ಹೀಗೊಂದು ಸಂಭಾಷಣೆ
(ಅಡಿಬರಹ ಓದಿ)-
* ಗುರುಗೆ ನಮನ *
ನನ್ನ ಅಮ್ಮನಿಗೂ ಕಲಿಸಿ,
ನನಗೂ ಕಲಿಸಿದ ಗುರು ನೀವು.
ಯಾರೂ ಕಾಣದ ನನ್ನನು ಕಂಡು,
ಬೆನ್ನು ತಟ್ಟಿದವರು ನೀವು.
ಗಣಿತದ ಮೇಲೆ ಪ್ರೀತಿ ಹುಟ್ಟಿಸಿ,
ನೂರಕ್ಕೆ ನೂರು ತೆಗೆಸಿದವರು ನೀವು.
ಕಾಲಿಗೆರಗಿದಾಗಲೆಲ್ಲ ಮೇಲೆತ್ತಿ ತಬ್ಬಿದವರು ನೀವು.
ಕಿವಿ ಹಿಂಡಿ ತಿದ್ದಿದ್ದೀರಿ,
ಕೈ ಹಿಡಿದು ನಡೆಸಿದ್ದೀರಿ.
ಅನೇಕ ನೋವು ಕೊಟ್ಟ ಈ ವರುಷ,
ನಿಮ್ಮನೂ ಕರೆದು ಕೊಂಡು ಹೋಯಿತು.
ನನ್ನ ಮದುವೆಯ ದಿನ,
ಸಂಗಾತಿಯ ನಿಮಗೆ ಪರಿಚಯಿಸಿ,
ಒಂದು ಫೋಟೋ ತೆಗೆದುಕೊಳ್ಳುವ ಆಸೆ..,
ಆಸೆಯಾಗಿಯೇ ಉಳಿಯಿತು.
ಕೊನೆಯ ಸಾರಿ ಸಿಕ್ಕಾಗ,
ಅದುವೇ ಕೊನೆಯೆಂದು ಗೊತ್ತಿದ್ದರೆ,
ನಿಮ್ಮ ಕಾಲು ಬಿಟ್ಟು ಏಳುತ್ತಲೇ ಇರಲಿಲ್ಲ.
ಮತ್ತೆ ಬನ್ನಿ
'ರಾಜು ಮೇಷ್ಟ್ರೇ..'
ನನಗೆ ದೈರ್ಯ ತುಂಬಲು.-
ದಿಣ್ಣೆ ಹತ್ತಿ,
ಬಯಲು ಸುತ್ತಿ,
ಹಳ್ಳದಾಟಿ ಸಿಗುವ,
ಸಣ್ಣ ಓಣಿಯಲ್ಲೊಂದು,
ಖಾಸಗಿ ಸಂತೆಯೊಂದು ನಡೆದಿದೆ.
ಇರುವ ಇಬ್ಬರಲ್ಲೇ,
ನಗುತ ಶುರುವಾದ,
ಕೊಟ್ಟು ಕೊಳ್ಳುವಿಕೆ,
ತಾಪಮಾನ ಬದಲಾದಂತೆಲ್ಲ..
ಗಲಾಟೆ ಹೆಚ್ಚಿಸಿದೆ.
ಕತ್ತಲಲ್ಲೇ ಪ್ರದರ್ಶನಕ್ಕಿಟ್ಟ,
ಇಬ್ಬರ ವ್ಯಾಪಾರಿಗಳ ನಡುವೆಯೇ,
ನೂಕುನುಗ್ಗಲು ಶುರುವಾಗಿದೆ!
ಅಷ್ಟೋ ಇಷ್ಟೋ,
ಚೌಕಾಶಿ ಮಾಡಿ,
ಇಬ್ಬರೂ ಒಪ್ಪಿಕೊಳ್ಳೋ,
ಸಂತೆ ನಡೆದಿದೆ.-
ನಿನ್ನಿಂದ ಹುಟ್ಟಿದ,
ತಂತ್ರಜ್ಞಾನ,
ನಿನ್ನನೇ ಬದಲಿಸುತ್ತಿದೆ..
ಹೇಗಿದೆ ಜೀವನ?-
ರಾತ್ರಿ ಓಡೋ ಕುದುರೆಯಿದು,
ರತಿ ಮನ್ಮಥರ ನಡುವೆ.
ದಾರಿ ಮರೆಯದ ಓಟವಿದು,
ಮುಚ್ಚಿದ ಕಣ್ಣ ಒಡನೆ.
ಸಮ ನೆಲದ ಮೈದಾನವೇನಲ್ಲ,
ಸಾಗೋ ವೇಗಕೆ ಅಡ್ಡಿಯೇನಿಲ್ಲ.
ಸಮಬಲದ ಹೋರಾಟವೇನಲ್ಲ,
ಆದರೂ ಸೋಲು ಸುಳಿದಿಲ್ಲ.
ಕಾಮದ ಕಟಕಟೆಯಲ್ಲಿ,
ಪರಿಶ್ರಮವ ನಿಲ್ಲಿಸಿ,
ಬೆವರು ಸಾಕ್ಷಿ ಹೇಳಿದೆ.
ಶಾಖದ ಗುದ್ದಾಟದಲ್ಲಿ,
ಶೇಖರಿಸಿಟ್ಟ ಆಸೆ ಹರಿದು,
ಸುಖದ ಕತೆ ಬರೆದಿದೆ.
ರಾತ್ರಿ ಓಡೋ ಕುದುರೆಯಿದು,
ಲಗಾಮು ಮರೆತು ಮೆರೆದಿದೆ.-
ಆಕೆಗೋ ಎಟಕುವ ತವಕ,
ಆತನದೋ ತವಕದ ಆಟ.
ಈಗಷ್ಟೇ ನಡೆಯಲು ಕಲಿತ ಆತನ ಬೆರಳುಗಳು,
ವಿಹರಿಸಿದೆ ಆಕೆಯ ಏರು ತಗ್ಗಿನಲಿ.
ಈಗಷ್ಟೇ ಹೂಸ ಲೋಕವ ಕಂಡ ಆಕೆಯ ಕಂಗಳು,
ಅರಗಿಸಿಕೊಳ್ಳಲು ಅರೆ ಮುಚ್ಚಿದೆ.
ಇಲ್ಲೆನೋ ದಾಹವಿದೆ,
ನೀರಿಗೂ ತೀರಿಸಲಾಗದು.
ಇಲ್ಲೇನೋ ಹಸಿವಿದೆ,
ಆಹಾರಕೂ ತೇಗಿಸಲಾಗದು.
ತೇಗದ ಮಂಚದಲಿ,
ತನುಗಳ ಕದನ,
ಗೆದ್ದವರಾರೋ, ಸೋತವರಾರೋ ?
-
ಗಂಡಸು ಅಳುವಂತಿಲ್ಲವೆಂದರು,
ಅಕ್ಷರಗಳಲೇ ಅಳುವುದ ಕಲಿತೆ.
ಬೆಟ್ಟು ತೋರಿಸಿ ನಕ್ಕರು,
ನನ್ನತ್ತ ನಾನೇ ನಗುವುದು ಕಲಿತೆ.
ನೇರ ನುಡಿಗೆ ಸ್ನೇಹಿತರಿಲ್ಲವೆಂದರು,
ನಾಲ್ವರಿದ್ದರೂ ನೇರವಿರಲಿ ಎಂದುಕೊಂಡೆ.
ಅವರಿವರ ಹೆಜ್ಜೆ ಹಿಂಬಾಲಿಸೆಂದರು,
ನಿಧಾನವಾದರೂ ನನ್ನದೇ ಹೆಜ್ಜೆಯಿಡುತಿರುವೆ.-
ಸಾವಿರದ ವಂದನೆ..,
ಮೊದಲಿನಿಂದ ಓದಿದವರಿಗೆ,
ಇಂದು ಓದುತ್ತಿರುವವರಿಗೆ,
ಮುಂದೆ ಓದುವವರಿಗೆ,
ಅಂದಿನಿಂದ ಬಂದವರಿಗೆ,
ಬಂದು ಹೋದವರಿಗೆ,
ಬರದೆ ಉಳಿದವರಿಗೆ,
ಮನತುಂಬಿ ಮೆಚ್ಚಿದವರಿಗೆ,
ಮನದಲ್ಲೇ ಉಳಿದವರಿಗೆ,
ಮರೆಯಾಗಿ ಹೋದವರಿಗೆ,
ಬರಹಕ್ಕೆ ಸ್ಪೂರ್ತಿ ತುಂಬಿದವರಿಗೆ,
ಬರಹದ ಪೂರ್ತಿ ತುಂಬಿದ್ದವರಿಗೆ,
ಹೊಸ ಪದಗಳ ಕೊಟ್ಟವರಿಗೆ,
ಹೊಸ ಪಾದವ ಬೆಳೆಸಿದವರಿಗೆ,
ಖುಷಿಯ ಕೊಟ್ಟವರಿಗೆ,
ಖುಷಿಯ ಪಟ್ಟವರಿಗೆ,
ಈ ಬರಹ ಚಪಲಗಾರನ,
ಸಾವು ಇರದ,
ಸಾವಿರದ ವಂದನೆ 🙏💐-