ಹವಣಿಸುವ ಸ್ವಾರ್ಥದ ಅಗ್ನಿಗೆ ಜೀವನ
ಪರಿತಪಿಸಿ ಮಾಡುವ ಕರ್ಮದ ಇಂಧನ
ಅದರ ತಾಪಕೆ ಸುಟ್ಟುಹೋಗುವ ಮನ
ಅರಿವಿಗೆ ಬರುವುದು ಅಹಂಕಾರದ ಮನನ
ಭಸ್ಮವಾಗುವ ದೇಹದ ಆಸೆಗಳ ಸುಳಿಯಲಿ
ಸರಪಳಿಯ ಬಂಧಿಸುವ ಅಹಂಕಾರದ ಪರಿಧಿಯಲಿ
ಮೈ ಮರೆಯುವ ಇಂದ್ರಿಯಗಳ ಭ್ರಮೆಯಲಿ
ಮೆರೆಯುವ ದೂರಭಿಮಾನದ ಕಪಟ ಸಂಯೋಗದಲಿ
ಕುಹಕ ಗುಣಗಳ ಕುಚೋದ್ಯ ಚಟುವಟಿಕೆಯಲಿ
ತಮ್ಮವರ ಇರುವಿಕೆಯ ಅವಮಾನಿಸುವ ಚಡಪಡಿಕೆಯಲಿ
ಹಿಡಿತವಿಲ್ಲದ ಕೋಪದ ಸುಳಿಯಲಿ ಸಿಲುಕದವರಾರು
ತಿಳಿಯದು ನಮ್ಮವರಾರು ನಮ್ಮವರೆಂದು ನಡೆದವರಾರು
ತನ್ನ ಜೀವನದಸ್ತಿತ್ವದ ಕೊನೆಯ ಹಂತದಲಿ
ನಿಶ್ಚಲ ಅಗ್ನಿಯ ತಾಪದ ಜೊತೆಜೊತೆಯಲಿ
ಸಮರ್ಪಿಸುವ ಅಹಂಕಾರವು ಅಸ್ಮಿತೆಯ ಚಿತೆಯಲಿ
ಕಂಗೊಳಿಸುವ ಆತ್ಮವು ಚಂದ್ರತೇಜದಂತೆ ಕೊನೆಯಲಿ-
ಚಿತಾಭಸ್ಮಪ್ರಿಯ ಚಿದಂಬರ ಚಿನ್ಮಯರೂಪ ದಿಗಂಬರ
ಚಂದ್ರಶೇಖರ ಶಶಾಂಕ ಪೂರ್ಣ ಚೈತನ್ಯಪರ
ಚಂದ್ರಮೌಳಿ ಶಕ್ತಿಪ್ರಿಯ ಕಾಲಭೈರವ ತ್ರಿನೇತ್ರಧರ
ಚಿನ್ಮಯ ರೂಪ ಚಿದಾತ್ಮ ಚಿಂತನ ನಿರಂತರ
ಕಾಲಭೈರವ ಕಾಲಾಕಾಲ ಕಾಶಿನಾಥ ಧಾರಾಧರ
ಕಾಲಾಗ್ನಿರುದ್ರ ಶ್ಯಾಮಕಾಯ ಕಾಳಿಕಾ ತಾಪಹರ
ಕಾಲಕಂಠ ಹಾಲಾಹಲ ಪಾನಕರ್ತಾ ಪರಾತ್ಪರ
ಕರ್ಪುರಗೌರ ನಿಶ್ಚಲಮಯ ಕೃತ್ತಿವಾಸ ತ್ರಿಶೂಲಧರ
ನಾಟ್ಯಪ್ರಿಯ ನಟರಾಜ ನಿತ್ಯಾನಂದ ದಿಗೇಶ್ವರ
ನಾಗಭೂಷಣ ನಭೋಗರ್ಭಧಾರಣ ವಿಶ್ವೇಶ್ವರ
ನಿತ್ಯಶುದ್ಧ ಆನಂದನಿರತ ನಿರ್ವಾಣ ನಿರೀಶ್ವರ
ನಿರ್ವಿಕಲ್ಪ ನಿರಂಜನ ನಂದಿವಾಹನ ನಂದಿಕೇಶ್ವರ
ಮಾಹಾದೇವ ಮಾನಸ ಸಂಪ್ರೀತ ಮಹೇಶ್ವರ
ಮಾಹಾಕಾಲ ಕಾಲರುದ್ರ ಮೃತ್ಯುಂಜಯ ಅಮರೇಶ್ವರ
ಮಾಹಾಯೋಗಿ ಮಹೇಂದ್ರ ಮಂದಾರಪ್ರಿಯ ಮನೋಹರ
ಮನೋಜವ ಚಿತ್ತನಿಗ್ರಹ ಮನೋಮುಕ್ತ ಸುರಂಧರ
ಶಾಂತಚಿತ್ತ ಶಾರ್ವರಿಪ್ರಿಯ ಶಿವ ಅನುಧರ
ಶಿಕಾರ ನಾದಾಕ್ಷರ ವ್ಯೋಮಾತೀತ ಅನಂತಧರ
ಶಕ್ತಿ ಶರಧಿ ಪ್ರಕೃತಿಪ್ರಿಯ ಪುರುಷಪೂರ್ಣಕರ
ಶ್ರೀಪೂರ್ಣ ಚಂದ್ರತೇಜೋಮಯಿ ಶಂಕರ
🙏🏻🙏🏻🙏🏻🙏🏻-
ಕರುಣಾಘನ ಶ್ರೀಗುರು ಶಂಕರಾನಂದ ಗುರುವರ
ಜ್ಞಾನಪೂರ್ಣ ಶ್ರೀಗುರು ಸಿದ್ಧಶಂಕರಾನಂದ ಯತಿವರ
ಜ್ಞಾನದ ಕುತೂಹಲವ ತಗ್ಗಿದೆ
ಅಜ್ಞಾನ ಮದವ ನೆಗ್ಗಿದೆ
ತಾಳ್ಮೆಯ ಪರಿಧಿಯು ಕುಗ್ಗಿದೆ
ಕ್ರೋಧದ ಭಾವವು ಹಿಗ್ಗಿದೆ
ಅರಿಯದಾಗಿದೆ ನಿನ್ನ ನಿಜಾನಂದ ರೂಪವ
ಬೇಕಾಗಿದೆ ಭಕ್ತಿ ಮಾಡುವ ಉಪಾಯವ
ಉದ್ಧರಿಸೇನಗೆ ಹಿಡಿದಿರುವೆನು ಪಾದವ
ಸಮರ್ಪಿಸುವೆನು ನನ್ನೆಲ್ಲಾ ಸರ್ವಸ್ವವ
ನಿರ್ವಾಣ ಸ್ಥಿತಿಯ ದತ್ತಮೂರ್ತಿಯು
ಏಕೋಭವಾದ ಅಮೂರ್ತ ರೂಪಿಯು
ಚಂದ್ರತೇಜ ಕಳೆಯ ಜ್ಞಾನ ಸ್ವರೂಪಿಯು
ಕೇಳುವೆನು ಭಕ್ತಿಯ ಜನ್ಮಪೂರ್ತಿಯು-
ಅಪಕ್ವ ಮನದ ಭಾವ ಅಸಂತುಲನ
ಸಂಸಾರ ಸರಪಳಿಯ ನಿರಂತರ ಸಂಕಲನ
ಸತ್ಸಂಗ ಪಡೆಯದ ಅಂತಂತ್ರ ಜೀವನ
ವಿಷಣ್ಣತೆಯ ಮದದಲಿ ಸಂಬಂಧಗಳ ಮೌನ
ಸಂದಿಗ್ಧ ಪರಿಸ್ಥಿತಿಯ ಅವಿಸ್ಮರಣೆಯ ವರ್ಣ
ಸ್ಮರಣೆಯ ಅವಿಸ್ಮರಣೆಯು ನಿಸ್ಸಂಗತ್ವಕೆ ಕಾರಣ
ಕೇಳದ ಅನುಸರಣೆ ಅಸಂತುಲಿತ ವರಣ
ಅಲ್ಪಾವಧಿಯ ನೆಮ್ಮದಿಯ ಆಯ್ಕೆಯ ಸಂಕೀರ್ಣ
ವಿಸ್ಮಯ ಜೀವನದ ವಿಸ್ಮಿತ ದೃಷ್ಟಿಕೋನ
ಬದಲಾಗದ ಅನುಸರಣೆಯ ವ್ಯರ್ಥ ಜೀವನ
ಕೃಪಾಧೃಷ್ಟಿಯ ಅತೀವ ಕೋರಿಕೆಯ ನಿವೇದನ
ನಿವೇದನದಲಿ ಪ್ರೀತಿಯ ಕ್ಷಮೆಯ ಅಧಿಯಾಚನ
ಅಭದ್ರತೆಯ ಮನದ ಪೂರ್ಣ ಪರಿಹಾರ
ಭಕ್ತಿಯ ಸಿಂಚನದ ನಿರೀಕ್ಷೆಯ ಅವಸರ
ಸಿದ್ಧನೋರ್ವ ಭವಸಾಗರ ಉದ್ಧರಿಸುವ ಅಭಯಂಕರ
ಭಕ್ತಿಯಿಂದ ಬಾಗುವೇನು ಚಂದ್ರತೇಜೋಮಯಿ ಶಂಕರ
🙏🏻🙏🏻🙏🏻🙏🏻🙇🏻♂️🙏🏻🙏🏻🙏🏻🙏🏻-
ಅರಿವಿನ ಪರಿಧಿಯ ಸೆರೆಯಲಿ ಚಿತ್ತ
ಸ್ಥಿರ ಬುದ್ಧಿಯ ಸಾಧಿಸುವ ದಾರಿಯತ್ತ
ಸ್ಥಾವರ ಅಸ್ಮಿತೆಯ ಸ್ಪಂದಿಸುವ ಪ್ರವೃತ
ಚೈತನ್ಯ ಪೂರ್ಣ ತನ್ಮೇಯ ಆವೃತ
ಕಲಿಯುವ ಕೌತುಕದ ಸವಿಯುವ ಮಸಕ
ಕಲಿತು ಕಲಿಸುವ ಮತ್ತೆ ಕಲಿಯುವ ತವಕ
ಕಲಿತ ವಿದ್ಯೆಯ ಅನುಸರಿಸುವ ಆಲೋಕ
ಆಳದ ಚಿಂತನದ ಮಾಧ್ಯಮದಿ ಸಾರ್ಥಕ
ತಾಳ್ಮೆಯ ಉತ್ತರ ಆಳದ ಅರ್ಥಸ್ಥರ
ಸಹನೆಯ ಸಾಧನ ಸ್ಥಿರಮನದ ಸ್ವರ
ವಿನಯದ ನಡತೆ ಗೌರವದ ಅಂತರಾರ್ಥ
ನಮ್ರತೆಯ ವ್ಯಕ್ತಿತ್ವ ಸಂವೇದನಾಭಾವ ಯಥಾರ್ಥ
ಚೇತನ ಜೀವಿಸುವ ಅಮೂರ್ತ್ಯ ಸಂವೇದನ
ಚಿಂತನ ಅನುಭವಿಸುವ ಸಾರ್ಥಕ್ಯ ಸಾಧನ
ಸಹನೆಯ ಎದೆಯಲಿ ತೃಪ್ತಿಯ ಆಳ್ತನ
ಕೃತಜ್ಞತೆಯ ಭಾವದಲಿ ಆನಂದದ ಸಮ್ಮಿಲನ
ಕೃತಕೃತ್ಯ ಭಾವದ ಭಕ್ತಿಯ ನಿಶ್ಚಲತೆ
ಸಾರ್ಥಕ್ಯ ಜೀವನದ ಧರ್ಮ ಸಾಫಲ್ಯತೆ
ಬೇಡುವೆ ನಿಸ್ವಾರ್ಥ ಭಕ್ತಿಯ ಭಿಕ್ಷೆ
ಚಂದ್ರತೇಜಪೊಂಜ ಶ್ರೀಗುರುವಿನ ಆಶೀರ್ವಾದದ ನಿರೀಕ್ಷೆ
-
ಧಿಕ್ಕರಿಸುವ ಭಾವನೆಗಳ ಭಾರದಲಿ
ಹುಂಕರಿಸುವ ಅಭದ್ರತೆಯ ತೋಳಲಾಟದಲಿ
ಮಂಥಿಸುವ ಅಹಂಕಾರದ ಪರೀಕ್ಷೆಯಲಿ
ಹೊರಟಿರುವ ಜೀವನ ನಿರರ್ಥಕದಲಿ
ಭಾರದ ಹೃದಯ ತುಂಬಿರುವ ಕಂಠದಲಿ
ಹೇರುವ ಅಪೇಕ್ಷೆ ಕ್ರೋಧದ ಉದ್ದೇಶದಲಿ
ಇರದ ಸಂಯಮ ನಡತೆಯ ಅಭಿವ್ಯಕ್ತದಲಿ
ಸನ್ನಿವೇಶಗಳ ಅಧೀನತೆ ಸಾಧಿಸುವ ಮೂರ್ಖತನದಲಿ
ಸಹಿಸುವ ಸಹಿಷ್ಣುತೆಯ ಸಂಕಲ್ಪಿಸುವ ಉದ್ದೇಶದಲಿ
ಆಡುವ ಮಾತುಗಳ ನಿಯಂತ್ರಿಸುವ ಚಿತ್ತದಲಿ
ಚಿತ್ತವ ಸತ್ವದೊಡನೆ ಬೆರೆಸುವ ಭಕ್ತಿಯಲಿ
ಅನಿಶ್ಚಲ ಭಕ್ತಿಯು ಪ್ರಗತಿಯ ಹಸಿವೆಯಲಿ
ಕಾಡುವ ಕೊರತೆಗಳ ನೀಗಿಸುವ ಧ್ಯೇಯದಲಿ
ಧ್ಯೇಯ ಸಂಕ್ಷೇಪದ ಸಮರ್ಪಣೆಯ ಭಾವದಲಿ
ಭಕ್ತಿಯ ಸಮರ್ಪಣೆಯು ಶ್ರೀಗುರುಚರಣದಲಿ
ಚಂದ್ರತೇಜ ಶೀತಲ ಚಿತ್ತ ಪಡೆಯುವ ಪಥದಲಿ-
ಜೀವಿಸುವ ಜೀವನದ ಅರ್ಥ ಹುಡುಕುತ
ಪ್ರಶ್ನೆಗಳ ಸರಪಳಿಯ ಗ್ರಂಥಿ ಭೇದಿಸುತ
ಉತ್ತರಗಳ ಅನಿರೀಕ್ಷಿತ ಕಂಗು ಸಮ್ಮತಿಸುತ
ಹುಡುಕುವ ನೆಮ್ಮದಿ ಸರಿದಾರಿಯಲಿ ನಡೆಯುತ
ಶೋಧಿಸುವ ಕೌತುಕ ಮನದ ಚೇಷ್ಟೆಯಲಿ
ಮಾಜುವ ಕ್ರಿಯೆ ಪ್ರಕೃತಿಯ ಸೃಷ್ಟಿಯಲಿ
ಕೌತುಕವ ತುಡಿಯಲು ಪ್ರಶ್ನಿಸುವ ದೃಷ್ಟಿಯಲಿ
ಸಿಗುವ ಉತ್ತರ ಮಾಜುವ ಪ್ರಕ್ರಿಯೆಯಲಿ
ಆತ್ಮ ಅನುಭವಿಸುವ ಚಡಪಡಿಕೆಯಲಿ
ಕರ್ಮ ಕಳೆಯುವ ಸಂಸ್ಕರಣೆಯಲಿ
ಧ್ಯಾನಿಸುವ ಚಿತ್ತದ ಭಾವನೆಯಲಿ
ಸುಡುವುತ ಬರುವುದು ಅಜ್ಞಾನವಲ್ಲಿ
ಅನಿಶ್ಚಿತ ಜೀವನದ ನಿಶ್ಚಿತ ನಿಯತಿ
ನಿಯತಿಯ ನೀತಿಯ ಬರೆಯುವ ಮತಿ
ನೀತಿಯ ತತ್ವ ಪರಿಷ್ಕ್ರಿಸುವ ಸಂಸ್ಕೃತಿ
ಚಂದ್ರತೇಜ ಶ್ರೀಗುರುವಲಿಡಲು ನಿಜ ಭಕುತಿ-
ಹಸಿ ಹುಲ್ಲಿನ ಹೆಜ್ಜೆಯ ನಡೆಯಲಿ
ತಂಪಾದ ಗಾಳಿಯ ಆಲಂಗಿಸುವ ಕ್ಷಣದಲಿ
ಮಡಚುವ ಭುಜಗಳ ಸವರುವ ಕರಗಳಲಿ
ಕತ್ತು ಮೇಲೆತ್ತಲು ಚುಂಬಿಸುವ ಮಳೆಹನಿಯಲಿ
ನಡೆಯುವ ದಾರಿ ಹಸಿರು ಬನದ ನಡುವಲಿ
ಝುಳು ಝುಳಿಸುವ ನೀರಿನ ರಭಸದ ಧ್ವನಿಯಲಿ
ಎರೆಮಣ್ಣಿನ ಸೊಂಪಾದ ಸುವಾಸನೆಯಲಿ
ಮೈಮರೆವ ಪ್ರಕೃತಿಯ ಮಡಿಲ ನಡುವಲಿ
ಎತ್ತರ ಬೆಟ್ಟದ ವಕ್ರದಾರಿಯ ತುದಿಯ ಹೆಜ್ಜೆ
ಮೈನವಿರೇಳಿಸುವ ಪ್ರಕೃತಿಯ ನಾದದ ಗೆಜ್ಜೆ
ಕಣಿವೆಗಳ ಆಳದ ಜಲಪಾತದ ನೋಟ
ಹಸಿರು ಪ್ರಕೃತಿಯ ಆಭರಣಗಳ ಕೂಟ
ಬೆನ್ನ ಪ್ರಕೃತಿಯ ಮಣ್ಣಿಗೆ ತಾಕಲು
ಪ್ರಾಶಾಂತ ರಾತ್ರಿಯ ಆಕಾಶಗಂಗೆಯ ಬಯಲು
ಕಂಪೇರುವ ಬೆಳದಿಂಗಳ ರಂಜನಿ ಚಾಚಲು
ಪೂರ್ಣ ಚಂದ್ರತೇಜ ಶೀತಲ ಪ್ರವಹ ಅನುಭವಿಸಲು-
ಸ್ನೇಹದ ಅಂತರಾಳವ ಸ್ಪರ್ಶಿಸಿ
ಪ್ರೀತಿಯ ನಿದರ್ಶನ ಸಂದರ್ಶಿಸಿ
ಆತ್ಮೀಯತೆಯ ಗರ್ಭವ ರಕ್ಷಿಸಿ
ತ್ಯಾಗವ ಸಾಮ್ಯ ರೂಪದಿ ಸ್ವೀಕರಿಸಿ
ದೇಹ ಭಾವವ ಸನ್ನೆಯಲಿ ಅರ್ಥೈಸಿ
ಕಣ್ಣಂಚ ಅಕ್ಷುವ ಸ್ಮರಣೆಯಲಿ ಒರೆಸಿ
ಹೃದಯ ಭಾರವ ಬಿಗಿದಪ್ಪಿ ಓಲೈಸಿ
ತಾಳದು ಜೀವವು ನಿಂತಲ್ಲಿ ಗತವಾಗಿಸಿ
ನಿಲ್ಲದ ಜೀವನ ತೋರುವ ನರ್ತನ
ಹೃದಯ ಭಾರವ ಹೊರುವ ಕಂಪನ
ಉಪೇಕ್ಷಿಸುವ ಹೃದಯದ ಮಂಥನ
ಸಮರ್ಥಿಸುವ ಮನದ ಸಾಂತ್ವಾನ
ಸ್ವಾರ್ಥದ ಉದ್ದೇಶದಿ ಭವಿಷ್ಯವ ನೋಡುವ
ತಿಳಿಯದು ಹೃದಯಕೆ ಮನದ ತನ್ನಲ್ಮೆಯ
ಅಶ್ಮದ ಪರಿಚೆಗೆ ಹೃದಯ ಪ್ರತಿರೂಪವ
ನಿಸ್ವಾರ್ಥದ ಮೃದುಲ ಪ್ರೀತಿ ನಲ್ಮೆಯ
ಕ್ಷಮಿಸು ನಿನ್ನ ಹೃದಯ ಸಂಪಾದಕ
ನಮಿಸು ನಿನ್ನ ಹೃದಯ ಆರಾಧಕ
ಚಂದ್ರತೇಜ ನಿಷ್ಕಾರುಣ್ಯ ನಿರ್ಧಾರಕ
ಇರಲಿ ನಿನ್ನ ಜೀವನ ತೃಪ್ತಿಕಾರಕ— % &— % &-
ಭಾವನೆಗಳಿಲ್ಲದ ಆಳ ಸ್ಪರ್ಶನ
ಸ್ಪಂದನವಿಲ್ಲದ ಅತಿ ಸಂವೇದನ
ಆಂತರ್ಯ ಕಾಮನೆಗಳ ಪ್ರತಿಶೋಧನ
ಕಾರಣವಿಲ್ಲದ ಹೃದಯ ಅವಲೋಕನ
ಚಡಪಡಿಸುವ ಅಂತಃಕರಣ
ಬಡಿದೊತ್ತುವ ಭಾವವೇದನ
ಸ್ಫುರಿಸುವ ಅಶ್ರು ಕಂಪನ
ಹಿಯಾಳಿಸುವ ಮತಿ ಭ್ರಮಣ
ದೇಹದ ಅಂಗಗಳ ಹೆಸರುಂಟು
ಮಾನಸಿಕ ವಿಚಾರಗಳ ಆಯಾಮಗಳುಂಟು
ದೈಹಿಕ ಅನಿಯಂತ್ರಿತ ಕಾರ್ಯವಿಧಾನದಲಿ
ಮಾನಸಿಕ ನಿಯಂತ್ರಿತ ಹತೋಟಿಯಲಿ
ಕಾಲ ಕುಳಿಯಲಿ ಕೊಳೆಯುವ ಕಾಯ
ಕರ್ಮಗಳ ಕಡಿಯದೆ ಕೂಡಿಸುವ ಕ್ರೀಯ
ಕಾಮನೆಗಳ ಕಳಿಯದೆ ಕೊಡಿಸೇನ್ನುವ ಕೃಪಣ
ಕ್ರೋಧ ಕುದಿಸುವ ಕುಂಗಿರುವ ಕರುಣ
ಸಾಮರ್ಥ್ಯವ ಅರಿಯುವ ವಿಧದಲಿ
ಸವಾಲುಗಳ ಎದುರಿಸುವ ರೀತಿಯಲಿ
ಸರಿಯುವ ಅಡೆತಡೆಗಳು ಪ್ರಕ್ರಿಯೆಯಲಿ
ಜಯವಿರುವುದು ಸಾಧನೆಯ ಪಥದಲಿ
ಸಮತೋಲಿತ ಸಂವಹನಕೆ ಸತ್ಸಂಗವು
ಚಿತ್ತದಚಂಚಲ ಸ್ಥಿತಿಗೆ ಸ್ಥಿರತೆಯು
ಗುರುಭಕ್ತಿಯಲಿ ಸ್ಥಿರತೆಯೇ ಜೀವನ್ಮಾರ್ಗವು
ಚಂದ್ರತೇಜ ಶ್ರೀಗುರುವಿಗೆ ನಮನವು
-