ನಡೆದು ಬಂದ ದಾರಿಯನ್ನು ಮೆಲುಕು ಹಾಕುತ,
ಮುಂದಿನ ಹೆಜ್ಜೆಗೆ ಸರಿ ದಾರಿ ಹುಡುಕುತ,
ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಕಾಣುತ,
ನವವರ್ಷಕೆ ಜೊತೆಯಾಗಿ ಕಾಲಿಡೋಣ
ಹೊಸತನ ಇರಲಿ ಕ್ಷಣಕ್ಷಣದಲ್ಲೂ
ಸ್ನೇಹ - ಪ್ರೀತಿ ತುಂಬಿರಲಿ ಮನಮನದಲ್ಲೂ
ಹೊಸ ವರ್ಷದ ಶುಭಾಶಯಗಳು
~ನವಚೇತನಗೀತ-
ಅಂಬೆಗಾಲಿಡಲೂ ಬರದ ಎಳೆ ವಯಸಿನಲಿ,
ಜಗವೇನೆಂಬ ಅರಿವಿರದ ಸಮಯದಲಿ,
'ಕರುಳಿನ ಮಮತೆ'ಯೆಂಬ ಹುಟ್ಟೂರಿಂದ ದೂರ ಮಾಡಿ,
'ಸಂಬಂಧ'ಗಳಿದ್ದ ದೋಣಿಯಿಂದ ನೂಕಿಹನು ಅಪರಿಚಿತ ಕಡಲಿಗೆ,
ಆ ದೇವನು…… ಕರುಣೆಯಿಲ್ಲದೆ;
ಬದುಕುವ ಹಂಬಲದೊಂದಿಗೆ
ಸಾಧನೆಯ ಛಲವನು ಹೊತ್ತು
ಈಜಲು ಕಲಿತ, ಯಾರ ನೆರವಿಲ್ಲದೆ;
ಅಲೆಗಳ ಎದುರಿಸಿ ನಡೆದ, ಎದೆಗುಂದದೆ;
ತೀರವನು ಸೇರಿದ, ಛಲ ಬಿಡದೆ;
ಕಂಡೂ ಕಾಣದಂತಿದ್ದ ಸಂಬಂಧಗಳು ಸುತ್ತುವರೆದಿಹವು ಅವರನ್ನ ಇಂದು;
~ಚೇತನಗೀತ-
ಎರಡು ಮಾತುಗಳಲ್ಲಿ ಹೇಳುವುದಾದರೆ,
ನಾ ಕಂಡ,
ಅತೀ ಸುಂದರಿಯು
ನನ್ನವ್ವಳೇ
ಅತೀ ಭಾಗ್ಯಶಾಲಿಯು
ನನ್ನಪ್ಪನೇ
~ಚೇತನಗೀತ-
ಪ್ರೀತಿ, ಸ್ವಾರ್ಥತೆ,
ಅಸಹಾಯಕತೆ ಮತ್ತು ದುರಾಸೆ
ಎಂಬ ಭಾಬನೆಗಳ ಎಳಯಲಿ ಹೆಣೆದ ಬಲೆಯಲಿ
ಅಮಾಯಕ ಜೀವದ ಜಂಜಾಟವೇ
ಈ 'ಜೇಡರಬಲೆ'-
ಮರುವನೇ ಬಡಿದೆಬ್ಬಿಸಿ ನೆನಪಿಸುವ ಈ ದಿನ,
ನೀ ಎನ್ನ ತೊರೆದ ಕರಾಳದಿನ,
ಅಂದೇ ಕಳಚಿ ಬಿದ್ದಿಹುದು ಕರುಳ ಬಂಧವು,
ಮರೆತಿಹುದು ಮಮತೆಯ ಅರ್ಥವು,
ಮನದಲಿ ಪ್ರೀತಿ ಬತ್ತಿ ಹೋಗಿಹುದು,
ಕೊನೆಯಾಯಿತು ನಿನ್ನ ನನ್ನ ಋಣವು,
ಕತ್ತಲಲ್ಲೇ ನಡೆದಿಹುದು ಜೀವನ ಪಯಣವು,
ಗುರಿ ಇಲ್ಲದೆ ಸಾಗುತಿಹುದು ಕಾಣದ ಹಾದಿಯಲಿ,
ನೀನಿಲ್ಲದೆ ಎಲ್ಲವೂ ನಿರರ್ಥಕವು,
ನೀನಿತ್ತ ಜೀವವಿದು,
ಬಯಸುತಿದೆ ನಿನ್ನ ಒಡಲನು,
ಮರಳಿ ಬರಲಾರೆಯಾ???
~ ಚೇತನಗೀತ-
ಅತೀ ಸಲಿಗೆಯೆಂಬ
ಸುಳಿಗೆ ಸಿಲುಕಿ
ಪ್ರತಿ ಸಲವೂ ಸಾಲದ
ಸೋಲನನುಭವಿಸಿ
ಸಾಲು ಸಾಲು ಸವಾಲು
ಸರದಿಯಲಿ
ಸಂಬಳ ಸಾಲದೆಂಬ
ವರದಿಯೊಂದಿಗೆ-
ಓ ಪ್ರಜೆಯೇ
ಇಂದು ನೀನೇ ಪ್ರಭುವು
ನಿನ್ನ ಮತ ಇಡೀ ದೇಶದ ಹಿತ.
ನಿನ್ನ ಬೆರಳಿಗೊಂದು ಶಾಹಿಯ ಗುರುತು
ಹಾಕಿಸಲು ನಿನ್ನ ಬೆನ್ನ ಹಿಂದೆ ಸಾವಿರಾರು ಸೇವಕರು
ನಿನ್ನ ಪ್ರಭುತ್ವವ ಹರಾಜಿಗೆ ಇಟ್ಟಿರುವೆ
ಹರಿದ ಜೇಬಿಗೆ ಬಿಡಿಗಾಸಿಗಾಗಿ,
ಮತ್ತೇರಿಸುವ ವಿಷಕ್ಕಾಗಿ,
ಮೂರೇ ದಿನಕ್ಕೆ ಮನೆ ಒರೆಸಲು ಕೊಡುವ ಸೀರೆಗಾಗಿ,
ಪರಂಪರೆಯ ರೂವಾರಿಯಾಗಿ,
ಮನುಷ್ಯ ಜಾತಿಗೆ ಅತೀತನಾಗಿ,
ಮಾಡಿದ ಪ್ರಮಾಣಕೆ ಸತ್ಯಹರಿಶ್ಚಂದ್ರನಾಗಿ
ಓ ಪ್ರಜೆಯೇ
ಇಂದು ನೀನೇ ಪ್ರಭುವು
ಈ ದಿನ ಮಾತ್ರದ ಪ್ರಭುವೇ
ನಿನ್ನ ಮತ ಇಡೀ ದೇಶದ ಹಿತ.
ನಿಷ್ಠ ಪ್ರಜೆಗೆ ನಿಮ್ಮ ಒಂದು ಮತವ ದಾನ ನೀಡಿ
~ ಚೇತನಮತ-
ದಿನವೂ ನಿನ್ನದೆ ಕನವರಿಕೆ,
ಸದಾ ನೀ ನನ್ನೊಂದಿಗಿರುವೆ ಎಂಬ ಹೇಳಿಕೆ,
ಹೆಚ್ಚಿಸಿದೆ ಉಸಿರಿಗೆ ನಂಬಿಕೆ,
ಧೃಢವಾಗಿದೆ ಮನದ ಕುಡಿಕೆ,
ನೀನೇ ಆ ದೇವ ಕರುಣಿಸಿದ ಕಾಣಿಕೆ,
ನೂರು ವರುಷಗಳೂ ಸಾಲವು ಈಗ ಈ ಜೀವಕೆ,
ದೇವನೆದುರು ಸಾಲಾಗಿ ನಿಂತಿವೆ ನೂರಾರು ಬೇಡಿಕೆ,
ಬಯಕೆ ಮೀರಿವೆ ಬೆರಳ ಎಣಿಕೆ,
ಮನದ ತುಡಿತ ಪ್ರೀತಿ-ಸಂಬಂಧದ ಶಾಶ್ವತಕೆ;
~ಚೇತನಗೀತ-