್ತಕ ಅತ್ಯಂತ ಆಳವಾಗಿ ಕೆಲವು ಬದುಕಿನ ಜೊತೆ ಬದುಕಿರುವರ ಕಥೆಯನ್ನು ಹೇಳುತ್ತದೆ. ಅವ್ವನ ಟೆಲಿಗ್ರಾಂ ಇಂದ ಶುರುವಾಗಿ ತಂಗಿಯ ಮೊದಲ ಅಳುವಿಗೆ ಸಾಕ್ಷಿ ಆಗುವ ಮಗಳು. ಸ್ಮಶಾನ ಕಾಯುವ ಬಸಜ್ಜನ ಹಿರಿಮೆ ಅವನು ಎದುರು ನೋಡುವ ಸಾವು ಮತ್ತು ಒಂಟಿ ಕಾಲಿನ ಕಾಗೆಯ ಕಥೆ. ಪ್ರೇಮಿಗಳ ರಾಯಭಾರಿಯಾಗಿ ಇದ್ದು ಮತ್ತೆ ಜಂಜಾಟಕ್ಕೆ ಸಿಕ್ಕಿಕೊಳ್ಳುವ ಒಬ್ಬ ಹುಡುಗನ ಕಥೆ, ಅಜ್ಜ ಅಜ್ಜಿಯ ಅಕ್ಕರೆಯ ಮೊಮ್ಮಗನ ಕಥೆ. ಮಂಗಳಮುಖಿಯವರ ಜೀವನ ಶೈಲಿ ಅವರ ಬದುಕಿನ ಬಗೆ ಹಾಗೂ ಮನ ಮತ್ತು ಮನೆ ಸ್ಥಿತಿ ಬಗ್ಗೆ, ಮೋಹನ ರಾಧಾ ಆಗಿ ಬದುಕುವ ಕಥೆ. ಮಗನೆ ಅಪ್ಪನ ಸಾವಿಗೆ ಕಾಯುವ ಒಂದು ಕುಟುಂಬದ ಕಥೆ. ಉಡ ಪ್ರಾಣಿಯ ಮಾರಲು ಹೋಗಿ ಅವರನ್ನು ಬೇರೆ ರೀತಿಯಲ್ಲಿ ಪ್ರಚಾರ ಗಿಟ್ಟಿಸುವ ಕಥೆ. ಇಬ್ಬರ ಮಕ್ಕಳ ಗುಟ್ಟಿಗೆ ಸಾಮಾಜಿಕ ದೃಷ್ಟಿಕೋನದ ಹೊಸ ಬಗೆಯ ಚಿಂತನೆ ಹುಟ್ಟುವ ಕಥೆ.
ಕೊನೆಯಲ್ಲಿ ಜೂನಿಯರ್ ಆರ್ಟಿಸ್ಟ್ ಹನುಮಜ್ಜನ ಕಥೆ ಕೂಡ ಒಂದು ಮದ್ಯಮ ವರ್ಗದ ಜನರ ಬದುಕು ಸುಧಾರಣೆಯ ಕಥೆಯಾಗಿದೆ. 'ಒಟ್ಟಾರೆಯಾಗಿ
ಎಲ್ಲ ಕಥೆಗಳು ಅದರದೇ ಆದ ಅನುಭವ ಕೊಡುವ ಸಾಹಿತ್ಯದ ಶ್ರೀಮಂತಿಕೆ ತುಂಬಿದೆ.
ಓದುಗರ ಕಾಡುವ ಸಾಲುಗಳು:
"ಬೆಳಿಯಾ ಕೂಸಿಗೆ ಅವ್ವ ಇರ್ಬೇಕು"
"ಆ ಅವ್ವ ಅನ್ನಾಕಿ ಹಡ್ದಾಕೇ ಆಗಿರ್ಬೇಕು".
-
ಪ್ರೀತಿಗೆ ಇಂತಿಷ್ಟೇ ಪರಿಮಿತಿ ಪರಿಮಾಣಗಳಿರುವುದಿಲ್ಲ. ಪ್ರೀತಿ ಅದಮ್ಯ, ಅಮೂರ್ತ, ನಿರಂತರ, ನಿರಾಕಾರ! ಪ್ರೀತಿ ಭಗವಂತನ ಭಾಷೆ ಎನ್ನುತ್ತಾ ತೀವ್ರವಾಗಿ ಪ್ರೀತಿಗೊಳಪಟ್ಟು ಉಳಿದು ಹೋದ ಹೃದಯಗಳೆಲ್ಲಾ ಈ ಪ್ರೀತಿ ಸರಿ ಇಲ್ಲಪ್ಪ ಎಂದುಬಿಡುವಂತಹ ಒಂದು ಪುಸ್ತಕ "ಮಾಂಡೋವಿ". ಮಾಂಡೋವಿ ಒಂದು ನದಿಯ ಹೆಸರು. ಗೋವಾದಲ್ಲಿ ಹರಿಯುತ್ತದೆ. ಮಹದಾಯಿ ಇದೆಯಲ್ಲ ಅದೇ ಮಾಂಡೋವಿ.
ಅದರದ್ದೇ ಹರಿವು ಅದರದ್ದೇ ಸೆಳೆತ, ಅದರದ್ದೇ ಮಿಳಿತ ಮತ್ತು ಅದರಷ್ಟೇ ತುಡಿತಗಳಿವೆ ಅಕ್ಷರ ಮಾಂತ್ರಿಕನ ಪುಸ್ತಕದಲ್ಲಿ.
ಐದು ದಶಕಗಳ ಕಾಲ ಮಾಂಡೋವಿಗಾಗಿ ಕಾಯುತ್ತಿದ್ದ ಚಲಪತಿಯ ಪರಿಶುದ್ಧ ಪ್ರೀತಿಗೆ ಬೆಲೆ ಕಟ್ಟಲಾಗುವುದುಂಟೇ ?? ಆ ಪ್ರೀತಿಯ ತಂಗಾಳಿ ಆಕೆಯನ್ನು ಸೋಕದೇ ಹೋಯಿತೇ? ಅಥವಾ ಮತ್ತೊಬ್ಬ ಅದೃಷ್ಟ ಶ್ರೀಮಂತನ ಹಾಜರಾತಿಯಲಿ ಚಲಪತಿಯ ಪ್ರೀತಿ ಪರಿಗಣನೆಗೆ ಬರಲಿಲ್ಲವೇ ?? ನಿಜವಾದ ಪ್ರೀತಿಗೆ ಯಾವಾಗಲೂ ದುಃಖವೇ ಉಡುಗರೆಯಾಗುವುದೇ?? ಪ್ರೀತಿಯೂ ಪರಿಶುದ್ಧವಾದರೆ ಸಾಕೇ? ಪ್ರೀತಿಯಲ್ಲಿ ಪ್ರಾಮಾಣಿಕತೆ ಒಂದಿದ್ದರೆ ಸಾಕೇ? ಪ್ರೀತಿಯಲ್ಲಿ ಕಾಯುವಿಕೆ, ಸಹನೆ, ತಾಳ್ಮೆ, ನಿಸ್ವಾರ್ಥತೆ ಇದ್ದರೆ, ಪ್ರೀತಿಸಿದವರು ನಿನ್ನವರಾಗುವರೇ???ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪಡೆಯಲು ಒಂದಿಷ್ಟು ಪುಣ್ಯ ಮತ್ತು ಅದೃಷ್ಟವೂ ಬೇಕಲ್ಲವೇ!
ಹೀಗೂ ಪ್ರೀತಿಸಬಹುದೇ ಎಂದು ಪ್ರಶ್ನೆಯುಳಿಸಿಯೇ ನಿಟ್ಟುಸಿರಿನೊಂದಿಗೆ ಕಾದಂಬರಿ ಮುಗಿದು ಹೋಗುತ್ತದೆ-
ಕಲ್ಪನೆ...!
ಸರಿದು ಹೋಗುವ ಕಾಲದ ಮುಂದೆ ಸರಿಸಮನಾಗಿ ನಿಲ್ಲಬಹುದೇ,
ಕಾಣದ ಪ್ರೇಮಕ್ಕೂ ಕಾಣುವ ಪ್ರೀತಿಗೂ ಹೋಲಿಕೆ ನೀಡಬಹುದೇ,
ಆದಮ್ಯ ಪ್ರೇಮದ ಘಮ ಮೌನದಿಂದಲೇ ಪಸರಿಸಿ ಘಮಿಸ ಬಹುದೇ,
ಜೊತೆ ಇಲ್ಲದ ನೆರಳ ನೆನೆದು ಬದುಕು ಸಾಗಿಸುವುದು ಅಷ್ಟು ಸುಲಭ ಸಾಧ್ಯವೇ..!
-
ಸಾಯಿಸುತೆ ಬರೆದಿರುವ ಕೌಟುಂಬಿಕ ಕಾದಂಬರಿಯೇ ಹೇಮಾದ್ರಿ.
ಸಮಾಜದಲ್ಲಿ ಹೆಸರಾಂತ ಮನೆತನವೆನಿಸಿಕೊಂಡ ಕುಟುಂಬದ ಕಥೆಯಾಗಿದ್ದು, ಕುಟುಂಬದ ಮೌಲ್ಯ,ಸಮಾಜದ ಬಗೆಗಿನ ಕಾಳಜಿ, ಬಾಂಧವ್ಯಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ, ಕಥೆಯಲ್ಲಿ ಬರುವ ವೈದೇಹಿಯ ಸಂಸ್ಕಾರ, ರಾಜೀವನ ದೃಢತೆ, ಅಶೋಕ ಮತ್ತು ರಂಜಿನಿಯ ಪಾತ್ರಗಳು ಎಲ್ಲರಿಗೂ ಮೆಚ್ಚುಗೆ ಆಗುತ್ತವೆ, ಹಾಗೇ ದೇವಯಾನಿಯ ಹಠ ಎಷ್ಟೇಲ್ಲಾ ಅನಾಹುತಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ, ಮನುಷ್ಯ ಋಣಭಾರಕ್ಕೆ ಬಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿ ಅನುಭವಿಸುತ್ತಾನೆ ಎನ್ನುವುದನ್ನು ಬಹಳ ಸ್ಪಷ್ಟವಾಗಿ ಕಥೆ ನಿರೂಪಿಸುತ್ತದೆ. ಒಟ್ಟಾರೆಯಾಗಿ ಕಾದಂಬರಿ ರಾಮಾಯಣದ ಇಂಪದ ನೆನಪಿನ ಗಾಳಿಯನ್ನು ಕಥೆಯ ಮಧ್ಯ ಮಧ್ಯ ಓದುಗರಿಗೆ ನೀಡುತ್ತದೆ.-
ಹೇಳಲಾಗದೇ ಉಳಿದ ಭಾವನೆಗಳೆಷ್ಟೋ...
ಮನದಿ ಬೇಸರದಿ ಮೂಡಿದ ಪ್ರಶ್ನೆಗಳೆಷ್ಟೋ...
ಭಾವನೆಗಳ ಬದಿಗಿಟ್ಟು ಬದುಕು ಸರಿಯುತಿದೆ...
ಉತ್ತರ ಸಿಗದ ಪ್ರಶ್ನೆಗಳ ಹೊತ್ತು ಬಾಳು ಸಾಗುತಿದೆ...-
ಭೈರಪ್ಪ ರವರ ಭಾಷಾಪ್ರಯೋಗ, ಕಾದಂಬರಿಯಲ್ಲಿ ಪಾತ್ರಗಳು ಬಂದು ಹೋಗುವ ರೀತಿ, ಕಾದಂಬರಿಯುದ್ದಕ್ಕೂ ಎರಡು ಮುಖ್ಯ ಪಾತ್ರಗಳ ನಿರೂಪಣೆ ಮತ್ತು ಅದರಲ್ಲಿನ ವಿಭಿನ್ನತೆ, ತೀಕ್ಷ್ಣ ವಿಷಯಗಳನ್ನು ಹೇಳುವಲ್ಲಿ ಸೃಷ್ಟಿಸಿರುವ ಮಾರ್ಮಿಕತೆ ಎಲ್ಲವೂ ಮಿಳಿತಗೊಂಡು ಅಲೆದಲೆದು ಓದುಗನೆದೆಗೆ ಸೀದಾ ಧುಮ್ಮಿಕ್ಕುವ ಅತಿ ಅಪರೂಪದ ಪುಸ್ತಕ "ಜಲಪಾತ". ಜೀವನದ ಕೆಲ ಗಹನವಾದ ವಿಷಯಗಳನ್ನು ಆಳವಾಗಿ ಚರ್ಚಿಸುವ ಕಾದಂಬರಿ.
ಸೃಷ್ಟಿಶಕ್ತಿಯೇ ಜೀವನದ ಮೂಲ. ಆ ಶಕ್ತಿಯೇ ಜೀವನಪ್ರವೃತ್ತಿ ಮತ್ತು ಜೀವನಪರಿಸ್ಥಿತಿಗಳ ನಡುವಿನ ತಾಕಲಾಟದ ಮೂಲವೂ ಆದರೆ? 60% ರಷ್ಟು ಕತೆ ಮುಂಬಯಿಯಲ್ಲಿ ನಡೆಯುವುದರಿಂದ, 4೦ ನೇ ದಶಕದ ಮುಂಬಯಿಯ ಜೀವನಶೈಲಿಯನ್ನು ಒಬ್ಬ ಚಿತ್ರಕಲಾವಿದನ ದೃಷ್ಟಿಕೋನದಿಂದ ಕಾಣಬಹುದು. ಮುಂಬಯಿ ಎನ್ನುವುದು ಜೀವನ ನಾಡಿಗಳನ್ನು ಆಳುವ ಹೃದಯ. ಇಂತಹ ಊರಿನಲ್ಲಿ ಚಿತ್ರ ಉಳಿಯುತ್ತದೆಯೇ? ಸಂಗೀತ ಹುಟ್ಟುತ್ತದೆಯೇ? ಪ್ರಜ್ಞೆಯು ತಲುಪದ ಯಾವುದೋ ವೈಜ್ಞಾನಿಕ ವಾದದ ಆಧಾರದ ಮೇಲೆ ನಮ್ಮ ವಿಶ್ವಾಸಗಳನ್ನು ಗಾಳಿಗೆ ತೂರಲಾಗುತ್ತದೆಯೇ? ಜೀವಸೃಷ್ಟಿಯೆಂದರೆ ದುರಂತವೇ? ಜೀವಸೃಷ್ಟಿ ಮತ್ತು ರತಿಗಳೆರಡೂ ಭಿನ್ನವಾದ ಕ್ರಿಯೆಗಳೇ? ಹೀಗೆ ಕಾದಂಬರಿಯ ಕತೆಯು, ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಹೆಣ್ಣಿನ ಸ್ವಂತ ಅನುಭವಗಳ ವರ್ಣನೆಯ ರೀತಿಯಲ್ಲಿ ಸಾಗುತ್ತದೆ. ಗರ್ಭದ ವಿಕಾಸ ಮತ್ತು ಜನನಕ್ಕೆ ಪೂರ್ವಭಾವಿಯಾದ ಗರ್ಭಿಣಿಯ ನೋವಿನ ಅನುಭವವನ್ನು ಚಿತ್ರಕಲೆಯಲ್ಲಿ ವಿವರಿಸಿರುವ ರೀತಿಯಂತೂ ಅತ್ಯದ್ಭುತ.
ಒಂದು ಕೃತಿ ಅನುಗಾಲ ಬದುಕಬೇಕು ಎಂದರೆ ಅದರಲ್ಲಿನ ವಿಷಯ ಸಾರ್ವಕಾಲಿಕವಾಗಿರಬೇಕು ಎನ್ನುವುದಕ್ಕೆ ಉತ್ತಮ ನಿದರ್ಶನ ಈ ಪುಸ್ತಕ.-
"ದಿ ಕ್ಯೂರಿಯಸ್ ಕೇಸ್ ಆಫ್ ತಾರಾಗುಪ್ತ" ಕಾದಂಬರಿ ಓದುಗರಿಗೆ ಕುತೂಹಲ ಮೂಡಿಸುತ್ತದೆ. ಪ್ರಸಿದ್ಧ ಲೇಖಕಿಯೊಬ್ಬಳು ಬರೆದ ಥ್ರೀಲರ್ ಕಾದಂಬರಿ ಮಧರ ನಗರದ ಮರ್ಡರ್ ಪುಸ್ತಕದ ಖ್ಯಾತಿಯ ತಾರಗುಪ್ತ ಬರೆದ ಡೇತ್ ನೋಟ್ ಪೇಮಸ್ ಡಿಟೆಕ್ಟಿವ್ ಹಿಮವಂತನ ಕೈಸೇರಿ ಅಲ್ಲಿಂದ ಆಂರಭವಾಗುವ ಕಥೆ, ಸೈಕೋ ಕಿಲ್ಲರ್ ನ ಸರಣಿ ಕೊಲೆಗಳು, ಡಬಲ್ ಕಿಡ್ನ್ಯಾಪ್ ಫೇಕ್ ಮರ್ಡರ್ , ಡಬಲ್ ಅಸ್ಥಿಪಂಜರ, ತಲೆ ತಿರುಗುವ ಕಥಾ ಹಂದರ ಆ ಪುಸ್ತಕದ ಘಟನೆಗಳಿಗೂ ಅಲ್ಲಿನ ನೈಜ ಘಟನೆಗಳಿಗೂ ಏಕ ಸ್ವಾಮ್ಯವಾಗಿರುತ್ತದೆ.
ಹಲವರ ಸುತ್ತ ಅನುಮಾನದ ಸುಳಿ ಸುತ್ತಿ ಆ ಘಟನೆಯ ಕೇಂದ್ರ ಬಿಂದು ರೂವಾರಿ ಯಾರೆಂಬುವುದು ತಿಳಿದಾಗ ಓದುಗರಿಗೆ ಆಶ್ಚರ್ಯ ಆಗದೇ ಇರಲಾರದು, ಒಂದು ಕಥೆಯ ಪ್ರಸಿದ್ಧಿಗೊಸ್ಕರ ಲೇಖಕಿಯೊಬ್ಬಳು ಸೈಕೋ ಕಿಲ್ಲರ್ ಆಗಬಲ್ಲಳು ಎಂಬುವುದು ಊಹಿಸಲಾಗದ ಸಂಗತಿ.-