'ಕಾಲ ಎಲ್ಲವನ್ನೂ ಮರೆಸುತ್ತೆ' ಅನ್ನೋ ಮಾತಿದೆ.
ನಿಜಾ, ಅದನ್ನೂ ನಾನೂ ಒಪ್ಪಿಕೊಳ್ಳುತ್ತೇನೆ.
ಆದರೆ ನನ್ನ ವಿಷಯವಾಗಿ ಕಾಲಕ್ಕೂ ಅರಿಯದ ಸತ್ಯವೊಂದಿದೆ
ನಿನ್ನ ಎಂದಿಗೂ ಮರೆಯಲಾರೆ ಎಂಬುದು...!-
ಅದೆಷ್ಟೋ ಬಾರಿ ಅವಳು ಕೇಳುತ್ತಲೇ ಇದ್ದಳು.
ಅವಳ ಮೂಲ ಪ್ರಶ್ನೆ ನಾನೇ ಎಂದು ಅದು ಗೊತ್ತು.!
ಇಲ್ಲಿ ನಾವು ನಟಿಸುವುದನ್ನು ಇನ್ನೂ ಚೆನ್ನಾಗಿ ನಟಿಸಬೇಕು.
ಅದು ಇನ್ನೊಬ್ಬರ ಖುಷಿಗಾಗಿ ಎಂದ ಮೇಲೆ ಕೇಳಬೇಕೇ..?
ಇಂದೂ ಅದೇ ನಡೆಯುತ್ತಿದೆ.
ನನ್ನ ನಟನೆ ನಿದರ್ಶನ ಮತ್ತೆಲ್ಲೂ ಸಿಗದಷ್ಟು ಅದ್ಭುತವಾಗಿದೆ.
ಯಾವುದೇ ಪರದೆ ಇಲ್ಲ, ರಿಹರ್ಸಲ್ ಇಲ್ಲಾ.-
ಮುಗಿಬಿದ್ದು ನೆನ್ನೆ ನಾ ನಿನ್ನ ಪ್ರೀತಿಸಿದೆ.
ಇಂದು ಪ್ರೀತಿಸುವುದು ನಿನ್ನ ಸರದಿ.
ಪ್ರೀತಿಯ ಪಾಳಿ ಇಷ್ಟಕ್ಕೇ ನಿಂತಂತೆ ಕಾಣುವುದಿಲ್ಲ ಅಲ್ಲಾ..?
ಗುರುತ್ವ ಕಳಚಿದ ಈ ಹೃದಯ ಸೌರವ್ಯೋಹದಿಂದ
ಆಚೆ ಕಳಚಿ ಹೋಗಿದೆ.
ನೀ ನಿರೀಕ್ಷಿಸಿದರೂ ನಾ ನಿನ್ನ ಮತ್ತೆ ಪ್ರೀತಿಸುವುದಿಲ್ಲ.-
ಮೈ ಕೊರೆಯುವ ಚಳಿಯಲ್ಲಿ
ಕಾಮನೆಗಳ ಫಲಿಸಲು ಬಳಿಯಲ್ಲಿ ನೀ ಇರಲು
ಕಂಬಳಿಯ ಜಾಡಿಸಿ ಹೊದ್ದು
ತನುವ ಕಾವು ಇನ್ನಷ್ಟು ಧಗಧಗನೇ ಹೊತ್ತಿ ಉರಿದಿದೆ.
ನಿನ್ನ ತುಂಬೆದೆಯ ಸೆರಗು ಜಾರಿ,
ಕಣ್ಣೇರಡು ಪಿಳಪಿಳನೆ ಇಣುಕಿ ನೋಡುವ ಪರಿಗೆ
ಮನವೀಗ ಶಾಶ್ವತವಾಗಿ ಕೋಣೆಯೊಳಗೆ
ನಿನ್ನ ಬಲವಂತದಿ ಬಂಧಿಸುವ ಸಂಚು ಹೂಡಿದೆ.-
'ನಾನು ಯಾವಾಗಲೂ ನಿನ್ನ ಜೊತೆ ಬರುತ್ತೇನೆ.'
ಹೀಗಂತ ಹೇಳಿದವರನ್ನೆಲ್ಲಾ ದುರ್ಬಿ ಹಾಕಿ ಹುಡುಕುತ್ತಾ
ಹಿಂದಿಂದೆ ಒಂದೊಂದೇ ಹೆಜ್ಜೆ ಹಾಕುತ್ತಾ ಹುಡುಕುತ್ತಾ ಬಂದು ಒಂಟಿಯಾಗಿ ನಿಂತಿರುವೆ
ಹೀಗೆಲ್ಲಿ...? ಸಹರಾ ಮರುಭೂಮಿಯಲ್ಲಿ...!-
ಸಾವಿನ ದಿನಗಳ ಎಣಿಸುವ ನನ್ನ ನಿನ್ನೆದೆಗವಿಚಿಕೊಂಡು
ಎನ್ನ ಸಮಾಧಾನಕ್ಕಾದರೊಂದು ಕತೆ ಹೇಳು ಗೆಳತಿ.
ಒಂದೂರಲ್ಲಿ ನೀನೇ ರಾಜ, ನಾನೇ ನಿನ್ನ ಅರಸಿ ಎಂದು.-
ಹೀಗೆ ಸಣ್ಣಗೆ ಶುರುವಾದ ಮಳೆಯಲಿ
ಮನಸೋಯಿಚ್ಚೆ ಅನುದಿನವೂ
ಮೈಯೊಡ್ಡಿ ನೆನೆಯುವಾಸೆ.
ಮನದ ನೋವಿನ ಕಣ್ಣಿರೆಲ್ಲಾ ಹೊತ್ತೊಯ್ದು
ಕಡಲ ಒಡಲಿಗೆ ನುಸುಳುವಂತೆ.-
ಅವಳಿಗೇನೋ ನನ್ನ ಸತ್ತ ವಾರ್ತೆ ತಿಳಿದ ನಂತರವೇ
ಮನೆಯ ಹೊಸಲು ದಾಟಿ ಬರುವಂತೆ ಕಾಣುತ್ತದೆ.
ಅವಳಿಗೆ ಸ್ವಾತಂತ್ರ್ಯ ಸಿಗುವುದಿದ್ದರೆ ಒಮ್ಮೆ ಸತ್ತು ಹೋಗಬೇಕಿದೆ.-
ಅವಳು ಮಾತಿಗಿಳಿದರೆ
ಕುತ್ತಿಗೆ ಮಟ್ಟಕ್ಕೆ ನೀಲಿ ಶಾಯಿ ತುಂಬಿದ
ಪೌಂಟನ್ ಪೆನ್ನಿನಂತೆ.
ನಿಂದಿಸಿದವರ ಹೆಣ ಬೀಳುವವರೆಗೂ
ಪಟ್ಟು ಬಿಡಳು.-