ಶೀರ್ಷಿಕೆ: ಇಬ್ಬನಿ
ಕೊರೆವ ಚಳಿಗೆ ಇಳೆಯ ತಬ್ಬಿತು ಇಬ್ಬನಿ
ಎಲೆ ಎಲೆಯ ಮೇಲೆ ಮಿನುಗುವ ಸಣ್ಣ ಹನಿ
ರವಿಯ ಕಿರಣ ಮೂಡಿದಾಗ ಕಣ್ಮರೆಯೆ ನೀ
ಮುಸುಕಿನ ಮುಂಜಾವೆಯೆ ಮರಳಿ ಹೊಳೆಯುವೆ ನೀ
ಇಬ್ಬನಿಯು ಮೂಡಿದೆ ಕವಿದ ಮಬ್ಬಿನಲ್ಲಿ
ಹರಡಿ ಹಾಸಿದೆ ಎಲ್ಲೆಲ್ಲಿ ನೋಡಲಲ್ಲಲ್ಲಿ
ಹೊಳೆವ ನೀರಿನ ಹನಿಯ ಮುತ್ತಿನಂದದ ನಗು
ಸಾರಿದೆ ಇರುವುದು ಕ್ಷಣಿಕವಾದರು ಹೊಳೆದು ಬೆಳಗು
-
Writing - poetry, songs ✨
Listing music 🎶
Rea... read more
ಬೇಸಿಗೆಯ ಶಾಲಾ ರಜಾ
ಪುಟಾಣಿಗಳಿಗೆ ಮಸ್ತ್ ಮಜಾ
ಪರೀಕ್ಷೆಯು ಬರೆದು ಮುಗಿದಿಹುದು
ನಿರೀಕ್ಷೆಯಲ್ಲಿ ರಜಾ ದಿನಗಳ ಹೇಗೆ ಕಳೆಯುವುದು
ಹೊಸ ತರಗತಿಗೆ ಹೋಗುವ ಮುನ್ನ
ಹೊಸ ಹೊಸ ಆಟಗಳ ಆಡೋಣ
ಅಜ್ಜಿಯ ಮನೆಗೆ ಹೋಗೋಣ
ಬೆಟ್ಟ ಗುಡ್ಡಗಳಲ್ಲಿ ಅಲೆಯೋಣ
ಅದೇ ಗುಂಗಲ್ಲೇ ಕೈ ಚೀಲ ಎಸೆದು
ಖುಷಿಯಲ್ಲಿ ನಗುತ್ತಾ ಕುಣಿದು
ನಲಿದಿವೆ ಎಳೆ ಮನಗಳು
ನಾಳೆ ಅವರೇ ಹೆಮ್ಮನಗಳು
ಮನದ ಮೈದಾನದಲ್ಲೊಂದು
ಲಗೋರಿ, ಗೋಲಿ, ಬುಗುರಿ,
ಕಣ್ಣಾಮುಚ್ಚಾಲೆ ಆಟಗಳ
ಮತ್ತೆ ಆಡುವ ಮನಸ್ಸಾಯಿತು
ಬಾಲ್ಯದ ಸವಿ ನೆನಪುಗಳು
ಎಳೆ ಎಳೆಯಾಗಿ ಅರಳಿದವು
ಹರುಷದಿ ಎಸೆದೆ ಮೈ ಮರೆತು
ನನ್ನ ತರಕಾರಿ ತುಂಬಿದ ಚೀಲವದಾಗಿತ್ತು-
ಹಕ್ಕು
ಹಕ್ಕು ನಿನ್ನದು ಛಲಬಿಡದೆ ಚಲಾಯಿಸು
ಸೊಕ್ಕು ಮುರಿದು ಎದುರಾಳಿ ಎದರಿಸು
ರೆಕ್ಕೆ ಪುಕ್ಕ ನಿನ್ನದೇ ನಿರ್ಭಯವಾಗಿ ಹಾರು
ಸ್ವಾತಂತ್ಯ್ರವು ನನ್ನದೆಂದು ಸ್ವಚಂದದಿ ಜಗಕೆ ಸಾರು
-
ಶೀರ್ಷಿಕೆ: ನಿನ್ನ ನೆನಪೇ ಅಮರ...
ನೆನಪಾಗಿ ಸುಳಿದೆ ನೀನು
ಕನಸಲ್ಲೂ ಕಾಡಿದೆ
ಎದುರಲ್ಲಿ ಬರದ ನೀನು
ಎದೆಯಲ್ಲಿ ಹಾಡಿದೆ
ಜೊತೆಯಾಗಬೇಕು ಎಂದು
ಜೊತೆಗಾರ ಕೇಳುವೆ
ಒಲ್ಲೆ ಎನ್ನಲು ಬೇಡ
ಒಲವಿಂದ ಬೇಡುವೆ
ಬದುಕೆಂಬ ಬಂಡಿಯಲ್ಲಿ
ಬಯಕೆಯ ಹರೆಯದಲ್ಲಿ
ಒಲುಮೆಯ ಪಯಣವು
ನೆನಪಾದ ಪ್ರಣಯವು
ಸ್ನೇಹದ ಸೆಳೆತವೋ
ಮೋಹದ ಕದನವೋ
ಅರಿಯದ ಮುಗ್ಧ ಮನಸ್ಸು
ಸನಿಹಕ್ಕೆ ಕಾದ ಕನಸ್ಸು
ಜೀವನ ಇರುವಿದೇ ಕ್ಷಣಿಕ
ನೆನಪುಗಳೇ ನಮಗೆ ಪುಳಕ
ಮೆರೆಯಬೇಕು ಎಂದರು ಈ ರಾಧೆಗೆ
ಮರೆಯಲಾಗದು ಕೃಷ್ಣಾ ನಿನ್ನ ಮಧುರ ನೆನಪು
- ಡಾ. ಗೋಪಿಕಾ, ಎಂ. ಹೆಚ್-
ಸ್ನೇಹ ಸಂಜೀವಿನಿ ಹೂ
ಎಂದೆಂದೂ ಬಾಡದಂತ
ಹೂ ಇದುವೇ ಬಾಳುವಂತ
ಎಂತಹ ಸವಿಯೋ ಸ್ನೇಹ ಸಿಹಿಯೋ
ಜೇನ ಹನಿಯೋ
ಕಣ್ಣಾ ಹನಿಗೆ ರೆಪ್ಪೆಯಾಡೋ
ಮೌನ ದನಿಯೋ
ಜೀವನದಿ ನೋವಿರಲಿ ನಲಿವಿರಲಿ
ಸ್ನೇಹಿತರು ಜೊತೆಗಿರಲು
ಎಲ್ಲಾ ನೋವ ಮರೆತು ಜೀವ
ನಗುತಲಿರುವ
ಬದುಕ ತುಂಬ ಬವಣೆಯೇ ಎಲ್ಲ
ಭಾವನೆಗೆ ಬೆಲೆಯೇ ಇಲ್ಲ
ಎಲ್ಲಾ ಹಂಚಿ ಮರೆತೆವಲ್ಲ
ಆಹಾ ಚಿಂತೆಗಿಲ್ಲಿ ಜಾಗವಿಲ್ಲ
ಎಂದೆಂದೂ ಮರೆಯದಂತ
ಚಿರಕಾಲ ಉಳಿಯುವಂತ
ನಮ್ಮ ಸ್ನೇಹ ಬಂಧ ಮಧುರ
ಸ್ನೇಹ ಹೂ ಅರಳಿ ಅಮರ
- ಡಾ. ಗೋಪಿಕಾ, ಎಂ.ಹೆಚ್-
ಶೀಷಿಕೆ: ನುಡಿ ಮುತ್ತುಗಳು
ನಾವು ನುಡಿವ ಮಾತಿರಲಿ ಯಾರ ಮನಸ್ಸಿಗೂ ನೋವಾಗದಂತೆ
ಇಲ್ಲವಾದರೆ ಮೌನವಾಗಿರಬೇಕು ಮೂಕನಂತೆ
ಸುಮ್ಮನಿರದೆ ಮತಿಹೀನರ ಅಂತೆ- ಕಂತೆಗಳ ಗೋಜಿಗೋದರೆ ಮನಸ್ಸಿಗೆ ನಾವೇ ಚಿಂತೆ ತಂದಿಟ್ಟುಕೊಂಡಂತೆ
-ಡಾ. ಗೋಪಿಕಾ, ಎಂ.ಹೆಚ್.
****************************
ನಿನ್ನ ಹೊಗಳುವವರೆಲ್ಲ ಒಳ್ಳೆಯವರಲ್ಲ
ನಿಂದಿಸಿ ತೆಗಳುವವರೆಲ್ಲ ಕೆಟ್ಟವರಲ್ಲ
ಕೆಣಕಿ ಅಣಕಿಸುವವರಿಗೆ ಅಂಕಿಯೆ ಇಲ್ಲ
ಎಲ್ಲರ ಮನಸ್ಸನ್ನು ದೇವರೆ ಬಲ್ಲ
ಸಮಯವು ಕಳೆದಂತೆಲ್ಲ ಅನುಭವದಿಂದ ಅರಿವಾಗುವುದು ನಾಳೆ ನಮಗೆಲ್ಲ
-ಡಾ. ಗೋಪಿಕಾ, ಎಂ.ಹೆಚ್.
****************************-
ಗುರುವೆ ದೈವ
ಹರಿಗೂ ಮಿಗಿಲು ಗುರುವೆ ದೈವ
ಅರಿವ ನೀಡಿ ನಮ್ಮ ಪೊರೆವ
ವಿದ್ಯೆ ಯಾರು ಕದಿಯದೊಡವೆ
ಕಲಿಸಿಕೊಟ್ಟೆ ನೀನೆ ಗುರುವೆ
ಶಿಸ್ತುಯೆಂಬ ಕಲೆಯ ಕಲಿಸಿ
ಕ್ರೋಧವೆಂಬ ಕಳೆಯ ಕಿತ್ತು
ಮೌಲ್ಯವೆಂಬ ಬೀಜ ಬಿತ್ತಿ
ಜ್ಞಾನಜೋತಿ ಬೆಳಗಿಸಿ ಬೆಳೆಸುವ
ಭಯವನೀಗಿ ದೈರ್ಯ ಕೊಟ್ಟು
ಅಂಧಕಾರ ಅಳಿಸಿ ಬಿಟ್ಟು
ಗುರಿತೋರಿ ಸಾಧನೆಯೆಡೆ ಮನಸೆಳೆವ
ಗೆಲುವ ದಾರಿಯಲ್ಲಿ ನಮ್ಮ ನಡೆಸುವ
ಕರವ ಹಿಡಿದು ಬರೆಸುವ
ಶುಭವ ಕೋರಿ ಅರಸುವ
ಸಲಹೆ ನೀಡಿ ಸಲಹುವ
ಬದುಕ ಹಾದಿ ಬೆಳಗುವ
ದಾರಿತೋರೋ ನಾಯಕ
ನಿಮ್ಮ ಬದುಕು ಸಾರ್ಥಕ
-ಡಾ. ಗೋಪಿಕಾ, ಎಂ.ಹೆಚ್.-
ವ್ಯಾಧಿ ನಿರೋಧಕ ವೈದ್ಯ
ವೈದ್ಯ ನಾರಾಯಣನ ಪ್ರತಿರೂಪ
ಪ್ರಾಣ ಉಳಿಸುವುದವನ ಸಂಕಲ್ಪ
ಆಲಿಪ ಹಗಲಿರುಳೆನ್ನದೆ ರೋಗಿಯ ಸಂತಾಪ
ರೋಗಿಯ ತತ್ತರಕ್ಕೆ ಉತ್ತರಿಸಿ
ವ್ಯಾಧಿಯ ನೀಗಲು ಕತ್ತರಿಸಿ
ನಿರಂತರವೂ ನೆತ್ತರ ಹರಿಸಿ ಶ್ರಮಿಸಿ
ಪರಿ ಪರಿಯಾಗಿ ಪೋಷಿಸಿ ಪರಿಶ್ರಮಿಸಿ
ಆರೋಗ್ಯವೇ ಭಾಗ್ಯವೆಂದು ಪರಿಗಣಿಸಿ
ಜೀವ ಜೋತಿಯ ಬೆಳಗಿಸಿ ಉಳಿಸಿ
ಗುಳಿಗೆ ನೀಡಿ ಹೊಲಿಗೆ ಹಾಕಿ ಗುಣಪಡಿಸುವನು
ಗಾಸಿಯೆಲ್ಲ ವಾಸಿಮಾಡೋ ಕೈಗುಣದವನು
ಪೋರೆವನೀ ಕರ್ಮಯೋಗಿ ನಮ್ಮೆಲ್ಲರನು
ಬಡಬಗ್ಗರಿಗೆ ಕನಿಕರಿಸಿ
ವಾರ ವಾರ ಶಿಬಿರ ನಡೆಸಿ
ಉಚಿತ ಸೇವೆ ನೀಡಿ ಸಹಕರಿಸಿ
ಪರಿಶ್ರಮಿಸುವ ಪರಿಣಿತ
ಶಾಂತ ಚಿತ್ತ ಕಾರ್ಯ ಲಿಪ್ತ
ನಿಮ್ಮ ಸೇವೆ ಅಗಣಿತ
-ಡಾ. ಗೋಪಿಕಾ, ಎಂ.ಹೆಚ್.-
ಯೋಗದಿಂದ ರೋಗ ದೂರ
ಇಳಿಸು ನಿನ್ನ ಮನದ ಭಾರ
ಗಳಿಸು ಶಾಂತಿ ಶಕ್ತಿ ಸೌಕ್ಯ
ಚಿಂತೆ ಅಳಿಸಿ ಚೈತನ್ಯ
ಯೋಗದಲ್ಲಿ ಭಾಗಿಯಾಗು
ಯೋಗ ಕಲಿತು ಯೋಗಿಯಾಗು
ಶಿಸ್ತಿನಿಂದ ಸ್ವಸ್ಥನಾಗು
ಸದೃಢ ವ್ಯಕ್ತಿಯಾಗು
ಮೌನದಿಂದ ಧ್ಯಾನಿಯಾಗು
ಧ್ಯಾನದಲ್ಲಿ ಲೀನವಾಗು
ಮರೆತು ಎಲ್ಲ ಜಡತೆಯ
ಕಲಿತು ಯೋಗ ಕ್ಷಮತೆಯ-