ಮುಕ್ತಕಗಳು
-------------
೧.
ದೀಪಗಳ ಸಾಲಿನಲಿ ಸಂಸ್ಕಾರ ಜ್ಯೋತಿಯಿದೆ
ಪಾಪನಾಶಿನಿಯಾಗಿ ಜಗಕೆ ಬೆಳಕು
ಕೋಪ ತಾಪಗಳೆಲ್ಲ ಸರಿಯುತ್ತ ಬಹುಬೇಗ
ರೂಪುಗೊಳ್ಳಲಿ ಸಹನೆ ಭಾವಜೀವಿ
೨.
ಕತ್ತಲಿನ ಭಯ ತೊಲಗಿ ಬೆಳಕೆಂಬ ಸುಜ್ಞಾನ
ಮುತ್ತಿಕೊಳ್ಳುತ ಬರಲಿ ನಮ್ಮೆಡೆಯಲಿ
ಸುತ್ತುವರಿದಿಹ ಗಾಢ ಅಂಧತೆಯು ಸರಿಯುತ್ತ
ಚಿತ್ತದಲಿ ಶುಭವಿರಲಿ ಭಾವಜೀವಿ-
ಕಾಸರಗೋಡು ➡️ ಮಂಗಳೂರು
ಸಾಧನೆ ಶೂನ್ಯ 0⃣
ಭರವಸೆಯಲ್ಲಿ ಬಾ... read more
ಯೋಗ
********
ಭಾರತೀಯ ಮಣ್ಣಿನ ಘಮವಿದು ಹರಡಿದೆ
ವಿಶ್ವದೆಲ್ಲೆಡೆ ಮಾತಾಗಿ ಆರೋಗ್ಯದ ಗುಟ್ಟು
ಸುಸ್ಥಿರ ಸೌಖ್ಯಕೆ ಬುನಾದಿಯನು ಹಾಕುತ
ಹೊಸತನದ ಸ್ಪರ್ಶಕಿದೆ 'ಯೋಗ'ಕ್ಕೆ ಒತ್ತು.-
ಟಂಕಾ
------------
ಬಾಳಿನ ಚಿತ್ರ
ಅನುಭವ ಮಂಟಪ;
ನೆನಪು ನಿತ್ಯ
ಮೂಡುವ ಮಂದಹಾಸ,
ಮುಗಿಯದ ಪಯಣ.-
ಟಂಕಾ
---------
ಬೆಚ್ಚಿದ ಕಣ್ಣು
ಮುಚ್ಚಲೇ ಬೇಕಾದೀತು;
ಚಟ್ಟದ ಮೇಲೆ
ಗಂಭೀರ ನಿದ್ರಾ ಭಂಗಿ,
ಮೆರವಣಿಗೆ ಮುಂದೆ.-
ಸ್ವರ ಕಾಫಿಯಾ ಗಝಲ್
------------------------------
ಬದುಕೆಂಬ ಸಾಗರದಿ ಈಜಾಡುವಾಗ ಗಮನ ಬೇಕಿದೆ
ವದನದಲಿ ನಗುವನು ಸಂರಕ್ಷಿಸಲು ವಿನಯ ಬೇಕಿದೆ
ನಿಂತ ನೀರಾಗದೇ ಚಲಿಸಲು ಮನಸು ಇರದಿದ್ದರೆ ಹೇಗೆ
ಸಂತಸದ ಘಳಿಗೆಗಳು ಆವರಿಸಲು ದರ್ಶಕ ಬೇಕಿದೆ
ಕುಹಕದ ಎಲ್ಲೆಯನು ಮುರಿಯುವ ನಿಂದನೆ ಸರಿಯಲ್ಲ
ಸಹಕರಿಸಿ ನಡೆಯುವ ಭಾವನೆಯೇ ಸನಿಹ ಬೇಕಿದೆ
ಗೆದ್ದ ನಂತರ ಗೆಲ್ಲಿಸುವ ಸದ್ಗುಣ ರೂಢಿಸಿಕೊಳ್ಳಬೇಕು
ಬಿದ್ದವನನೂ ಮೇಲೆತ್ತಿ ಮೆರೆಸಲಿರುವ ವಿಶ್ವಾಸ ಬೇಕಿದೆ
ಮೂರು ದಿನದ ಬಾಳ್ವೆಯಲಿ ಸಾಮರಸ್ಯವಿರಲಿ ಹಿತೇಶ
ನೇರ ನಡೆ ನುಡಿಯಲೇ ಒಲವಿನ ಬಂಧುರ ಬೇಕಿದೆ-
ಗಝಲ್
-----------
ಗೀಚಿದ ಸಾಲುಗಳೇ ಕವಿತೆಯೆಂದು ಬೀಗದಿರು ನೀನು
ಯೋಚಿಸಿ ಬರೆಯುವ ತಾಳ್ಮೆಯಿಲ್ಲದೆ ಸಾಗದಿರು ನೀನು
ಮನದ ಭಾವಗಳ ಶಾಯಿಯಲಿ ಅದ್ದಿ ಮೆರೆಯುವುದೇನು
ಮಿನುಗುವ ಭರದಲಿ ತಪ್ಪು ದಾರಿಗೆ ಹೋಗದಿರು ನೀನು
ಕಟ್ಟುವುದಲ್ಲ ಹುಟ್ಟಬೇಕಂತೆ ಕಾವ್ಯ ಹಿರಿಯರ ಮಾತು
ದಿಟ್ಟ ನಡತೆ ತೋರದೆ ಮುಖಸ್ತುತಿಗೆ ಬಾಗದಿರು ನೀನು
ನಿರಂತರ ಪ್ರಯತ್ನ ಯಶಸ್ಸಿಗೆ ಮೆಟ್ಟಿಲಾಗಿ ನಿಲ್ಲುವುದು
ಹರುಷದ ಹೊನಲಿನ ಹೊಗಳಿಕೆಗೆ ಕೂಗದಿರು ನೀನು
ಪುಸ್ತಕದ ಪುಟಕೆ ಅಹಂಕಾರದ ಕಣ ಕೆಸರಂತೆ ಹಿತೇಶ
ಮಸ್ತಕ ವಿಕಸಿಸುವುದಕ್ಕೆ ಮೊದಲೇ ಮಾಗದಿರು ನೀನು-
ಸಂಸ್ಕಾರ
------------
ಹಿರಿಯರಿಗೆ ಗೌರವ ಸಂಸ್ಕಾರದ ಪ್ರೇರಕ
ಮಕ್ಕಳಿಗೆ ಕಲಿಸುವುದು ಬಾಳ್ವೆಗೆ ಪೂರಕ
ಭಾವನೆಗಳಿಗೆ ಬೆಲೆ ನೀಡಲು ಬರದಿದ್ದರೆ
ಸನ್ನಡತೆ ಜೊತೆಗಿಲ್ಲದೆ ಸಮಾಜಕೆ ಮಾರಕ.-
ಇರುಳಿನ ಆಗಸ
-------------------
ಚುಕ್ಕಿ ತಾರೆಗಳ ಜೊತೆಯದು ಲಭಿಸಿ
ಇರುಳಿನ ಆಗಸ ಮಿನುಗಿದೆ ಈ ಕ್ಷಣ
ಚಂದಿರ ತಂದಿರುವ ತಂಪಿನ ಬೆಳಕಿಗೆ
ಬುವಿಯೂ ನಾಚಿ ಒಲವಿನ ಹೂರಣ.-
ನೆನಪು
---------
ಸುಮಧುರ ಮಿಳಿತದ ಸಿಹಿ ಸಿಹಿ ನೆನಪು
ನನ್ನೆದೆಗೆ ಹಚ್ಚಿಹುದು ಮರೆಯದ ಛಾಪು
ಸೊಬಗಿನ ಕ್ಷಣಗಳು ಉಳಿದು ಹೊಳಪು
ಬದುಕಿನ ಹಾದಿಗೆ ನೀಡಿಹುದು ಹುರುಪು.-
ಏಕಾಂಗಿ ಮನ
------------------
ಸುಪ್ತ ಯೋಚನೆಯ ಭಾವನಾ ಸಂಗಮ
ಹುಸಿ ಮುನಿಸು ಮೆರವಣಿಗೆ ವಿಹಂಗಮ
ಏಕಾಂಗಿ ಮನ ಮೆರೆದು ಬಾಳು ಸುಗಮ
ನಗು ಬರಲಿ ಹೃದಯಕಿದಾಗಿ ಆಯಾಮ.-