ಹೋರಾಡುವವರ ಹೊಡೆದುರುಳಿಸುವ
ಹಾರಾಡುವವರ ಹಿಡಿದು ನಿಲ್ಲಿಸುವ
ಸ್ವಾಭಿಮಾನಿಗಳ ಸೊಲ್ಲಡಗಿಸುವ
ಚಳುವಳಿಗಾರರ ಚಳಿಬಿಡಿಸುವ
ಹೋರಾಟಗಾರರ ಹುಟ್ಟಡಗಿಸುವ
ಕೆಟ್ಟ ಪದ್ಧತಿಯಿದೆ! ಮನು ಕುಲದೊಳಗೆ!!-
ಭ್ರಮೆಗಳೊಂದಿಗೆ
ಬದುಕಿದ್ದು ಸಾಕು
ನಮಗೆ ನಾವಷ್ಟೇ
ಮತ್ಯಾರೂ ಇಲ್ಲ!
ನಂಬಿದವರು
ನಮಗೆ ಕೊಡುವುದು
ಬರೀ ನೋವಷ್ಟೇ
ಮತ್ತೇನೂ ಇಲ್ಲ!-
ನಾನೆಷ್ಟೇ ನಿನ್ನ
ಹಚ್ಚಿಕೊಂಡರೂ
ನೀನೆಷ್ಟೇ ನನ್ನ
ಮೆಚ್ಚಿಕೊಂಡರೂ
ನಾವೆಂದೆಂದಿಗೂ
ಪರಕೀಯರಾಗೇ
ಉಳಿದು ಹೋದ
ಈ ಪರಿಯ
ಒಲವನೇನೆನ್ನಲಿ!?-
ಸುತ್ತಲೂ ಎತ್ತೆತ್ತಲು
ಚೆಲ್ಲಿದ ಕಾರ್ಗತ್ತಲು!
ನೀ ನಡೆದಿರಲು ನಾ
ಹಿಂಬಾಲಿಸಬೇಕು
ಅಲ್ಲೂ ಎಲ್ಲೆಲ್ಲೂ
ತುಂಬಿದ ಜನಸಂದಣಿ
ಅಲ್ಲೇ ನಾವಿಬ್ಬರೂ
ಅಜ್ಞಾತವಾಗಿರಬೇಕು!
ಏನನ್ನೂ ಚಿಂತಿಸದೇ
ಯಾರನ್ನೂ ಲೆಕ್ಕಿಸದೆ
ನೀ ನನ್ನಲ್ಲಿ ನಾ ನಿನ್ನಲ್ಲಿ
ಲೀನವಾಗಿರಬೇಕು!
ಈ ಅಗಾಧ ವಿಶ್ವದಲಿ
ಅಣುಸಮಾನ ನಾವು
ಅಸಾಮಾನ್ಯವಾದದ್ದು
ಬೇಕಿಲ್ಲ ಬಿಡು ನಮಗೆ!-
ಅವನು ಚಿನ್ನಾ ಅನ್ನುತ್ತಾನೆ
ಮನ ಚಂಚಲವಾಗುತ್ತದೆ
ಅವನು ಗೊಂಬೆ ಎನ್ನುತ್ತಾನೆ
ಅವನ ನಂಬಬೇಕೆನಿಸುತ್ತದೆ
ಮತ್ತೆ ಮತ್ತೆ ನೆನಪಾಗುತ್ತಾನೆ
ಹತ್ತಿರವಾಗಬೇಕೆನಿಸುತ್ತದೆ
ಏನೇನೋ ನೆಪ ಹೇಳುತ್ತಾನೆ
ಒಪ್ಪಬೇಕೆನಿಸುತ್ತದೆ
ಪುನಃ ತಡವಾಯಿತು ನಗುತ್ತಾನೆ
ಮನ್ನಿಸಬೇಕೆನಿಸುತ್ತದೆ
ಅವನದೇ ತಪ್ಪು ಅನ್ನುತ್ತಾನೆ
ಅಪ್ಪಿಬಿಡಲೇ ಎನಿಸುತ್ತದೆ!-
ನಿನಗಾಗಿ ನಾ ಹಾತೊರೆಯುತ್ತಿದ್ದಾಗ
ನೀನನ್ನ ತೊರೆದು ಹೋಗಿದ್ದೆ!
ನಿನ್ನನ್ನೇ ಹಂಬಲಿಸುತ್ತಿದ್ದಾಗ
ನೀನನ್ನ ಬೆಂಬಲಿಸದೇ ಹೋದೆ
ನಿನ್ನ ಕಾಳಜಿಯೇ ಕರ್ತವ್ಯವಾಗಿದ್ದಾಗ
ನೀನೆಲ್ಲೋ ಕಳೆದು ಹೋಗಿದ್ದೆ
ನಿನ್ನೊಲವೊಂದನ್ನೇ ಬೇಡಿದಾಗ
ನೀನದೇಕೋ ಬೇಡವೆಂದಿದ್ದೆ!
ಈಗ ನಾನೀ ಅವನಿಯಲಿ
ನಿನ್ನೊಲವಿಲ್ಲದೇ ಬದುಕಲು ಕಲಿತೆ!
ನನ್ನದೇ ಹೊಸ ಹಾದಿಯಲಿ ಹೆಜ್ಜೆಯಿಟ್ಟು
ನೀನೀಗ ನನಗಾಗಿ ಕಾದಿರುವೆಯಂತೆ!!-
ಬೆಂಕಿ ನನ್ನ ಮಡಿಲಲ್ಲಿ
ಬೀಳುವವರೆಗೂ
ಅದರ ಸುಡುವ
ಸ್ವರೂಪ ತಿಳಿದಿರಲಿಲ್ಲ
ಕತ್ತಿ ನನ್ನ ಕತ್ತು
ಸೀಳುವವರೆಗೂ
ಅದರ ಕೊಲ್ಲುವ
ಗುಣ ಅರಿವಿರಲಿಲ್ಲ
ಒಳಿತೋ ಕೆಡುಕೋ
ಅನುಭವವಾಗುವವರೆಗೂ
ಅರ್ಥವಾಗುವುದಿಲ್ಲ
ಕೇವಲ ಕಪೋಲ ಕಲ್ಪಿತ!!-
ಅವನು ಮತ್ತೆ ಬರುವುದಿಲ್ಲ
ಎಂದು ಗೊತ್ತಿದ್ದೂ
ಮತ್ತೆ ಮತ್ತೆ ನೆನೆಯುವ
ಖಯಾಲಿಯೀ ಹೃದಯಕ್ಕೆ!
ಎಂದಾದರೂ ಎದುರು
ಬಂದಾನು ಮತ್ತೆ
ನಿನ್ನ ನೆನೆಯದ ದಿನವಿಲ್ಲ
ಎಂದಾನೆಂದು!-
ಆದರಿಸುತ್ತೇನೆ
ಅಂದ ಮಾತ್ರಕ್ಕೆ
ಆಳಾಗಿರಲಾರೆ!
ಪ್ರೇಮಿಸುತ್ತೇನೆ
ಅಂದ ಕೂಡಲೇ
ಅಡಿಯಾಳೇನಲ್ಲ!
ಆರಾಧಿಸುತ್ತೇನೆ
ಅಂದಿದ್ದೇ ಘೋರ
ಅಪರಾಧವೇ!
ನಾ ಬಯಸಿದ್ದೂ
ಅವನಿಗೆ ಕೊಟ್ಟಷ್ಟನ್ನೇ
ಮರು ಪಾವತಿ!!-
ಅಚ್ಚ ಬಿಳಿಯಾಗಸದಡಿ
ಹಾಸಿಕೊಂಡ ನಿಚ್ಚ ನೀಲ
ಸಾಗರವ ಅಚ್ಚರಿಯಿಂದ
ನೋಡಿದ ಅಚ್ಚಳಿಯದ ನೆನೆಪು!
ಹಚ್ಚ ಹಸುರಿನ ಕಾನನದಿ
ಬಿಚ್ಚು ಮನಸಿನಿಂದ ಓಡುವ
ನಿಚ್ಚ ಹರಿದ್ವರ್ಣ ಕಾಡಿನ
ಪುಟ್ಟ ಝರಿಯ ದಟ್ಟ ನೆನೆಪು!
ಝರಿಯೋಡಿ ನದಿಯಾಗಿ
ಅನಂತ ಗಮ್ಯದ ಕಡೆಗೆ
ನದಿಯೋಡಿ ಸಾಗರ ಸೇರುವ
ಪರಿಚಯ ಯಾವ ಜನ್ಮದ ನೆನೆಪು!-