ಒಂಟಿ ಮುಗಿಲದೊ, ನೋಡು, ಬಾನ ಬಯಲಿನಲಿ
ತನ್ನೆದೆಯ ರಸದಲ್ಲಿ ತಾನೆ ಕರಕರಗಿ
ತನ್ನೆದೆಯ ಹಾಡೊಳೇ ತನ್ನ ಮೈಮರಸಿ
ಯಾವೆಡೆಗೆ ಸಾಗುತಿದೆ- ಏನನಾಧರಿಸಿ?
ಆ ಹಾರುಹಕ್ಕಿಯ ಕಂಡಿಲ್ಲವೇನು?
ಯಾವ ಮರ, ಯಾವ ಗಿಡದಲ್ಲಾದರೇನು?
ತನ್ನ ರೆಕ್ಕೆಯ ನಂಬುಗೆಯನೊಂದೆ ಬೆಳೆದು
ತನ್ನ ಬಾಳನು ತನ್ನ ಹಿಡಿತದಲಿ ಬಿಗಿದು
ತನ್ನ ಪಾಡನು ತಾನೆ ಹಾಡಿ ಸವಿಸವಿದು
ಸಾಗುತಿದೆಯಲ್ಲ, ಅದಕ್ಕಿನ್ನಾವ ನೆಚ್ಚು?
ನಿನ್ನೆದೆಯ ಬಲವೊಂದೆ ನಿನ್ನ ಬೆಂಬಲವು.
-ಗೋಪಾಲಕೃಷ್ಣ ಅಡಿಗ
-
ಹೀಗೆಯೇ
ಒಶೋಗೆ ಒಬ್ಬರು ಕೇಳಿದ್ದರು: ಹೊಸ ವರ್ಷಕ್ಕೊಂದು ತೀರ್ಮಾನವನ್ನು ಮಾಡಬೇಕಾದರೆ, ನೀವು ಏನು ಸೂಚಿಸುವಿರಿ?
ಓಶೋ ಅವರು ಅನನ್ಯವಾಗಿ ಪ್ರತಿಕ್ರಿಯಿಸಿದರು:
ಒಂದು ನಿರ್ಣಯ ಕೈಗೊಂಡರೇ ಅದು ಕೇವಲ ಹೊಸ ವರ್ಷದ ನಿರ್ಣಯವಾಗಬಹುದು ಹೊರತು ಯಾವುದೇ ತೀರ್ಮಾನಗಳನ್ನು ಮಾಡಲು ನಾನು ಎಂದಿಗೂ ತೀರ್ಮಾನಿಸುವುದಿಲ್ಲ ಏಕೆಂದರೆ ಎಲ್ಲಾ ನಿರ್ಣಯಗಳು ಭವಿಷ್ಯದ ಕೆಲವು ಘಟನೆಗಳಿಗೆ ನಿರ್ಬಂಧವನ್ನು ಹೇರುತ್ತವೆ, ಸೆರೆವಾಸವಾಗಿಸುತ್ತವೆ, ನೀವು ಇಂದು ನಾಳೆಯನು ನಿರ್ಧರಿಸುತ್ತೀರಿ? ಆಂದರೇ ನಿಮ್ಮ ನಾಳೆಯನ್ನು ನಾಶಮಾಡಿಕೊಂಡಿದ್ದೀರಿ, ನಾಳೆ ತನ್ನ ಸ್ವಂತ ಅಸ್ತಿತ್ವವನ್ನು ಹೊಂದಲು ಬಿಟ್ಟುಬಿಡಿ, ಅದು ತನ್ನದೇ ಆದ ರೀತಿಯಲ್ಲಿ ಬರಲಿ! ಅದು ತನ್ನ ಸ್ವಂತ ಉಡುಗೊರೆಗಳನ್ನು ತರಲಿ.
ಕೆಲವೊಮ್ಮೆ ಹೇಗಾಗುತ್ತದೆ ಅಂದರೇ ಸೂರ್ಯ ಪಶ್ಚಿಮದಲ್ಲೆ ಉದಯವಾಗಲಿ ಎಂದು ಬಯಸುತ್ತೀರಿ ಅದಕ್ಕಾಗಿ ಪಶ್ಚಿಮದ ಕಿಟಕಿಗಳನಷ್ಟೆ ತೆರೆದಿಡುತ್ತೀರಿ, ಪೂರ್ವದಲ್ಲಿ ಸೂರ್ಯ ಉದಯಿಸಿದರೂ ಸಹ ಕಿಟಕಿ ಮುಚ್ಚಿಯೇ ಇಟ್ಟಿರುತ್ತೀರಿ
ಆದ್ದರಿಂದ ಕೇವಲ ಒಂದು ನಿರ್ಣಯ ಮಾತ್ರ ಇರಲಿ: ನಾನು ಯಾವುದೇ ನಿರ್ಣಯವನ್ನು ಎಂದಿಗೂ ಮಾಡುವುದಿಲ್ಲ ಎನ್ನುವಂತದ್ದು, ಎಲ್ಲಾ ನಿರ್ಣಯಗಳು ಬಿಟ್ಟುಬಿಡಿ! ಜೀವನವು ನೈಸರ್ಗಿಕ ಸ್ವಾಭಾವಿಕವಾಗಿರಲಿ.
ಧ್ಯಾನಸ್ಥರಾಗಿ ಕ್ಷಣಕ್ಕೆ ಕ್ಷಣವೂ ಜೀವಿಸಿ - ಇಲ್ಲಿಯೇ(ವಾಸ್ತವತೆಯಲ್ಲಿ) ಮತ್ತು ಈಗಲೇ ಈ ಕ್ಷಣಕ್ಕಾಗಿ ಬದುಕಿ, ಈ ಕ್ಷಣದಲ್ಲಿ ಮುಂದಿನ ಕ್ಷಣ ಹೊರಹೊಮ್ಮುತ್ತದೆ. ಈ ಕ್ಷಣದಲ್ಲಿ ಶಾಶ್ವತತೆ ಇದೆ.
So no need of wishing Happy New Year! Say Happy Now Here!
-
ನೀನು ಜೀವನದ ಚದುರಂಗದಾಟದಲ್ಲಿ ದಾಳ
ನಡೆಸಬೇಕಾಗುತ್ತದೆ. ಜೀವನ ಎನ್ನುವುದು ನೂರಾರು ನಾಟಕಗಳ ಸಮಿಶ್ರಣ. ನಿನ್ನ ನಿಲುವು, ದೃಷ್ಟಿ ಬದಲಾದ ಹಾಗೆ 'ಅಸಲಿ' ಎಂದು ತಿಳಿದದ್ದು
'ವೇಷ'ವಾಗುತ್ತದೆ, ವೇಷ ಅಸಲಿಯಾಗುತ್ತದೆ.
-ಕೆ.ಪಿ. ಪೂರ್ಣಚಂದ್ರ ತೇಜಸ್ವಿ,
ಮಾಯಾಲೋಕ,
-
ನೀನು ಸಿಗದೇನೇ ಇದ್ದಿದ್ದರೆ ಏನಾಗುತ್ತಿತ್ತು ಅಂತ ಎಷ್ಟೋ ಸಲ ಯೋಚಿಸ್ತೀನಿ
ಏನೂ ಆಗುತ್ತಿರಲಿಲ್ಲ, ನಂಗೊತ್ತು. ಈ ಜಗತ್ತೇ ಹಾಗೆ; ಸಿಗಬೇಕಾದವರೆಲ್ಲ ಇಲ್ಲಿ ಸಿಗಲೇ
ಬೇಕಾದವರಿಗೆ ಸಿಕ್ಕಿಲ್ಲ. ಹಾಗಾಗಿಯೇ ನೋಡು, ಪ್ರೇಮವೆಂಬ ವಸ್ತುವಿಗೆ ಇವತ್ತಿಗೂ ಎಷ್ಟೊಂದು
ಕಿಮ್ಮತ್ತು. ಬಯಸಿದ್ದೆಲ್ಲ ಸಿಕ್ಕು ಬಿಟ್ಟಿದ್ದಿದ್ದರೆ ಮನುಷ್ಯ ಎಷ್ಟೊಂದು ನಿರ್ದಯಿಯಾಗಿ ಬಿಡುತ್ತಿದ್ದ?
ಅವನು ಯಾರ ಎದುರೂ ನಿಂತು ಹೃದಯ ಬೇಡುತ್ತಿರಲಿಲ್ಲ. ಒಂದು ಹಾಡು ಬರೆಯುತ್ತಿರಲಿಲ್ಲ.
ಫಕೀರನಂತೆ ಮೊಳಕಾಲೂರಿ ಪ್ರಾರ್ಥನೆ ಮಾಡುತ್ತಿರಲಿಲ್ಲ. ಅಹಂಕಾರ ಮರೆತು, ಹುಡುಗಿಯ
ಮುಂಗೈ ಹಿಡಿದು 'ಸಾರಿ' ಅನ್ನುತ್ತಿರಲಿಲ್ಲ. ಕಂಪಿಸುವ ತುಟಿಗಳಿಗಾಗಿ ಸಿಗರೇಟು ಬಿಡುತ್ತಿರಲಿಲ್ಲ.
ಒಂದೇ ಒಂದು ಸಲ ಕನಸಿಗೆ ಬಂದಾಳೇನೋ ಎಂಬ ನಿರೀಕ್ಷೆಯಲ್ಲಿ ಅವನು ರಾತ್ರಿಯಿಡೀ ಮಲಗಿಯೇ
ಇರುತ್ತಿರಲಿಲ್ಲ. ಪ್ರೀತಿ ಮನುಷ್ಯನನ್ನು ಎಷ್ಟೊಂದು ಮಗುವನ್ನಾಗಿಸಿ ಬಿಡುತ್ತದಲ್ಲವಾ?...
- ರವಿಬೆಳೆಗೆರೆ-
ನನ್ನ ಬಾಳ್ವೆ ನನ್ನ ಅಧಿಕಾರದ ವಸ್ತು. ನನ್ನ ಜೀವನ ನನ್ನದೇ ಆದದ್ದು. ಅದರ ಸುಖ, ಸೊಗಸು, ನೋವು, ನರಳಿಕೆ ಮತ್ತು ಚೆಲುವು, ಚೆಲುವಲ್ಲದಿರುವಿಕೆ - ಇವೆಲ್ಲ ನನ್ನವುಗಳೇ. ಉಳಿದವರು ಅದರೊಡನೆ ಪಾಲನ್ನು ವಹಿಸಲು ಇಷ್ಟಪಟ್ಟರೂ ಸರಿಯೆ; ಅದನ್ನು ಒಪ್ಪಿದರೂ ಸರಿಯೆ; ಒಪ್ಪದಿದ್ದರೂ ಸರಿಯೆ. ನಾನು ನಡೆಯಿಸಿದ ಬಾಳು ನನ್ನದು; ನನ್ನದೇ. ಹೀಗೆಂದೊಡನೆಯೇ ಇತರರೆಡೆಗೆ ಧಿಕ್ಕಾರದಿಂದ ನೋಡುತ್ತೇನೆಂದಲ್ಲ. ಅವರ ವಿಮರ್ಶೆಯ ಸತ್ಯಾಂಶವನ್ನು ತಿಳಿಯಬಾರದೆಂದಲ್ಲ ; ಹಾಗೆ ಮಾಡದೆ ಮನುಷ್ಯ ಬೆಳೆಯಲಾರನು. ಆದರೂ ನಡೆಸಿದ ಬಾಳನ್ನು, ನಡೆಯಿಸಿದಾತನಲ್ಲದೆ ಇನ್ನಾರು ಬಲ್ಲರು?
- ಕಾರಂತಜ್ಜ, ಹುಚ್ಚು ಮನಸ್ಸಿನ ಹತ್ತು ಮುಖಗಳು. ♥️
-
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
ಧರ್ಮಸಂಕಟಗಳಲಿ, ಜೀವಸಮರದಲಿ
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ. |-
ನನ್ನ ಬದುಕಿನ ರಸ್ತೆಗಳು ಇದ್ದಕ್ಕಿದ್ದಂತೆ traffic
jam ಆಗಿಹೋದಂತೆ ಈ ಬದುಕಿನ
ಘೋರಾಂಧಕಾರಕ್ಕೆ ಇನ್ನು ಬೆಳಕೆ ಇಲ್ಲ ಎಂಬಂತೆ , ಅದೆಷ್ಟು ಸಲ ರಪ್ಪನೆ ಮುಚ್ಚಿ ಹೋಗಿದೆಯೋ? ಹಾಗೆ
ಮುಚ್ಚಿಹೋದಾಗ ನಾನು ಹೊಸ ರಸ್ತೆ ಹುಡುಕಿಕೊಂಡಿದ್ದೇನೆ ನಡೆದು ನಡೆದು ನನ್ನದೇ ಕಾಲುದಾರಿ ಕಲ್ಪಿಸಿಕೊಂಡಿದ್ದೇನೆ. ಒಂದು ಸಮಸ್ಯೆ ಎಲ್ಲ
ಕಡೆಯಿಂದ ಮುಗಿಬಿದ್ದು ಕಾಲಾನುಕತ್ತಲೆಯಂತೆ ಆವರಿಸಿಕೊಂಡಾಗ ಮನೆಯ ಅಂಗಳದ ಜಗುಲಿ
ಮೇಲೆ ರಾತ್ರಿಯಿಡೀ ಬೀಡಿ ಸೇದುತ್ತಾ ಹೊಸ ಸೂರ್ಯೋದಯಕ್ಕಾಗಿ ಕಾಯುತ್ತ ಕುಳಿತಿದ್ದೇನೆ. ದರಿದ್ರ ಮುಂಡೆ ಮಗನ ಬದುಕು ಕೂಡ ಎಂಥ ಉದಾರಿಯೋ ನೋಡಿ ಕತ್ತಲು ಸುರಿದಷ್ಟೇ ಧಾರಾಳವಾಗಿ
ಬೆಳಕನ್ನೂ ಚಿಮುಕಿಸಿದೆ!
--ರವಿ ಬೆಳಗೆರೆ
💐💐🙏🙏 Miss u Sir 😥
-
ಮಾತಿಗೆ ಬಾರದ ನೂರಾರು ಮೋಹಪಾಶಗಳಿಂದಲೇ ನಡೀತಿದೆ ಈ
ಜಗತ್ತು, ಸಹಪಾಠಿ, ಸಹೋದ್ಯೋಗಿ, ಸಹವರ್ತಿ, ಸಹಯಾತ್ರಿಕ, ಅಂಗಡಿಯವ, ನೆಚ್ಚಿನ
ಕ್ರೀಡಾಪಟು, ಅಕ್ಕರೆಯ ಮೇಡಂ, ಬಾಸು, ಆಸ್ಪತ್ರೆಯ ನರ್ಸು, ಮಾಸ್ತರು, ಪರಿಚಯವೇ
ಇರದ ಡ್ರೈವರು, ಸಹಾಯಕಿ, ಮನಮುಟ್ಟುವ ಕತೆಗಾರ, ಜ್ವರ ನೋಡಿದ ಡಾಕ್ಟರು ಅಥವಾ
ಬರಿದೇ ಹಾದು ಹೋದ ಸದ್ದಿರದ ಹಾದಿ ಹೋಕ, ಕಿವಿಯ ಮೇಲಿನ ನರೆ, ಬೆನ್ನಿನಲ್ಲಿಯ
ನಸು ಗೂನು, ಮಾತಿನಲ್ಲಿಯ ತೊದಲು ಹೀಗೆ ನಿಸರ್ಗದತ್ತವಾಗಿರುವ ಎಲ್ಲವನ್ನೂ ಸಹ್ಯಗೊಳಿಸಿ
ಮಮತೆಯ ಸೆಲೆಯನ್ನುಕ್ಕಿಸುವ, ಸದ್ದಿರದೆ ಒಳಿತಿಗಾಗಿ ಹಾರೈಸಲು, ಹೆಸರಿಲ್ಲದೆ ನೆರವಿಗೆ
ಧಾವಿಸಲು ಪ್ರೇರೇಪಿಸುವ, ಕ್ಷಣಿಕ ಆದರೆ ಅಷ್ಟೇ ಶಾಶ್ವತವಾದ ನೂರು ಸ್ವರಗಳ ಮೋಹಪಾಶಗಳು.
ಬೇಡ, ಇವೆಲ್ಲ ಮಾತಿಗೆ ಬಂದು ಮೊಂಡಾಗುವುದು ಬೇಡ. ಬ್ಯಾಂಕಿನ ಧಡೂತಿ
ಲೆಕ್ಟರುಗಳ ನಡುವೆ ಸಿಕ್ಕ ಚಿಗುರೆಲೆಗಳಂತೆ ರಕ್ತಗುಂದಿ ಉದುರುವದು ಬೇಡ. ಇಷ್ಟದೈವಗಳು
ಐಹಿಕದ ದುರ್ಗಂಧದಲ್ಲಿ ನಾರಿ, ಸ್ಫೂರ್ತಿಯ ಚಿಲುಮೆಗಳು ಪಾತ್ರಧಾರಣೆಯಲ್ಲಿ ಒಣಗುವುದು
ಬೇಡ. ಸಹವಾಸದ 'ಎಹಸಾಸಿ'ನ ಗರಿಕೆಗಳೇ ಸಾಕು ಎದೆಯಂಗಳವನ್ನು ಹಚ್ಚಗಿಡಲಿಕ್ಕೆ.
ಅಮೂರ್ತ ಕಾಮನೆಗಳು ಮೂರ್ತವಾಗದಿರಲಿ, ಮಾತಿರದ ನಲುಮೆ ಜಗವ ನಡೆಸಲಿ,
--ಜಯಂತ್ ಕಾಯ್ಕಿಣಿ (ಬೊಗಸೆಯಲ್ಲಿ ಮಳೆ )
-