Ekata Bhat   (ಏಕತಾ)
217 Followers · 22 Following

Joined 29 March 2018


Joined 29 March 2018
13 MAY 2018 AT 17:50

◆ಅವ್ವ◆

ಮಗುವಿಗರ್ಪಿಸ್ಯಾಳ ತನ್ನ ಗೌರವ ಘನತೆ
ಪ್ರೀತಿಯಿಂದ ಸಾಕ್ಯಾಳ ಮಮತೆಯ ಮಾತೆ;
ಸಾಕ್ಯಾಳ ಒಂಭತ್ತು ತಿಂಗಳು ಹೆತ್ತು ಹೊತ್ತು
ಉಣಿಸ್ಯಾಳ ಪ್ರೀತಿಯ ಕೈ ತುತ್ತು;

ಇಲ್ಲ ಆಕೀಗ ಹೆಣ್ಣು ಗಂಡೆಂಬ ಬೇಧ ಭಾವ
ನೀಡ್ಯಾಳ ನಿಜವಾದ ಪ್ರೀತಿಯ ಅವ್ವ;
ನೋಡಲಿಲ್ಲ ತನಗಾದ ನೆಗಡಿ,ಕೆಮ್ಮ
ಸಾಕಿಹಳು ಮಕ್ಕಳ, ಕೊರಗ ತೋರದೆ ಅಮ್ಮ;

ಏನೇ ಆದರೂ ಮುನ್ನೆಡೆಸ್ಯಾಳ ಅವ್ವ
ಆದರೆಷ್ಟು ನೀಡುವೆವು ಅವಳಿಗೆ ಗೌರವ?
ಆಕಿ ಆಗ್ಯಾಳ ಮಮತೆಯ ಆಗರ
ಮುಂದ್ಯಾರು ಹೊರುವರು ಆಕಿಯ ಭಾರ?

ಅವಳಿಗಾಗಿ ಹರಿಸು ಪ್ರೀತಿಯ ಸಾಗರ
ಕಡಿ ತನಕ ಆಕಿಗಾಗಿ ಹೂಡು ನೀ ಸಮರ;
ಗೌರವವಿಸಿ ಮನದುಂಬಿ ಹೇಳುವ ಅವ್ವ
ಕಣ್ತುಂಬ ನೋಡುವ ಅವಳ ನಗುವ;

ತಾಯಿ,ಮಾತೆ,ಜನನಿ,ಅಮ್ಮ,ಅವ್ವ
ಇದಕು ಮಿಗಿಲು ಜಗದೊಳೇನ ಕಾಣುವ?

-


8 AUG 2021 AT 21:28

◆ಪವಾಡವಲ್ಲ ಮುಖವಾಡ◆

ಅಲ್ಲಿ ಅವನೊಬ್ಬ ಸಮಾನತೆಯ ಕುರಿತು ಭಾಷಣ ಬಿಗಿದು, ಜಾಡಮಾಲಿಗಳಾದಿಯಿಂದ ಹಲವರನ್ನು ಸನ್ಮಾನಿಸಿ, ಅಲ್ಲಿಂದ ಹೊರಬಿದ್ದು, ಬಳಿ ಬಂದ ಭಿಕ್ಷುಕನನ್ನು ಬದಿಗೊತ್ತಿ ತನ್ನ ಕಾರು ಹತ್ತಿ ಬುರ್ರೆಂದು ಮನೆಗೆ ನಡೆದ. ಹೊಟ್ಟೆ ಚುರ್ರೆನ್ನುತ್ತಿದ್ದರೂ ಮನೆ ಸೇರಿದೊಡನೆಯೇ ಗೋ ಮೂತ್ರವೆರಚಿಕೊಂಡು ಮಿಂದು, "ಹೊಲಸು ಜನರ ಮುಟ್ಟಿ ಮೈಯೆಲ್ಲ ಹೊಲಸಾಯ್ತು" ಎಂದು ಹೇಳುತ್ತಾ ಊಟಕ್ಕೆ ಬಂದ.

-


19 MAY 2021 AT 16:19

ಬೆಂಬಿಡದ ಬೇತಾಳನಂತೆ;

ಇನ್ನಾದರೂ ಸಾಕು ಮಾಡು ನನ್ನ ಕಾಡುವುದ,
ನೆನಪಲ್ಲಿ ಕನಸಲ್ಲಿ ಬಂದು ಪೀಡುವುದ;

ಘಟಿಸಿದ್ದೆಲ್ಲವ ದುಸ್ವಪ್ನವೆಂದು ತಿಳಿದಿರುವೆ,
ಎಲ್ಲವ ಮರೆತು ನೆಮ್ಮದಿಯ ನೆಲೆಯನರಸುತಿರುವೆ;

ನನ್ನಷ್ಟಕ್ಕೆ ನನ್ನ ಇರಲು ಬಿಟ್ಟುಬಿಡು,
ನನ್ನ ಜೀವನದಲ್ಲಿ ಇನ್ನೆಂದೂ ಬಾರದಿರು.

-


19 MAY 2021 AT 12:58

ಎಲ್ಲ ರೋಗಗಳಿಗು.

ರೋಗ ದೇಹಕ್ಕೇ ಬಂದಿರಲಿ,
ಮನಸ್ಸಿಗೇ ಅಂಟಿರಲಿ,
ಸಮಾಜಕ್ಕೇ ಮಾರಕವಾಗಿರಲಿ,
ಧೈರ್ಯ ಸದಾ ಜೊತೆಗಿರಲಿ.

-


16 MAY 2021 AT 11:06


ಹೆಣ್ಣವಳು,
ಒಲಿದು ಬಂದರೆ ಸುಖದ ಮಳೆ ಹರಿಸುವಳು,
ಸಿಡಿದು ನಿಂತರೆ ಪ್ರಾಣ ಹರಣಕ್ಕೂ ಹೇಸಳು;
ಮಗಳಾಗಿ ಮೈಹತ್ತಿ ಮುತ್ತಿಟ್ಟು ಮುದ್ದಾಡುವಳು,
ತೀಟೆಯಿಂದ ಮೈಮುಟ್ಟ ಬಂದರೆ ಹೆಡೆ ಮುರಿ ಕಟ್ಟುವಳು;
ತಾಯಿಯಾಗಿ ಮಮಕಾರದಲಿ ಮೊಲೆ ಹಾಲುಣಿಸುವಳು,
ವಾಂಛೆಯಿಂದ ಮೊಲೆ ಹಿಂಡಿದರೆ ಜೀವ ಹಿಂಡುವಳು;
ಅಕ್ಕರೆಯಿಂದ ತೊಡೆ ಮೇಲೊರಗಿಸಿ ತಲೆ ಸವರುವಳು,
ಕಾಮದಿಂದ ತೊಡೆ ಸೀಳ ಹೊರಟರೆ ಎದೆ ಸೀಳಿ ಬಿಡುವಳು;
ಸೀತೆಯಂತೆ ಸೌಮ್ಯಳಾಗಿರುವವಳು,
ಮಹಾಕಾಳಿಯೂ ಆಗಬಲ್ಲವಳು;
ಹೆಣ್ಣವಳು.

-


14 MAY 2021 AT 12:55

ನನ್ನವರಾರೂ ನನಗಿಲ್ಲ,
ನನ್ನ ಹಿತರಾರಿಲ್ಲ;
ಎಲ್ಲರದೊಂದು ಬದುಕು,
ಅವರಿಗವರವರದೇ ತೊಡಕು;
ಬೇಕಾದಾಗ ಬಳಿ ಬರಬೇಕು,
ಬೇಡೆಂದಾಗ ದೂರ ಹೋಗಬೇಕು;
ಅವರ ಬಯಕೆಗಳೆಲ್ಲ ಹೊಂಬಾಳೆ,
ನನ್ನ ಕನಸುಗಳೆಲ್ಲ ತಿಪ್ಪೆಗೆಸೆವ ಬಾಳೆ;
ಅವರಾಡುವ ಮಾತೆಲ್ಲವೂ ಸತ್ಯ,
ನಾ ಹೇಳುವ ವಿಚಾರವೆಲ್ಲ ಮಿಥ್ಯ;
ಅವರಿಗಾಗಿ ಮೀಸಲಿಡಬೇಕು ಸಮಯ,
ನನಗಾಗಿ ಕಾದರೆ ಅವರ ಸಮಯವ್ಯಯ;
ಅವರಿಚ್ಛೆಯೇ ಮೇಲು,
ನನ್ನಾಸೆಗಳೆಲ್ಲವೂ ಕೀಳು;
ಸ್ವಾರ್ಥದ ಕಡಲಲ್ಲೇ ಈಜುವವರು ಎಲ್ಲರು,
ನನಗಾಗಿ ಯಾರು ಉಳಿದಿಲ್ಲ ನನ್ನವರು.

-


5 MAY 2021 AT 20:44

ಅವನ ಉಳಿಸಲು ಮನೆಯವರೆಲ್ಲ ಅರೆಹೊಟ್ಟೆ ಉಂಡರು,
ಕೂಡಿಸಿಟ್ಟ ಧನಕನಕವನೆಲ್ಲ ತಂದು ಪರಿಪರಿ ಬೇಡಿದರು,
ಹೇಗಾದರೂ ಉಳಿಸಿಕೊಡಿ ಎಂದು ಕಣ್ಣೀರಿಟ್ಟು ಗೋಗರೆದರು,
ಕಂತೆ ಕಂತೆ ಹಣವ ಕಟ್ಟಿ ಹೆಣವ ಮಸಣಕೊಯ್ದರು.

-


29 MAR 2021 AT 0:26

★ಋತುಮತಿ★

ವರ್ಷದ ಮುನ್ನೂರರವತ್ತೈದು ದಿನಗಳಂತೆಯೇ ಆ ದಿನಗಳು ಎಂದು ಹೇಳುವವಳು,
ತಿಂಗಳ ಎಲ್ಲಾ ಮೂವತ್ತು ದಿನಗಳು ಒಂದೇ ಎಂದು ಸಾರುವವಳು,
ಋತುಸ್ರಾವ ಹೆಣ್ಣನ್ನು ಶುಚಿಮಾಡುವ ಪ್ರಕ್ರಿಯೆ ಎಂದು ಪುಟಗಟ್ಟಲೆ ಗೀಚುವವಳು,
ಆ ದಿನಗಳಲ್ಲಿ ದೇವರ ಪ್ರಾರ್ಥಿಸಲು ಹಿಂದೇಟು ಹಾಕುವಳು,
ದೇವಸ್ಥಾನದ ಬಾಗಿಲಲ್ಲೇ ನಿಂತು ಬೇಡುವಳು,
ಮನಸ್ಸಿನ ನೆಮ್ಮದಿಯ ನೆಪವೊಡ್ಡಿ ಸುಮ್ಮನಾಗಿ ಬಿಡುವಳು.

-


7 MAR 2021 AT 23:10

ಮುಟ್ಟು

ಮುಟ್ಟಾದರೆ ಅವಳು ಮೈಲಿಗೆಯಂತೆ,
ಮುಟ್ಟಾಗದಿರೆ ಅವಳು ಬಂಜೆಯಂತೆ;
ಮುಟ್ಟಾದರೆ ಅವಳ ಪಾವಿತ್ರ್ಯತೆ ಕಳೆದು ಹೋಗುವುದೆ?
ಮುಟ್ಟಾಗದಿರೆ ಅವಳ ಮಾತೃ ಹೃದಯ ಕಲ್ಲಾಗಿ ಹೋಗುವುದೆ?

-


28 FEB 2021 AT 11:55

ಮನದಲ್ಲಿ ಕಲ್ಮಶ ತುಂಬಿದ್ದು ಕಲ್ಯಾಣಿಯಲ್ಲಿ ಮಿಂದರೆ ಮಡಿಯಂತೆ,
ಮನದಲ್ಲಿ ಭಕ್ತಿಯೇ ತುಂಬಿದ್ದು ಮಾಂಸವ ತಿಂದರೆ ಮೈಲಿಗೆಯಂತೆ.

-


Fetching Ekata Bhat Quotes