Kavya N  
1.1k Followers · 98 Following

ಮುಡಿಯೇರದ,
ಗುಡಿಸೇರದ,
ಕಾಡ ಹೂ..
Joined 29 September 2018


ಮುಡಿಯೇರದ,
ಗುಡಿಸೇರದ,
ಕಾಡ ಹೂ..
Joined 29 September 2018
20 APR 2021 AT 13:58

ಕರಿಗತ್ತಲಲಿ ಇಳೆ ಮಲಗಿರೆ
ಚುಕ್ಕಿಗಳ ಚಾದರ ಹೊದಿಸಿದವರಾರೆ ಸಖಿ?
ನಸು ಬೆಳಕಲಿ ಮುಸುನಗುತಿರೆ
ಇಬ್ಬನಿ ಮಳೆ ಚಿಮಕಿಸಿದವರಾರೆ ಸಖಿ?

-


7 MAY 2021 AT 17:06


ರೆಪ್ಪೆ ಮಿಟುಕಿಸದಂತೆ ಕರಿಮುಗಿಲನ್ನೇ ದಿಟ್ಟಿಸುತ್ತಿದ್ದ ನಿಧಿ, ಅರೆಕ್ಷಣ ದೃಷ್ಟಿ ಬದಲಿಸಿ ಕೈಯತ್ತ ಹರಿಸಿದಳು, ಪುಟ್ಟ ರೆಕ್ಕೆಯ ಮೇಲೆ ಅದೆಷ್ಟು ಬಣ್ಣಗಳು! ಈ ಪುಟ್ಟ ಜೀವಿಗೆ ಅದೆಷ್ಟು ಬಣ್ಣವಿತ್ತಿರುವೆ ದೇವಾ! ಮತ್ತೇಕೆ ನನ್ನ ಬದುಕಿಗೆ ಬರೀ ಕತ್ತಲೆ ತುಂಬಿರುವೆ, ಇತ್ತ ಅಮ್ಮ ಅಪ್ಪ ಮೆಚ್ಚಿದ ಹುಡುಗನ ತಿರಸ್ಕರಿಸಿ ಅವರನ್ನ ನೋಯಿಸಲಾರೆ, ಅತ್ತ ಜೀವಕ್ಕೆ ಜೀವವಾಗಿರುವ ನನ್ನಿಯನ ತೊರೆದು ಬದುಕಿರಲಾರೆ, ನನಗೆ ನೀವಿಬ್ಬರೂ ಬೇಕು ಇಲ್ಲ ಬದುಕೇ ಬೇಡ ಅಂತಲೂ ಹೇಳಿಯಾಗಿದೆ. ಉಹೂಂ ಪ್ರಯೋಜನವಾಗಿಲ್ಲ. ಎಲ್ಲವೂ ಶೂನ್ಯವಾದವಳಿಗೆ, ಅದೇಕೋ ಆ ಚಿಟ್ಟೆಯ ಬಣ್ಣದ ರೆಕ್ಕೆಗಳಲ್ಲೇ ಈ ಸೃಷ್ಟಿಯ ಶಕ್ತಿಯೆಲ್ಲ ಇದೆಯೆಂದೆನಿಸಿತು. ನನ್ನ ಬಾಳಿಗೂ ಭರವಸೆಯ ಬಣ್ಣಗಳನ್ನ ನೀಡಲಾರೆಯ ಪ್ರಭು ಎಂದುಸುರಿದಳು. ಅಷ್ಟೇ, ಮತ್ತೆ ಕರಿಮುಗಿಲನು ದಿಟ್ಟಿಸಲು ಆಗಸ ನೋಡಿದರೆ, ಅರೆ!! ಮುಗಿಲೇ ಇಲ್ಲ ಅಲ್ಲಿ, ಹೊಳೆಯುವ ನೇಸರನಿದ್ದಾನಲ್ಲಿ! ಅದೆಷ್ಟು ದಿವ್ಯ ಪ್ರಭೆ! ಹಿಂದೆ ಯಾರೋ ನಕ್ಕಂತೆ ಅನಿಸಿ ತಿರುಗಿ ನೋಡಿದರೆ, ಏನಾಶ್ಚರ್ಯ ಅಪ್ಪ ಅಮ್ಮ ನಡುವೆ ಅವಳ ನಲ್ಲ ನಗುತ ಅವಳೆಡೆಗೆ ಬರುತ್ತಿದ್ದಾರೆ, ಮೇಲೆ ನಭದಿ ಒಲವ ಕಾಮನ ಬಿಲ್ಲು! ಅರೆ ಚಿಟ್ಟೆ, ಇದೋ ಕನಸೋ, ನನಸೋ ಎನ್ನುತ್ತ ಕೈ ನೋಡಿದರೆ ಭರವಸೆ ಬಣ್ಣವ ಬಾಳಿಗೆ ಇತ್ತು, ಪುಟ್ಟ ರೆಕ್ಕೆಗಳ ಬೀಸುತ್ತಾ ಚಿಟ್ಟೆ ಅಲ್ಲೆಲ್ಲೋ ನೀಲಿಯ
ಮರೆಯಲ್ಲಿ ಲೀನವಾಗುತಿದೆ!!

-


1 MAY 2021 AT 15:19

ಮನ ಬಯಸಿದ
ನೆಮ್ಮದಿಯ ನೆಲೆಯನ್ನರಸಿ
ಇನ್ನೆಷ್ಟು ಅಲೆಯಬೇಕಿದೆಯೋ
ಈ ಬಡಪಾಯಿ ಕಾಲು...

-


1 MAY 2021 AT 15:12

ಹನಿವ ಮಳೆಯ, ತಣಿವ ಇಳೆಯ
ಮಣ್ಣ ಮೊದಲ ಗಂಧ ನೀನು!
ಸುಮದ ನವಿರ, ಘಮದ ಚಿಗುರ
ಹಸಿರ ಸಿರಿಯ ಅಂದ ನೀನು!
ಮುಗಿಲು ತೆರೆದು, ಬಣ್ಣ ಸುರಿದ
ಮಳೆಯ ಬಿಲ್ಲ ಚೆಂದ ನೀನು!
ಇರುಳ ಧರೆಗೆ, ನೆರಳ ಮರೆಗೆ
ಚೆಲುವ ಚಂದ್ರ ಬಿಂಬ ನೀನು!
ಹರಿವ ನದಿಯ, ಹೊಳೆವ ಅಲೆಯ
ಶರಧಿಯೊಡಲ ಮುತ್ತು ನೀನು!
ಸೋತ ಮನಕೆ, ನೊಂದ ಜಗಕೆ
ಪ್ರೀತಿ ಬೆಳಕ ಜೀವ ನೀನು!
ಒಲವ ರೂಪ ದೇವ ನೀನು!!

-


28 APR 2021 AT 18:54

ನೀ ಹೊಳೆವ ತಾರೆಯಾಗಿ
ನನ್ನಿರುಳ ನೀಗದಿದ್ದರೂ ಸರಿ,
ಪಡಿನೆರಳ ತಡೆವ, ಕರಿಗಪ್ಪು
ಮೋಡವಾಗದಿರು ಸಾಕು!

-


22 APR 2021 AT 16:47

ನಿನ್ನೊಲವ ಪಲ್ಲಕ್ಕಿಯಲಿ ನಾ ಕೂತು ಸಾಗಬೇಕೆಂಬ ಹೆಬ್ಬಯಕೆಯಿಲ್ಲದಿದ್ದರೂ, ನಿನ್ನೂರ ಕಾಲ್ದಾರಿಯ ಕಲ್ಲು ದಿಣ್ಣೆಗಳಲಿ, ಕಿರುಬೆರಳ ಬೆಸೆದು, ಹೆಜ್ಜೆ ಹಿಂಬಾಲಿಸಬೇಕೆಂಬ ಕಿರು ಆಸೆಯಿದೆ..
ತುಸು ಕನಿಕರಿಸು..

-


22 APR 2021 AT 16:40

ನೀ ತೊರೆದ ದಾರಿಯಲ್ಲಿನ್ನೂ
ನಿಂತು ದಿಟ್ಟಿಸುತ್ತಿರುವೆನು,
ನೀ ಮರಳಿ ಬರುವೆಯೆಂಬ
ಹಂಬಲದಿಂದಲ್ಲ,
ತೆರಳುವಾಗ ತಿರುವಿನಲ್ಲಾದರೂ
ಒಮ್ಮೆ ತಿರುಗಿ ನೋಡುವೆಯೆಂದು.!

-


21 APR 2021 AT 20:31

ಅವಳು ಹುಟ್ಟಿದ
ನಕ್ಷತ್ರ ಸರಿಯಿಲ್ಲವೆಂದು
ಹೀಗಳೆದರವರು,
ಅವರಿಗೇನು ಗೊತ್ತು
ನಕ್ಷತ್ರಗಳಿಗೂ ಹುಟ್ಟು
ಸಾವಿದೆಯೆಂದು!!

-


20 APR 2021 AT 13:45

ನೀ ನನಗೆ ಸೂರ್ಯ, ಚಂದ್ರನಾಗಬೇಕೆಂದು
ನಾನೆಂದೂ ಹಂಬಲಿಸಿಲ್ಲ ಸಖ,
ಬಯಸುವುದಿಷ್ಟೇ,
ಹಗಲ ಬೆಳಕಲಿ ನೆರಳಾಗಿ ಜೊತೆಯಿರು!
ಇರುಳ ನೆರಳಲಿ ನನ್ನೊಲವ ಬೆಳಕಾಗಿರು!

-


20 APR 2021 AT 13:32

ಜೋರು ಮಳೆಯಲ್ಲೊಮ್ಮೆ ನಿಂದು,
ಕೊನೆಹನಿ ಧರೆಗಿಳಿಯುವವರೆಗೂ ನೆಂದು,
ತುಸು ಕರಗಿಬಿಡಲೇ ನಾನೂ ಆ ಕಾರ್ಮುಗಿಲ ಕೆಳಗೆ?

ಮತ್ತೇನಿಲ್ಲ ಒಳಗೆ ಕೆಂಡದಂತೆ ಸುಡುವ ಅವನ ಕಹಿನೆನಪುಗಳು ಕೊಂಚವಾದರೂ ತಣ್ಣಗಾದೀತೆಂಬ ಸಣ್ಣಾಸೆ..

-


Fetching Kavya N Quotes