ತೊದಲಿನಿಂದ ಬಂದ ಬಂಧು ನೀನು ನನ್ನ ಕನ್ನಡ
ಬರಹದಲ್ಲಿ ಅರಳಿನಿಂತ ಕುಸುಮ ನನ್ನ ಕನ್ನಡ!!
ಹಳೆಗನ್ನಡ ಹೊಸಗನ್ನಡ ಯಾವುದಾದರೇನು
ನಿನ್ನಂದಕೆ ಮನಸೋಲದವನಿರುವನೇನು?!
ಜೈ ಕನ್ನಡ
-
ಅಲ್ಲೆಲ್ಲೋ ದೂರದ ತೀರ
ಇಲ್ಲೊಂದು ಸುಳಿ
ಬದುಕು ಹಾಯಿದೋಣಿ!!
ಅಲೆಗಳೇರಿಳಿತ
ಬಿರುಗಾಳಿಸಹಿತ
ಹೋರಾಟ ಉಳಿವಿಗಾಗಿ.....-
ಮತ್ತೆ ಬಂತು ಹೊಸ ವರ್ಷ
ಈ ವರ್ಷ ಬಂದಾಗ ಅಂದುಕೊಂಡಿದ್ದೆ ಹೊಸವರ್ಷವೆಂದು
ಎಲ್ಲಿಯ ಹೊಸತು?!! ಆಯಿತಲ್ಲಾ ಹಳೆತು
ಹಾಗಾದರೆ ಯಾವುದು ಹೊಸತು??
ಹಿಂದೆ ಆಗಿದ್ದೆ? ಇಂದು ಬಂದಿದ್ದೆ? ಮುಂದೆ ಬರುವುದೆ?!
ಹೊಸತನ ಹುಡುಕುತ ಇರುವುದರಲ್ಲಿ ಇದೆಯೆ ತೃಪ್ತಿ?
ದೂರದ ದೃಷ್ಟಿ ದೂರದವರೆಗೆ,
ಕಣ್ಣಡಿ ಇರುವುದ ಮರೆತಿರಬಹುದೆ??
ಈ ಹೊಸತನವೆಂಬುದು ಅಡಿಗಿರುವುದಾದರೂ ಎಲ್ಲಿ?!
ಎಲ್ಲಿ ಇರುವೆಯೊ ಅಲ್ಲಿ
ನಿನಗೆ ದಕ್ಕಿದ್ದರಲ್ಲಿ......-
ಹಗಲಲ್ಲೂ ಸಂಜೆ ಸೂತಕವ
ಹೊತ್ತು ಸುರಿದಿದೆ ಈ ಮಳೆ!!
ಪ್ರವಾಹ ಭೀತಿ ಉಕ್ಕಿದರೆ ನೆನಪುಗಳ ಹೊಳೆ
ಅಬ್ಬಬ್ಬಾ!! ಈ ನೀರವ ನಿಶ್ಯಬ್ದದಲ್ಲೂ
ಯಾರದ್ದು ಸದ್ದು?!
ಮುಚ್ಚಿದ ಕಣ್ಣೊಳಗೆ ಇಳಿದು ತೆರೆದಾಗ ಮರೆಯಾದದ್ದು
ಯಲುಬಿಲ್ಲದ ನಾಲಿಗೆಯಂತೆ
ಬದುಕುತ್ತಿದೆ ನಾಟಕವಾಡಿ ಸಲೀಸಾಗಿ!
ಅಯ್ಯೋ ಉರಿ-ಉರಿ! ಭಾವಕ್ಕಂಟಿ ಎದೆಮಡಿಲು ಕೆಂಡವಾಗಿ!!-
ಜಾರುತಿರಲು ಈ ಸಂಜೆಯೊಂದು ತುಸು ಮೆಲ್ಲಗೆ
ಕಡಲ ಮಡಿಲೇರಲು ಧಾವಂತವೇಕೆ ಆ ರವಿಗೆ?
ಇಳಿಸಂಜೆಯ ತಂಗಾಳಿಯು ಹೊಸ ಕನಸನು ತಂದಿದೆ
ಬಳಿಬಂದಿರೊ ಅಲೆಯೊಂದಿಗೆ ಸಂಭಾಷಣೆಗಿಳಿದಿದೆ
ನೀಲಮೇಘನು ರಂಗೇರಿ ಕೆಂಪಾಗಿರೊ ಹೊತ್ತು
ಏನಿಷ್ಟು ಸಡಗರ ಏಕಾಂತದಲಿ ಈ ಶರಿಧಿಗೆ ಗೊತ್ತು,
ಏ ನಿಲ್ಲೆ ಓ ಸಂಜೆ
ಜಾರಬೇಡವೆ ಹೀಗೆ !
ಇನ್ನಷ್ಟು ಕಲಕುವುದಿದೆ
ಎದೆಯಾಳದ ಬೇಗೆ......-
ಕನಸಿನಲ್ಲಾದರೂ ಬರಬಹುದೆಂದು
ರಾಶಿ ರಾಶಿ ಮಾತುಗಳನ್ನು ಜೋಡಿಸಿಟ್ಟಿದ್ದೆ ಹುಡುಗಿ!!
ಆದರೆ ಯಾಕೋ ಎದೆಯೊಳಗೆ ಕೂತೆದ್ದು ಹೋದವಳು
ಕನಸಿಗೂ ಅವಕಾಶ ಕೊಡಲಿಲ್ಲಾ
ಇರುಳ ಪರದೆ ಹರಿದರೂ ಈ ಹಾಳು ನಿದ್ದೆ
ಕಣ್ಣಂಚಿಗೆ ಸುಳಿಯಲಿಲ್ಲಾ...-
ಬರುವುದು ವರ್ಷಕ್ಕೊಂದು ಬಾರಿ ಹುಟ್ಟಿದ ದಿನ
ಕಾಲದ ಓಟವನು ಎಣಿಸುವ ಆ ಸುದಿನ,
ಅದೊಂದೆ ದಿನವಂತೆ ನಾವಾಗುವುದು celebrity
ನಾಮಕಾವಸ್ಥೆಗೆ Status ಹಾಕಿ full publicity,
ಕರಗಿದ ಕಾಲವನ್ನು ಮರೆಯುವಂತೆ ನಟಿಸುತ
ಭವಿಷ್ಯದ ನೀಲಿ ನಕ್ಷೆಯಲ್ಲಿ ನಗುವನ್ನು ಹುಡುಕುತ
ಪಾರ್ಟಿ-ಗೀರ್ಟಿ ಮಾಡುವ ಮೂಡಲ್ಲಿ
ದುಂದು ವೆಚ್ಚವು ಅನಾವಶ್ಯಕ ಆಚರಣೆಯಲ್ಲಿ,
ನಿಜವಾದ ಹುಟ್ಟುಹಬ್ಬವೆಂದು ಸಾಧಕರೆ?!
ಬರುವುದು ಬದುಕಲ್ಲಿ ಅನ್ನಿಸಿದ್ದನ್ನು ಸಾಧಿಸಿದರೆ........-
ಶ್.......!!
ಆಡಬೇಡಿ ಮಾತುಗಳನ್ನು ಗಟ್ಟಿಯಾಗಿ
ಮರೆಯಬೇಡಿ ಲಬ್-ಡಬ್ ಲಬ್-ಡಬ್ ಎನ್ನುವ ಕೆಲಸ ನಿಮ್ಮದು,
ಬೇಸರವೇಕೆ ಮಾತುಗಳು ಮುಗಿದುಹೋದಲ್ಲಿ
ಚಿಂತಿಸಬೇಡಿ ಹಳೆಗಾಯವ ಹೊರಗೆಳೆಯುವ ಕೆಲಸ ನಮ್ಮದು.....-
ಇಳಿಸಂಜೆಯ ತಂಗಾಳಿಯ ಜೊತೆ
ನೇಸರನೂ ಮುನಿಸಿಕೊಂಡಿದ್ದಾನೆ!!
ಹೊತ್ತು ಮುಳುಗುವ ಮೊದಲೇ
ಬಾನಂಚಿನಿಂದ ಕಾಲ್ಕಿತ್ತಿದ್ದಾನೆ.....-
ಮನೆಯಿಂದ ಮಸಣಕ್ಕೆ
ಬದುಕು ತನ್ನಯ ಕೊನೆ ಪಯಣಕ್ಕೆ
ಹೊರಟಿದೆ ಮನೆಯಿಂದ ಮಸಣಕ್ಕೆ
ಕರ್ಮ ಫಲಗಳನು ಮೂಟೆಕಟ್ಟಿ
ಉಡುಗೆ ತೊಡುಗೆಗಳಿಲ್ಲ, ಕೂಡಿಟ್ಟ ಹೊನ್ನಿಲ್ಲ
ಬಚ್ಚಿಟ್ಟ ಬಂಗಾರ ಜೊತೆಗಿಲ್ಲ..
ಆಸೆ ಸ್ವಾರ್ಥಗಳಿಂದ ಜೀವನವು ತುಂಬಿತ್ತು
ಅಹಂ ಭಾವನೆಯಿಂದ ಮೆರೆದಿತ್ತು
ಕಾಗದದ ಗಳಿಕೆಯಲಿ ಕಾಲವು ಕಳೆದಿತ್ತು
ನಿಸ್ವಾರ್ಥ ಸೇವೆಯನು ಮರೆತಿತ್ತು
ಆದರೆ ಕೊನೆಪಯಣದಲಿ,
ಹೊರಟಿದೆ ಬರಿಗೈಲಿ
ತನ್ನ ಕರ್ಮವ ತಾನೆ ಶಪಿಸುತ್ತಾ.......-